Punjab Politics: ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್: ಬಿಜೆಪಿ ಜೊತೆ ಸ್ಥಾನ ಹಂಚಿಕೆ ನಿರೀಕ್ಷಿತ

ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇದೀಗ ಪಕ್ಷದಿಂದ ಸಿಡಿದು ಹೊರಹೋಗುವ ಸ್ಪಷ್ಟ ಸೂಚನೆ ನೀಡಿದ್ದಾರೆ

Punjab Politics: ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್: ಬಿಜೆಪಿ ಜೊತೆ ಸ್ಥಾನ ಹಂಚಿಕೆ ನಿರೀಕ್ಷಿತ
ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 19, 2021 | 10:40 PM

ಚಂಡಿಗಡ: ವಿಧಾನಸಭೆ ಚುನಾವಣೆ ಹೊಸಿಲಲ್ಲಿರುವ ಪಂಜಾಬ್​ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆಂತರಿಕ ಭಿನ್ನಮತದಿಂದ ಸತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್​ನ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇದೀಗ ಪಕ್ಷದಿಂದ ಸಿಡಿದು ಹೊರಹೋಗುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್ ಅವರ ಮಾಧ್ಯಮ ಕಾರ್ಯದರ್ಶಿ ರವೀನ್ ಥುಕ್ರಲ್ ಅಮರಿಂದರ್ ಸಿಂಗ್​ ಅವರ ಮುಂದಿನ ಹೆಜ್ಜೆಗಳನ್ನು ವಿವರಿಸಿದ್ದಾರೆ.

ಪಂಜಾಬ್​ನ ಉತ್ತಮ ಭವಿಷ್ಯಕ್ಕಾಗಿ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನನ್ನ ಹೊಸ ರಾಜಕೀಯ ಪಕ್ಷವನ್ನು ಶೀಘ್ರ ಘೋಷಿಸುತ್ತೇನೆ. ಪಂಜಾಬ್ ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳನ್ನು ಕಾಪಾಡುತ್ತೇನೆ. ಕಳೆದ ಒಂದು ವರ್ಷಗಳಿಂದ ಉಳಿವಿಗಾಗಿ ಹೋರಾಡುತ್ತಿರುವ ರೈತರ ಪರವಾಗಿ ನಿಲ್ಲುತ್ತೇನೆ ಎಂದು ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.

2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಥಾನ ಹೊಂದಾಣಿಕೆ ಬಗ್ಗೆ ನಿರೀಕ್ಷೆ ಇರಿಸಿಕೊಂಡಿದ್ದೇನೆ. ರೈತರ ಹಿತಾಸಕ್ತಿಗೆ ಪೂರಕವಾಗಿ ರೈತ ಚಳವಳಿಯ ಆಶಯಗಳು ಈಡೇರಿದರೆ ಮಾತ್ರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವೆ. ಧಿಂಡ್ಸಾ ಮತ್ತು ಬ್ರಹ್ಮಪುರ ಸೇರಿದಂತೆ ಸಮಾನ ಮನಸ್ಕ ಅಕಾಲಿ ಗುಂಪುಗಳೊಂದಿಗೆ ಹೊಂದಾಣಿಕೆಯ ಆಲೋಚನೆಯಿದೆ ಎಂದು ಕಾರ್ಯತಂತ್ರ ವಿವರಿಸಿದ್ದಾರೆ.

ನನ್ನ ಜನರು ಮತ್ತು ರಾಜ್ಯದ ಭವಿಷ್ಯವನ್ನು ಸುಭದ್ರಗೊಳಿಸದೆ ನಾನು ವಿಶ್ರಾಂತಿ ಪಡೆಯುವುದಿಲ್ಲ. ಪಂಜಾಬ್​ಗೆ ರಾಜಕೀಯ ಸ್ಥಿರತೆ ಬೇಕು. ಆಂತರಿಕ ಮತ್ತು ಬಾಹ್ಯ ಆತಂಕಗಳಿಂದ ರಕ್ಷಣೆ ಬೇಕು. ನಮ್ಮ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಖಾತ್ರಿಗೊಳಿಸಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ನಾನು ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡುತ್ತೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್: ಕಾರು ಹರಿದು ಮಹಿಳೆ ಸಾವು, ಕಾರು ಚಲಾಯಿಸಿದ್ದ ಪೊಲೀಸ್ ಅರೆಸ್ಟ್ ; ಹಿಟ್ ಆಂಡ್ ರನ್ ಸಿಸಿಟಿವಿಯಲ್ಲಿ ಸೆರೆ
ಇದನ್ನೂ ಓದಿ: Amarinder Singh ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​​ರನ್ನು ಭೇಟಿ ಮಾಡಿದ ಅಮರಿಂದರ್ ಸಿಂಗ್

Published On - 10:38 pm, Tue, 19 October 21