ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ: ಅನಂತಕುಮಾರ್‌ ಹೆಗಡೆ

ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ. ಹಿಂದುಳಿದವರು, ಎಸ್​ಸಿ, ಎಸ್​ಟಿ ವರ್ಗದವರಿಗೆ ನೀಡಿದ್ದ 11 ಸಾವಿರ ಕೋಟಿ ರೂ. ನಾಪತ್ತೆಯಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್‌ ಹೆಗಡೆ ವಾಗ್ದಾಳಿ ಮಾಡಿದ್ದಾರೆ.

ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ: ಅನಂತಕುಮಾರ್‌ ಹೆಗಡೆ
ಸಂಸದ ಅನಂತಕುಮಾರ್​ ಹೆಗಡೆ
Updated By: ವಿವೇಕ ಬಿರಾದಾರ

Updated on: Feb 24, 2024 | 8:00 AM

ಕಾರವಾರ ಫೆಬ್ರವರಿ 24: ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್‌ ಹೆಗಡೆ (Anantkumar Hegde) ವಾಗ್ದಾಳಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳಿಗೆ, ಶಾಸಕರಿಗೆ ಕೊಡಲು ಹಣ ಇಲ್ಲ ಅಂತಾರೆ. ಹಿಂದುಳಿದವರು, ಎಸ್​ಸಿ, ಎಸ್​ಟಿ ವರ್ಗದವರಿಗೆ ನೀಡಿದ್ದ 11 ಸಾವಿರ ಕೋಟಿ ರೂ. ನಾಪತ್ತೆಯಾಗಿದೆ. ರಾಜ್ಯ ಸರ್ಕಾರ (Karnataka Government) ದಿವಾಳಿಯಾಗಿದೆ, ಮೋದಿ ಸರ್ಕಾರ ದಿವಾಳಿಯಾಗಿಲ್ಲ ಎಂದು ಹೇಳಿದರು.

ರಾಜ್ಯ ಲೂಟಿ ಹೊಡೆದು, ದಿವಾಳಿ ಮಾಡಿ, ಮತ ಪಡೆಯಲು ಹೊರಟಿದ್ದಾರೆ. ಇಷ್ಟು ಹೇಸಿಗೆ, ದರಿದ್ರ ಸರ್ಕಾರ ನಾನೆಲ್ಲೂ ನೋಡಿಲ್ಲ. ನಮಗೆ ಕೇಂದ್ರ ಸರ್ಕಾರ ತೆರಿಗೆ ಹಣ ಕೊಟ್ಟಿಲ್ಲವೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ತಮಿಳುನಾಡು, ಆಂಧ್ರ, ಕೇರಳಕ್ಕೆ ಇಲ್ಲದ ವೇದನೆ ಇವರಿಗೆ ಏಕೆ?ಅವರಿಗೆ ಎಲ್ಲವೂ ಸರಿಹೋಗುತ್ತಿದೆ. ಸಿದ್ದರಾಮುಲ್ಲಾ ಖಾನ್‌ಗೆ ಏಕೆ ತೊಂದರೆ? ಸಿಎಂಗೆ ದುರಹಂಕಾರ, ಓಸಿ ಚೀಟಿ ಬರೆದಂತೆ ಫೈಲ್‌ನ್ನು ಬರೆಯುತ್ತಾರೆ. ಓಸಿ ಚೀಟಿಗಾದರೂ ಬೆಲೆ ಇರುತ್ತೆ, 1 ರೂ. ಕೊಟ್ಟರೆ 80 ರೂ. ಕೊಡುತ್ತಾರೆ. ಸಿಎಂ ಲೆಟರ್‌ಗೆ ಎಷ್ಟು ದುರಂಕಾರದ ಸಹಿ ಹಾಕುತ್ತಾರೆ ಅಂದರೇ, ಆ ಲೆಟರ್ ಕೂಡಾ ನೋಡಬಾರದು ಅಂದೆನಿಸುತ್ತದೆ ಎಂದರು.

ರಾಜ್ಯ ಏನು ನಿಮ್ಮಪ್ಪನ ಆಸ್ತಿನಾ? ನಾವು ಕಟ್ಟಿರುವ ತೆರಿಗೆ ಹಣಕ್ಕೆ ಲೆಕ್ಕ ಕೊಡಿ. ದೇಶದಲ್ಲಿ ಶೇ.99.‌9 ರಷ್ಟು ಹಿಂದೂಗಳು ತೆರಿಗೆ ಕಟ್ಟುತ್ತಾರೆ. ನಮ್ಮ ಹಣ ತೆಗೆದುಕೊಂಡು ಹೋಗಿ ಮಸೀದಿ, ಚರ್ಚ್‌ಗೆ ಏಕೆ ನೀಡಿದ್ದೀರಿ? ನಮ್ಮ ತೆರಿಗೆ ಹಣ ನಮಗೆ ನೀಡಿ. ದೇವಸ್ಥಾನಗಳು ಹಾಳುಬಿದ್ದಿವೆ, ಇದಕ್ಕೆ ಹಣ ನೀಡಲು ಸರ್ಕಾರದಲ್ಲಿ ದುಡ್ಡಿಲ್ಲ. ಆದರೆ ಮಸೀದಿಗೆ ಕೊಡಲು ರಾಜ್ಯ ಸರ್ಕಾರದ ಬಳಿ ದುಡ್ಡಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಅಪ್ಪ ಅಮ್ಮ ಗೊತ್ತಿಲ್ಲದವರು ತಮ್ಮ ಧರ್ಮ ಜಾತ್ಯತೀತ ಎಂದು ಹೇಳ್ತಾರೆ, ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ಪರೋಕ್ಷ ವಾಗ್ದಾಳಿ

ಮಸೀದಿಗೆ ಹಣ ಕೊಡುತ್ತೀರಿ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಹಣ ಕೊಡುತ್ತೀರಿ. ನಮ್ಮ ದೇವರು ಏನು ಅಪರಾಧ ಮಾಡಿದ್ದಾನೆ. ಹಿಂದೂಗಳು ಕಟ್ಟಿರುವ ತೆರಿಗೆ ಹಣದಿಂದ ರಾಜ್ಯ ಸರ್ಕಾರ ನಡೆಯುತ್ತಿದೆ. ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು ಅಂತಾ ನಾವು ಕುಳಿತರೇ ಸ್ಥಿತಿ ಏನಾಗುತ್ತೆ? ಸಣ್ಣಬುದ್ಧಿ ಮಾಡಲ್ಲ, ಹಿಂದೂ ಸಮಾಜದ ಬಗ್ಗೆ ಹೇಳುವವರು, ಕೇಳುವವರು ಇಲ್ಲವಾ? ಎಂದು ಪ್ರಶ್ನಿಸಿದರು.

ರೈತರ ಹೋರಾಟವಲ್ಲ, ದೇಶದ್ರೋಹಿಗಳ ಹೋರಾಟ

ನರೇಂದ್ರ ಮೋದಿಗೆ ವೋಟು ಕೊಡುವವರು ಧರ್ಮಕ್ಕಾಗಿ ಕೊಡುತ್ತಾರೆ. ಒಂದು ಸಾವಿರ ವರ್ಷದಿಂದ ನಮ್ಮ ಮೇಲೆ ಯಾರು ದಬ್ಬಾಳಿಕೆ ನಡೆಸುತ್ತಿದ್ದರೂ, ಅದಕ್ಕೆ ಪ್ರತಿಯಾಗಿ ರಾಮಮಂದಿರ ಕಟ್ಟಿ ನಿಲ್ಲಿಸಿದ್ದೇವೆ. ಪಂಜಾಬ್ ಗಡಿತಲ್ಲಿ ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ ಮಾಡುತ್ತಾರೆ. ಇಡೀ ದೇಶದಲ್ಲಿ ಇಲ್ಲದಿರುವ ಗಲಾಟೆ, ಅನ್ಯಾಯ ಅವರಿಗೇನಾಗಿದೆ? ರೈತರ ಹೋರಾಟವಲ್ಲ, ದೇಶದ್ರೋಹಿಗಳ, ಖಲಿಸ್ತಾನಿಗಳ ಹೋರಾಟ. ಅವರು ಯಾರೂ ರೈತರಲ್ಲ, ಬೇರೆ ದೇಶದವರು ಹಣ ಕೊಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಮೋದಿಯವರ ಕೆಲಸ ನೋಡಿ ಎಷ್ಟೋ ದೇಶಗಳು ಅವರನ್ನು ಕೊಂಡಾಡುತ್ತಿವೆ. ಅಷ್ಟೇ ಹೊಟ್ಟೆ ಕಿಚ್ಚು ಪಡುವವರೂ ಇದ್ದಾರೆ. ಇದಕ್ಕೆಲ್ಲಾ ಮುಕ್ತಿ ಬೇಕಂದರೆ ದೇಶದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:43 am, Sat, 24 February 24