3 ಡಿಸಿಎಂ ಡಿಶುಂ ಡಿಶುಂಗೆ ಕೊನೆಗೂ ಬಿತ್ತು ಫುಲ್ ಸ್ಟಾಪ್: ಎಲ್ಲಾ ಗೊಂದಲಗಳಿಗೆ ಸುರ್ಜೆವಾಲ ತೆರೆ

|

Updated on: Jan 10, 2024 | 7:43 PM

ಕರ್ನಾಟಕದಲ್ಲಿ ಈಗಾಗಲೇ ಓರ್ವ ಡಿಸಿಎಂ ಇದ್ದಾರೆ. ಅದು ಕೂಡಾ ಹೇಳಿ ಕೇಳಿ ಡಿ.ಕೆ.ಶಿವಕುಮಾರ್. ಹೀಗಿದ್ದರೂ ಸಹ ಮೂರು ಡಿಸಿಎಂ ಬೇಕು ಎನ್ನುವ ಕೂಗು ಆಗಾಗ ಕುಲುಮೆಯಲ್ಲಿ ಹೊಗೆ ಹಾಕಿದಾಗ ಏಳೋ ಬೆಂಕಿಯಂತೆ ಎದ್ದು ತಣ್ಣಗಾಗ್ತಿತ್ತು. ಆದ್ರೆ, ಇದೀಗ ದೊಡ್ಡ ಮಟ್ಟದಲ್ಲಿ ಸುದ್ದು ಮಾಡುತ್ತಿದೆ. ಹೀಗಾಗಿ ಇದೀಗ ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರತಿಕ್ರಿಯಿಸಿ ಮೂರು ಡಿಸಿಎಂ ಡಿಶುಂ ಡಿಶುಂಗೆ ಫುಲ್​ ಸ್ಟಾಪ್ ಇಟ್ಟಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

3 ಡಿಸಿಎಂ ಡಿಶುಂ ಡಿಶುಂಗೆ ಕೊನೆಗೂ ಬಿತ್ತು ಫುಲ್ ಸ್ಟಾಪ್: ಎಲ್ಲಾ ಗೊಂದಲಗಳಿಗೆ ಸುರ್ಜೆವಾಲ ತೆರೆ
Follow us on

ಬೆಂಗಳೂರು, (ಜನವರಿ 10): ಲೋಕಸಭೆ ಚುನಾವಣೆ (Loksabha Elections 2024) ವೇಳೆಯೇ ಕಾಂಗ್ರೆಸ್​(Congress) ನಲ್ಲಿ ಮೂರು ಡಿಸಿಎಂ (ಉಪಮುಖ್ಯಮಂತ್ರಿ) ಹುದ್ದೆ ಕೂಗು ಭಾರೀ ಜೋರಾಗಿದೆ. ಕಾಂಗ್ರೆಸ್​ನ ಕೆಲ ಹಿರಿಯ ನಾಯಕರೇ 3 ಡಿಸಿಎಂ ಸ್ಥಾನ ಸೃಷ್ಟಿ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಧ್ಯೆ ಪ್ರವೇಶಿಸಿ ಮೂರು ಡಿಸಿಎಂ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೆವಾಲ, ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಿನಿಮೀಯ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ. ಜನರ ಬಳಿ ಆಡಳಿತವನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಮುಂದಿನ ಲೋಕಸಭಾ ಚುನಾವಣೆಗೆ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಹೆಚ್ಚುವರಿ ಡಿಸಿಎಂ ಕೂಗಿಗೆ ಫುಲ್​ ಸ್ಟಾಪ್ ಇಟ್ಟರು. ಅಲ್ಲದೇ ಹೆಚ್ಚುವರಿ ಡಿಸಿಎಂ ಸೃಷ್ಟಿ ಮಾಡಬೇಕೆಂಬುವರಿಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ 11 ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ, ಏನಿದರ ಮರ್ಮ?

ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವುದರ ಬಗ್ಗೆ ಕೆಲ ಕಾಂಗ್ರೆಸ್ ಹಿರಿಯ ನಾಯಕರೇ ಮಾತುಕತೆ ನಡೆಸಿದ್ದರು. ಅದರಲ್ಲೂ ಎಸ್‌ಸಿ, ಎಸ್​ಟಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಇದೇ ವೇಳೆ ನಾಯಕರು ಆಗ್ರಹಿಸಿದ್ದರು. ಹೀಗಾಗಿ ಡಿನ್ನರ್ ಮೀಟಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್, ಲಂಚ್ ಮೀಟಿಂಗ್ ಎಂದು ಗುಪ್ತವಾಗಿ ಸಭೆ ಮೇಲೆ ಸಭೆ ಮಾಡಿ ಚರ್ಚೆ ನಡೆಸಿದ್ದರು.. ಸದ್ದಿಲ್ಲದಂತೆ ಹೈಕಮಾಂಡ್​ಗೂ ಈ ವಿಚಾರ ಮುಟ್ಟಿಸಿದ್ರು ಎನ್ನಲಾಗಿತ್ತು.

. ಲೋಕಸಭೆ ಚುನಾವಣೆಗೂ ಮುನ್ನವೇ ಡಿಸಿಎಂ ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಲ್ಲೂ ಎಸ್.ಸಿ ಎಸ್.ಟಿ ಸಮುದಾಯ, ಕಾಂಗ್ರೆಸ್ ಕೈ ತಪ್ಪಿ ಹೋಗಬಾರದು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಡಿಸಿಎಂ ಆಯ್ಕೆ ಮೂಲಕ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಮೇಲ್ವರ್ಗವನ್ನು ಮಾತ್ರ ನಂಬಿಕೊಂಡರೆ ಲೋಕಸಭೆ ಹೆಚ್ಚಿನ ಸ್ಥಾನ ಗೆಲ್ಲಲು ಅಸಾಧ್ಯ. ಹೀಗಾಗಿ ಮುಂಚಿತವಾಗಿಯೇ ನಾವು ಎಚ್ಚೆತ್ತುಕೊಂಡು ಡಿಸಿಎಂ ಆಯ್ಕೆ ಮಾಡಬೇಕು ಎಂದು ಸಚಿವರ ತಂಡ ಪ್ರತಿಪಾದಿಸಿದೆಯಂತೆ.

ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ಕೊಟ್ಟಿದ್ದಾರೆ. ಮೂವರು ಡಿಸಿಎಂ ವಿಚಾರ ಹೈಕಮಾಂಡ್​ ಮುಂದೆ ಇಲ್ಲ, ಈ ವಿಚಾರವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ರನ್ನೇ ಕೇಳಿ ಎಂದು ಹೇಳಿದ್ದಾರೆ. ಈ ವಿಚಾರ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸುರ್ಜೆವಾಲ ಅವರು ಡಿಸಿಎಂ ಡಿಶುಂ ಡಿಶುಂಗೆ ಬ್ರೇಕ್ ಹಾಕಿದ್ದಾರೆ. ಇದರೊಂದಿಗೆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ