Congress: ಕಹಳೆ ಊದುವ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ

| Updated By: ganapathi bhat

Updated on: Dec 11, 2021 | 4:20 PM

ಕಾಂಗ್ರೆಸ್ ರಾಜಕೀಯಕ್ಕಾಗಿ ಉದಯವಾದ ಪಕ್ಷವಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಭಾರತೀಯರಿಗೆ ನ್ಯಾಯ ಕೊಡಿಸಲು, ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಸ್ಥಾಪನೆ ಆದ ಪಕ್ಷ. ತಿಲಕ್​ರಿಂದ ಸೋನಿಯಾವರೆಗೆ ಹಲವರು ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Congress: ಕಹಳೆ ಊದುವ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ
ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ
Follow us on

ಮೈಸೂರು: ಸಂವಿಧಾನ ಬಂದ ಮೇಲೆ ಎಲ್ಲರಿಗೂ ಒಂದೇ ಮತ, ಒಂದೇ ಬೆಲೆ. ಶ್ರೀಮಂತರು, ಬಡವರನ್ನು ಒಂದು ಮಾಡಿದ್ದು ಡಾ.ಅಂಬೇಡ್ಕರ್​​. 1952ರಲ್ಲಿ ಆರಂಭವಾದ ಚುನಾವಣೆ 5 ವರ್ಷಕ್ಕೊಮ್ಮೆ ನಡೆಯುತ್ತೆ. ಸಂಸದ, ಶಾಸಕನಾದ ತಕ್ಷಣ ಮಹಾರಾಜ ಅಂದುಕೊಳ್ಳುತ್ತಾರೆ. ನಾನೇ ಯಜಮಾನ ಅಂದುಕೊಂಡರೆ ಅವನು ಶತಮೂರ್ಖ. ಸಂಸದ, ಶಾಸಕ ಜನಸೇವಕ ಎನ್ನೋದನ್ನು ಅರ್ಥಮಾಡಿಕೊಳ್ಳಲಿ. ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರು ಅರ್ಥಮಾಡಿಕೊಳ್ಳಲಿ ಎಂದು ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನರೇಂದ್ರ ಮೋದಿ ಪ್ರಧಾನಿ ಆಗಿದ್ದು ಸಂವಿಧಾನದಿಂದ ಬಿಜೆಪಿಯಿಂದಲ್ಲ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ. ಬಿಜೆಪಿ ಎಸ್​ಸಿ, ಎಸ್​ಟಿ, ಒಬಿಸಿ, ಅಲ್ಪಸಂಖ್ಯಾತರ ಪಕ್ಷವಲ್ಲ. ಆರ್​ಎಸ್​ಎಸ್​​, ಬಿಜೆಪಿಯವರು ಯಾವಾಗಲೂ ಜಾತಿವಾದಿಗಳು. ಆದ್ದರಿಂದ ನಾನು ಆರ್​ಎಸ್​ಎಸ್, ಬಿಜೆಪಿ ವಿರೋಧಿಸುತ್ತೇನೆ. ಹಾಗಾಗಿ ಸಿಂದಗಿಯಲ್ಲಿ ನೀಡಿದ್ದ ನನ್ನ ಹೇಳಿಕೆಯನ್ನು ತಿರುಚಿದ್ರು. ನನ್ನ ವಿರುದ್ಧ ಆರ್​ಎಸ್​ಎಸ್​, ಬಿಜೆಪಿಯವರು ಜನರನ್ನು ಎತ್ತಿಕಟ್ಟಿದ್ದರು ಎಂದು ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಅರೋಪ ಮಾಡಿದ್ದಾರೆ.

ಜೆಡಿಎಸ್ ವಿರುದ್ದವೂ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಇಲ್ಲೇ ನಾಲ್ಕು ಐದು ಜಿಲ್ಲೆಯಲ್ಲೇ ಓಡಾಡಿಕೊಂಡಿದ್ದಾರೆ. ಮೈಸೂರು, ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಮಾತ್ರ. 2023ಕ್ಕೆ ಅಧಿಕಾರಕ್ಕೆ ಬರುತ್ತೇವೆ ಅಂತಾರೆ. ನಾನು ಇದ್ದಾಗ 59 ಸ್ಥಾನ ಗೆದ್ದಿದ್ದರು. ಅದಾದ ಮೇಲೆ ಕೆಳಗೆ ಬರುತ್ತಾ ಇದ್ದಾರೆ. ಇವರಿಗೆ ಯಾವುದೇ ಸಿದ್ದಾಂತ ಇಲ್ಲ. ಯಾರ ಜೊತೆ ಬೇಕಾದರೂ ಹೋಗುತ್ತಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದು ಹೆಮ್ಮೆಯ ವಿಚಾರ. 1885ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಸ್ಥಾಪನೆಯಾಯಿತು. ಭಾರತೀಯರನ್ನು ಸೇರಿಸಿ ಡಾ.ಹ್ಯೂಮ್ ಪಕ್ಷ ಸ್ಥಾಪಿಸಿದ್ದರು. ಡಾ.ಬ್ಯಾನರ್ಜಿ ಕಾಂಗ್ರೆಸ್ ಸ್ಥಾಪನೆ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ರಾಜಕೀಯಕ್ಕಾಗಿ ಉದಯವಾದ ಪಕ್ಷವಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಭಾರತೀಯರಿಗೆ ನ್ಯಾಯ ಕೊಡಿಸಲು, ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಸ್ಥಾಪನೆ ಆದ ಪಕ್ಷ. ತಿಲಕ್​ರಿಂದ ಸೋನಿಯಾವರೆಗೆ ಹಲವರು ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ತಮ್ಮ ತವರೂರು ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಹಳೆ ಊದುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸದಸ್ಯತ್ವ ಸ್ವೀಕರಿಸಿದ್ದಾರೆ.

ಇತ್ತ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​​ ಬೂತ್ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ನಾನು ಸಿಎಂ ಆಗುವೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಕೇಳುವ ಹಕ್ಕಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್, ಶಾಸಕರಿಂದ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕುಯ್ಯುವುದೇ ಇವರ ಕೆಲಸ; ನನಗೆ ಅನುಭವ ಆಗಿದೆ: ಕಾಂಗ್ರೆಸ್ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಇದನ್ನೂ ಓದಿ: ಮುಂದೆ ಕರ್ನಾಟಕದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ; ವಿವಿಧ ಪಕ್ಷದ ನಾಯಕರು ಕಾಂಗ್ರೆಸ್​ನತ್ತ ಬರುತ್ತಿದ್ದಾರೆ: ಸಿದ್ದರಾಮಯ್ಯ

Published On - 4:19 pm, Sat, 11 December 21