AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಅಂದರೆ ಕಾಂಗ್ರೆಸ್​ಗೆ ಭಯ: ಎಚ್​ಡಿ ರೇವಣ್ಣ

2006ರಲ್ಲಿ ಬಿಜೆಪಿ ಬಳಿಗೆ‌ ಬಸ್ ಚಲಾಯಿಸಿಕೊಂಡು ಹೋದವರು ಯಾರು? ಜೆಡಿಎಸ್​ ಮನೆ ಮುಂದೆ ಹೋಗಬೇಕಿದ್ದ ಬಸ್​ ಅನ್ನು ಕೇಸರಿಯವರ ಮನೆ ಬಳಿ ಬಿಟ್ಟು ಬಂದರು.

ಜೆಡಿಎಸ್ ಅಂದರೆ ಕಾಂಗ್ರೆಸ್​ಗೆ ಭಯ: ಎಚ್​ಡಿ ರೇವಣ್ಣ
ಹೆಚ್.ಡಿ. ರೇವಣ್ಣ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 24, 2021 | 7:10 PM

Share

ವಿಜಯಪುರ: ಜೆಡಿಎಸ್​ ಬಗ್ಗೆ ಕಾಂಗ್ರೆಸ್​ನಲ್ಲಿ ಭಯವಿದೆ. ಹೀಗಾಗಿಯೇ ಕಾಂಗ್ರೆಸ್ ನಾಯಕರು ಪದೇಪದೆ ಜೆಡಿಎಸ್ ಬಗ್ಗೆ​ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ರೇವಣ್ಣ ಹೇಳಿದೆ. ಜಿಲ್ಲೆಯ ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಪ್ರಚಾರ ನಡೆಸಿದ ಅವರು, ಬಿಜೆಪಿಗಿಂತಲೂ ಕಾಂಗ್ರೆಸ್​ ಪಕ್ಷವನ್ನು ಹೆಚ್ಚಾಗಿ ಗುರಿಯಾಗಿಸಿ ವಾಗ್ದಾಳಿ ನಡೆಸಿದರು.

ಕೋಮುವಾದಿಗಳನ್ನು ದೂರವಿಡಬೇಕು ಎನ್ನುವ ಕಾಂಗ್ರೆಸ್ ನಾಯಕರು, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೇವಲವಾಗಿ ಮಾತುನಾಡುತ್ತಿದ್ದಾರೆ. ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್​ ಪಕ್ಷದ ಕೊಡುಗೆ ಏನು? ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದರು ಎಂದು ವಿವರಿಸಿದರು.

ಜೆಡಿಎಸ್ ಅಂದರೆ ಕಾಂಗ್ರೆಸ್​ಗೆ ಭಯ. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಕರೆದು ‘ಎ’ ಟೀಂ, ‘ಬಿ’ ಟೀಂ‌ ಎಂದು ಮಾತನಾಡಿಸಿದರು. ಚುನಾವಣೆ ಮುಗಿದ ನಂತರ ನಮ್ಮ ಮನೆ ಬಾಗಿಲಿಗೇ ಬಂದರು. 120 ಸ್ಥಾನದಿಂದ 70 ಸ್ಥಾನಕ್ಕೆ ಇಳಿದ ಬಗ್ಗೆ ಕಾಂಗ್ರೆಸ್​ನವರಿಗೆ ನಾಚಿಕೆಯಾಗಬೇಕು. ಸಂಸತ್ತಿನಲ್ಲಿಯೂ ಕಾಂಗ್ರೆಸ್​ ಸ್ಥಾನ ಸಾಕಷ್ಟು ಕುಸಿದಿದೆ ಎಂದು ಟೀಕಿಸಿದರು.

ಬಡಜನರ ಆಸರೆಗಾಗಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸಾಲಮನ್ನಾ ಮಾಡಿದರು. ಬಂಡೆಪ್ಪ ಕಾಶೆಂಪುರ ವಿಶೇಷ ಕಾರ್ಯಕ್ರಮ ರೂಪಿಸಿದ್ದರು. ಬೀದಿ‌ಬದಿ ವ್ಯಾಪಾರಿಗಳಿಗೆ ₹ 10,000 ಸಾಲ ಸೌಲಭ್ಯ ನೀಡಿದ್ದು ಯಾರು? 1962ರಲ್ಲಿ ಆಲಮಟ್ಟಿ ಡ್ಯಾಂಗೆ ಅಡಿಗಲ್ಲು ಹಾಕಿದ್ದರು, ಆದರೆ ನಂತರ ಕಾಮಗಾರಿ ನಿರ್ವಹಿಸಲು ಹಣ ಬಿಡುಗಡೆ ಮಾಡಲಿಲ್ಲ. ಬಾಕಿ ಇದ್ದ ನೀರಾವರಿ ಯೋಜನೆಗಳಿಗೆ ಹಣ ಕೊಟ್ಟವರು ಯಾರು? ದೇವೇಗೌಡರು ಹಣ ಬಿಡುಗಡೆ ಮಾಡಿರದಿದ್ದರೆ ನಮ್ಮ ರಾಜ್ಯದ ಪಾಲಿನ ನೀರು ಆಂಧ್ರದ ಪಾಲಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ಅವರನ್ನು ಅವರು ಬೆಳೆಸಿದ್ದವನ ಕೈಲೇ ಬಯ್ಯಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಮೀರ್ ಅಹಮದ್ ಮಾತಿಗೆ ಪ್ರತಿಕ್ರಿಯಿಸುವುದಕ್ಕೆ ಅಸಹ್ಯವಾಗುತ್ತದೆ. ಸೂಟ್​ಕೇಸ್ ಸಂಸ್ಕೃತಿ‌ ಜಮೀರ್​​ನದ್ದು‌ ಎಂದ ರೇವಣ್ಣ, ಓರ್ವ‌ ಮುಸಲ್ಮಾನ ಅಭ್ಯರ್ಥಿಯನ್ನು ಸೋಲಿಸಲು‌ ₹ 50 ಕೋಟಿ ಹಣ ಪಡೆದಿದ್ದಾರೆ ಎಂದ ಆರೋಪ ಮಾಡಿದ್ದಾರೆ. ನಾನು ಹಣ ತೆಗೆದುಕೊಂಡಿದ್ದು ಸಾಬೀತಾದರೆ ನಿವೃತ್ತಿ ಪಡೆಯುವೆ ಎಂದು ಸವಾಲು ಹಾಕಿದರು.

ದೇಶದಲ್ಲಿ ಮೂರು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದು ಅಂದಿನ ಪ್ರಧಾನಿ ಎಚ್​.ಡಿ.ದೇವೇಗೌಡ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡಲು ಕಾಂಗ್ರೆಸ್​ಗೆ ನೈತಿಕತೆ ಇಲ್ಲ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಅಲ್ಪಸಂಖ್ಯಾತರಿಗೆ ಶಕ್ತಿ ನೀಡಿದ್ದು‌ ಜೆಡಿಎಸ್‌ ಎಂದು ವಿವರಿಸಿದರು.

ಮೀಸಲಾತಿ‌ ಇಲ್ಲದ ವೇಳೆ ಅಲ್ಪಸಂಖ್ಯಾತರ ಅಭ್ಯರ್ಥಿಯನ್ನು ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದ ರೇವಣ್ಣ ಇಬ್ರಾಹಿಂ ಅವರನ್ನು ಕಾಂಗ್ರೆಸ್​ಗೆ ಕರೆದುಕೊಂಡು ಹೋಗಿ ಹಾಳು ಮಾಡಿದ್ದಾರೆ. ಮಿರಾಜುದ್ದೀನ್ ಪಟೇಲ್ ಹಾಗೂ ಇತರ ಅಲ್ಪಸಂಖ್ಯಾತ ಮುಖಂಡರನ್ನು ಕಾಂಗ್ರೆಸ್ ಹಾಳು ಮಾಡಿದೆ. ನಂಬಿಕೆ ದ್ರೋಹಕ್ಕೆ ಕಾಂಗ್ರೆಸ್​ ಮತ್ತೊಂದು ಹೆಸರು ಎಂದು ಟೀಕಿಸಿದ ಅವರು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂದರು.

ದಿವಂಗತ ನಾಯಕ ಮನಗೂಳಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಜನರು ಜೆಡಿಎಸ್​ಗೆ ಮತ‌ ಹಾಕಬೇಕು ಎಂದು ವಿನಂತಿಸಿಕೊಂಡ ಅವರು, ತಾಕತ್ತಿದ್ದರೆ ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡಲಿ ಎಂದರು. ಕೆಆರ್ ಪೇಟೆ, ಮಂಡ್ಯ, ತುಮಕೂರಿನಲ್ಲಿ ಏನಾಯ್ತು ಎಂದು ಪ್ರಶ್ನಿಸಿದರು. ತುಮಕೂರಿನಲ್ಲಿ ದೇವೇಗೌಡನ್ನು ಸೋಲಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ದೇವೇಗೌಡರನ್ನು, ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದವರು ಯಾರು ಎಂದು ಕೇಳಿದರು. 2023ರ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬರುತ್ತದೆ ನೋಡಿ ಎಂದು ಸವಾಲು ಹಾಕಿದರು.

2006ರಲ್ಲಿ ಬಿಜೆಪಿ ಬಳಿಗೆ‌ ಬಸ್ ಚಲಾಯಿಸಿಕೊಂಡು ಹೋದವರು ಯಾರು? ಜೆಡಿಎಸ್​ ಮನೆ ಮುಂದೆ ಹೋಗಬೇಕಿದ್ದ ಬಸ್​ ಅನ್ನು ಕೇಸರಿಯವರ ಮನೆ ಬಳಿ ಬಿಟ್ಟು ಬಂದರು. ರಾಂಗ್ ರೂಟ್ ಆಗಿ ಬಸ್ ಬಂದಿದೆ ಎಂದುಕೊಂಡರಾದರೂ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದೇಕೆ ಎಂದು ಜಮೀರ್​ಗೆ ಕುಟುಕಿದರು.