ಬಿಜೆಪಿ ಶಾಸಕ ನೆಹರು ಓಲೇಕಾರ್‌ಗೆ ರಿಲೀಫ್: 2 ವರ್ಷ ಶಿಕ್ಷೆ ವಿಧಿಸಿದ್ದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ
ನಕಲಿ ಬಿಲ್ ಪ್ರಕರಣದಲ್ಲಿ ದೋಷಿಯಾಗಿರುವ ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಸಿ. ಓಲೇಕಾರ್‌ಗೆ ಹೈಕೋರ್ಟ್ ರಿಲೀಫ್ ನೀಡಿದ್ದು, 2 ವರ್ಷ ಶಿಕ್ಷೆ ವಿಧಿಸಿದ್ದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರು: ಕರ್ನಾಟಕದಲ್ಲಿ ನಕಲಿ ಬಿಲ್ ಪ್ರಕರಣದಲ್ಲಿ ದೋಷಿಯಾಗಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಸಿ. ಓಲೇಕಾರ್‌ಗೆ (MLA Nehru Olekar) ಹೈಕೋರ್ಟ್ ರಿಲೀಫ್ ನೀಡಿದೆ. 2 ವರ್ಷ ಶಿಕ್ಷೆ ವಿಧಿಸಿದ್ದ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಅನರ್ಹಗೊಳ್ಳುವ ಭೀತಿಯಿಂದ ನೆಹರು ಓಲೆಕಾರ್ ಪಾರಾಗಿದ್ದಾರೆ. ದೋಷಿಯಾಗಿಸಿದ ತೀರ್ಪಿಗೆ ತಡೆಯಾಜ್ಞೆ ನೀಡುವ ಮೂಲಕ ನ್ಯಾ. ಕೆ. ನಟರಾಜನ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ನೆಹರು ಓಲೆಕಾರ್ ವಿರುದ್ದ ಶಿಕ್ಷೆ ಪ್ರಕಟವಾಗಿದ್ದಾಗ ಭ್ರಷ್ಟಾಚಾರ ಕೇಸ್ನಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ನೆಹರು ಓಲೆಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಬಿಜೆಪಿ ಮುಖಂಡ ಸಂತೋಷ್ ರೆಡ್ಡಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ಇತ್ತೀಚೆಗೆ ದೂರು ನೀಡಲಾಗಿತ್ತು.
2013ರಲ್ಲಿ ಹಾವೇರಿಯ ಶಶಿಧರ್ ಹಳ್ಳಿಕೇರಿ ಅವರು ಈ ಹಿಂದೆ ದೂರು ದಾಖಲಿಸಿ, 2008 ಮತ್ತು 2013ರ ಅವಧಿಯಲ್ಲಿ ಶಾಸಕರಾಗಿದ್ದ ಓಲೇಕಾರ್ ಅವರು ಸರ್ಕಾರದ ಸಿವಿಲ್ ಕೆಲಸಗಳನ್ನು ಬೇರೆಯವರಿಗೆ ದಕ್ಕದಂತೆ ತಮ್ಮ ಇಬ್ಬರು ಪುತ್ರರಿಗೆ ಕೊಡಿಸಿದ್ದರು ಎಂದು ಆರೋಪಿಸಿದ್ದರು. ಈ ಖಾಸಗಿ ದೂರನ್ನು ಆಧರಿಸಿ ಹಾವೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು.
ಇದನ್ನೂ ಓದಿ: ಶಾಸಕ ಸ್ಥಾನದಿಂದ ನೆಹರು ಓಲೆಕಾರ್ ಅನರ್ಹಗೊಳಿಸುವಂತೆ ಬಿಜೆಪಿ ಕಾರ್ಯಕರ್ತರಿಂದಲೇ ದೂರು
ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 197, 198, 409 ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1)(ಡಿ) ಜೊತೆಗೆ 13(2) ಅಡಿ ಪ್ರಕರಣ ದಾಖಲಿಸಿ, ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆಯ ಜೊತೆಗೆ ಶಾಸಕ ಓಲೇಕಾರ್‌ಗೆ ₹2,000 ದಂಡ ವಿಧಿಸಿದ್ದು, ಅವರ ಇಬ್ಬರು ಪುತ್ರರಿಗೆ ತಲಾ 6,000 ಹಾಗೂ 4,5,7,8 ಮತ್ತು 9ನೇ ಆರೋಪಿಗಳಿಗೆ ತಲಾ 8,000 ರೂ. ದಂಡ ವಿಧಿಸಿತ್ತು. ದೋಷಿಗಳ ಪೈಕಿ ಓಲೇಕಾರ್ ಮಾತ್ರ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ಬಿಜೆಪಿಯ ಹಾವೇರಿ ಶಾಸಕ ನೆಹರು ಓಲೇಕಾರ್ ಅವರಿಗೆ ವಿಚಾರಣಾಧೀನ ನ್ಯಾಯಾಲಯವು ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೇ ನೆಹರು ಓಲೇಕಾರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್ಗೆ ಜೈಲುಶಿಕ್ಷೆ: ತಂದೆ, ಮಕ್ಕಳು 2 ವರ್ಷ ಜೈಲುಪಾಲು
ಘಟನೆ ಹಿನ್ನೆಲೆ
50 ಲಕ್ಷ ರೂ. ಮೊತ್ತದ ಕಾಮಗಾರಿ ಪುತ್ರರಿಗೇ ನೀಡಿದ ಆರೋಪದಡಿ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್ ಮತ್ತು ಪುತ್ರರಾದ ಮಂಜುನಾಥ್, ದೇವರಾಜ್ ಓಲೆಕಾರ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲ ಕಾಮಗಾರಿಯಲ್ಲಿ ಶಾಸಕ ಓಲೆಕಾರ್ ವಿರುದ್ಧ ಸ್ವಜನ ಪಕ್ಷಪಾತ ಆರೋಪಿಸಿತ್ತು. ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇ ಜಾಮೀನು ಮಂಜೂರು ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Wed, 5 April 23