
ಬೆಂಗಳೂರು, ಜುಲೈ 21: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭಾಗಿಯಾಗಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಸದನದಲ್ಲಿ ಉತ್ತರ ನೀಡುವ ಭರದಲ್ಲಿ, ಕಾರ್ಕಳದ ಪರಶುರಾಮ ಥೀಮ್ಪಾರ್ಕ್ ನಿರ್ಮಾಣಕ್ಕೆ ಜಾರಿಯಾಗಿದ್ದ 11 ಕೋಟಿ ರೂ.ನಲ್ಲಿ ಹರಗಣ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಕಾರ್ಕಳದ ಪರಶುರಾಮ ಥೀಮ್ಪಾರ್ಕ್ ಯೋಜನೆಗೆ ಇದುವರೆಗು ಬಿಡುಗಡೆಯಾಗಿದ್ದು 11 ಕೋಟಿ ಅಲ್ಲ ಬರೀ 6 ಕೋಟಿ ರೂ. ಎಂದು ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ (Sunil Kumar) ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಸುನಿಲ್ ಕುಮಾರ್ “ಒಬ್ಬ ಮುಖ್ಯಮಂತ್ರಿಯಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಕಾರ್ಕಳದ ಪರಶುರಾಮ ಥೀಮ್ಪಾರ್ಕ್ನಲ್ಲಿ 11ಕೋಟಿ ರೂ. ಹಗರಣವಾಗಿದೆ ಎಂದು ವಿಧಾನಸಭಾ ಕಲಾಪದಲ್ಲಿ ನೀವು ನನ್ನ ವಿರುದ್ಧ ಆರೋಪಿಸಿದ್ದೀರಿ. ಆದರೆ ಈ ಯೋಜನೆಗೆ ಇದುವರೆಗೆ ಬಿಡುಗಡೆಯಾಗಿದ್ದೇ 6 ಕೋಟಿ ರೂ. ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಟ್ವೀಟ್ ಮಾಡಿದ್ದಾರೆ.
“ಪರಶುರಾಮ ಥೀಮ್ಪಾರ್ಕ್ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ನಾಯಕರು ಸುಳ್ಳು ನರೇಟಿವ್ ಕಟ್ಟುತ್ತಲೇ ಇದ್ದಾರೆ. ಇವರಿಗೆ ಸತ್ಯ ಬಹಿರಂಗವಾಗುವುದು ಬೇಕಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಯಾಗುವುದು ಬೇಕಿಲ್ಲ. ನಿರಂತರ ಆರೋಪ ನಡೆಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಮಾತ್ರ ಅವರ ಉದ್ದೇಶ” ಎಂದು ಹರಿಹಾಯ್ದರು.
ಇದನ್ನೂ ಓದಿ: ಬರದ ಗೃಹಲಕ್ಷ್ಮಿ ಹಣ; ಸಿದ್ದರಾಮಯ್ಯ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿರುವ ಮಹಿಳೆಯರು
“ಪ್ರತಿ ಬಾರಿಯೂ ಅಧಿವೇಶನ ಸಂದರ್ಭದಲ್ಲಿ ಥೀಮ್ಪಾರ್ಕ್ ಬಗ್ಗೆ ಅಪಪ್ರಚಾರ ನಡೆಸುವುದು ಈ ಸರ್ಕಾರಕ್ಕೆ ಹಾಗೂ ಕಾರ್ಕಳ ಕಾಂಗ್ರೆಸ್ ಮುಖಂಡರಿಗೆ ಚಟವಾಗಿಬಿಟ್ಟಿದೆ. ಕಳೆದ ಅಧೀವೇಶನದ ಸಮಯದಲ್ಲಿ ತನಿಖೆ ನಡೆಸುತ್ತೇವೆ ಎಂದರು. ಸಿಐಡಿ ತನಿಖೆಗೂ ಸೂಚಿಸಿದರು, ಆದರೆ ಇದುವರೆಗೆ ತನಿಖೆ ಪ್ರಗತಿಯಾಗಿಲ್ಲ. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಿ ತಪ್ಪಿಸಿಕೊಂಡರು” ಎಂದಿದ್ದಾರೆ.
ಒಬ್ಬ ಮುಖ್ಯಮಂತ್ರಿಯಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ @siddaramaiah ನವರಿಗೆ ನಾಚಿಕೆಯಾಗಬೇಕು. ಕಾರ್ಕಳದ ಪರಶುರಾಮ ಥೀಂಪಾರ್ಕ್ ನಲ್ಲಿ ಹನ್ನೊಂದು ಕೋಟಿ ರೂ. ಹಗರಣವಾಗಿದೆ ಎಂದು ವಿಧಾನಸಭಾ ಕಲಾಪದಲ್ಲಿ ನೀವು ನನ್ನ ವಿರುದ್ಧ ಆರೋಪಿಸಿದ್ದೀರಿ. ಆದರೆ ಈ ಯೋಜನೆಗೆ ಇದುವರೆಗೆ ಬಿಡುಗಡೆಯಾಗಿದ್ದೇ ೬ ಕೋಟಿ ರೂ !
(1/5)— Sunil Kumar Karkala (@karkalasunil) July 21, 2024
“ಈಗ ಮುಡಾದಲ್ಲಿ ಭೂಮಿ ನುಂಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಹೈಕಮಾಂಡ್ ಭಂಡಾರ ತುಂಬಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಮತ್ತೆ ಪರಶುರಾಮ ಥೀಮ್ಪಾರ್ಕ್ ನೆನಪಾಗಿದೆ. ನಿಮ್ಮನ್ನೆಲ್ಲ ಬಲಿ ಹಾಕುತ್ತೇನೆ ಎಂದು ಸದನದಲ್ಲಿ ತೊಡೆ ತಟ್ಟಿದಷ್ಟೇ ದಮ್ಮು- ತಾಕತ್ತು ನಿಜಕ್ಕೂ ಇದ್ದರೆ ಮೊದಲು ನ್ಯಾಯಸಮ್ಮತ ತನಿಖೆ ನಡೆಸಿ. ಬೇಕಾದರೆ ಸಿಬಿಐ ತನಿಖೆಗೂ ಆದೇಶಿಸಿ, ಎಸ್ಎಸ್ಎಸ್ಐಟಿ ರಚನೆ ಮಾಡಿದರೂ ನೋ ಪ್ರಾಬ್ಲಮ್!. ಅದನ್ನು ಬಿಟ್ಟು ಅಪಪ್ರಚಾರದ ತುತ್ತೂರಿ ಊದುತ್ತಾ ಹೋದರೆ ನಮ್ಮ ತಿರುಗೇಟು ತಾಳುವುದಕ್ಕೂ ಸಿದ್ದರಾಗಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿ ಕುಂಜ ಬೆಟ್ಟದ ಮೇಲೆ ಪರಶುರಾಮ ಥೀಮ್ಪಾರ್ಕ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2023ರ ಜ. 17ರಂದು ಉದ್ಘಾಟಿಸಿದ್ದರು. ಇಡೀ ಥೀಮ್ ಪಾರ್ಕ್ ಅನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಬೃಹತ್ತಾದ ಪರಶುರಾಮನ ಪುತ್ಥಳಿ, ಬಯಲು ರಂಗ ಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರವನ್ನ ನಿರ್ಮಿಸಲಾಗಿತ್ತು ಆದ್ರೆ, ಪರಶುರಾಮನ ಪುತ್ಥಳಿಯನ್ನು ಕಂಚು ಮತ್ತು ಉಕ್ಕಿನಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಆದರೆ, ಮೂರ್ತಿ ಫೈಬರ್‌ನಿಂದ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಅಲ್ಲದೇ ಸಾಕ್ಷಿ ಸಮೇತ ಕಾಮಗಾರಿಯಲ್ಲಾದ ಅಕ್ರಮವನ್ನು ಬಯಲಿಗೆಳೆದಿದ್ದರು. ಕಾಂಗ್ರೆಸ್ ನಾಯಕರು ಈ ಪುತ್ಥಳಿಯನ್ನು ಫೈಬರ್‌ನಿಂದ ನಿರ್ಮಿಸಲಾಗಿದ್ದು, ಕಂಚು, ಉಕ್ಕು ಬಳಸಲಾಗಿದೆ ಎಂದು ಹೇಳಿ ಆ ಹಣವನ್ನು ಈ ಥೀಮ್ ಪಾರ್ಕ್ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಸುನಿಲ್ ಕುಮಾರ್ ಅವರು ಲೂಟಿ ಮಾಡಿದ್ದಾರೆ ಆರೋಪಿಸಿದ್ದರು. ಬಳಿಕ ಈ ಬಗ್ಗೆ ರಾಜಕೀಯ ಆರೋಪ ಪತ್ಯಾರೋಪಗಳು ಜೋರಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Sun, 21 July 24