ಅಬಕಾರಿ ಉಪ ಆಯುಕ್ತರ ಹುದ್ದೆಗೆ 3.5 ಕೋಟಿ ರೂ! ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಎಂದ ಅಶೋಕ್

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಹಾಗೂ ಸಚಿವ ಕೆಹೆಚ್​ ಮುನಿಯಪ್ಪ ಅಳಿಯನಿಗಾಗಿ ‘ಕಾರ್ಯದರ್ಶಿ-2’ ಹುದ್ದೆ ಸೃಷ್ಟಿಸಲು ಸರ್ಕಾರ ಮುಂದಾಗಿರುವುದರ ವಿರುದ್ಧ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕರ್ನಾಟಕ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸಿದ್ದಾರೆ.

ಅಬಕಾರಿ ಉಪ ಆಯುಕ್ತರ ಹುದ್ದೆಗೆ 3.5 ಕೋಟಿ ರೂ! ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಎಂದ ಅಶೋಕ್
ಆರ್ ಅಶೋಕ್
Follow us
Ganapathi Sharma
|

Updated on: Jul 22, 2024 | 12:54 PM

ಬೆಂಗಳೂರು, ಜುಲೈ 22: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ವರದಿಗೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಂದೇಶ ಪ್ರಕಟಿಸಿರುವ ಅವರು, ಮುಖ್ಯಮಂತ್ರಿ ಹುದ್ದೆಗೆ ರಾಹುಲ್ ಗಾಂಧಿ ಎಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಸಿದ್ದರಾಮಯ್ಯನವರೇ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್! ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಷ್ಟು ಸಾಂಸ್ಥಿಕ ರೂಪ ಪಡೆದಿದೆ ಅಂದರೆ ಅಬಕಾರಿ ಇಲಾಖೆಯಲ್ಲಿ ಪೇದೆಯಿಂದ ಹಿಡಿದು ಉಪ ಆಯುಕ್ತ ಹುದ್ದೆವರೆಗೆ 5 ಲಕ್ಷ ರೂಪಾಯಿಯಿಂದ 3.5 ಕೋಟಿ ರೂಪಾಯಿ ವರೆಗೆ ಲಂಚ ಫಿಕ್ಸ್ ಆಗಿದೆ. ಅಂದಹಾಗೆ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಹುಲ್ ಗಾಂಧಿ ಅವರು ಫಿಕ್ಸ್ ಮಾಡಿರುವ ರೇಟೆಷ್ಟು ಸಿಎಂ ಸಿದ್ದರಾಮಯ್ಯನವರೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

Opposition BJP leader R Ashoka slams Congress govt for Bribery for transfer in Excise Department, Karnataka news in Kannada

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ಜೋರಾಗಿದೆ ಎಂದು ಉಲ್ಲೇಖಿಸಿರುವ ಪತ್ರಿಕಾ ವರದಿಯೊಂದನ್ನು ಅವರು ಲಗತ್ತಿಸಿದ್ದಾರೆ. ವರದಿಯ ಪ್ರಕಾರ, ವರ್ಗಾವಣೆಗೆ ಅಬಕಾರಿ ಇಲಾಖೆಯ ಉಪ ಆಯುಕ್ತರ ಹುದ್ದೆಗೆ 2.5 ಕೋಟಿ ರೂ.ನಿಂದ 3.5 ಕೋಟಿ ರೂ. ಫಿಕ್ಸ್ ಆಗಿದೆ. ಅಧೀಕ್ಷಕರ ಹುದ್ದೆಗೆ 25ರಿಂದ 35 ಲಕ್ಷ ರೂ., ಉಪ ಅಧೀಕ್ಷಕ ಹುದ್ದೆಗೆ 30 ರಿಂದ 40 ಲಕ್ಷ ರೂ., ಅಬಕಾರಿ ನಿರೀಕ್ಷಕ ಹುದ್ದೆಗೆ 40 ರಿಂದ 50 ಲಕ್ಷ ರೂ., ಉಪ ನಿರೀಕ್ಷಕ ಹುದ್ದೆಗೆ 15 ರಿಂದ 20 ಲಕ್ಷ ರೂ., ಅಬಕಾರಿ ಮುಖ್ಯ ಪೇದೆ ಹುದ್ದೆಗೆ 8 ರಿಂದ 10 ಲಕ್ಷ ರೂ. ಹಾಗೂ ಅಬಕಾರಿ ಪೇದೆಗೆ 5 ರಿಂದ 8 ಲಕ್ಷ ರೂ. ಲಂಚ ಫಿಕ್ಸ್ ಆಗಿದೆ.

ಸಚಿವರ ಅಳಿಯನಿಗಾಗಿ ಹೊಸ ಹುದ್ದೆ: ಲಜ್ಜೆಗೆಟ್ಟ ಸರ್ಕಾರ ಎಂದ ಅಶೋಕ್

ಸಚಿವ ಕೆಹೆಚ್ ಮುನಿಯಪ್ಪ ಅಳಿನಿಯಾಗಿ ಕರ್ನಾಟಕ ಸರ್ಕಾರ ‘ಕಾರ್ಯದರ್ಶಿ-2’ ಹುದ್ದೆ ಸೃಷ್ಟಿಸಲು ಮುಂದಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿರುವ ಅಶೋಕ್, ಶಾಸಕರ ಬಂಡಾಯ ಶಮನ ಮಾಡಲು ಸಂವಿಧಾನದ ನಿಯಮ ಉಲ್ಲಂಘಿಸಿ 90 ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸೃಷ್ಟಿಸಿದ್ದಾಯ್ತು. ಈಗ ಸಚಿವರ ಅಳಿಯನಿಗಾಗಿ ಹೊಸ ಹುದ್ದೆಯನ್ನೇ ಸೃಷ್ಟಿಸಿ ನೇಮಕಾತಿ ಮಾಡಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್​​ರಿಂದಲೇ ಡ್ಯಾಂಗಳು ತುಂಬಿ ತುಳುಕುತ್ತಿವೆ: ಕುಮಾರಸ್ವಾಮಿ ವ್ಯಂಗ್ಯ

ಸಿಎಂ ಸಿದ್ದರಾಮಯ್ಯನವರೇ, ಶಾಸಕರನ್ನು, ಸಚಿವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಸಾರ್ವಜನಿಕರ ಹಣ ಪೋಲು ಮಾಡಿ ಶಾಸಕರಿಗೆ, ಸಚಿವರ ಸಂಬಂಧಿಗಳಿಗೆ ಬೇಕಾಬಿಟ್ಟಿ ಸ್ಥಾನಮಾನ ನೀಡುತ್ತಿರುವ ನೀವು ಕರ್ನಾಟಕ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಅಂದರೆ ತಪ್ಪಾಗಲಾರದು. ಇನ್ನೆಷ್ಟು ದಿನ ಈ ಭಂಡ ಬಾಳು. ಜನ ನಿಮ್ಮ ವಿರುದ್ಧ ದಂಗೆ ಏಳುವ ಮುನ್ನ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ. ರಾಜ್ಯದ ಗೌರವವನ್ನೂ ಉಳಿಸಿ ಎಂದು ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ