ಸೋಲಿನ ಕಾರಣ ತಿಳಿಸಿದ್ದೆ, ರಾಜೀನಾಮೆ ನೀಡಲು ಮುಂದಾಗಿದ್ದೆ; ನಳಿನ್ ಕುಮಾರ್ ಕಟೀಲ್
ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ ಎಂದು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಶನಿವಾರ ಬಹಿರಂಗಪಡಿಸಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ ಎಂದು ಬಿಜೆಪಿ (BJP) ನಾಯಕ ನಳಿನ್ ಕುಮಾರ್ ಕಟೀಲ್ (Nalin Kumar Kateel) ಶನಿವಾರ ಬಹಿರಂಗಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ವಿ.ಸೋಮಣ್ಣ ಇಂಗಿತ ವ್ಯಕ್ತಪಡಿಸಿದ ವಿಚಾರವಾಗಿ ಬಳ್ಳಾರಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಮೌಖಿಕವಾಗಿ ಮತ್ತು ಲಿಖಿತವಾಗಿ ಪಕ್ಷದ ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದೆ. ನನ್ನ ಅವಧಿ ಮುಗಿದಿದೆ, ಸಹಜವಾಗಿ ಬದಲಾವಣೆ ಆಗಲಿದೆ ಎಂದು ಹೇಳಿದರು.
ರಾಜ್ಯ ಪಕ್ಷದ ಅಧ್ಯಕ್ಷನಾಗಿ ನನ್ನ ಅವಧಿ ಮುಗಿದಿದ್ದು ಸಹಜವಾಗಿಯೇ ನಾಯಕತ್ವ ಬದಲಾವಣೆಯಾಗಲಿದೆ ಎಂದು ಅವರು ಹೇಳಿದರು. ವಿ.ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಅವರು ಪಕ್ಷದ ಹಿರಿಯ ನಾಯಕರು ಎಂದು ಕಟೀಲ್ ಹೇಳಿದರು.
ಹೈಕಮಾಂಡ್ ಅಂಗೀಕಾರ ಮಾಡಬೇಕಲ್ವಾ ಎಂದ ಅಶೋಕ್
ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಆರ್. ಅಶೋಕ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಇದ್ದಾರೆ. ಸೋಮಣ್ಣ ಹೇಳಿಕೆ ಬಗ್ಗೆ ಗೊತ್ತಿಲ್ಲ, ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ. ಸದ್ಯಕ್ಕೆ ನಳಿನ್ ಕುಮಾರ್ರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯುವ ಸಂದರ್ಭ ಕಾಣುತ್ತಿಲ್ಲ. ಲೋಕಸಭೆ ಚುನಾವಣೆ ಇದೆ, ರಾಷ್ಟ್ರಾಧ್ಯಕ್ಷರ ತೀರ್ಮಾನ ಗೊತ್ತಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ; ನಳಿನ್ ಕುಮಾರ್ ಕಟೀಲ್ ಯೂಟರ್ನ್
ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನ್ನ ಬಳಿ ಯಾವ ಮಾಹಿತಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ದೆಹಲಿ ನಾಯಕರು ಅಂಗೀಕಾರ ಮಾಡಬೇಕಲ್ವಾ? ಲೋಕಸಭೆ ಚುನಾವಣೆ ಇದೆ, ಈಗ ಬದಲಾವಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸುತ್ತಾರೆ. ಅಲ್ಲಿವರೆಗೆ ರಾಜ್ಯಾಧ್ಯಕ್ಷರ ಪದವಿ ಖಾಲಿ ಇಲ್ಲ ಎಂದು ಅಶೋಕ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Sat, 24 June 23