Basavaraj Bommai: ಅಧಿಕಾರ ಸ್ವೀಕರಿಸಿದ ಮರುದಿನವೇ ಸಿಎಂ ಪ್ರವಾಸ; ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ

Karnataka Floods: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದು, ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ.

Basavaraj Bommai: ಅಧಿಕಾರ ಸ್ವೀಕರಿಸಿದ ಮರುದಿನವೇ ಸಿಎಂ ಪ್ರವಾಸ; ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 28, 2021 | 2:42 PM

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಇಂದು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಕೂಡಲೇ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ ಕೆಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭೀಕರ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗಳಿಗೆ ನಾಳೆಯಿಂದಲೇ ಪ್ರವಾಸ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಈ ಬಾರಿ ಕರಾವಳಿ ಮತ್ತು ಮಲೆನಾಡಿನಲ್ಲಿ ಸುರಿದ ಭಾರೀ ಮಳೆಯಿಂದ ಉತ್ತರ ಕನ್ನಡ ಜಿಲ್ಲೆ ಬಹುತೇಕ ಮುಳುಗಡೆಯಾಗಿತ್ತು. ಅಂಕೋಲ, ಕಾರವಾರ, ಶಿರಸಿ, ಹೊನ್ನಾವರ, ಯಲ್ಲಾಪುರ, ದಾಂಡೇಲಿ, ಕುಮಟಾ ಸೇರಿದಂತೆ ಹಲವೆಡೆ ಭಾರೀ ಆಸ್ತಿಪಾಸ್ತಿ ಹಾನಿಯಾಗಿವೆ. ಈ ಹಿನ್ನೆಲೆಯಲ್ಲಿ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.

ನಾಳೆ ಕಾರವಾರಕ್ಕೆ ಹೋಗಿ ಅಲ್ಲಿನ ಸಮಗ್ರ ಪರಿಸ್ಥಿತಿ ಅರ್ಥ ಮಾಡಿಕೊಂಡು ನಂತರ ಸಭೆ ಮಾಡಿ ತೀರ್ಮಾನ ಮಾಡುತ್ತೇನೆ. ಉತ್ತರ ಕನ್ನಡದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟವನ್ನು ಗಮನಿಸಿ ಬಳಿಕ ಪರಿಹಾರದ ಬಗ್ಗೆ ನಿರ್ಧರಿಸಲಾಗುವುದು ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಉತ್ತರ ಕನ್ನಡದ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಇದೇ ವೇಳೆ, ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುವ ವಿಚಾರವಾಗಿಯೂ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟರೆ ಪ್ರಧಾನಿ ಮೋದಿ ಭೇಟಿಗೆ ಹೋಗುತ್ತೇನೆ. ನನ್ನ ಮೊದಲ ದೆಹಲಿ ಭೇಟಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ. ನಡ್ಡಾರನ್ನು ಭೇಟಿಯಾಗುವುದು. ದೆಹಲಿಗೆ ಹೋಗಿ ನಮ್ಮ ಕೇಂದ್ರದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ವಿಧಾನಸೌಧದಲ್ಲಿ ಹೇಳಿದ್ದಾರೆ.

ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ರೈತರ ಮಕ್ಕಳಿಗೆ ವಿಶೇಷ ಯೋಜನೆಯೊಂದನ್ನು ಮುಖ್ಯಮಂತ್ರಿ ಬೊಮ್ಮಾಯಿ ಘೊಷಿಸಿದ್ದಾರೆ. . ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡಲು ನಿರ್ಧರಿಸಲಾಗಿದೆ. ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಪ್ರತಿವರ್ಷ 1,000 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇದರ ಜೊತೆಗೆ, ಸಂಧ್ಯಾ ಸುರಕ್ಷಾ ಯೋಜನೆ ಘೋಷಿಸಿದ್ದು, ಇದಕ್ಕೆ 863.52 ಲಕ್ಷ ಹೆಚ್ಚುವರಿ ವೆಚ್ಚವಾಗಲಿದೆ ಎಂದಿದ್ದಾರೆ. ವಿಧವಾ ವೇತನವನ್ನು 600ರಿಂದ 800ರೂ.ಗೆ ಹೆಚ್ಚಳ ಮಾಡಲಾಗುವುದು. ಇದಕ್ಕೆ 414 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ಇದರಿಂದ 17.25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಹಾಗೇ, ದಿವ್ಯಾಂಗರ ವೇತನ 600ರಿಂದ 800 ರೂ.ಗೆ ಹೆಚ್ಚಳ ಮಾಡಲಾಗುವುದು. 40ರಿಂದ 75ರಷ್ಟು ದಿವ್ಯಾಂಗರಿಗೆ ವೇತನ ಹೆಚ್ಚಳ ಮಾಡಲಾಗುವುದು. ಇದರಿಂದ 3 ಲಕ್ಷ 66 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Basavaraj Bommai: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1,000 ಕೋಟಿ ರೂ. ವೆಚ್ಚದಲ್ಲಿ ಶಿಷ್ಯ ವೇತನ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

Basavaraj Bommai Photos: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ; ಫೋಟೋಗಳು ಇಲ್ಲಿವೆ

(Karnataka CM Basavaraj Bommai Traveling Karwar on Thursday to Visit Uttara Kannada District Flood Areas)