
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾಸಭೆ ಚುನಾವಣೆ (Karnataka Legislative Assembly Elections 2023) ಸಮೀಪಿಸುತ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರೊಂದಿಗೆ ರಾಜ್ಯದಲ್ಲಿ ಧರ್ಮ ದಂಗಲ್ ಕೂಡ ಹೆಚ್ಚಾಗುತ್ತಿದೆ. ಈ ನಡುವೆ ಮುಸ್ಲಿಮರನ್ನು ದ್ವೇಷಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಲು ಆರಂಭಿಸಿದೆ. ಮೋದಿ ಹೇಳಿಕೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಬಂದಂತೆ. ಇವರ ಮಾತನ್ನು ಯಾರೂ ನಂಬುವುದಿಲ್ಲ. ಅವರು ಸುಳ್ಳೇ ಮನೆ ದೇವರು ಎಂದು ನಂಬಿಕೊಂಡವರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ (B.K.Hariprasad) ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ರಾಜಕಾರಣವೇ ದ್ವೇಷ, ಪ್ರತೀಕಾರದ ರಾಜಕಾರಣವಾಗಿದೆ. ಚುನಾವಣೆ ಹತ್ತಿರ ಬಂದಿದೆ. ಲವ್ ಜಿಹಾದ್, ಹಿಜಾಬ್, ಹಲಾಲ್ ವಿವಾದ ಚುನಾವಣೆಯಲ್ಲಿ ಹೊಡೆತ ನೀಡುತ್ತದೆ ಎಂದು ಬಿಜೆಪಿಗೆ ಗೊತ್ತಾಗಿದೆ. ಯಡಿಯೂರಪ್ಪ ಅವರು ಟಿಪ್ಪು ಪೇಟ ಧರಿಸಿದ್ದವರು. ಹೀಗಾಗಿ ಅವರನ್ನು ವಾಪಸ್ ಕರೆಸಿಕೊಂಡಿದ್ದಾರೆ. ಮುಸ್ಲಿಮರು ಯಡಿಯೂರಪ್ಪ ಅವರ ಮಾತನ್ನು ಕೇಳುತ್ತಾರೆಂದು ಮುಂದೆ ಬಿಟ್ಟಿದ್ದಾರೆ ಎಂದರು.
ಇದನ್ನೂ ಓದಿ: Bk Hariprasad: ನಾನು ವೇಶ್ಯೆ ಎಂಬ ಪದ ಬಳಸಿಲ್ಲ, ಸಾಕ್ಷ್ಯ ನೀಡಿದರೆ ರಾಜೀನಾಮೆ ನೀಡುವೆ ಎಂದ ಬಿ.ಕೆ.ಹರಿಪ್ರಸಾದ್
ಬಿಜೆಪಿಯಿಂದ ಕಾಂಗ್ರೆಸ್ ನಾಯಕರ ಟಾರ್ಗೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗೃಹ ಮಂತ್ರಿಗಳು ಪರಪ್ಪನ ಅಗ್ರಹಾರ ಜೈಲನ್ನು ಚೆಕ್ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಅವರನ್ನು ಜೈಲಿಗೆ ಕಲಿಸುತ್ತೇವೆ. ಎಲ್ಲರೂ ಜೈಲಿಗೆ ಸೇರುವ ಕಾಲ ಸನಿಹವಾಗಿದೆ. ಈ ಸರ್ಕಾರಕ್ಕೆ 90 ದಿನಗಳ ಅವಧಿ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಮಾತಿನಂತೆ ಹೇಳುವುದಾದರೆ ಸಿಎಂಗೆ ಧಮ್ ಇದ್ದರೆ ತಾಕತ್ ಇದ್ದರೆ ನಮ್ಮನ್ನು ಜೈಲಿಗೆ ಕಳಿಸಲಿ ಎಂದು ಸವಾಲು ಹಾಕಿದರು.
ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಬೆಳೆದಿಲ್ಲ ಎಂಬ ಆರ್.ವಿ.ದೇಶಪಾಂಡೆ ಆರೋಪ ವಿಚಾರವಾಗಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ವೈಯಕ್ತಿಕವಾಗಿ ನಾನು ಯಾರ ಮೇಲೂ ಟೀಕೆ ಟಿಪ್ಪಣಿ ಮಾಡುವುದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತ್ಯೇಕ ಸರ್ವೆ ಮಾಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೆ ಪಕ್ಷಕ್ಕೆ ಪೂರಕವಾದ ಜಾತಿ ಸಮೀಕರಣ ಇದೆ. ಚುನಾವಣಾ ಸಮಿತಿ, ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಎಐಸಿಸಿ ಕೂಡ ಪ್ರತ್ಯೇಕ ಸರ್ವೆ ವರದಿಯನ್ನು ಇಟ್ಟುಕೊಂಡು ಕೂತಿದೆ. ಎಲ್ಲರ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಿದ್ದೇವೆ. ಸರ್ವೆಗಳ ಆಧಾರದ ಮೇಲೆಯೇ ನಾವು ಮುಂದುವರಿಯುತ್ತೇವೆ ಎಂದರು.
ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Fri, 20 January 23