ಬೆಂಗಳೂರು: ಸರ್ಕಾರ, ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಬಾರದು. ನಾವು ಯಾರ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ಸಂಪುಟ ಪುನಾರಚನೆ ಬಗ್ಗೆ ನಿರ್ಧರಿಸುತ್ತೆ. ಬಿಜೆಪಿಯಲ್ಲಿ ಎಲ್ಲರೂ ಶಿಸ್ತು ಅನುಸರಿಸಬೇಕು. ಸಿಎಂ, ಅಧ್ಯಕ್ಷರು, ಶಾಸಕರಿಗೆ ಬೇರೆ ಶಿಸ್ತು ಅಂತಾ ಇಲ್ಲ. ಬಿಜೆಪಿಯಲ್ಲಿ ಶಿಸ್ತು ಉಲ್ಲಂಘನೆ ಸಹಿಸಲ್ಲ ಎಂದು ಬಿಜೆಪಿ ಶಾಸಕರಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ಯಾರೂ ಕೂಡ ಬಹಿರಂಗ ಹೇಳಿಕೆಯನ್ನು ನೀಡಬಾರದು. ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಬಹಿರಂಗವಾಗಿ ಮಾತನಾಡುವವರ ಜತೆ ಮಾತಾಡುತ್ತೇನೆ. ಶಿಸ್ತು ಸಮಿತಿ ಮೂಲಕ ಕೇಂದ್ರಕ್ಕೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳುತ್ತೇವೆ. ಕೆಲವರಿಗೆ ಈಗಾಗಲೇ ಸ್ಪಷ್ಟೀಕರಣ ಕೇಳಿದ್ದು ಕೊಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಜಿಲ್ಲೆಯಲ್ಲಿ ಅದೇ ಜಿಲ್ಲೆಯವರು ಇರುವುದಿಲ್ಲ. ಇದು ನಮ್ಮ ಪಕ್ಷದಲ್ಲಿ ಇರುವ ನಿಯಮ. ಅದನ್ನೇ ರಾಜ್ಯದಲ್ಲಿ ಕೂಡ ಅನುಷ್ಠಾನ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ, ಸಿಎಂ ಬಸವರಾಜ ಬೊಮ್ಮಾಯಿ ಅವಧಿ ಪೂರ್ಣ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ರಾಜ್ಯದಲ್ಲಿ ಪಕ್ಷ, ಸರ್ಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಮೊದಲು ಬಿಜೆಪಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ, ಬಸನಗೌಡ ಪಾಟೀಲ ಯತ್ನಾಳ್, ತಿಪ್ಪಾರೆಡ್ಡಿ ಸಹಿತ ಕೆಲವರು ಸಚಿವ ಸ್ಥಾನದ ಆಕಾಂಕ್ಷೆಯ ಬಗ್ಗೆ ದನಿ ಎತ್ತಿದ್ದರು. ಸಚಿವ ಸಂಪುಟ ವಿಸ್ತರಣೆ ಆಗಬೇಕು, ಹೊಸ ಮುಖಗಳಿಗೆ ಮಣೆ ಹಾಕಬೇಕು ಎಂದು ಬಯಸಿದ್ದರು. ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಸರ್ಕಾರ ಸಂಪುಟ ರಚನೆ ಮಾಡಬೇಕು ಎಂದು ಹೇಳಿಕೆಗಳನ್ನು ಕೊಡುತ್ತಿದ್ದರು. ಇದರಿಂದ ಪಕ್ಷ ಮುಜುಗರ ಎದುರಿಸುವಂತೆ ಆಗಿತ್ತು. ಇದೀಗ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಎಂ.ಪಿ ರೇಣುಕಾಚಾರ್ಯ ಪಟ್ಟು; ಅಗತ್ಯ ಬಿದ್ದರೆ ದೆಹಲಿಗೂ ಹೋಗ್ತೇವೆ ಎಂದ ಶಾಸಕ
ಇದನ್ನೂ ಓದಿ: ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? – ರೇಣುಕಾಚಾರ್ಯ ಗರಂ
Published On - 1:56 pm, Tue, 25 January 22