AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೋಧ ಪಕ್ಷದಲ್ಲಿದ್ದಾಗ ಬೆಲೆ ನಿಗದಿ ಮಾಡಿ ಎಂದವರು ಈಗ ಕೇಂದ್ರವನ್ನು ದೂರೋದು ಯಾಕೆ? ಜೋಶಿ ಕಿಡಿ

ಕಬ್ಬು ಬೆಳೆಗಾರರ ಹೋರಾಟ ಇಂದಿಗೆ 9ನೇ ದಿನಕ್ಕೆ ಕಾಲಿಟ್ಟಿದೆ. ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ ಮಾಡಿದ್ದಾರೆ. ನಿಮ್ಮ ದುರಾಡಳಿತದ ಪರಮಾವಧಿಯಿಂದಲೇ ಇಂದು ರೈತರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ವಿರೋಧ ಪಕ್ಷದಲ್ಲಿದ್ದಾಗ ಬೆಲೆ ನಿಗದಿ ಮಾಡಿ ಎಂದವರು ಈಗ ಕೇಂದ್ರವನ್ನು ದೂರೋದು ಯಾಕೆ? ಜೋಶಿ ಕಿಡಿ
ಸಚಿವ ಪ್ರಲ್ಹಾದ್​​​ ಜೋಶಿ, ಸಿಎಂ ಸಿದ್ದರಾಮಯ್ಯ
ಗಂಗಾಧರ​ ಬ. ಸಾಬೋಜಿ
|

Updated on: Nov 07, 2025 | 3:43 PM

Share

ಬೆಂಗಳೂರು, ನವೆಂಬರ್​ 07: ಸಿಎಂ ಹುದ್ದೆ ಹೋಯ್ದಾಟದಲ್ಲಿ ಸಿದ್ದರಾಮಯ್ಯ (Siddaramaiah) ಏನೇನೋ ಬಡಬಡಿಸುತ್ತಿದ್ದಾರೆ. ಸರಿಯಾದ ದತ್ತಾಂಶ, ಅಧಿಕಾರಿಗಳಿಂದ ನೈಜ ಮಾಹಿತಿ ಪಡೆದು ಮಾತನಾಡಬೇಕೆಂಬ ಪರಿಜ್ಞಾನ ಸಿಎಂಗೆ ಇಲ್ಲದಿರುವುದು ರಾಜ್ಯದ ದುರಂತ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಎಥೆನಾಲ್‌ ಹಂಚಿಕೆಯ ತಮ್ಮ ಮಾಹಿತಿಯೇ ಸುಳ್ಳು ಎಂದಿರುವ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ್ದು, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವಲ್ಲಿ ಪರದಾಡುತ್ತಿರುವ ಸಿಎಂ ಹತಾಶೆಯಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಸತ್ಯಾಂಶ ಅರಿತೋ-ಅರಿಯದೆಯೋ ಬರೀ ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿರುವವರು ಅವರೇ ಎಂದು ಚಾಟಿ ಬೀಸಿದ್ದಾರೆ.

ಸಚಿವ ಪ್ರಲ್ಹಾದ್​ ಜೋಶಿ ಟ್ವೀಟ್​

ಸಿದ್ದರಾಮಯ್ಯನವರು ಉಲ್ಲೇಖಿಸಿದ ಸಂಸತ್ತಿನ ಉತ್ತರದಲ್ಲಿ 30.06.25 ರವರೆಗಿನ ದತ್ತಾಂಶ ಮಾತ್ರ ಇದೆ. ಆದರೆ, ಎಥೆನಾಲ್ ಸರಬರಾಜು ವರ್ಷವು ನವೆಂಬರ್‌ನಿಂದ ಪ್ರಾರಂಭವಾಗಿ ಅಕ್ಟೋಬರ್‌ನಲ್ಲಿ ಕೊನೆಗೊಳ್ಳುತ್ತದೆ. ಸಂಸತ್ತಿನಲ್ಲಿ ನೀಡಲಾದ ದತ್ತಾಂಶವು 30.06.2025 ರವರೆಗಿನದ್ದು ಮಾತ್ರ ಎಂದಿದ್ದಾರೆ.

2024-25 ರಲ್ಲಿ ಕರ್ನಾಟಕದಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ಗಳಿಗೆ ಒಟ್ಟು 139.8 ಕೋಟಿ  ಲೀಟರ್ ಎಥೆನಾಲ್ ಅನ್ನು ಪೂರೈಸಿವೆ. ಮುಖ್ಯಮಂತ್ರಿಗಳಾಗಿ ತಾವು ಮಾತನಾಡುವ ಮೊದಲು, ದತ್ತಾಂಶಗಳನ್ನ ಸರಿಯಾಗಿ ಅರ್ಥ ಮಾಡಿಕೊಂಡು, ತಮ್ಮ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು, ಅರ್ಥಮಾಡಿಕೊಂಡು ನಂತರ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಇರುವುದು ನಿಜಕ್ಕೂ ರಾಜ್ಯದ ದುರಂತ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಬ್ಬು ಬೆಳಗಾರರ ಹೋರಾಟ: ಪ್ರಧಾನಿಗೆ ಸಿಎಂ ಲೆಟರ್​; ಸಿದ್ದರಾಮಯ್ಯಗೆ ಜೋಶಿ ಟಕ್ಕರ್

2004-2014 ರ ಸಾಲಿನಲ್ಲಿ ಕಬ್ಬು ಬೆಳೆದ ರೈತರಿಗೆ ಸರಿಯಾದ ಸಮಯದಲ್ಲಿ ಹಣ ಪಾವತಿಯಾಗುತ್ತಿರಲಿಲ್ಲಾ, ಈ ವಿಳಂಬ ಧೋರಣೆಯಿಂದ ರೈತರು ಸಂಕಷ್ಟದಲ್ಲಿದ್ದರು. ಅತಿ ಕಡಿಮೆ ಎಫ್​​ಆರ್​​ಪಿ, ಎಂಎಸ್​​ಪಿ, 2005 ರಲ್ಲಿಯೇ ಎಥೆನಾಲ್ ಮಿಶ್ರಣದ ಪ್ರಸ್ತಾಪವನ್ನು ಮಾಡಿದ್ದರೂ, ಎಥೆನಾಲ್ ಬಗ್ಗೆ ಕಿಂಚಿತ್ತೂ ಯೋಚನೆಯೂ ಮಾಡಿರಲಿಲ್ಲಾ.

ಇದು ನಮ್ಮ‌ ಸರ್ಕಾರದ ಬದ್ದತೆ

2013-14 ರಲ್ಲಿ ಕಬ್ಬು ಬೆಳೆ ಖರೀದಿ 57,104 ಕೋಟಿ ರೂ.ಗಳಷ್ಟಿತ್ತು, ಆದರೆ 2024-25ರ ಮೌಲ್ಯ 1,02,687 ಕೋಟಿ ರೂ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಮೂಲಕ 2013-14 ರಲ್ಲಿ 210 ರೂ.ಗಳಷ್ಟಿತ್ತು, ಆದರೆ 2025-26ರ ಸಕ್ಕರೆ ಹಂಗಾಮಿನಲ್ಲಿ ಶೇ. 10.25% ರಷ್ಟು ಚೇತರಿಕೆಯೊಂದಿಗೆ 355/ಕ್ವಿಂಟಲ್‌ಗೆ ಏರಿಕೆಯಾಗಿದೆ. ಇದು ನಮ್ಮ‌ ಸರ್ಕಾರದ ಬದ್ದತೆ ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ.

ಹೆಚ್ಚುವರಿ ಸಕ್ಕರೆಯನ್ನು ಸಮತೋಲನಗೊಳಿಸಲು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. 2013-14 ರಿಂದ 2024-25 ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು ಓಎಂಸಿಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ.

2013-14 ರಿಂದ, ಕಬ್ಬು ಆಧಾರಿತ ಡಿಸ್ಟಿಲರಿಗಳು ಮತ್ತು ಧಾನ್ಯ ಆಧಾರಿತ ಡಿಸ್ಟಿಲರಿಗಳು 2.18 ಲಕ್ಷ ಕೋಟಿಗಿಂತ ಹೆಚ್ಚು ಆದಾಯವನ್ನು ಗಳಿಸಿವೆ, ಇದರಲ್ಲಿ ಕಬ್ಬು ಆಧಾರಿತ ಡಿಸ್ಟಿಲರಿಗಳು (26.10.2025 ರಂತೆ) OMC ಗಳಿಗೆ ಎಥೆನಾಲ್ ಮಾರಾಟದಿಂದ 1.29 ಲಕ್ಷ ಕೋಟಿ ಗಳಿಸಿವೆ, ಇದು ಕಬ್ಬಿನ ಗಿರಣಿಗಳಿಗೆ ರೈತರ ಕಬ್ಬಿನ ಬಾಕಿಯನ್ನು ಸಕಾಲಿಕವಾಗಿ ಪಾವತಿಸಲು ಸಹಾಯ ಮಾಡಿದೆ. ರಫ್ತುಗಳನ್ನು ಸಕಾಲಿಕವಾಗಿ ಅನುಮತಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕಬ್ಬು ಬೆಳೆಗಾರರ ಹೋರಾಟ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿದ್ದೇನು?

ಸಕ್ಕರೆ ಬೆಲೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ನಮ್ಮ ಸರ್ಕಾರದ ಬದ್ದತೆ. ಕಳೆದ 10 ವರ್ಷದ ಅವಧಿಯಲ್ಲಿ 10 LMT ಗೆ ಅವಕಾಶ ನೀಡಲಾಗಿತ್ತು, ಈ ವರ್ಷ 15 LMT ಗೆ ಅವಕಾಶ ನೀಡಲಾಗುತ್ತಿದೆ. ಇಡೀ ದೇಶಕ್ಕೆ ‌ಒಂದು ನೀತಿಯನ್ನು ಜಾರಿ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ನೀವು ರಾಜ್ಯದಲ್ಲಿ ಬೆಳೆಗಾರರ ಬೇಡಿಕೆಯ ಪ್ರಕಾರವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿ ಕೇವಲ ಸುಳ್ಳು ಹೇಳಿಕೊಂಡು, ಸುಳ್ಳಿನ ಮನೆಯನ್ನು ಕರ್ನಾಟಕದಲ್ಲಿ ನಿರ್ಮಿಸಿಕೊಂಡು ಜನರನ್ನು ರೈತರನ್ನು ಬೀದಿಗೆ ತಳ್ಳುವ ನೀಚ ಕೆಲಸ ಮಾಡಿದ್ದೀರಾ ಎಂದು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್‌ ದುರಾಡಳಿತದ ಪರಮಾವಧಿ-ರೈತರು ಬೀದಿಗೆ

ಅಂದು ವಿರೋಧ ಪಕ್ಷದಲ್ಲಿದ್ದಾಗ ಬೆಲೆ ನಿಗದಿ ಮಾಡಿ, ಆವರ್ತ ನಿಧಿ ಸ್ಥಾಪನೆ ಮಾಡಿ ಎಂದು ಸರ್ಕಾರಗಳಿಗೆ ಬಿಟ್ಟಿ ಸಲಹೆ ನೀಡಿದ ನೀವು, ಇದೀಗ ಅಧಿಕಾರದಲ್ಲಿರುವಾಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವುದೇ ನಿಮ್ಮ ಮೂಲಭೂತ ಕೆಲಸವಾಗಿದೆಯಾ ಸಿದ್ದರಾಮಯ್ಯನವರೇ? ಗ್ಯಾರಂಟಿಗಳು ಮಾತ್ರನೇ ನಿಮ್ಮ ಸರ್ಕಾರದ ಆಡಳಿತವಾಗಿದೆ ಹೊರೆತು ರಾಜ್ಯದ ಅಭಿವೃದ್ಧಿಯಲ್ಲ. ನಿಮ್ಮ ದುರಾಡಳಿತದ ಪರಮಾವಧಿಯಿಂದಲೇ ಇಂದು ರೈತರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.