ಮೈಸೂರು: ಜೆಡಿಎಸ್ ಮೈತ್ರಿ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಗೆ

| Updated By: ಗಣಪತಿ ಶರ್ಮ

Updated on: Feb 11, 2024 | 5:36 PM

Amit Shah Meeting in Mysuru: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಕೇಳಿಬಂದಿರುವ ಅಪಸ್ವರಗಳ ಬಗ್ಗೆ ಕೇಂದ್ರ ಗೃಹ ಸಚಿವ, ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಗರಂ ಆಗಿದ್ದಾರೆ. ಕಳೆದ ಬಾರಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ವೇಳೆ ಆದಂತೆ ಆಗಬಾರದು ಎಂದು ಅವರು ಪಕ್ಷದ ನಾಯಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಮೈಸೂರು: ಜೆಡಿಎಸ್ ಮೈತ್ರಿ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಗೆ
ಅಮಿತ್ ಶಾ
Follow us on

ಮೈಸೂರು, ಫೆಬ್ರವರಿ 11: ಲೋಕಸಭೆ ಚುನಾವಣೆ (Lok Sabha Elections) ಗಮನದಲ್ಲಿಟ್ಟುಕೊಂಡು ಜೆಡಿಎಸ್ ಜತೆ ಕರ್ನಾಟಕದಲ್ಲಿ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಅಪಸ್ವರ ಎತ್ತಿದ ಬಿಜೆಪಿ (BJP) ರಾಜ್ಯ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಖಡಕ್ ಎಚ್ಚರಿಕೆ ನೀಡಿದರು. ಮೈಸೂರಿನ ಱಡಿಸನ್​ ಬ್ಲೂ ಹೋಟೆಲ್‌ನಲ್ಲಿ ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಯಾರೂ ಅಪಸ್ವರ ಎತ್ತಬಾರದು. ಕಳೆದಬಾರಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸಂದರ್ಭ ಇಂತಹ ಅಪಸ್ವರದ ಮಾತುಗಳಿಂದಲೇ ಅವರಿಗೆ ಸೋಲಾಗಿತ್ತು. ಅದೇ ಕೆಲಸವನ್ನ ನೀವು ಮಾಡಕೂಡದು ಎಂದು ಎಚ್ಚರಿಕೆ ನೀಡಿದರು.

ಅಪಸ್ವರದ ಮಾತುಗಳಿಂದಲೇ ಮೈತ್ರಿಗೆ ತೊಂದರೆಯಾಗುತ್ತದೆ. ಮೈತ್ರಿಗೆ ಧಕ್ಕೆಯಾಗುವಂತಹ ಯಾವುದೇ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಎಲ್ಲ ನಾಯಕರನ್ನು ಉದ್ದೇಶಿಸಿ ಅಮಿತ್ ಶಾ ಸೂಚನೆ ನೀಡಿದರು.

ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿವಿ ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್‌, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಶ್ರೀರಾಮುಲು, ರಾಮದಾಸ್‌, ಎನ್‌ ಮಹೇಶ್‌, ಕೆಜಿ ಬೋಪಯ್ಯ, ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ಹರ್ಷವರ್ಧನ್, ಪ್ರೀತಂಗೌಡ, ಎಲ್‌. ನಾಗೇಂದ್ರ, ರಾಜೇಶ್ ಸೇರಿದಂತೆ ಹಲವರು ಭಾಗಿಯಾದರು. ಆರ್‌ಎಸ್‌ಎಸ್‌ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಸಹ ಉಪಸ್ಥಿತರಿದ್ದರು.

ಸಭೆಯಲ್ಲಿ ನಾರಾಯಣಗೌಡ ಭಾಗಿ

ಮಾಜಿ ಸಚಿವ ನಾರಾಯಣಗೌಡ ಅವರು ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದರು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ನಾರಾಯಣಗೌಡ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಇದರ ಬೆನ್ನಲ್ಲೇ ಕೋರ್‌ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ನಾರಾಯಣಗೌಡ ಮುಂದಿನ ನಡೆಯ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೈಸೂರಿನಲ್ಲಿ ಅರುಣ್​ ಯೋಗಿರಾಜ್​ರನ್ನ​ ಸನ್ಮಾನಿಸಿ, ಸುತ್ತೂರು ಮಠದ ಕೊಡುಗೆಯನ್ನು ಸ್ಮರಿಸಿದ ಅಮಿತ್​ ಶಾ

ಮೈಸೂರು ಪ್ರವಾಸದಲ್ಲಿರುವ ಅಮಿತ್ ಶಾ ಭಾನುವಾರ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದು, ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಱಡಿಸನ್​ ಬ್ಲೂ ಹೋಟೆಲ್‌ನಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಸಿದ್ಧತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ