ಫೆ.27ರಿಂದ ಮಲೆನಾಡಿನಲ್ಲಿ ವಿಮಾನ ಹಾರಾಟ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
ಮಲೆನಾಡಿಗರ ಬಹುದಿನಗಳ ಕನಸಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ ಇದೀಗ ಜನಸೇವೆಗೆ ಸಜ್ಜಾಗಿದೆ. ಫೆ. 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.
ಶಿವಮೊಗ್ಗ: ಮಲೆನಾಡಿಗರ ಬಹುದಿನಗಳ ಕನಸಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಇದೀಗ ಜನಸೇವೆಗೆ ಸಜ್ಜಾಗಿದ್ದು, ಫೆಬ್ರವರಿ 27ರಂದು ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಮಾನ ಸಂಚಾರಕ್ಕೆ ಹಸಿರುವ ನಿಶಾನೆ ತೋರಲಿದ್ದು, ಶಿವಮೊಗ್ಗದಿಂದ ಬೆಂಗಳೂರು ನಡುವೆ ಮೊದಲ ವಿಮಾನ ಹಾರಾಟ ನಡೆಯಲಿದೆ ಎಂದು ಕರ್ನಾಟಕ ಬಿಜೆಪಿ (BJP Karnataka) ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದ್ದು, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣ ಅತಿ ದೊಡ್ಡ ರನ್ ವೇ ಹೊಂದಿರುವ ವಿಮಾನ ನಿಲ್ದಾಣವಾಗಿದೆ.
ಶಿವಮೊಗ್ಗದಲ್ಲಿ 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವು 662.38 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. 45 ಮೀಟರ್ ಅಗಲದ 3,200 ಮೀಟರ್ ಉದ್ದದ ರನ್ ವೇ ಹೊಂದಿರುವ ಈ ವಿಮಾನ ನಿಲ್ದಾಣವು ರಾಜ್ಯದ 2ನೇ ಅತಿದೊಡ್ಡ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಖ್ಯಾತಿ ಪಡೆಯುತ್ತಿದೆ. ಈ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡ ನಂತರ ಕಾತರದಿಂದ ಕಾಯುತ್ತಿರುವ ಮಲೆನಾಡಿನ ಜನರ ಸಂಚಾರಕ್ಕೆ ಆಧುನಿಕ ಸೌಕರ್ಯ ದೊರೆತಂತಾಗಲಿದೆ.
ಇದನ್ನೂ ಓದಿ: ಅತ್ತ ಮೋದಿ ಬಿಗ್ ಗಿಫ್ಟ್, ಇತ್ತ ಮಲೆನಾಡಿಗೆ ದೊಡ್ಡ ನಿರಾಸೆ: ದಶಕಗಳ ಸಮಸ್ಯೆಗೆ ಸಿಗದ ಪರಿಹಾರ
ವಿಮಾನ ನಿಲ್ದಾಣ ಲೋಕಾರ್ಪಣೆ ಬಗ್ಗೆ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡ ಬಿಜೆಪಿ, ಶಿವಮೊಗ್ಗ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27ರಂದು ಉದ್ಘಾಟಿಸಲಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮರ್ಥ ಡಬಲ್ ಎಂಜಿನ್ ಸರ್ಕಾರ ಮಲೆನಾಡಿಗರ ಬಹುದಿನಗಳ ಕನಸನ್ನು ಈಡೇರಿಸುತ್ತಿದೆ ಎಂದು ಬರೆದುಕೊಂಡು ಪೋಸ್ಟರ್ ಹಂಚಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Fri, 20 January 23