Narendra Modi Interview: ನನಗೆ ಟೀಕಿಸುವವರೆಂದರೆ ಇಷ್ಟ, ನನ್ನ ದೃಷ್ಟಿಯಲ್ಲಿ ಅಧಿಕಾರವೆಂಬುದು ಜನಸೇವೆಯ ಒಂದು ಮಾರ್ಗ ಮಾತ್ರ; ಪ್ರಧಾನಿ ನರೇಂದ್ರ ಮೋದಿ

| Updated By: ಸುಷ್ಮಾ ಚಕ್ರೆ

Updated on: Oct 02, 2021 | 4:32 PM

ನನಗಾಗಿ ನಾನೇನೂ ಮಾಡುವುದಿಲ್ಲ, ನಾನು ತಪ್ಪು ಉದ್ದೇಶದಿಂದ ಏನನ್ನೂ ಮಾಡುವುದಿಲ್ಲ, ನಾನು ಕಠಿಣ ಪರಿಶ್ರಮದ ಹೊಸ ಮಾದರಿಯನ್ನು ರಚಿಸುತ್ತೇನೆ. ಈ ಮೂರೂ ಮಾತನ್ನು ನಾನು ಉಳಿಸಿಕೊಂಡಿದ್ದೇನೆ ಎಂದು ನಾನು ಅಧಿಕಾರಕ್ಕೆ ಬಂದಾಗ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.

Narendra Modi Interview: ನನಗೆ ಟೀಕಿಸುವವರೆಂದರೆ ಇಷ್ಟ, ನನ್ನ ದೃಷ್ಟಿಯಲ್ಲಿ ಅಧಿಕಾರವೆಂಬುದು ಜನಸೇವೆಯ ಒಂದು ಮಾರ್ಗ ಮಾತ್ರ; ಪ್ರಧಾನಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Follow us on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 7 ವರ್ಷಗಳು ಕಳೆದಿವೆ. ಗುಜರಾತ್ ಮುಖ್ಯಮಂತ್ರಿಯಾಗಿ, ಭಾರತದ ಪ್ರಧಾನಿಯಾಗಿ 2 ದಶಕಗಳಿಂದ ಸರ್ಕಾರವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲದೆ, ಅತ್ಯಂತ ಬಡತನದಲ್ಲಿ ಬೆಳೆದು ಪ್ರಧಾನಮಂತ್ರಿ ಹುದ್ದೆಗೆ ಏರಿದವರು. ಗುಜರಾತ್​ನ ಗಾಂಧಿನಗರದಿಂದ ನವದೆಹಲಿಯವರೆಗೆ ತಾವು ಸವೆಸಿದ ಹಾದಿ ಮತ್ತು ತಮ್ಮ ಮುಂದಿದ್ದ ಸವಾಲುಗಳು, ಭಾರತದ ಅಭಿವೃದ್ಧಿಯ ಬಗ್ಗೆ ತಮ್ಮ ದೃಷ್ಟಿಕೋನ ಹಾಗೂ ಕನಸುಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ‘ಓಪನ್ ಮ್ಯಾಗಜಿನ್​’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಂದರ್ಶನದ ಆಯ್ದ ಅಂಶಗಳು ಇಲ್ಲಿವೆ.

ರಾಜಕೀಯ ಕ್ಷೇತ್ರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಸುತ್ತಮುತ್ತಲಿನ ಪ್ರದೇಶಗಳು, ನನ್ನ ಆಂತರಿಕ ಜಗತ್ತು, ನನ್ನ ತತ್ವಶಾಸ್ತ್ರ ಇವು ಬಹಳ ಭಿನ್ನವಾಗಿತ್ತು. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ‘ಜನರ ಸೇವೆಯೇ ದೇವರ ಸೇವೆ’ ಎಂಬ ತತ್ವ ನನಗೆ ಸ್ಫೂರ್ತಿ ನೀಡಿತು. ನಾನು ಏನೇ ಮಾಡಿದರೂ ಅದಕ್ಕೆ ಆ ಮಾತೇ ಪ್ರೇರಕ ಶಕ್ತಿ. ಇನ್ನು, ರಾಜಕೀಯಕ್ಕೆ ಸಂಬಂಧಿಸಿದಂತೆ, ನಾನು ರಾಜಜೀಯಕ್ಕೆ ಬರಲೇಬೇಕೆಂದು ಎಂದೂ ಅಂದುಕೊಂಡವನಲ್ಲ. ಅನಿವಾರ್ಯ ಸಂದರ್ಭಗಗಳಿಂದ ಮತ್ತು ನನ್ನ ಕೆಲವು ಸ್ನೇಹಿತರ ಒತ್ತಾಯದ ಮೇರೆಗೆ ನಾನು ರಾಜಕೀಯಕ್ಕೆ ಸೇರಿಕೊಂಡೆ. ಅಲ್ಲಿಯೂ ನಾನು ಸಾಮಾನ್ಯ ಕಾರ್ಯಕರ್ತನಾಗಿರಬೇಕೆಂದೇ ಬಯಸಿದ್ದೆ. ಆದರೆ, 20 ವರ್ಷಗಳ ಹಿಂದೆ ನಾನು ಆಡಳಿತದ ಮುಖ್ಯಸ್ಥನಾಗಬೇಕಾದ, ಸರ್ಕಾರವನ್ನು ಮುನ್ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿಗಳು ಉಂಟಾದವು. ಹೀಗಾಗಿ, 2001ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾದೆ. ಜನರು ಅನುಭವಿಸುತ್ತಿರುವ ಆಳವಾದ ತೊಂದರೆಯನ್ನು ನಿಕಟವಾಗಿ ನೋಡಿದ ನನಗೆ, ನನ್ನ ಜೀವನದ ಹೊಸ ತಿರುವು ಎಂದರೆ ಏನು? ಎಂದು ಯೋಚಿಸಲು ಸಮಯ ಅಥವಾ ಅವಕಾಶವೇ ಇರಲಿಲ್ಲ. ಗಾಳಿ ಬೀಸಿದೆಡೆ ನಾನು ತೂರಿಕೊಂಡೆ. ನಿಜ ಹೇಳಬೇಕೆಂದರೆ ಏನನ್ನಾದರೂ ಸಾಧಿಸುವುದು ಅಥವಾ ದೊಡ್ಡ ವ್ಯಕ್ತಿಯಾಗಬೇಕೆಂದು ನಾನು ಎಂದೂ ಕನಸು ಕಂಡಿರಲಿಲ್ಲ.

ಆದರೆ, ಬೇರೆಯವರಿಗಾಗಿ ಏನನ್ನಾದರೂ ಮಾಡಬೇಕೆಂಬುದು ನನ್ನ ತುಡಿತವಾಗಿತ್ತು. ನಾನು ಎಲ್ಲಿದ್ದರೂ, ನಾನು ಏನೇ ಮಾಡುತ್ತಿದ್ದರೂ, ಜನರಿಗೆ ಏನನ್ನಾದರೂ ಮಾಡುವ ಬಯಕೆ ಇತ್ತು. ಇತರರಿಗಾಗಿ ಕೆಲಸ ಮಾಡುವುದೇ ನನಗೆ ಯಾವಾಗಲೂ ಸ್ವಯಂ-ತೃಪ್ತಿ ನೀಡುತ್ತಿತ್ತು. ಪ್ರಪಂಚದ ದೃಷ್ಟಿಯಲ್ಲಿ, ಪ್ರಧಾನ ಮಂತ್ರಿಯಾಗುವುದು ಮತ್ತು ಮುಖ್ಯಮಂತ್ರಿಯಾಗುವುದು ಬಹಳ ದೊಡ್ಡ ವಿಷಯವಾಗಿರಬಹುದು. ಆದರೆ ನನ್ನ ದೃಷ್ಟಿಯಲ್ಲಿ, ಇವುಗಳು ಜನರಿಗೆ ಏನನ್ನಾದರೂ ಮಾಡುವ ಒಂದು ಮಾರ್ಗವಷ್ಟೆ. ಮಾನಸಿಕವಾಗಿ ನಾನು ಈ ಶಕ್ತಿ, ಗ್ಲಿಟ್ಜ್ ಮತ್ತು ಗ್ಲಾಮರ್ ಪ್ರಪಂಚದಿಂದ ದೂರವಿದ್ದೇನೆ. ಅದರಿಂದಾಗಿಯೇ ನಾನು ಸಾಮಾನ್ಯ ಪ್ರಜೆಯಂತೆ ಯೋಚಿಸಲು ಮತ್ತು ನನ್ನ ಕರ್ತವ್ಯದ ಹಾದಿಯಲ್ಲಿ ನಡೆಯಲು ಸಾಧ್ಯವಾಗಿದೆ.

‘ಸಾಮಾನ್ಯರ ದೃಷ್ಟಿಯಲ್ಲಿ ಮುಖ್ಯಮಂತ್ರಿಯಾಗುವುದು, ಪ್ರಧಾನಮಂತ್ರಿಯಾಗುವುದು ದೊಡ್ಡ ವಿಚಾರವಿರಬಹುದು. ಆದರೆ, ನನ್ನ ದೃಷ್ಟಿಯಲ್ಲಿ ಈ ಅಧಿಕಾರ, ಪಟ್ಟ ಜನಸಾಮಾನ್ಯರಿಗೆ ಏನಾದರೂ ಸಹಾಯ ಮಾಡಲು ಇರುವ ಒಂದು ಮಾರ್ಗ ಮಾತ್ರ.’

ನೀವು ನನ್ನ ಜೀವನದ ತೃಪ್ತಿದಾಯಕ ಕ್ಷಣಗಳ ಬಗ್ಗೆ ಕೇಳಿದ್ದೀರಿ. ಆ ರೀತಿಯವು ಕೆಲವು ಇರಬಹುದು. ನಾನು ನಿಮಗೆ ಇತ್ತೀಚಿನ ಉದಾಹರಣೆಯೊಂದನ್ನು ನೀಡುತ್ತೇನೆ. ಇತ್ತೀಚೆಗೆ ನಾನು ನಮ್ಮ ದೇಶದ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಾಧಕರನ್ನು ಭೇಟಿಯಾಗಲು ಮತ್ತು ಸಂವಹನ ಮಾಡಲು ಸಾಧ್ಯವಾಯಿತು. ಈ ಬಾರಿಯ ಟೋಕಿಯೊ ಪಂದ್ಯ ಇದುವರೆಗೆ ಭಾರತ ಪ್ರದರ್ಶನ ನೀಡಿದ ಪಂದ್ಯಗಳ ಪೈಕಿ ಅತ್ಯುತ್ತಮವಾಗಿದೆ. ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದವರು ಹೇಗೆ ಇದ್ದರೋ ಅದೇ ರೀತಿ ಪಂದ್ಯದಲ್ಲಿ ಪಾಲ್ಗೊಂಡು ಪದಕಗಳನ್ನು ಗೆಲ್ಲದ ಹಲವಾರು ಕ್ರೀಡಾಪಟುಗಳು ಇದ್ದರು. ನಾನು ಅವರನ್ನು ಭೇಟಿಯಾದಾಗ ಅವರು ಪದಕಗಳನ್ನು ಗೆಲ್ಲಲು ತಮ್ಮ ಅಸಾಮರ್ಥ್ಯದ ಬಗ್ಗೆ ಕೊರಗುತ್ತಿದ್ದರು. ಆದರೆ ಪ್ರತಿಯೊಬ್ಬರೂ ತಮ್ಮ ತರಬೇತಿ, ಸೌಲಭ್ಯಗಳು ಮತ್ತು ಅವರನ್ನು ಬೆಂಬಲಿಸುವಲ್ಲಿ ನಮ್ಮ ರಾಷ್ಟ್ರದ ಪ್ರಯತ್ನದ ಬಗ್ಗೆ ಬಹಳ ಮೆಚ್ಚುಗೆ ಹೊಂದಿದ್ದರು. ಹಾಗೇ, ಮುಂದಿನ ವರ್ಷ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದೇ ತರುತ್ತೇವೆ ಎಂಬ ಹಠ ಅವರಲ್ಲಿ ಕಾಣುತ್ತಿತ್ತು. ಮೊದಲು ನಮ್ಮ ದೇಶದ ಕ್ರೀಡಾಪಟುಗಳಿಗೆ ಉತ್ತಮವಾದ ತರಬೇತಿ, ಬೆಂಬಲ, ಅವಕಾಶಗಳು ಇರಲಿಲ್ಲ. ಆದರೆ, ಈಗ ನಾವು ಬಹಳ ಮುಂದುವರೆದಿದ್ದೇವೆ. ನಾವು ಇಷ್ಟು ಸೌಲಭ್ಯ, ಅವಕಾಶಗಳನ್ನು ಕೊಟ್ಟಿರುವುದರಿಂದಲೇ ಅವರಿಗೆ ಸಾಧಿಸುವ ಹಸಿವು ಹೆಚ್ಚಾಗಿದೆ. ಅವರು ನಮ್ಮ ದೇಶಕ್ಕೂ ಹೆಮ್ಮೆ ತರುತ್ತಿದ್ದಾರೆ. ಈ ಬೆಳಗವಣಿಗೆ ನನಗೆ ಬಹಳ ತೃಪ್ತಿ ತಂದಿದೆ.

ಬಾಲ್ಯದಲ್ಲಿ ಚಹಾ ಮಾರುತ್ತಿದ್ದಾಗ ಮತ್ತು ನಂತರ ನಮ್ಮ ರಾಷ್ಟ್ರದ ಪ್ರಧಾನಿಯಾದಾಗ, ನಿಮ್ಮ ದೃಷ್ಟಿಕೋನಗಳು ಯಾವ ರೀತಿಯಲ್ಲಿ ಬದಲಾಗಿವೆ? ನೀವಿದನ್ನು ಎಂದಾದರೂ ನಿರೀಕ್ಷೆ ಮಾಡಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ಮೋದಿ, ಭಾರತದ 130 ಕೋಟಿ ಜನರು ನನ್ನಂತೆಯೇ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾನು ಸಾಧಿಸಿದ್ದನ್ನು ಯಾರು ಬೇಕಾದರೂ ಸಾಧಿಸಬಹುದು. ನಮ್ಮದು 130 ಕೋಟಿ ಸಮರ್ಥ ಜನರಿರುವ ರಾಷ್ಟ್ರ. ನಮ್ಮ ದೇಶ ಮಾನವಕುಲಕ್ಕೆ ನೀಡಬಹುದಾದ ಕೊಡುಗೆ ಅದ್ಭುತವಾಗಿದೆ. ಅದನ್ನು ನಾವು ಮನವರಿಕೆ ಮಾಡಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು. ಹೀಗಾಗಿ, ನಾನು ನನ್ನ ಜೀವನವನ್ನು ಎಲ್ಲಿಂದ ಪ್ರಾರಂಭಿಸಿದೆ, ಎಲ್ಲಿ ತಲುಪಿದೆ, ಏನು ಮಾಡಿದೆ, ನನ್ನ ವೈಯಕ್ತಿಕ ಅನುಭವಗಳು ಹೇಗಿತ್ತು? ಎಂಬುದೆಲ್ಲ ಹೆಚ್ಚು ಮುಖ್ಯವಲ್ಲ. ನಾನು ಸಾಧಿಸಿದ್ದೇನೆ ಎಂದರೆ ಅದನ್ನು ಭಾರತೀಯರು ಯಾರು ಬೇಕಾದರೂ ಸಾಧಿಸಬಹುದು ಎಂಬುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ ಇದ್ದಾಗ ಗೆಲುವು, ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.

ಮನುಷ್ಯ ತನ್ನ ತಪ್ಪುಗಳನ್ನು ಸುಲಭವಾಗಿ ಒಪ್ಪಿಕೊಳ್ಳದಿರುವುದು ಅವನ ಸ್ವಭಾವ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಮ್ಮ ತಪ್ಪು ಕಲ್ಪನೆಗಳ ಮೇಲೆ ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯ ಬೇಕು. ಮತ್ತು ಒಬ್ಬ ವ್ಯಕ್ತಿಯನ್ನು ಭೇಟಿಯಾಗದೆ, ತಿಳಿಯದೆ ಅಥವಾ ಅರ್ಥಮಾಡಿಕೊಳ್ಳದೆ ಅವನ ಬಗ್ಗೆ ಕಲ್ಪನೆಗಳನ್ನು ರೂಪಿಸುವುದು ಇದರಿಂದಾಗಿಯೇ. ಮತ್ತು ಅವರು ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿದರೂ ಮತ್ತು ವಿಭಿನ್ನವಾದದ್ದನ್ನು ಗಮನಿಸಿದರೂ ಅವರು ತಮ್ಮ ಅಹಂಕಾರದಿಂದಾಗಿ ಅದನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಅಳವಡಿಸಿಕೊಳ್ಳುವುದಿಲ್ಲ. ಇದು ಜನರ ಸಹಜ ಪ್ರವೃತ್ತಿ.

ಬಾಲ್ಯದಿಂದಲೂ ನಾನು ಯಾವುದೇ ದೊಡ್ಡ ಕನಸು ಕಂಡವನಲ್ಲ. ಜನರ ಸೇವೆಯೇ ದೇವರ ಸೇವೆ ಎಂದು ನಂಬಿದವನು ನಾನು.’

ಯಾರಾದರೂ ನನ್ನ ಕೆಲಸವನ್ನು ಮಾತ್ರ ವಿಶ್ಲೇಷಿಸಿದ್ದರೆ, ಅವನು ನನ್ನ ಬಗ್ಗೆ ಯಾವುದೇ ಗೊಂದಲದಲ್ಲಿ ಇರುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರ ನಾನು ಮಾಡಿದ ಮೊದಲ ಕೆಲಸವೇನೆಂದರೆ ಸುಮಾರು 20 ವರ್ಷಗಳ ಹಿಂದೆ ನನಗೆ ಆಡಳಿತದ ಯಾವುದೇ ಹಿಂದಿನ ಅನುಭವವಿಲ್ಲದಿದ್ದಾಗ .ನಾನು ಮೊದಲು ಕಚ್ ಭೂಕಂಪದಿಂದ ಪೀಡಿತ ಜನರ ಬಳಿಗೆ ಹೋದೆ. ಭೂಕಂಪದ ನಂತರದ ಮೊದಲ ದೀಪಾವಳಿಯನ್ನು ನಾನು ಆಚರಿಸದೆ ಭೂಕಂಪ ಪೀಡಿತರ ಕುಟುಂಬಸ್ಥರ ಜೊತೆ ಆಚರಿಸಿಕೊಂಡೆ. ಹಾಗಂತ, ನರೇಂದ್ರ ಮೋದಿ ಯಾವ ತಪ್ಪನ್ನೂ ಮಾಡಿಲ್ಲ ಎಂದು ಅರ್ಥವಲ್ಲ. ಮೋದಿಯನ್ನು ಯಾರೂ ಟೀಕಿಸಬಾರದು ಎಂದು ಕೂಡ ಅರ್ಥವಲ್ಲ. ನನ್ನ ಕೆಲಸವನ್ನು ಮೆಚ್ಚಿದವರೂ ಇದ್ದಾರೆ, ಟೀಕಿಸಿದರೂ ಇದ್ದಾರೆ. ಅವೆರಡನ್ನೂ ನಾನು ಸಮಾನವಾಗಿ ಸ್ವೀಕರಿಸಿದ್ದೇನೆ, ಇಂದಿಗೂ ಸ್ವೀಕರಿಸುತ್ತಿದ್ದೇನೆ.

ಹಾಗೇ, ಟೀಕೆಯಿಂದ ವೈಯಕ್ತಿಕವಾಗಿ ನನ್ನ ಆರೋಗ್ಯಕರ ಬೆಳವಣಿಗೆಗೆ ಬಹಳ ಸಹಕಾರಿಯಾಗುತ್ತದೆ. ಹೀಗಾಗಿ, ನಾನು ಟೀಕೆಗೆ ಬಹಳ ಪ್ರಾಮುಖ್ಯತೆ ನೀಡುತ್ತೇನೆ. ನಾನು ಪ್ರಾಮಾಣಿಕ ಮನಸ್ಸಿನಿಂದ ವಿಮರ್ಶಕರನ್ನು ತುಂಬಾ ಗೌರವಿಸುತ್ತೇನೆ. ಆದರೆ, ದುರದೃಷ್ಟವಶಾತ್ ವಿಮರ್ಶಕರ ಸಂಖ್ಯೆ ಬಹಳ ಕಡಿಮೆಯಿದೆ. ಹೆಚ್ಚಾಗಿ ಜನರು ಆರೋಪಗಳನ್ನು ಮಾತ್ರ ಮಾಡುತ್ತಾರೆಯೇ ವಿನಃ ವಿಮರ್ಶೆ ಮಾಡುವುದಿಲ್ಲ.

ನಮ್ಮ ದೇಶದ ರಾಜಕಾರಣ ಹೇಗಿದೆ ಎಂದರೆ, ಈಗಿನ ಸರ್ಕಾರ ಮತ್ತು ಮುಂದಿನ ಸರ್ಕಾರಗಳಿಗೆ ಒಂದೇ ಮಾದರಿ ಇರುತ್ತದೆ. ಬೇರೆ ರೀತಿಯಲ್ಲಿ ಅವು ಯೋಚಿಸಲು ಪ್ರಯತ್ನನ್ನೇ ಪಡುವುದಿಲ್ಲ. ಸರ್ಕಾರವನ್ನು ಮುನ್ನಡೆಸುವ ಸಲುವಾಗಿ ಸರ್ಕಾರ ರಚನೆ ಮಾಡಬೇಕೆಂಬುದು ಬಹುತೇಕ ಎಲ್ಲ ಸರ್ಕಾರಗಳ ತತ್ವ. ಆದರೆ, ನನ್ನ ಮೂಲಭೂತ ಚಿಂತನೆಯೇ ಬೇರೆ. ರಾಷ್ಟ್ರವನ್ನು ನಿರ್ಮಾಣ ಮಾಡಲು ನಾವು ಸರ್ಕಾರವನ್ನು ರಚಿಸಬೇಕು ಎಂದು ನಾನು ನಂಬುತ್ತೇನೆ. ನನ್ನ ನಿರ್ಧಾರಗಳು ಬಡ ಅಥವಾ ದುರ್ಬಲ ವ್ಯಕ್ತಿಗೆ ಹೇಗೆ ಪ್ರಯೋಜನ ಅಥವಾ ಹಾನಿ ಮಾಡುತ್ತದೆ ಎಂಬುದನ್ನು ತಿಳಿಸುವ ಗಾಂಧೀಜಿಯವರ ತಾಲಿಸ್ಮನ್ ಆಧಾರದ ಮೇಲೆ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಸಣ್ಣ ಹಿತಾಸಕ್ತಿಗಳು ನನಗೆ ಗೋಚರಿಸಿದರೂ ನಾನು ಆ ನಿರ್ಧಾರವನ್ನು ಕೈಬಿಡುತ್ತೇನೆ. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಶೇ. 100ರಷ್ಟು ಜನರನ್ನು ಮೆಚ್ಚಿಸಿ ನಾವು ಆಡಳಿತ ನಡೆಸಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಸಿದ್ಧಾಂತ, ತತ್ವಗಳು ಇರುವುದರಿಂದ ಆಕ್ಷೇಪ, ವಿರೋಧಗಳು ಇದ್ದೇ ಇರುತ್ತವೆ. ಆದರೆ, ಬಹುಜನರಿಗೆ ಉಪಯೋಗವಾಗುವ ಯೋಜನೆಗಳ ಮೂಲಕ ಅಧಿಕಾರ ನಡೆಸುವ ಪ್ರಯತ್ನವನ್ನಂತೂ ನಾವು ಮಾಡಿದ್ದೇವೆ.

ನಮ್ಮ ದೇಶದ ಜನರ ಬಗ್ಗೆ ರಾಜಕಾರಣಿಗಳ ದೃಷ್ಟಿಕೋನವೇ ಬೇರೆ ಇದೆ. ಅವರು ಕೇವಲ ರಾಜಶಕ್ತಿಯನ್ನು ನೋಡುತ್ತಾರೆ. ಅವರು ಜನಶಕ್ತಿಯನ್ನು ನೋಡುವುದಿಲ್ಲ.’

ನನ್ನ ಸ್ವಂತ ಜೀವನವನ್ನೇ ದೊಡ್ಡ ಸಾಧನೆಯೆಂದು ನಾವು ಎಂದೂ ಅಂದುಕೊಂಡಿಲ್ಲ. ನಾವು ಯಾವ ರೀತಿಯಲ್ಲಿ ನಮ್ಮ ದೇಶದ  ಒಂದು ಬಡ ಮಗುವನ್ನುಕೂಡ ನಾನು ಇರುವ ಸ್ಥಳಕ್ಕೆ ತಲುಪುವಂತೆ ಮಾಡಬಹುದು ಎಂಬುದರ ಕಡೆಗೆ ಮಾತ್ರ ನನ್ನ ಗಮನವಿರುತ್ತದೆ. ಈ ದೇಶದ ಜನರು ನನಗೆ ಅಂತಹ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನನ್ನ ಮೇಲಿನ ಅವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಹೊಣೆ ನನ್ನ ಮೇಲಿದೆ. ನನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಏನು ಒಳಿತು ಮಾಡಬಹುದು ಎಂಬುದು ನನಗೆ ಬಹಳ ಮುಖ್ಯ.

ರಾಜಕೀಯ ಪಕ್ಷಗಳು ಚುನಾವಣೆಗೆ ಮುಂಚಿತವಾಗಿ ಆಕರ್ಷಕವಾದ ದೊಡ್ಡ ಭರವಸೆಗಳನ್ನು ನೀಡುತ್ತವೆ. ತಮ್ಮ ಪ್ರಣಾಳಿಕೆಯಲ್ಲೂ ಅವುಗಳನ್ನು ಸೇರಿಸುತ್ತವೆ. ಆದರೂ, ಅದೇ ಭರವಸೆಗಳನ್ನು ಈಡೇರಿಸುವ ಸಮಯ ಬಂದಾಗ ಇದೇ ಪಕ್ಷಗಳು ಮತ್ತು ಜನರು ಸಂಪೂರ್ಣ ಯೂ-ಟರ್ನ್ ಹೊಡೆಯುತ್ತಾರೆ. ಆದರೆ, ನಾವು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಹುತೇಕ ಎಲ್ಲ ಆಶ್ವಾಸನೆಗಳನ್ನೂ ಈಡೇರಿಸಿದ್ದೇವೆ. ನಾವು ಎಲ್ಲ ರೀತಿಯಲ್ಲೂ ಸಣ್ಣ ರೈತರಿಗೆ ಅಧಿಕಾರ ನೀಡಲು ಬದ್ಧರಾಗಿದ್ದೇವೆ. ಕೃಷಿ ಕಾನೂನುಗಳ ಬಗ್ಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಒಟ್ಟಿಗೇ ಕುಳಿತು ಪರಿಹರಿಸಲು ಸರ್ಕಾರವು ಸಿದ್ಧವಿದೆ ಎಂದು ನಾವು ಮೊದಲ ದಿನದಿಂದಲೇ ಹೇಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಅನೇಕ ಸಭೆಗಳನ್ನು ಕೂಡ ನಡೆಸಲಾಗಿದೆ.

ಆಧಾರ್, ಜಿಎಸ್‌ಟಿ, ಕೃಷಿ ಕಾನೂನುಗಳು ಮತ್ತು ನಮ್ಮ ಭದ್ರತಾ ಪಡೆಗಳನ್ನು ಶಸ್ತ್ರಸಜ್ಜಿತಗೊಳಿಸುವಂತಹ ನಿರ್ಣಾಯಕ ವಿಷಯಗಳ ವಿಷಯದಲ್ಲೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿತ್ತು. ವಿರೋಧ ಮಾಡಲೇಬೇಕೆಂದು ವಿರೋಧ ಮಾಡುವುದಕ್ಕೂ ನಿಜವಾದ ಸಮಸ್ಯೆಯಿದ್ದಾಗ ವಿರೋಧ ಮಾಡುವುದಕ್ಕೂ ವ್ಯತ್ಯಾಸವಿದೆ. ತಮ್ಮ ಸದಸ್ಯರು ಹೊಸ ಸಂಸತ್ತಿನ ಅಗತ್ಯತೆಯ ಬಗ್ಗೆ ಮಾತನಾಡುವಾಗ ರಾಜಕೀಯ ಪಕ್ಷಗಳು ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತಿವೆ ಎಂದು ನಿಮಗೆ ಅನಿಸುವುದಿಲ್ಲವೇ? ಹಿಂದಿನ ಸ್ಪೀಕರ್ ಹೊಸ ಸಂಸತ್ತಿನ ಅಗತ್ಯವೇನಿದೆ? ಎಂದು ಕೇಳಿದ್ದರು. ಯಾರಾದರೂ ಏನಾದರೂ ಮಾಡಲು ಹೊರಟಾಗ ಬೇಕೆಂದೇ ಏನೇನೋ ಕಾರಣಗಳನ್ನು ಹೇಳಿ ಅದನ್ನು ವಿರೋಧಿಸುತ್ತಾರೆ, ಇದು ಎಷ್ಟು ಸರಿ? ಈ ರೀತಿಯ ವಿವಾದಗಳನ್ನು ಸೃಷ್ಟಿಸುವವರಿಗೆ ಈ ನಿರ್ಧಾರಗಳಿಂದ ಜನರಿಗೆ ಉಪಯೋಗವಾಗುತ್ತದೆಯೇ? ಎಂಬುದು ಮುಖ್ಯವಲ್ಲ. ಒಂದುವೇಳೆ ನಮ್ಮ ಸರ್ಕಾರ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡರೆ ಮೋದಿಯ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಮೋದಿ ಯಶಸ್ವಿಯಾಗುತ್ತಾರೋ ಅಥವಾ ವಿಫಲರಾಗುತ್ತಾರೋ ಎಂಬುದಕ್ಕಿಂತ ನಮ್ಮ ದೇಶ ಅಭಿವೃದ್ಧಿಯಾಗುತ್ತದೆಯೇ? ಎಂಬ ವಿಷಯ ಮುಖ್ಯವಾಗಿರಬೇಕು.

ಯಾವಾಗ ಸರ್ಕಾರವು ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಎಂಬ ತತ್ವವನ್ನು ನಂಬಿ ಅಳವಡಿಸಿಕೊಳ್ಳುತ್ತದೆಯೋ ಆಗ ಅದು ಅಭಿವೃದ್ಧಿಯಾಗುತ್ತದೆ.

ದೇಶದ ಜನರು ಒಳ್ಳೆಯ ನಿಸ್ವಾರ್ಥ ಉದ್ದೇಶದಿಂದ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಬೆಂಬಲಿಸಲು ಸಾಕಷ್ಟು ಬುದ್ಧಿವಂತರು. ಅದಕ್ಕಾಗಿಯೇ ನನಗೆ ದೇಶದ ಜನರು 20 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿ ಕೆಲಸ ಮಾಡುವ ಅವಕಾಶವನ್ನು ನೀಡಿದ್ದಾರೆ. ಬೀಜವನ್ನು ನೆಟ್ಟ ವ್ಯಕ್ತಿಯು ಅದರ ಫಲಗಳನ್ನು ಯಾರು ಪಡೆಯುತ್ತಾರೆ ಎಂದು ತಲೆಕೆಡಿಸಿಕೊಳ್ಳಬಾರದು. ನನ್ನ ಆರ್ಥಿಕ ನೀತಿಗಳ ಲಾಭವನ್ನು ನಾನು ಪಡೆಯುತ್ತೇನೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ನಮ್ಮ ದೇಶಕ್ಕೆ ಅದರ ಲಾಭ ಆಗುವುದು ನನಗೆ ಮುಖ್ಯ. ನಮ್ಮ ದೇಶ ಇನ್ನೂ ಅಭಿವೃದ್ಧಿ ಹೊಂದಿಲ್ಲ, ನಾವು ಇನ್ನೂ ಬಡತನದಿಂದ ತೊಳಲಾಡುತ್ತಿದ್ದೇವೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಗತ್ಯತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕಾಶಗಳನ್ನು ಪಡೆಯಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಬಡವರಿಗೆ ಒಂದು ರೀತಿಯ ಅವಕಾಶ ಮತ್ತು ಸಂಪತ್ತು ಸೃಷ್ಟಿಕರ್ತರಿಗೆ ಇನ್ನೊಂದು ರೀತಿಯ ಅವಕಾಶದ ಅಗತ್ಯವಿದೆ. ಯಾವಾಗ ಸರ್ಕಾರವು ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಎಂಬ ತತ್ವವನ್ನು ನಂಬಿ ಅಳವಡಿಸಿಕೊಳ್ಳುತ್ತದೆಯೋ ಆಗ ಅದು ಅಭಿವೃದ್ಧಿಯಾಗುತ್ತದೆ.

ನಾನು ರಾಜಮನೆತನದಿಂದ ಬಂದವನಲ್ಲ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ನಾನು ನನ್ನ ಜೀವನವನ್ನು ಬಡತನದಲ್ಲಿ ಕಳೆದಿದ್ದೇನೆ. ಅಲೆದಾಡುತ್ತಾ ಸಾಮಾನ್ಯ ಕಾರ್ಯಕರ್ತನಾಗಿ 30-35 ವರ್ಷಗಳನ್ನು ಕಳೆದಿದ್ದೇನೆ. ಆಗ ನಾನು ಅಧಿಕಾರದಿಂದ ದೂರವಿದ್ದು, ಜನರ ನಡುವೆ ಬದುಕಿದ್ದೇನೆ. ಅದರಿಂದಾಗಿ ಸಾಮಾನ್ಯ ಮನುಷ್ಯನ ಸಮಸ್ಯೆಗಳು, ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳು ಏನೆಂಬುದು ನನಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ನನ್ನ ನಿರ್ಧಾರಗಳು ಸಾಮಾನ್ಯ ಮನುಷ್ಯನ ಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಪ್ರಯತ್ನವಾಗಿದೆ.

ಶೌಚಾಲಯಗಳನ್ನು ಜನರ ಸೇವೆ ಮಾಡುವ ಮಾರ್ಗವಾಗಿ ಯಾರೂ ನೋಡಿಲ್ಲ. ಆದರೆ ಶೌಚಾಲಯಗಳು ಜನರ ಸೇವೆಗೆ ಒಂದು ಮಾರ್ಗ ಎಂದು ನನಗೆ ಅನಿಸಿತು. ಅದಕ್ಕಾಗಿಯೇ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಈ ಪ್ರಧಾನಮಂತ್ರಿ ನಮ್ಮನ್ನು ಅರ್ಥಮಾಡಿಕೊಂಡಿದ್ದಾನೆ, ನಮ್ಮಂತೆ ಯೋಚಿಸುತ್ತಾನೆ ಮತ್ತು ನಮ್ಮ ನಡುವೆ ಒಬ್ಬನೆಂದು ಸಾಮಾನ್ಯ ಮನುಷ್ಯ ಭಾವಿಸುತ್ತಿದ್ದಾನೆ. ಈ ವಿಶ್ವಾಸವನ್ನು ನಾನು ಬೆವರು ಮತ್ತು ಶ್ರಮದ ಮೂಲಕ ಗಳಿಸಿದ್ದೇನೆ. ನಾನು ಅಧಿಕಾರಕ್ಕೆ ಬಂದಾಗ ಜನರಿಗೆ ಮೂರು ವಿಷಯಗಳನ್ನು ಭರವಸೆ ನೀಡಿದ್ದೆ;

ನನಗಾಗಿ ನಾನೇನೂ ಮಾಡುವುದಿಲ್ಲ.
ನಾನು ತಪ್ಪು ಉದ್ದೇಶದಿಂದ ಏನನ್ನೂ ಮಾಡುವುದಿಲ್ಲ.
ನಾನು ಕಠಿಣ ಪರಿಶ್ರಮದ ಹೊಸ ಮಾದರಿಯನ್ನು ರಚಿಸುತ್ತೇನೆ. ಈ ಮೂರೂ ಮಾತನ್ನು ನಾನು ಉಳಿಸಿಕೊಂಡಿದ್ದೇನೆ.

ನಮ್ಮ ದೇಶವು ಕೊವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಪ್ರಪಂಚದ ಹೆಚ್ಚಿನ ಜನಸಂಖ್ಯೆಯು ಕೋವಿಡ್ ಲಸಿಕೆಗಳನ್ನು ಹೊಂದಿಲ್ಲ ಎಂದು ನಮಗೆ ತಿಳಿದಿದೆ. ಇಂದು, ಲಸಿಕೆ ಹಾಕುವಲ್ಲಿ ನಮ್ಮ ಯಶಸ್ಸು ಭಾರತ ಆತ್ಮನಿರ್ಭರ್ ಆಗಿರುವುದಕ್ಕೆ ಧನ್ಯವಾದಗಳು. ಸರ್ಕಾರ ಮತ್ತು ನಾಗರಿಕರ ನಡುವಿನ ಅಪಾರ ಪರಸ್ಪರ ನಂಬಿಕೆಯು ಕಳೆದ ಏಳು ವರ್ಷಗಳಲ್ಲಿ ನಾವು ಏನನ್ನು ಸಾಧಿಸಲು ಸಾಧ್ಯವೋ ಅದಕ್ಕೆ ಅಡಿಪಾಯವಾಗಿದೆ.

ಡಿಜಿಟಲ್ ಪಾವತಿಗಳ ಉದಾಹರಣೆ ತೆಗೆದುಕೊಳ್ಳಿ… ನಾನು ಫೆಬ್ರವರಿ 2017ರಲ್ಲಿ ಸಂಸತ್ತಿನಲ್ಲಿ ಮಾಜಿ ಹಣಕಾಸು ಸಚಿವರ ಭಾಷಣವನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಹಳ್ಳಿಯಲ್ಲಿ ತರಕಾರಿ, ಹಣ್ಣು ಮಾರುವ ಮಹಿಳೆಗೆ ಡಿಜಿಟಲ್ ಪಾವತಿ ತಿಳಿದಿದೆಯೇ? ಆಕೆಯ ಬಳಿ ಇಂಟರ್ನೆಟ್ ಇದೆಯೇ? ಎಂದು ಕೇಳಿದ್ದರು. ಅಂದು ಅವರು ಕೇಳಿದ ಪ್ರಶ್ನೆಗೆ ಜನರೇ ಉತ್ತರ ನೀಡಿದ್ದು, ಭಾರತವು ಕೇವಲ ಮೂರು ವರ್ಷಗಳಲ್ಲಿ ಅಂದರೆ 2020ರಲ್ಲಿ 25 ಶತಕೋಟಿಗೂ ಹೆಚ್ಚು ಡಿಜಿಟಲ್ ವಹಿವಾಟುಗಳನ್ನು ನಡೆಸುವ ಮೂಲಕ ವಿಶ್ವದ ನಂಬರ್ ಒನ್ ಡಿಜಿಟಲ್ ಪಾವತಿ ರಾಷ್ಟ್ರವಾಗಿದೆ. ಈ ಡಿಜಿಟಲ್ ಕ್ರಾಂತಿಯನ್ನು ಟೀಕಿಸಿದ್ದ ಜನರೇ ಇಂದು ಅದಕ್ಕೆ ಅಡಿಕ್ಟ್ ಆಗಿದ್ದಾರೆ. ತಳ್ಳುಗಾಡಿ ಮಾರಾಟಗಾರರು, ಸಣ್ಣ ಅಂಗಡಿಯವರು, ರಸ್ತೆಬದಿ ಮೂಲೆಗಳಲ್ಲಿ ಸಮೋಸಾ ಮತ್ತು ಚಾಯ್ ವಾಲಾಗಳು, ದಿನಸಿ ಖರೀದಿಸುವ ಮಹಿಳೆಯರು ಡಿಜಿಟಲ್ ಪೇಮೆಂಟ್ ಬಳಸುತ್ತಿದ್ದಾರೆ.

ನಾವು ಮೂಲಭೂತ ಸುಧಾರಣೆಗಳನ್ನು ತರದ ಒಂದೇ ಒಂದು ವಲಯವಿಲ್ಲ. ನಾವು ರಾಜ್ಯ ಸರ್ಕಾರಗಳು ವಿವಿಧ ಸುಧಾರಣೆಗಳನ್ನು ಪರಿಚಯಿಸಲು ಅನುಕೂಲಕರ ವಾತಾವರಣವನ್ನು ಕೂಡ ಸೃಷ್ಟಿಸಿದ್ದೇವೆ. ನಮ್ಮ ಸುಧಾರಣೆಗಳು ಆರ್ಥಿಕ ಉದ್ದೇಶವನ್ನು ಸಾಧಿಸುವ ಗುರಿಯನ್ನು ಹೊಂದಿಲ್ಲ. ಉದಾಹರಣೆಗೆ, ನಮ್ಮ ಸರ್ಕಾರವು ರಾಜ್ಯಗಳಿಗೆ ಒಂದು ಸಾಲ, ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಜಾರಿಗೊಳಿಸಿ ಹೆಚ್ಚುವರಿ ಸಾಲ ಸೌಲಭ್ಯವನ್ನು ನೀಡಿದೆ. ಇದು ಕೋಟ್ಯಂತರ ವಲಸಿಗರಿಗೆ ಪಿಡಿಎಸ್ ಅರ್ಹತೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಕೋಟ್ಯಂತರ ಬಡವರ ಜೀವನವನ್ನು ಸುಧಾರಿಸಲು ಸಹಾಯ ಮಾಡುವುದಿಲ್ಲವೇ?

ಕೊವಿಡ್ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ಮತ್ತು ಮುಂಚೂಣಿಯ ಸಿಬ್ಬಂದಿ (ಫ್ರಂಟ್​ಲೈನ್ ವರ್ಕರ್ಸ್) ದೊಡ್ಡ ಪಾತ್ರ ವಹಿಸಿದರು. ನಾವು ಅವರ ಮನೋಬಲವನ್ನು ಹೆಚ್ಚಿಸುವ ಅವಶ್ಯಕತೆ ಇತ್ತು. ಥಾಲಿ ಬಾರಿಸುವುದು ಮತ್ತು ದೀಪವನ್ನು ಬೆಳಗಿಸುವುದು ದೊಡ್ಡ ಸಾಮೂಹಿಕ ಆಂದೋಲನವಾಯಿತು. ಇದು ನಮ್ಮ ಆರೋಗ್ಯ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು ಸಹಾಯ ಮಾಡಿತು. ಇದರಿಂದ ವೈದ್ಯಕೀಯ ಸಿಬ್ಬಂದಿ ಮೇಲಿನ ಗೌರವ ಹೆಚ್ಚಾಯಿತು. ಜನರು ವೈದ್ಯಕೀಯ ಸಿಬ್ಬಂದಿಯನ್ನು ಬಿಳಿ ಕೋಟುಗಳಲ್ಲಿರುವ ದೇವರಂತೆ ನೋಡಿದರು.

ಜನ್ ಧನ್ ಖಾತೆಗಳ ಉದಾಹರಣೆಯನ್ನು ತೆಗೆದುಕೊಳ್ಳಿ, ಇದು ಕೇವಲ ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಎಂದು ಜನರು ಭಾವಿಸಿದರು. ಆಧಾರ್ ನ ಉದಾಹರಣೆ ತೆಗೆದುಕೊಳ್ಳಿ, ಇದು ಕೇವಲ ಐಡಿ ಕಾರ್ಡ್ ಎಂದು ಜನರು ಭಾವಿಸಿದರು. ಆದರೆ ಈ ಸಾಂಕ್ರಾಮಿಕ ಸಮಯದಲ್ಲಿ, ಪ್ರಪಂಚದಾದ್ಯಂತದ ಸರ್ಕಾರಗಳು ಅಗತ್ಯವಿರುವವರಿಗೆ ಹಣವನ್ನು ಕಳುಹಿಸಲು ಬಯಸಿದಾಗ ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಒಂದು ಬಟನ್ ಕ್ಲಿಕ್ ಮಾಡುವುದರ ಮೂಲಕ ಭಾರತವು ಸಾಂಕ್ರಾಮಿಕದ ಮಧ್ಯೆಯೂ ಆ ಕೆಲಸ ಮಾಡಿತು. ನಮ್ಮ ಕೋಟಿಗಟ್ಟಲೆ ತಾಯಂದಿರು ತಮ್ಮ ಖಾತೆಯಲ್ಲಿ ನೇರವಾಗಿ ಹಣವನ್ನು ಪಡೆದರು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

Published On - 3:58 pm, Sat, 2 October 21