ಬೆಂಗಳೂರು ಜನವರಿ 28: ಲೋಕಸಭಾ ಚುನಾವಣೆಯಲ್ಲಿ (Lokasbha Election) ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಟಿಕೆಟ್ ಯಾರಿಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಬಿಜೆಪಿಯನ್ನು ಬೆಂಬಲಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗಾ ಅಥವಾ ಎನ್ಡಿಎ ಮೈತ್ರಿಕೂಟಕ್ಕೆ ಸೇರಿರುವ ಜೆಡಿಎಸ್ಗಾ ಎಂಬ ಪ್ರಶ್ನೆ ಉದಯವಾಗಿದೆ. ಈ ಮಧ್ಯೆ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashok) ಮಹತ್ವದ ಸುಳಿವು ನೀಡಿದ್ದಾರೆ. ಹೌದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ಗೆ ಟಿಕೆಟ್ ಅಂತ ಸುಳಿವು ಕೊಟ್ಟಿದ್ದಾರೆ.
ಇನ್ನು ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಕಾಸಿಲ್ಲದ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ಏಳು ತಾಸು ವಿದ್ಯುತ್ ಕೊಡುವುದಾಗಿ ಅಧಿವೇಶನದಲ್ಲಿ ಹೇಳಿದ್ದರು. ಅಧಿವೇಶನ ಮುಗಿದ ಮೇಲೆ ಮೂರು ತಾಸು ವಿದ್ಯುತ್ ಕೊಡುವುದಾಗಿ ಹೇಳಿದರು. ಇದು ಉಡಾಫೆ ಸರ್ಕಾರ, ರೈತರಿಗೆ ಕೊಡುವುದಕ್ಕೆ ಹಣ ಇಲ್ಲ. ಸಲಹೆಗಾರರನ್ನು ನೇಮಿಸಿಕೊಂಡು ದುಂದು ವೆಚ್ಚ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹೋಪ್ ಲೆಸ್ ಬಜೆಟ್ ಮಂಡನೆ ಮಾಡುತ್ತಾರೆ. ಅಂಗನವಾಡಿ ನೌಕರರ ವೇತನ ಬಿಡುಗಡೆಗೂ ಇವರ ಬಳಿ ಹಣವಿಲ್ಲ ಎಂದು ವಾಗ್ದಾಳಿ ಮಾಡಿದರು.
ಅಧಿವೇಶನಕ್ಕೂ ಮುನ್ನ ಬಿಜೆಪಿ ಹಲವು ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಿತು. ನಾಳೆ (ಜ.29) ರಂದು ಕೋಲಾರದಲ್ಲಿ ರೈತರ ಪರ ನಾವು ಹೋರಾಟ ಮಾಡುತ್ತಿದ್ದೇವೆ. ಕೋಲಾರದ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದೇವೆ. ಜನವರಿ 30 ರಂದು ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಇಡೀ ದೇಶದಲ್ಲಿ ನಮ್ಮ ರಾಜ್ಯ ಮಾದರಿಯಾಗಿತ್ತು. ಕಳೆದ 20 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ವಿ. ಸರ್ ಪ್ಲಸ್ ಬಜೆಟ್ ಮಂಡನೆ ಮಾಡಿದ್ವಿ. ಈಗ ಸಿದ್ದರಾಮಯ್ಯ ಹೋಪ್ ಲೆಸ್ ಬಜೆಟ್ ಮಂಡನೆ ಮಾಡಲಿದ್ದಾರೆ. ರಸ್ತೆಗಳು ಸಂಪೂರ್ಣವಾಗಿ ನಿರ್ಮಾಣವಾಗದೆ ಹಾಗೆ ಇವೆ. ಬಿಲ್ಡಿಂಗ್ ಕೆಲಸಗಳು ಹಾಗೆ ಉಳಿದಿವೆ. ಸರ್ಕಾರ ದಿವಾಳಿ ಆಗಿದೆ ಎಂದರು.
34 ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಕೊಟ್ಟಿದ್ದಾರೆ. ಸ್ಪೆಷಲ್ ಅಡ್ವೈಸರ್, ಮೆಡಿಕಲ್ ಅಡ್ವೈಸರ್ ಅಂತೆಲ್ಲ ನೇಮಿಸಿದ್ದಾರೆ. ಇದಕ್ಕೆಲ್ಲ ಎಲ್ಲಿಂದ ಹಣ ಬಂತು ಇವರಿಗೆ? ಪ್ರಧಾನಿ ಮೋದಿ ಗ್ಯಾರಂಟಿ ಪಕ್ಕಾ ಗ್ಯಾರಂಟಿ. ಕಾಂಗ್ರೆಸ್ ಗ್ಯಾರಂಟಿ ಎಲ್ಲ ಸುಳ್ಳು ಗ್ಯಾರಂಟಿ. ಅದಕ್ಕೆ ಸಾಕ್ಷಿ ರಾಮನಗರ ಶಾಸಕರು. 70 ವರ್ಷದಿಂದ ರಾಮ ಬೆಟ್ಟ ರಾಮನಗರದಲ್ಲೇ ಇತ್ತಲ್ವಾ, ಈಗ ರಾಮ ಮಂದಿರ ಕಟ್ಟುತ್ತಾರಂತೆ. ಬೆಟ್ಟ ಕಾಣುತ್ತಿರಲಿಲ್ವ? ಹೃದಯದಿಂದ ರಾಮ ಬರಬೇಕು. ಕೇವಲ ಬಾಯಲ್ಲಿ ಹೇಳುವುದಲ್ಲ ಎಂದು ಹರಿಹಾಯ್ದರು.
ಇದನ್ನೂ ಓದಿ: ಬಿಜೆಪಿಯಿಂದಲೇ ಸ್ಪರ್ಧೆಗೆ ತೀರ್ಮಾನ, ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ನೀಡಿದ್ರೆ ರಾಜಕೀಯವೇ ಬೇಡವೆಂದ ಸುಮಲತಾ
ರಾಮನ ಜನ್ಮ ದಿನಾಂಕ ಸರ್ಟಿಫಿಕೇಟ್ ಕೇಳಿದವರು ಕಾಂಗ್ರೆಸ್ನವರು. ವಿವಾದಿತ ಭೂಮಿ ಎಂದು ಸಿದ್ದರಾಮಯ್ಯ ಹೇಳಿದರು. ಈಗ ಅವರ ಅಪ್ಪನ ರಾಮ ಮಂದಿರವೇ ಎಂದು ಕೇಳುತ್ತಾರೆ. ಹೌದು ನಾವೇ ಕರಸೇವಕರಾಗಿ ಹೋರಾಡಿದ್ದು. ನಿಮ್ಮ ಮನೆಯಿಂದ ಒಬ್ಬರಾದರೂ ಬಂದಿದ್ರಾ? ಎಂದು ಪ್ರಶ್ನಿಸಿದರು.
ತಿಂಗಳ ಅಂತ್ಯಕ್ಕೆ ಕಾಂತರಾಜು ವರದಿ ಸ್ವೀಕಾರ ವಿಚಾರವಾಗಿ ಮಾತನಾಡಿದ ಅವರು, ಕಾಂತರಾಜು ವರದಿ ಅವೈಜ್ಞಾನಿಕ. ಸಹಿ ಇಲ್ಲ, ಮೂಲ ಪ್ರತಿ ಕಳೆದು ಹೋಗಿದೆ. ಹೇಳಿ ಬರೆಸಿರುವ ಸಮಿಕ್ಷೆ ಆಗಿದೆ. ಸಿದ್ದರಾಮಯ್ಯ ವೀರಶೈವ ವಿರೋಧಿ. ಎರಡು ಭಾಗ ಮಾಡಿದ್ದು ಅವರೆ. ಲಿಂಗಾಯತರ ಸಮುದಾಯನ್ನು ಒಡೆದವರು ಅವರೆ. ಈಗ ಒಕ್ಕಲಿಗರನ್ನ ಹೊಡೆಯೋಕೆ ಹೋಗುತ್ತಿದ್ದಾರೆ. ವರದಿ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹಿ ಹಾಕಿದ್ದಾರೆ. ಇನ್ನೊಬ್ಬ ಒಕ್ಕಲಿಗ ಸಚಿವರು ಸಹಿ ಹಾಕಿದ್ದಾರೆ. ಅವರನ್ನು ಕ್ಯಾಬಿನೆಟ್ ನಿಂದ ಹೊರಗೆ ಇಡಬೇಕು. ಇಲ್ಲ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ