2024ರ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಲಿದ್ದಾರೆ ನರೇಂದ್ರ ಮೋದಿ: ಸಮೀಕ್ಷೆ
'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯನ್ನು ಫೆಬ್ರವರಿ ಮತ್ತು ಆಗಸ್ಟ್ ತಿಂಗಳ ನಡುವೆ ನಡೆಸಲಾಗಿದ್ದು ಸುಮಾರು122,016 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಭಾರತದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲುವ ಸಾಧ್ಯತೆಯಿದೆ. ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸಲು ಅತ್ಯಂತ ಜನಪ್ರಿಯ ಆಯ್ಕೆಯಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಈಗ ಚುನಾವಣೆ ನಡೆದರೆ ಪ್ರಧಾನಿ ಮೋದಿಯವರ ಮೈತ್ರಿಕೂಟ 286 ಸ್ಥಾನಗಳನ್ನು ಗೆಲ್ಲಲಿದೆ. ನಿತೀಶ್ ಕುಮಾರ್ (Nitish Kumar) ನೇತೃತ್ವದ ಜೆಡಿಯುನ ನಿರ್ಗಮನದಿಂದಾಗಿ ಆಡಳಿತಾರೂಢ ಮೈತ್ರಿಕೂಟಕ್ಕೆ ಹಿಂದಿನ 307 ಸ್ಥಾನಗಳಿಂದ ಸುಮಾರು 21 ಸ್ಥಾನಗಳು ನಷ್ಟವಾಗುತ್ತದೆ ಎಂದು ಇಂಡಿಯಾ ಟುಡೇ ಮ್ಯಾಗಜೀನ್- ಸಿ ವೋಟರ್ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆ ಹೇಳಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಲೋಕಸಭೆಯಲ್ಲಿ 300ಕ್ಕಿಂತ ಹೆಚ್ಚು ಸ್ಥಾನವನ್ನು ಹೊಂದಿದೆ. ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯನ್ನು ಫೆಬ್ರವರಿ ಮತ್ತು ಆಗಸ್ಟ್ ತಿಂಗಳ ನಡುವೆ ನಡೆಸಲಾಗಿದ್ದು ಸುಮಾರು 122,016 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಹಾರದಲ್ಲಿ ಮೈತ್ರಿ ಮುರಿದುಕೊಳ್ಳುವ ಮುನ್ನ ಬಹುತೇಕ ಸಮೀಕ್ಷೆ ನಡೆದಿದೆ.
ಎಂಟು ವರ್ಷಗಳ ಅಧಿಕಾರದ ನಂತರ ಭಾರತವು ಅಧಿಕ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯೊಂದಿಗೆ ಸೆಣಸಾಡುತ್ತಿರುವಾಗ ಮತ್ತು ಕಳೆದ ಬೇಸಿಗೆಯಲ್ಲಿ ಕೋವಿಡ್ -19 ಅಲೆಯನ್ನು ಎದುರಿಸುತ್ತಿರುವಾಗಲೂ ಪ್ರಧಾನಿ ಮೋದಿ ಅವರ ವ್ಯಕ್ತಿತ್ವದ ಜನಪ್ರಿಯತೆ ಅವರ ರಾಜಕೀಯ ಪ್ರತಿಸ್ಪರ್ಧಿಗಳಿಗಿಂತ ಮೇಲಿನ ಮಟ್ಟದಲ್ಲೇ ಇದೆ. ಶೇ 53ರಷ್ಟು ಮಂದಿ ಮುಂದಿನ ಪ್ರಧಾನಿ ಯಾರೆಂದು ಕೇಳಿದಾಗ ಮೋದಿ ಎಂದು ಅವರ ಪರ ನಿಂತರೆ ಶೇ 9 ರಷ್ಟು ಮಂದಿ ರಾಹುಲ್ ಪರ ಇದ್ದಾರೆ. ಶೇ 7ರಷ್ಟು ಮಂದಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರತ್ತ ಒಲವು ತೋರಿಸಿದ್ದಾರೆ.
Published On - 7:35 pm, Fri, 12 August 22