ಮೈಸೂರು: ಕರ್ನಾಟಕದ ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ (SR Bommai) ಅವರ ಮಗ ಬಸವರಾಜ ಬೊಮ್ಮಾಯಿ (Basavaraj Bommai) ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 3 ದಶಕಗಳ ಹಿಂದೆ ಜನತಾದಳ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿಯವರನ್ನು ಉದ್ದೇಶಿಸಿ ಇಂದು ಮೈಸೂರಿನಲ್ಲಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಅಪ್ಪನ ಗುಣವೇ ಮಗನಿಗೂ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿಯ (Mahatma Gandhi) ಮಗ ಕುಡುಕನಾಗಲಿಲ್ಲವೇ? ಹೀಗಾಗಿ, ಅಪ್ಪನನ್ನು ನೋಡಿ ಮಗನ ಗುಣವನ್ನು ಅಳೆಯಲು ಸಾಧ್ಯವಿಲ್ಲ. ನೂತನ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ತಂದೆಯಂತೆಯೇ ಉತ್ತಮ ಆಡಳಿತ ನಡೆಸುತ್ತಾರಾ? ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದ್ದಾರೆ.
ಎಸ್.ಆರ್. ಬೊಮ್ಮಾಯಿಯವರ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿಯ ಮಗ ಕುಡುಕನಾದ. ಮಹಾತ್ಮ ಗಾಂಧಿಯ ಮಗ ಮಹಾತ್ಮ ಗಾಂಧಿಯಾಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಎಸ್.ಆರ್. ಬೊಮ್ಮಾಯಿಯ ಮಗ ತನ್ನ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾ? ಎಂದು ಪ್ರಶ್ನಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಹೆಸರು ಸೂಚಿಸಿರುವುದು ಬಿಎಸ್ ಯಡಿಯೂರಪ್ಪ. ಹೀಗಾಗಿ, ಹೊಸ ಸರ್ಕಾರದ ಮೇಲೆ ಯಡಿಯೂರಪ್ಪ ಸಹಜವಾಗಿಯೇ ಹಿಡಿತ ಹೊಂದಿರುತ್ತಾರೆ. ಹೀಗಿರುವಾಗ ಬಸವರಾಜ ಬೊಮ್ಮಾಯಿ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಾಧ್ಯವಾ? ಅವರ ಆಡಳಿತ ಹೇಗಿರುತ್ತದೆ ಎಂಬ ಬಗ್ಗೆ ನನಗೆ ಖಚಿತತೆಯಿಲ್ಲ. ಸಿಕ್ಕ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಹೀಗಾಗಿ, ಈ ಕ್ಷಣದಲ್ಲೆ ನಾನು ಬೊಮ್ಮಾಯಿ ಬಗ್ಗೆ ಏನೂ ಹೇಳುವುದಿಲ್ಲ, ಈಗಲೇ ಅವರ ಮೇಲೆ ಸುಮ್ಮನೆ ದೂರುವುದಿಲ್ಲ. ಮುಖ್ಯಮಂತ್ರಿಯಾಗಿ ಅವರು ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಬದಲಾದರೆ ಎಲ್ಲವೂ ಬದಲಾಗುತ್ತಾ? ಬಿಎಸ್ ಯಡಿಯೂರಪ್ಪ ಸಿಎಂ ಖುರ್ಚಿಯಿಂದ ಇಳಿದಿದ್ದಾರೆ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿ ಬದಲಾಗುತ್ತಾ? ಕೋಮುವಾದ ಹೊರಟುಹೋಗುತ್ತಾ? ಅವರ ಹಿಂದುತ್ವದ ಅಜೆಂಡಾ ಬದಲಾಗುತ್ತಾ? ಎಂದು ಪ್ರಶ್ನೆ ಹಾಕಿರುವ ಸಿದ್ದರಾಮುಯ್ಯ, ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಆದರಿಂದ ಬಿಜೆಪಿ ಸರ್ಕಾರದಿಂದ ಯಾವುದೇ ನೀರೀಕ್ಷೆ ಮಾಡೋದಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನಿಂದ ಬಂದವರಲ್ಲ. ಅವರಿಗೆ ಒಂದು ಅವಕಾಶ ಸಿಕ್ಕಿದೆ. ಆ ಅವಕಾಶವನ್ನ ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲು ಅವಕಾಶವಿದೆ ಎಂದಿದ್ದಾರೆ.
ನಾನು ಸೂಪರ್ ಸಿಎಂ ಎಂಬ ಆರೋಪದಿಂದ ಮುಕ್ತನಾದೆ ಎಂಬ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಅಂದ್ರೆ ಯಡಿಯೂರಪ್ಪನವರ ಸರ್ಕಾರದಲ್ಲಿ ತಾನೇ ಸೂಪರ್ ಸಿಎಂ ಆಗಿದ್ದೆ ಎಂಬುದು ಅವರ ಮಾತಿನ ಅರ್ಥವಾ? ಈ ಮೂಲಕ ಅದನ್ನು ಅವರೇ ಒಪ್ಪಿಕೊಂಡಂತೆ ಆಯಿತಲ್ಲ. ಸಿಎಂ ಆಯ್ಕೆಯಲ್ಲಿ ಯಾರ ಕೈ ಮೇಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇನ್ನೂ ಮೂರು ತಿಂಗಳು ನಾನು ಏನೂ ಮಾತನಾಡಲ್ಲ, ಮುಂದೆ ನೋಡೋಣ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
(Siddaramaiah Controversial Statement on Karnataka CM Basavaraj Bommai in Mysuru)
Published On - 6:10 pm, Wed, 28 July 21