
ಬೆಳಗಾವಿ: ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ (Election) ವಿಚಾರ ಸಂಬಂಧ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸ್ಪಷ್ಟನೆ ನೀಡಿದ್ದಾರೆ. ಜೂನ್ 13ರಂದು ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಅರುಣ್ ಶಹಪುರ್ ಮತ್ತು ಹನುಮಂತ ನಿರಾಣಿ ಕಣಕ್ಕಿಳಿದಿದ್ದಾರೆ. ಜಿಲ್ಲೆಯ 18 ವಿಧಾನಸಭೆ ಕ್ಷೆತ್ರಗಳ ಪೈಕಿ 13 ಕ್ಷೆತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಓರ್ವ ಸಂಸದ, ಓರ್ವ ರಾಜ್ಯಸಭೆ ಸದಸ್ಯರಿದ್ದಾರೆ. ಹೀಗಿದ್ದಾಗಲೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಸೋತ್ತಿದ್ದರು. ಇದಕ್ಕೆ ಪಕ್ಷದೊಳಗಿನ ಭಿನ್ನಮತ ಕಾರಣ ಎಂದು ಹೇಳಲಾಗಿದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವರು, ಬಿಜೆಪಿ ಗೆಲ್ಲಿಸುವುದು ನಮ್ಮ ಗುರಿ. ಯಾರಿಗೆ ಏನು ಸೂಚನೆ ಕೊಡಬೇಕೋ ಅದನ್ನು ಕೊಟ್ಟಿದ್ದೇನೆ. ಬೆಳಗಾವಿಗೆ ನಾನು ಭಿನ್ನಮತ ಶಮನ ಮಾಡುವುದಕ್ಕೆ ಬಂದಿಲ್ಲ. ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಕೇಂದ್ರದ ನಾಯಕರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: ಧಾರವಾಡ-ಬೆಂಗಳೂರು ರೈಲು ಪ್ರಯಾಣ ನಾಲ್ಕುವರೆ ಗಂಟೆಗೆ ಇಳಿಸುತ್ತೇವೆ: ಪ್ರಹ್ಲಾದ ಜೋಶಿ ಘೋಷಣೆ
ಎರಡು ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದ ಗೆಲುವು ಸಾಧಿಸಲಿದೆ. ಬಿಜೆಪಿ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ದೇಶದಲ್ಲಿ ಪ್ರಥಮ ಭಾರಿಗೆ ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪ್ರಾರಂಭ ಮಾಡಿದ್ದೇವೆ. ಪ್ರಧಾನಿಯವರು ಕೂಡ ಸ್ಥಳೀಯ ಭಾಷೆಗಳು ಆತ್ಮ ಎಂದು ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ನಲ್ಲಿ ಅತಿ ಹೆಚ್ಚು ಹಣ ನೀಡಲಾಗಿದೆ. ಮುಂದಿನ ಚುನಾವಣೆಯನ್ನು ಗೆಲ್ಲಲು ರಣತಂತ್ರ ರೂಪಿಸಿದ್ದೇವೆ. ಪ್ರತಿ ಕ್ಷೇತ್ರದಲ್ಲಿ ಮತದಾರರು, ಪಕ್ಷದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಲಿದ್ದು, ಹೆಚ್ಚಿನ ಲೀಡ್ ಕೊಡಿಸುವ ಜವಾಬ್ದಾರಿ ಶಾಸಕರಿಗೆ ನೀಡಲಾಗಿದೆ ಎಂದರು.
ಹೆಚ್ಚು ಕಮ್ಮಿ ಭಿನ್ನಾಭಿಪ್ರಾಯಕ್ಕೆ ಬ್ರೇಕ್
ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಎಲ್ಲಾ ವಿಚಾರಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಚರ್ಚೆ ನಡೆಸಿದ್ದಾರೆ. ಕೆಲವು ವಿಚಾರಗಳನ್ನು ಹೊರಗಡೆ ಹೇಳಲು ಆಗುವುದಿಲ್ಲ. ಆದರೆ, ನಮ್ಮಲ್ಲಿದ್ದ ಹೆಚ್ಚು ಕಮ್ಮಿ ಭಿನ್ನಾಭಿಪ್ರಾಯಗಳಿಗೆ ತೆರೆ ಬಿದ್ದಿದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆಗಿನ ಸಭೆಯ ಬಳಿಕ ಬಾಲಚಂದ್ರ ಜಾರಕಿಹೊಳಿ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತವು ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಬೇಕು, ‘ಆತ್ಮನಿರ್ಭರ್’ ಆಗಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಸೋಲುವ ಪ್ರಶ್ನೆಯೇ ಇಲ್ಲ. ಯಾರ ಮೇಲೂ ಆಪಾದನೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಒಳ್ಳೆಯದಾಗುತ್ತದೆ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ, ಹೈಕಮಾಂಡ್ ಸೇರಿ ಸಂಪುಟ ವಿಸ್ತರಣೆ ಮಾಡುತ್ತಾರೆ. ಚುನಾವಣೆ ಬಂದಿರುವ ಕಾರಣಕ್ಕೆ ಮುಂದೆ ಹಾಕಿರಬಹುದು. ಬೆಳಗಾವಿ ಜಿಲ್ಲೆಗೆ, ರಮೇಶ್ ಜಾರಕಿಹೊಳಿಗೆ ಒಳ್ಳೆಯದಾಗಲಿದೆ ಎಂಬ ಭರವಸೆ ಇಟ್ಟುಕೊಂಡಿದ್ದೇವೆ ಎಂದರು. ಲಖನ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗ್ತಾರಾ ಎಂಬ ವಿಚಾರವಾಗಿ ಮಾತನಾಡಿ, ಅವರು ಬಿಜೆಪಿ ಅಭ್ಯರ್ಥಿಗೆ ಸಪೋರ್ಟ್ ಮಾಡುತ್ತೇನೆ ಅಂತಾ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ದಲಿತ ಸಿಎಂ ಆಗುತ್ತೇನೆ ಅಂತಾ ಕನಸು ಕಾಣುವವನು ಹುಚ್ಚ, ಈ ಬಗೆಗಿನ ಚರ್ಚೆ ಕೇವಲ ರಾಜಕೀಯ ತೆವಲು -ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಇದನ್ನೂ ಓದಿ: ರಾಜ್ಯಸಭೆ, ಪರಿಷತ್ ಟಿಕೆಟ್ಗೆ ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ: 2 ಸ್ಥಾನಗಳಿಗೆ 10ಕ್ಕೂ ಹೆಚ್ಚು ಆಕಾಂಕ್ಷಿಗಳ ಕಸರತ್ತು
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ