ಮಾಲೂರು ಕ್ಷೇತ್ರದ ಮರು ಮತ ಎಣಿಕೆಗೆ ಸಜ್ಜಾದ ಕೋಲಾರ: ಹಾಲಿ, ಮಾಜಿ ಶಾಸಕರಲ್ಲಿ ಢವಢವ
ಸುಪ್ರೀಂ ಕೋರ್ಟ್ ಆದೇಶದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಈ ಮತ ಎಣಿಕೆ, ಇವಿಎಂ ಭವಿಷ್ಯ ಹಾಗೂ ಕಾಂಗ್ರೆಸ್ ಮತಚೋರಿ ಆರೋಪಗಳಿಗೆ ಉತ್ತರ ನೀಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಮರು ಎಣಿಕೆ ಸದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕೋಲಾರ, ನವೆಂಬರ್ 07: ಇದೇ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಎಣಿಕೆ (votes recount) ಸುಪ್ರೀಂ ಕೋರ್ಟ್ನ ಆದೇಶದ ಹಿನ್ನೆಲೆಯಲ್ಲಿ ನಡೆಯುತ್ತಿದ್ದು, ದೇಶದಲ್ಲೇ ಸದ್ದು ಮಾಡುತ್ತಿದೆ. ಇದೊಂದು ಚುಣಾವಣೆ ಇವಿಎಂ ಭವಿಷ್ಯ, ಕಾಂಗ್ರೆಸ್ನ (congress) ಮತಚೋರಿ ಹಾಗೂ ಕಾಂಗ್ರೆಸ್ ಮತ ಚೋರಿ ವಿರುದ್ದ ಬಿಜೆಪಿಗೆ ಬಲವಾದ ಅಸ್ತ್ರವಾಗಲಿದೆ. ಹಾಗಾದರೆ ಸದ್ಯ ಮರು ಎಣೆಕೆಗೆ ಏನೆಲ್ಲಾ ಸಿದ್ಧತೆ ನಡೆದಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಎಣಿಕೆಗೆ ಆಗ್ರಹಿಸಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಮಂಜುನಾಥಗೌಡ ಹೈಕೋರ್ಟ್ ಮೊರೆಹೋಗಿದ್ದರು. ಎರಡುವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ಮರು ಎಣಿಕೆಗೆ ಆದೇಶಿಸಿತ್ತು. ಅಲ್ಲದೆ ಈ ವೇಳೆ ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಮರು ಎಣಿಕೆವರೆಗೆ ಅಸಿಂಧುಗೊಳಿಸಿ ಆದೇಶಿಸಿತ್ತು. ನಂತರ ಅಸಿಂಧು ಆದೇಶವನ್ನು ಪ್ರಶ್ನಿಸಿ ಹಾಲಿ ಶಾಸಕ ನಂಜೇಗೌಡ ಸುಪ್ರೀಂ ಮೊರೆ ಹೋಗಿದ್ದರು. ಸದ್ಯ ಸುಪ್ರೀಂ ಅಸಿಂಧು ಆದೇಶಕ್ಕೆ ತಡೆಕೊಟ್ಟು ಮರು ಎಣಿಕೆಗೆ ಆದೇಶಿಸಿತ್ತು.
ಇದನ್ನೂ ಓದಿ: ಮಾಲೂರು ಕ್ಷೇತ್ರದ ಮರು ಮತಎಣಿಕೆಗೆ ದಿನಾಂಕ ನಿಗದಿಪಡಿಸಿದ ಚುನಾವಣಾ ಆಯೋಗ!
ಚುನಾವಣಾ ಆಯೋಗ ನವೆಂಬರ್ 11ರಂದು ಮರು ಎಣಿಕೆ ಕಾರ್ಯಕ್ಕೆ ದಿನಾಂಕ ನಿಗದಿ ಮಾಡಿದೆ. ಸದ್ಯ ಮರು ಎಣಿಕೆ ಕಾರ್ಯಕ್ಕೆ ಕೋಲಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಆರ್.ರವಿ ಅವರು ಕೋಲಾರ ಹೊರವಲಯದ ಕೃಷಿ ವಿಶ್ವವಿದ್ಯಾಲಯದ ಕಾಲೇಜು ಆವರಣದಲ್ಲಿ ಎಣಿಕೆ ಕಾರ್ಯಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಮರುಎಣಿಕೆ ಕಾರ್ಯದ ಸಿಬ್ಬಂದಿಗೂ ತರಬೇತಿ ನೀಡಿ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಮರು ಎಣಿಕೆ ಕಾರ್ಯಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಚುನಾವಣಾಧಿಕಾರಿ ಹಾಗೂ ಕೋಲಾರ ಎಸ್ಪಿ ನಿಖಿಲ್ ಪರಿಶೀಲನೆ ಮಾಡಿದ್ದಾರೆ.
ಮರು ಎಣಿಕೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ
ಇನ್ನು ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ದೇಶದಲ್ಲೇ ಮೊದಲ ಬಾರಿಗೆ ಮರುಎಣಿಕೆ ಕಾರ್ಯ ನಡೆಯುತ್ತಿದ್ದು, ಈ ಮರು ಎಣಿಕೆ ಕಾರ್ಯವು ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ದೇಶದಲ್ಲಿ ಕಾಂಗ್ರೆಸ್ ಆರಂಭಿಸಿರುವ ಮತ ಚೋರಿ ಅಭಿಯಾನದ ವಿರುದ್ದ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಇಲ್ಲಿನ ಮತ ಎಣಿಕೆಯಲ್ಲಿ ಏನಾದರೂ ಬದಲಾವಣೆಗಳು ಆದಲ್ಲಿ ಬಿಜೆಪಿಗೆ ಕಾಂಗ್ರೆಸ್ ವಿರುದ್ದ ಪ್ರಬಲ ಅಸ್ತ್ರ ಸಿಕ್ಕಂತಾಗಲಿದೆ.
ಕಾಂಗ್ರೆಸ್ ಇವಿಎಂ ವಿರುದ್ದ ಮಾಡುತ್ತಿರುವ ಆರೋಪಕ್ಕೂ ಈ ಮರುಎಣಿಕೆ ಉತ್ತರವನ್ನು ನೀಡಲಿದೆ. ಒಂದು ವೇಳೆ ಮರುಎಣಿಕೆಯಲ್ಲಿ ಇದೇ ಫಲಿತಾಂಶ ಬಂದರೆ ಯಾವುದೇ ಬದಲಾವಣೆಗಳಿರುವುದಿಲ್ಲ. ಇನ್ನು ಮರು ಎಣಿಕೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕಿರುವ ಹಿನ್ನೆಲೆ ಮರು ಎಣಿಕೆ ಕಾರ್ಯವು ಗುಪ್ತವಾಗಿಯೇ ನಡೆಯಲಿದೆ. ಯಾವುದೇ ಕಾರಣಕ್ಕೂ ಯಾರೂ ಮರು ಎಣಿಕೆಯ ಫಲಿತಾಂಶ ಪ್ರಕಟ ಮಾಡುವಂತ್ತಿಲ್ಲ ಎಂದು ಸುಪ್ರೀಂ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಪರಾಜಿತ ಅಭ್ಯರ್ಥಿಯಿಂದ ಚುನಾವಣೆ ಆಯೋಗಕ್ಕೆ ಮಹತ್ವದ ಪತ್ರ
ಮರುಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಎರಡು ಸ್ಟ್ರಾಂಗ್ ರೂಮ್ಗಳಲ್ಲಿ ಇವಿಎಂ ಗಳನ್ನು ಇರಿಸಲಾಗುವುದು. ಒಂದು ಎಣಿಕಾ ಕೇಂದ್ರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಒಟ್ಟು 14 ಟೇಬಲ್ ಗಳಲ್ಲಿ 18 ಸುತ್ತಿನ ಮತ ಎಣಿಕೆ ಕಾರ್ಯ ನಡೆಯಲಿದೆ. ಮರು ಮತ ಎಣಿಕೆ ಹಿನ್ನೆಲೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ಯಾವುದೇ ಅಹಿತರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಒಟ್ಟಾರೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಹಿನ್ನೆಲೆ ಮಾಲೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವಿನ ಎದೆಬಡಿತ ಜೋರಾಗಿದ್ದು, ಎಣಿಕೆಯ ಫಲಿತಾಂಶ ಇಡೀ ದೇಶದ ಗಮನ ಸೆಳೆಯಲಿರೋದಂತು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




