ತುಮಕೂರು: ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ ಬೆಂಬಲಿಸಿದ್ದೆವು: ಸಿದ್ದರಾಮಯ್ಯ
ಕಾಂಗ್ರೆಸ್ನವರು ನಮ್ಮ ಮನೆ ಬಾಗಿಲಿಗೆ ಬಂದರು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು, ರಾಜ್ಯ ಹಾಳಾಗಬಾರದು ಎಂದು ಸರ್ಕಾರ ರಚಿಸಲು ನಾವು ಜೆಡಿಎಸ್ ಬೆಂಬಲಿದ್ದೆವು. ಜನೋಪಕಾರಿ ಮುಖ್ಯಮಂತ್ರಿ ಅಂತಾ ಮನೆ ಬಾಗಿಲಿಗೆ ಹೋಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ತುಮಕೂರು: ಕಳೆದ ಚುನಾವಣೆಯಲ್ಲಿ (Karnataka Assembly Elections) ಬಿಜೆಪಿ ನೇರವಾಗಿ ಅಧಿಕಾರಕ್ಕೆ ಬಂದಿಲ್ಲ. ಶೇ.36.42ರಷ್ಟು ಮತ ಆ ಪಕ್ಷಕ್ಕೆ ಬಂದಿದೆ, ಕಾಂಗ್ರೆಸ್ಗೆ ಶೇ.38.18ರಷ್ಟು ಮತ ಬಂದಿದೆ. ನಾವು ಗೆದ್ದಿದ್ದು 80 ಸ್ಥಾನಗಳು ಮಾತ್ರ. ಹೀಗಾಗಿ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಿದ್ದೆವು. ಆದರೆ ಕುಮಾರಸ್ವಾಮಿ (H.D.Kumaraswamy) ಅವರು ಕಾಂಗ್ರೆಸ್ನವರು ನಮ್ಮ ಮನೆ ಬಾಗಿಲಿಗೆ ಬಂದರು ಎನ್ನುತ್ತಿದ್ದಾರೆ. ರಾಜ್ಯ ಹಾಳಾಗಬಾರದು ಮತ್ತು ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಅಂದು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದೆವು ಅಷ್ಟೆ. ಜನೋಪಕಾರಿ ಮುಖ್ಯಮಂತ್ರಿ ಅಂತಾ ಮನೆ ಬಾಗಿಲಿಗೆ ಹೋಗಲಿಲ್ಲ ಎಂದು ಸಿದ್ದರಾಮಯ್ಯ (Siddaramaiah) ಅವರು ಹೇಳಿದರು.
ಈ ಹಿಂದೆ ನೀವು (ಜೆಡಿಎಸ್) ಧರ್ಮಸಿಂಗ್ ಸರ್ಕಾರ ತೊರೆದು ಬಿಜೆಪಿ ಜೊತೆ ಹೋಗಿದ್ದರಲ್ಲ, ಇದಕ್ಕೆ ಏನು ಹೇಳಬೇಕು? ಬಿಜೆಪಿ ಜೊತೆ ಹೋದವರನ್ನು ಜಾತ್ಯತೀತ ಪಕ್ಷ ಅಂತಾ ಕರೆಯಬೇಕಾ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಸಿದ್ದರಾಮಯ್ಯನೇ ಸರ್ಕಾರ ಕೆಡವಿದ್ದು ಎಂದು ಹೇಳುತ್ತಾರೆ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದರು. ಬಿಜೆಪಿಗೂ ಜೆಡಿಎಸ್ಗೂ ಯಾವುದೇ ವ್ಯತ್ಯಾಸವಿಲ್ಲ, ಬಿಜೆಪಿಯವರು ಬಹಿರಂಗವಾಗಿ ಅಲ್ಪಸಂಖ್ಯಾತರನ್ನು ವಿರೋಧಿಸುತ್ತಾರೆ. ಜೆಡಿಎಸ್ನವರು ಒಳಗೊಳಗೆ ಅಲ್ಪಸಂಖ್ಯಾತರನ್ನು ವಿರೋಧಿಸುತ್ತಾರೆ. ಅಲ್ಪಸಂಖ್ಯಾತರು ಬಿಜೆಪಿ, ಜೆಡಿಎಸ್ನವರ ಮಾತನ್ನು ನಂಬಬೇಡಿ ಎಂದರು.
ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟಾರ್ಗೆಟ್ ಮಾಡಿದ ಸಿದ್ದರಾಮಯ್ಯ, ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ ಅವರು ಯಾವಾತಾದ್ರೂ ಅದನ್ನು ಮಾಡಿದ್ದಾರಾ? ಸುಳ್ಳು ಯಾಕೆ ಹೇಳುತ್ತೀರಾ? ಸುಳ್ಳು ಹೇಳುವುದರಿಂದ ದೇಶ ಉದ್ದಾರ ಆಗಲ್ಲ. ಇಂತಹ ಸುಳ್ಳು ಹೇಳಿದ ಪ್ರಧಾನಮಂತ್ರಿಯನ್ನು ಹಿಂದೆಂದೂ ದೇಶ ಕಂಡಿಲ್ಲ. ಅತ್ಯಂತ ಹೆಚ್ಚು ಸುಳ್ಳು ಹೇಳಿದ ಪ್ರಧಾನ ಮಂತ್ರಿ ಅದು ಮಿಸ್ಟರ್ ನರೇಂದ್ರ ಮೋದಿ. ಕೆಟ್ಟ ವಚನಭ್ರಷ್ಟ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯನವರ ಪಾಪದಿಂದಲೇ ನಾನು ಕಾಂಗ್ರೆಸ್ ಬಿಟ್ಟೆ; ಸಚಿವ ಡಾ.ಕೆ.ಸುಧಾಕರ್
ಭಾರತವನ್ನು ಮೋದಿ ಸಾಲಗಾರ ದೇಶವನ್ನಾಗಿ ಮಾಡಿದ್ದಾರೆ. ಮನಮೋಹನ್ ಸಿಂಗ್ ಅಧಿಕಾರ ಬಿಟ್ಟಾಗ 5 ಲಕ್ಷದ 12 ಸಾವಿರ ಕೋಟಿ ಸಾಲವಿತ್ತು. ಬಿಜೆಪಿಯವರು 153 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೇವಲ 9 ವರ್ಷದಲ್ಲಿ 100 ಲಕ್ಷ ಕೋಟಿಗೂ ಹೆಚ್ಚು ಸಾಲಮಾಡಿದ್ದಾರೆ. ರೈತರಿಗೆ ಟೋಪಿ ಹಾಕಿ ಭ್ರಮೆ ಹುಟ್ಟಿಸಿ, ಸುಳ್ಳು ಹೇಳಿ ಮೂರು ರೈತ ವಿರೋಧಿ ಕಾನೂನು ಮಾಡಿದ್ದು ಯಾರು? ವಾಪಸ್ ತೆಗೆದುಕೊಂಡವರು ಯಾರು? ರೈತರ ಪ್ರತಿಭಟನೆಗೆ ನಡುಗಿ ಹೋದರು, ರೈತ ವಿರೋಧಿ ಕಾನೂನು ವಾಪಸ್ ತೆಗೆದುಕೊಂಡರು. ದೇಶದಲ್ಲಿ ಬೆಲೆ ಏರಿಕೆಯಾಗುತ್ತಿದೆ. ಇದೇನಾ ಮೋದಿಯವರು ಹೇಳುವ ಅಚ್ಚೆ ದಿನ್ ಎಂದು ಪ್ರಶ್ನಿಸಿದರು.
ತುಮಕೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಈ ಜಿಲ್ಲೆ ಕರ್ನಾಟಕದಲ್ಲಿ ಅನೇಕ ಜಿಲ್ಲೆಗೆ ಹೆಬ್ಬಾಗಿಲಾಗಿದೆ. ತುಮಕೂರು ಏಷ್ಟು ಅಭಿವೃದ್ದಿಯಾಗ ಬೇಕಿತ್ತೋ ಅಷ್ಟು ಅಭಿವೃದ್ಧಿ ಆಗಿಲ್ಲ. ನಂಜುಂಡಪ್ಪ ವರದಿ ಪ್ರಕಾರ, 10ರಲ್ಲಿ 8 ತಾಲೂಕುಗಳು ಅತ್ಯಂತ ಹಿಂದೂಳಿದ ತಾಲ್ಲೂಕುಗಳಾಗಿವೆ. ಎರಡು ತಾಲೂಕುಗಳು ಮಾತ್ರ ಹಿಂದುಳಿದಿಲ್ಲ. ನಾವು ಅಧಿಕಾರಕ್ಕೆ ಬಂದಾಗ ತಲಾ ಆದಾಯ 43687 ರೂಪಾಯಿ ಇತ್ತು, ಅಧಿಕಾರ ಬಿಟ್ಟಾಗ ತಲಾ 1,74,884 ರೂಪಾಯಿ ಆಗಿತ್ತು. 2021ರಲ್ಲಿ 1,84, 000. ಇದು ಬಿಜೆಪಿ ಸರ್ಕಾರ ನೀಡಿರುವ ಅಂಕಿ ಅಂಶಗಳಾಗಿವೆ. ಈ ಐದು ವರ್ಷದಲ್ಲಿ ತಲಾ ಆದಾಯ ಹೆಚ್ಚಳ ಆಗಿಲ್ಲ. ಇದು ಬಿಜೆಪಿ ಸರ್ಕಾರದ ತುಮಕೂರು ಜಿಲ್ಲೆಗೆ ನೀಡಿರುವ ಕೊಡುಗೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 pm, Tue, 24 January 23