ನವದೆಹಲಿ, ಜುಲೈ 18: ಎನ್‌ಡಿಎ ಮೈತ್ರಿಕೂಟವು ದೇಶದ ಎಲ್ಲಾ ಜನರ ವಿಶ್ವಾಸ ಗಳಿಸಿದೆ. ಇಡೀ ವಿಶ್ವವೇ ಭಾರತವನ್ನು ಅಭಿವೃದ್ಧಿ ದೃಷ್ಟಿಕೋನದಿಂದ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ದೆಹಲಿಯಲ್ಲಿ ನಡೆದ ಎನ್‌ಡಿಎ ಮಿತ್ರಪಕ್ಷಗಳ (National Democratic Alliance) ಸಭೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್‌ಡಿಎ ಅಂದರೆ ನ್ಯೂ ಇಂಡಿಯಾ ಡೆವಲಪ್ಮೆಂಟ್ ಆಸ್ಪಿರೇಷನ್. ಈ ಮೈತ್ರಿಕೂಟ ಯಾರನ್ನೂ ಅಧಿಕಾರದಿಂದ ಹೊರಗಿಡಲು ಮಾಡಿದ್ದಲ್ಲ. ದೇಶದಲ್ಲಿ ಸ್ಥಿರವಾದ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ನಾವು ಯಾವತ್ತೂ ನಕರಾತ್ಮಕ ರಾಜಕಾರಣ ಮಾಡಿಲ್ಲ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನಾವು ಪ್ರಯತ್ನ ಮಾಡಿದ್ದೇವೆ. ನಾವೆಲ್ಲರೂ ಒಂದು ಗುರಿ ಸಾಧಿಸಲು ಮುನ್ನುಗ್ಗುತ್ತಿದ್ದೇವೆ. ಆದರೆ, ಅಭಿವೃದ್ಧಿ ವಿಚಾರದಲ್ಲೂ ವಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಮೋದಿ ಟೀಕಿಸಿದರು.
ಎನ್‌ಡಿಎಯ 25 ವರ್ಷಗಳ ಈ ಪಯಣಕ್ಕೆ ಮತ್ತೊಂದು ಕಾಕತಾಳೀಯ ಸಂಗತಿಯೊಂದಿದೆ. ಮುಂಬರುವ 25 ವರ್ಷಗಳಲ್ಲಿ ನಮ್ಮ ದೇಶವು ದೊಡ್ಡ ಗುರಿಯನ್ನು ಸಾಧಿಸಲು ದೊಡ್ಡ ಹೆಜ್ಜೆಗಳನ್ನು ಇಡುತ್ತಿರುವ ಸಮಯ ಇದು. ಈ ಗುರಿಯು ಅಭಿವೃದ್ಧಿ ಹೊಂದಿದ ಭಾರತ, ಸ್ವಾವಲಂಬಿ ಭಾರತವಾಗಿದೆ ಎಂದು ಮೋದಿ ಹೇಳಿದರು.
ಎನ್‌ಡಿಎ ಅಂದರೆ ಎನ್ – ನ್ಯೂ ಇಂಡಿಯಾ, ಡಿ – ಡೆವಲಪ್ಮೆಂಟ್ ಹಾಗೂ ಎ – ಆಸ್ಪಿರೇಷನ್ ಎಂದು ಮೋದಿ ವ್ಯಾಖ್ಯಾನಿಸಿದರು. ನಾವು ಬಡತನವನ್ನು ಬಡವರ ಶಕ್ತಿಯಿಂದಲೇ ನಿರ್ಮೂಲನೆ ಮಾಡುತ್ತೇವೆ. ದೇಶದ ಜನರ ಅಭಿವೃದ್ಧಿಯೇ ಎನ್‌ಡಿಎ ಮೈತ್ರಿಕೂಟದ ವಿಚಾರಧಾರೆ. ಬಡತನ ನಿರ್ಮೂಲನೆಯೇ ಎನ್‌ಡಿಎ ಮೈತ್ರಿಕೂಟದ ಗುರಿ. ದೇಶದ ಬಡವರು, ಯುವಕರು, ದಲಿತರು, ಆದಿವಾಸಿಗಳು ಮಹಿಳೆಯರು ಎನ್‌ಡಿಎ ಒಕ್ಕೂಟದ ಜೊತೆ ಇದ್ದಾರೆ ಎಂದು ಪ್ರಧಾನಿ ಹೇಳಿದರು. ಎನ್‌ಡಿಎಗೆ ರಾಷ್ಟ್ರ ಮೊದಲು, ದೇಶದ ಭದ್ರತೆ ಮೊದಲು, ಪ್ರಗತಿ ಮೊದಲು ಮತ್ತು ಜನರ ಸಬಲೀಕರಣ ಮೊದಲು ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ: NDA Meeting: ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ ಶಕ್ತಿ; ಪ್ರಧಾನಿ ಮೋದಿ
ನಾವು ವಿರೋಧ ಪಕ್ಷದ ಸ್ಥಾನಲ್ಲಿದ್ದಾಗಲೂ ಸಕಾರಾತ್ಮಕ ರಾಜಕಾರಣ ಮಾಡಿದ್ದೇವೆ. ವಿರೋಧ ಪಕ್ಷದಲ್ಲಿ ನಾವು ಆಗಿನ ಸರ್ಕಾರದ ಹಗರಣಗಳನ್ನು ಹೊರತಂದಿದ್ದೇವೆ. ಆದರೆ ಜನಾದೇಶಕ್ಕೆ ಅವಮಾನ ಮಾಡಿಲ್ಲ. ಆಳುವ ಸರ್ಕಾರಗಳ ವಿರುದ್ಧ ನಾವು ಎಂದಿಗೂ ವಿದೇಶಿ ಶಕ್ತಿಗಳ ಸಹಾಯವನ್ನು ತೆಗೆದುಕೊಂಡಿಲ್ಲ. ದೇಶದ ಅಭಿವೃದ್ಧಿ ಯೋಜನೆಗಳಲ್ಲಿ ನಾವು ಎಂದಿಗೂ ಅಡೆತಡೆಗಳನ್ನು ಸೃಷ್ಟಿಸಿಲ್ಲ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ಮಹಾ ಮೈತ್ರಿಕೂಟದ ಬಗ್ಗೆ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವು ಮಹಾಮೈತ್ರಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಆದರೆ, ಎನ್‌ಡಿಎ ಮೈತ್ರಿಕೂಟವು ಯಾರನ್ನೋ ಅಧಿಕಾರದಿಂದ ಇಳಿಸಲು ಮಾಡಿದ್ದಲ್ಲ ಎಂದು ಮೋದಿ ಹೇಳಿದರು. ಕೆಲ ರಾಜ್ಯಗಳು ಕೇಂದ್ರದ ಯೋಜನೆ ಜಾರಿ ಮಾಡಲು ಬಿಟ್ಟಿಲ್ಲ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಪರಿಸ್ಥಿತಿ ಬಂತು. ಬಡವರ ಅಭಿವೃದ್ಧಿಯಲ್ಲೂ ರಾಜಕೀಯ ಲೆಕ್ಕಾಚಾರ ಹಾಕುತ್ತಾರೆ ಎಂದು ಮೋದಿ ಕುಟುಕಿದರು.
ಇದನ್ನೂ ಓದಿ: NDA VS INDIA: ನವಭಾರತದ ಆಶಯವೇ ಎನ್‌ಡಿಎ: ಪ್ರಧಾನಿ ಮೋದಿ ವ್ಯಾಖ್ಯಾನ
ದೇಶದಲ್ಲಿ 10 ಕೋಟಿ ಜನರ ಹೆಸರಲ್ಲಿ ಹಣ ಪೋಲು ಆಗುವುದಕ್ಕೆ ತಡೆಯೊಡ್ಡಿದ್ದೇವೆ. ನಮ್ಮ ಸರ್ಕಾರ ಬರುವ ಮುನ್ನ 10 ಕೋಟಿ ಜನರು ನಕಲಿ ಫಲಾನುಭವಿಗಳಾಗಿದ್ದರು. 30 ಲಕ್ಷ ಕೋಟಿ ರೂಪಾಯಿಯನ್ನು ನೇರ ನಗದು ವರ್ಗಾವಣೆ ಮೊಲಕ ದೇಶದ ಜನರ ಖಾತೆಗೆ ಹಾಕಲಾಗಿದೆ ಎಂದು ಮೋದಿ ಹೇಳಿದರು.
ಅವರು (ಪ್ರತಿಪಕ್ಷಗಳು) ಭಾಷೆ ದೇಶವನ್ನೇ ಒಡೆಯುವ ಸಾಧನ ಮಾಡಿಸಿಕೊಂಡರು. ನಾವು ದೇಶದ ಜನರನ್ನು ಜೋಡಿಸುತ್ತೇವೆ. ಅವರು ದೇಶದ ಜನರನ್ನು ವಿಭಜಿಸುತ್ತಾರೆ. ಚಿಕ್ಕ ಚಿಕ್ಕ ಸ್ವಾರ್ಥಕ್ಕಾಗಿ ಎಲ್ಲರೂ ಒಂದಾಗಿದ್ದಾರೆ. ಕೇರಳದಲ್ಲಿ ಎಡಪಂಥೀಯರು ಹಾಗೂ ಕಾಂಗ್ರೆಸ್ ನಡುವಿನ ಸಂಭದ ಏನು ಎಂಬುದು ಎಲ್ಲರಿಗೂ ಗೊತ್ತು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಎಡಪಂಥೀಯರ ನಡುವಿನ ಸಂಬಂಧ ಏನೆಂಬುದು ಎಲ್ಲರಿಗೂ ತಿಳಿದಿದೆ. ಮೋದಿಯನ್ನು ಹಣಿಯಲು ಈ ಒಕ್ಕೂಟ ಕೆಲಸ ಮಾಡುತ್ತಿದೆಯೇ ವಿನಃ ದೇಶದ ಜನರಿಗೆ ಒಳಿತು ಉಂಟುಮಾಡಲು ಅಲ್ಲ ಎಂದು ಮೋದಿ ದೂರಿದರು.
ಇದನ್ನೂ ಓದಿ: INDIA: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ನಾಮಕರಣ; ಮಲ್ಲಿಕಾರ್ಜುನ ಖರ್ಗೆ ಘೋಷಣೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ನಡೆದ ಸಭೆ ದೆಹಲಿಯ ಅಶೋಕ ಹೋಟೆಲ್ನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಎಐಎಡಿಎಂಕೆ, ಶಿವಸೇನೆ (ಶಿಂಧೆ ಬಣ), ಎನ್ಪಿಪಿ, ಎನ್ಡಿಪಿಪಿ, ಎಸ್ಕೆಎಂ, ಜೆಜೆಪಿ, ಎಜೆಎಸ್ಯು, ಆರ್ಪಿಐ, ಎಂಎನ್ಎಫ್, ತಮಿಳು ಮನಿಲಾ ಕಾಂಗ್ರೆಸ್, ಎಎಂಕೆಎಂಕೆ, ಐಪಿಎಫ್ಟಿ, ಬಿಪಿಪಿ, ಪಟ್ಟಾಲಿ ಮಕ್ಕಳ್ ಕಚ್ಚಿ, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ಅಪ್ನಾ ದಳ, ಅಸ್ಸಾಂ ಗಣ ಪರಿಷತ್, ನಿಶಾದ್ ಪಾರ್ಟಿ, ಜನಸೇನಾ, ಯುಪಿಪಿಎಲ್, ಎಐಆರ್ಎನ್ಸಿ, ಶಿರೋಮಣಿ ಅಕಾಲಿ ದಳ, ಎನ್ಸಿಪಿ (ಅಜಿತ್ ಪವಾರ್ ಬಣ), ಲೋಕ ಜನಶಕ್ತಿ ಪಕ್ಷ, ಹಿಂದೂಸ್ಥಾನಿ ಅವಾಮ್ ಮೋರ್ಚಾ, ಆರ್ಎಲ್ಎಸ್ಪಿ, ವಿಐಪಿ, ಎಸ್ಬಿಎಸ್ ಪಕ್ಷ ಸೇರಿದಂತೆ 38 ರಾಜಕೀಯ ಪಕ್ಷಗಳು ಭಾಗವಹಿಸಿವೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Tue, 18 July 23