ಮುಖ್ಯಮಂತ್ರಿ ಬದಲಾವಣೆ ಮಾಡಿದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಹುಡುಕಬೇಕಾಗುತ್ತದೆ: ಯಡಿಯೂರಪ್ಪ ಭೇಟಿ ಬಳಿಕ ಸ್ವಾಮೀಜಿಗಳ ಹೇಳಿಕೆ

BS Yediyurappa: ಚುನಾವಣೆ ವೇಳೆ ಯಡಿಯೂರಪ್ಪರನ್ನು ಮುಂದಿಟ್ಟುಕೊಂಡು ಗೆದ್ದಿದ್ದಾರೆ. ಬಿಎಸ್‌ವೈ ಸಿಎಂ ಆಗಿ ಮುಂದುವರಿಯಲೆಂಬುದು ಆಶಯ ಎಂದು ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಮಾಡಿದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಹುಡುಕಬೇಕಾಗುತ್ತದೆ: ಯಡಿಯೂರಪ್ಪ ಭೇಟಿ ಬಳಿಕ ಸ್ವಾಮೀಜಿಗಳ ಹೇಳಿಕೆ
ಬಿ.ಎಸ್. ಯಡಿಯೂರಪ್ಪ ಭೇಟಿಯಾದ ವಿವಿಧ ಮಠಾಧೀಶರು (ಸಂಗ್ರಹ)
TV9kannada Web Team

| Edited By: ganapathi bhat

Jul 21, 2021 | 3:39 PM

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಬದಲಾವಣೆ ವಿಚಾರವು ಹಿರಿದಾಗಿ ಬೆಳೆಯುತ್ತಿದೆ. ವಿವಿಧ ಮಠಾಧೀಶರು ಹಾಗೂ ರಾಜಕೀಯ ನಾಯಕರು ಈ ಬಗ್ಗೆ ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ವಿವಿಧ ಮಠದ ಶ್ರೀಗಳು (Swamiji) ಯಡಿಯೂರಪ್ಪರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಬಿಎಸ್‌ವೈ ಬದಲಾವಣೆ ಮಾಡಿದರೆ ಬಿಜೆಪಿ ಹುಡುಕಬೇಕಾಗುತ್ತೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಹುಡುಕಬೇಕಾಗುತ್ತದೆ ಎಂದು ಸಿಎಂ ಬಿಎಸ್‌ವೈ ಭೇಟಿ ಬಳಿಕ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪೂರ್ಣಾವಧಿಗೆ ಸಿಎಂ ಆಗಿರಬೇಕೆಂಬುದು ಆಶಯ. ಬಿ.ಎಸ್. ಯಡಿಯೂರಪ್ಪ ಅಧಿಕಾರ ಮುಂದುವರಿಸಬೇಕೆಂಬುದು ಮಠಾಧೀಶರ ಆಶಯವಾಗಿದೆ. 75 ವರ್ಷ ದಾಟಿದ ಯಾರಿಗೂ ಆಡಳಿತಕ್ಕೆ ಅವಕಾಶ ಕೊಟ್ಟಿಲ್ಲ. ಆದ್ರೆ ನನಗೆ ಅವಕಾಶ ಕೊಟ್ಟಿದ್ದಾರೆಂದು ಬಿಎಸ್‌ವೈ ಹೇಳಿದ್ದಾರೆ. ರಾಜೀನಾಮೆ ಬಗ್ಗೆ ಕೇಳಿದಾಗ ಬಿಎಸ್​ವೈ ಏನನ್ನೂ ಹೇಳಿಲ್ಲ. ಈ ಸಂದರ್ಭದಲ್ಲಿ ಸಿಎಂ ಬದಲಾಯಿಸುವುದು ಸೂಕ್ತವಲ್ಲ ಎಂದು ಸಿದ್ದಗಂಗಾ ಮಠದ ಶ್ರೀಗಳು ಹೇಳಿದ್ದಾರೆ. ಸಾಧು-ಸಂತರಿಗೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದೂ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಸಿಎಂ ಬದಲಾವಣೆಯಿಂದ ಸುಭದ್ರ ಸರ್ಕಾರ ನೀಡಲಾಗಲ್ಲ. ಬಿಎಸ್‌ವೈ ಪೂರ್ಣಾವಧಿ ಸಿಎಂ ಆಗಲಿ ಎಂಬುದು ಅಪೇಕ್ಷೆಯಾಗಿದೆ. ಕೊವಿಡ್ ಸಂದರ್ಭದಲ್ಲಿ ಮಠಗಳು ಬಾಗಿಲು ಹಾಕಿಕೊಂಡಿಲ್ಲ. ನಮ್ಮ ಮಠದಲ್ಲಿ ಕೊವಿಡ್ ಕೇರ್​ ಸೆಂಟರ್​​ ತೆರೆದಿದ್ದೆವು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಅದನ್ನು ನಾವು ಪ್ರಶ್ನಿಸುವುದಿಲ್ಲ ಎಂದು ಸಿದ್ದಗಂಗಾ ಮಠದ ಸ್ವಾಮೀಜಿ ತಿಳಿಸಿದ್ದಾರೆ. ಆದರೆ, ಈಗ ಬಿಎಸ್​ವೈ ಪೂರ್ಣ ಅವಧಿಗೆ ಸಿಎಂ ಆಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರು ಮೋದಿ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಧಾರವಾಡದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸುದ್ದಿಗೋಷ್ಠಿ ನಡೆಸಲಾಗಿದೆ. ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಬಿಎಸ್‌ವೈ ಬದಲಾಯಿಸಬಾರದು. ಅವರು ಮೋದಿ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ವೈಯಕ್ತಿಕ ಶಕ್ತಿ ಮತ್ತು ವರ್ಚಸ್ಸಿನ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ವೀರೇಂದ್ರ ಪಾಟೀಲರಿಗೆ ಹಿಂದೆ ಈ ರೀತಿ ಮಾಡಲಾಗಿತ್ತು. ಆಗಿನಿಂದ ಲಿಂಗಾಯತರು ಬಿಜೆಪಿಗೆ ಬೆಂಬಲಿಸುತ್ತ ಬಂದಿದ್ದಾರೆ. ಯಾರನ್ನೊ ಸಿಎಂ ಮಾಡಲು ಹೊರಟರೆ ಸಮಾಜ ಸಹಿಸುವುದಿಲ್ಲ. ವೀರಶೈವ ಸಮಾಜದ ನಾಯಕರನ್ನು ಛಿದ್ರ ಮಾಡುವ ಕೆಲಸ ಕೆಲ ನಾಯಕರು ಮಾಡುತ್ತಿದ್ದಾರೆ. ಶಿಸ್ತಿನ ಪಕ್ಷ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು. ಆದರೆ ನಮ್ಮ ಸಮಾಜದ ನಾಯಕರ ಮಧ್ಯ ಜಗಳ ಹಚ್ಚುತ್ತಿದ್ದಾರೆ. ಇದಕ್ಕೆ ನಮ್ಮ ಸಮಾಜದ ನಾಯಕರು ಬಲಿಪಶು ಆಗಬಾರದು ಎಂದು ಅವರು ಹೇಳಿದ್ದಾರೆ.

ಬಿಎಸ್‌ವೈ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಬಿಎಸ್‌ವೈ ಬಿಎಸ್‌ವೈ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಬಿಎಸ್‌ವೈ. ಅಂತಹ ಸಿಎಂ ಬಿಎಸ್‌ವೈರನ್ನ ಕೆಳಗಿಳಿಸಲು ಷಡ್ಯಂತ್ರ ನಡೆಸಲಾಗುತ್ತಿದೆ. ಸ್ವಪಕ್ಷೀಯರಿಂದಲೇ ಷಡ್ಯಂತ್ರ ನಡೆದಿರುವುದು ಬೇಸರ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಬಳಿಕ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ. ಬಿಎಸ್‌ವೈರನ್ನ ಕೆಳಗಿಳಿಸಿದರೆ ಬಿಜೆಪಿಗೆ ಒಳ್ಳೆಯದಾಗಲ್ಲ. ರಾಜ್ಯದಲ್ಲಿ, ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಒಳ್ಳೆಯದಾಗುವುದಿಲ್ಲ ಎಂದು ಚಿಕ್ಕಮಗಳೂರಿನ ಜಯಬಸವಾನಂದ ಸ್ವಾಮೀಜಿ ಹೇಳಿದ್ದಾರೆ. ಬಿಎಸ್‌ವೈರನ್ನ ಸಿಎಂ ಆಗಿ ಮುಂದುವರಿಸಲು ಆಗ್ರಹಿಸುತ್ತೇವೆ. ನಾವೆಲ್ಲ ಮಠಾಧೀಶರು ಸಹಮತದಿಂದ ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಯಡಿಯೂರಪ್ಪ ಇಲ್ಲದೆ ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ತರಲು ಶಕ್ತಿಯಿದೆಯೇ ಇವರಿಗೆ. ಈ ಸಮಯದಲ್ಲಿ ನಾಯಕತ್ವ ಬದಲಾವಣೆಗೆ ಆದ್ಯತೆ ಕೊಡುವ ಅಗತ್ಯವಿಲ್ಲ. ಯಡಿಯೂರಪ್ಪರನ್ನು ಬಿಜೆಪಿ ಕಳೆದುಕೊಂಡರೆ ನಿಮ್ಮನ್ನು ಜನ ಕಳೆಯುತ್ತಾರೆ. ಯಡಿಯೂರಪ್ಪರನ್ನು ಉಳಿಸಿದರೆ ಜನ ನಿಮ್ಮನ್ನು ಉಳಿಸುತ್ತಾರೆ. ಇಲ್ಲವಾದರೆ ನಿಮ್ಮ ಪಕ್ಷವನ್ನು ಜನ ದೂರ ಮಾಡುತ್ತಾರೆ ಎಂದು ನಿಡುಮಾಮಿಡಿ ಶ್ರೀಗಳು ಹೇಳಿದ್ದಾರೆ.

ಹೈಕಮಾಂಡ್ ಯಡಿಯೂರಪ್ಪರನ್ನು ಎಷ್ಟೋ ಬಾರಿ ಅಪಮಾನದಿಂದ ನಡೆಸಿಕೊಂಡಿದೆ ನಾಯಕತ್ವ ಬದಲಾವಣೆ ಮಾಡಲೇಬೇಕು ಎಂದರೆ ಯಡಿಯೂರಪ್ಪ ಅವರಿಗೆ ಅಪಮಾನ ಮಾಡದೇ ಅವರ ಸಮ್ಮತಿಯೊಂದಿಗೆ ಬದಲಾವಣೆ ಮಾಡಿ. ಬದಲಾವಣೆ ಹೇಗಿರಬೇಕು ಎಂದರೆ ಯಡಿಯೂರಪ್ಪ ಅವರ ಸಮುದಾಯಕ್ಕೆ ಸೇರಿದ ಒಬ್ಬ ಯೋಗ್ಯ ವ್ಯಕ್ತಿಯನ್ನು ಅವರ ಸ್ಥಾನಕ್ಕೆ ತರಬೇಕು. ಯಡಿಯೂರಪ್ಪನ ಬಲವಂತವಾಗಿ ಕೆಳಗಿಳಿಸಿದರೆ ಮುಂದೆ ಬಹುದೊಡ್ಡ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಹೈಕಮಾಂಡ್ ಯಡಿಯೂರಪ್ಪರವರನ್ನು ಎಷ್ಟೋ ಬಾರಿ ಅಪಮಾನದಿಂದ ನಡೆಸಿಕೊಂಡಿದ್ದಿರ. ಮುಖ್ಯಮಂತ್ರಿಗೆ ಭೇಟಿಗೂ ಅವಕಾಶವನ್ನು ಕೊಡಲಿಲ್ಲ. ಅನುದಾನದ ವಿಚಾರದಲ್ಲಿ ತಾರತಮ್ಯ ಮಾಡಿದ್ದಾರೆ. ಯಡಿಯೂರಪ್ಪ ಇಲ್ಲದೆ ಪಕ್ಷವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗ್ತೀನಿ ಅಂತ ಅಂದರೆ ಅದು ಅತ್ಯಂತ ಕಷ್ಟಸಾಧ್ಯ ಎಂದು ನಿಡುಮಾಮಿಡಿ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಕೇವಲ ವೀರಶೈವ ಮಠದವರು ಇಲ್ಲ, ಇಲ್ಲಿ ಎಲ್ಲಾ ಮಠಾಧೀಶರು ಇದ್ದಾರೆ. ಯಡಿಯೂರಪ್ಪರೇ ಸಿಎಂ ಆಗಿ ಮುಂದುವರೆಯಬೇಕು. ಹೈಕಮಾಂಡ್ ಮುಂದೆ ಅವರನ್ನು ಬದಲಾವಣೆ ಮಾಡಿದ್ರೆ ರಾಜ್ಯದಲ್ಲಿ ಬಿಜೆಪಿ ಎಲ್ಲಿದೆ ಅಂತಾ ಬ್ಯಾಟರಿ ಬಿಟ್ಟು ಹುಡುಕಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಬಿಜೆಪಿಗೆ ಬರುತ್ತದೆ ಎಂದು ತಿಪಟೂರಿನ ಷಡಕ್ಷರಿ ರುದ್ರಮುನಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಕೈಬಿಟ್ಟರೆ 6 ತಿಂಗಳಲ್ಲಿ ಸರ್ಕಾರ ಪತನ ಗ್ಯಾರಂಟಿ, ಬಿಜೆಪಿಗೆ ದೊಡ್ಡ ಪೆಟ್ಟು: ಮುರುಘಾ ಮಠದ ಸ್ವಾಮೀಜಿ ಎಚ್ಚರಿಕೆ

ವೀರಶೈವ ಸಮುದಾಯದವರಿಗೇ ಸಿಎಂ ಹುದ್ದೆ ನೀಡಬೇಕು; ಹೋರಾಟದ ಎಚ್ಚರಿಕೆ ನೀಡಿದ ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada