ಸಿದ್ದರಾಮಯ್ಯನವರ ಸಲಹೆಗಾರರಾಗಿ ಚುನಾವಣಾ ಚಾಣಾಕ್ಷ ಸುನೀಲ್ ಕನುಗೋಳ್ ನೇಮಕ: ಯಾರು ಇವರು?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 06, 2023 | 6:11 PM

ಚುನಾವಣಾ ಚಾಣಾಕ್ಷ ಸುನೀಲ್ ಕನುಗೋಲು ಅವರನ್ನು ಸಿಎಂ ಸಿದ್ದರಾಮಯ್ಯನವರು ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಯಾರು ಈ ಸುನೀಲ್ ಕನುಗೋಲು? ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವಿಗೆ ಇವರ ಪಾತ್ರವೇನು? ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಸಿದ್ದರಾಮಯ್ಯನವರ ಸಲಹೆಗಾರರಾಗಿ ಚುನಾವಣಾ ಚಾಣಾಕ್ಷ ಸುನೀಲ್ ಕನುಗೋಳ್ ನೇಮಕ: ಯಾರು ಇವರು?
ಸಿದ್ದರಾಮಯ್ಯ,ಸುನೀಲ್ ಕನುಗೋಲು
Follow us on

ಬೆಂಗಳೂರು: ಕಾಂಗ್ರೆಸ್‌ನ (Congress0 ಚುನಾವಣಾ ಚಾಣಾಕ್ಷ, ಬಳ್ಳಾರಿ ಮೂಲದ ಸುನೀಲ್ ಕನುಗೋಳ್ (Sunil Kanugolu) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ಕಾಂಗ್ರೆಸ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದ ಕನುಗೋಲು ಚುನಾವಣಾ ತಂತ್ರಗಾರಿಕೆ ಹೆಣೆದಿದ್ದರು. ಜತೆಗೆ ಪೇಸಿಎಂನಂತಹ ಅಭಿಯಾನಗಳ ಮೂಲಕ ಹಿಂದಿನ ಸರ್ಕಾರ ಭ್ರಷ್ಟ ಸರ್ಕಾರ ಎಂದು ಜನರ ಮುಂದೆ ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು. ತನ್ಮೂಲಕ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿದ್ದರು. ಇದೀಗ ಸಿದ್ದರಾಮಯ್ಯ ಅವರು, ಕನುಗೋಲು ಅವರನ್ನೇ ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಮಾಸ್ಟರ್‌ ಮೈಂಡ್‌ ಸುನಿಲ್ ಕುನಗೋಳು: ಯಾರು ಈ ಸ್ಟ್ರ್ಯಾಟಜಿ ಸ್ಟಾರ್?

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಸುನಿಲ್ ಕನಗೋಲು ಪಾತ್ರ

ಕಾಂಗ್ರೆಸ್‌ ಮುಳುಗುತ್ತಿರುವ ಹಡಗು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿದ್ದ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಸರಕಾರದ ತಪ್ಪು ನಡೆ, ವೈಫಲ್ಯಗಳ ವಿರುದ್ಧ ಜನಾಭಿಪ್ರಾಯವನ್ನು ಗಟ್ಟಿಗೊಳಿಸಿ, ಕಾಂಗ್ರೆಸ್‌ ಪಕ್ಷವೇ ಪರ್ಯಾಯ ಮತ್ತು ಪರಿಹಾರ ಎಂಬ ಭರವಸೆ ಮೂಡಿಸುವಲ್ಲಿ ತೆರೆಮರೆಯಲ್ಲಿ ಸಾಕಷ್ಟು ದುಡಿಮೆ ಇದೆ. ಜನರ ಮನಃಸ್ಥಿತಿ ಅರಿತು, ಸ್ಪಂದನೆಯ ಭರವಸೆ ಮೂಲಕ ರಾಜಧಾನಿ ಬೆಂಗಳೂರು ಒಳಗೊಂಡು ರಾಜ್ಯಾದ್ಯಂತ ಕಾಂಗ್ರೆಸ್‌ ಪರವಾದ ಅಲೆ ಎಬ್ಬಿಸಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಚುನಾವಣಾ ತಂತ್ರಗಾರಿಕೆಯ ಹಿಂದಿರುವ ಶಕ್ತಿಯೇ ಸುನಿಲ್‌ ಕನುಗೋಲು.

ಕಾಂಗ್ರೆಸ್‌ ಸ್ಥಳೀಯ ನಾಯಕರ ಮಾಸ್‌ ಲೀಡರ್‌ಶಿಪ್‌ ಮತ್ತು ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಮತಗಳನ್ನು ತರಿಸಿಕೊಟ್ಟದ್ದಂತೂ ಸುಳ್ಳಲ್ಲ. ಅದಲ್ಲದೇ, ಬಿಜೆಪಿ ವಿರುದ್ಧದ 40 ಪರ್ಸೆಂಟ್‌ ಕಮಿಷನ್‌ ಅಸ್ತ್ರ, ʻಪೇ ಸಿಎಂʼ ಪೋಸ್ಟರ್‌ಗಳು ಬಿಜೆಪಿ ಪಾಳಯವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದವು. ಈ ಮೂಲಕ ಸಾಮಾನ್ಯ ಜನರಿಗೂ ಬಿಜೆಪಿ ಭ್ರಷ್ಟ ಪಕ್ಷ ಎಂಬ ಅರಿವು ಮೂಡುವಂತೆ ಮಾಡಿದ್ದವು. ಇಷ್ಟು ಪ್ರಯೋಗಗಳನ್ನು ಕಾಂಗ್ರೆಸ್‌ ತನ್ನ ಮೇಲೆ ಮಾಡುತ್ತಿದ್ದರೂ ಇದಾವುದರ ಅರಿವೇ ಇಲ್ಲದಂತೆ, ಇದೆಲ್ಲವೂ ತನ್ನ ಮೇಲೆ ಮಾಡುತ್ತಿರುವ ಆರೋಪಗಳೇ ಅಲ್ಲವೇನೋ ಎನ್ನುವ ಭ್ರಮೆಯಲ್ಲಿದ್ದ ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರ ಈ ದೊಡ್ಡ ರೀತಿಯ ಆರೋಪಗಳಿಗೆ ಲಗಾಮು ಹಾಕುವ ಗೋಜಿಗೇ ಹೋಗದಿದ್ದದ್ದು ಕಾಂಗ್ರೆಸ್‌ ಪಾಲಿಗೆ ದೊಡ್ಡ ಮಟ್ಟದ ಬಲ ತಂದುಕೊಟ್ಟಿತ್ತು.

ಯಾರು ಈ ಸುನೀಲ್ ಕನಗೋಲು

ಭಾರತದ ಮುಂಚೂಣಿ ರಾಜಕೀಯ ತಂತ್ರಗಾರರ ಪೈಕಿ ಒಬ್ಬರಾಗಿರುವ ಸುನಿಲ್‌ ಕನುಗೋಳ್ ಕರ್ನಾಟಕದ ಬಳ್ಳಾರಿ ಮೂಲದವರಾಗಿದ್ದು, ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಗುಜರಾತ್‌ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರರಾಗಿ ಕರ್ತವ್ಯ ನಿರ್ವಹಿಸಿದ್ದವರು.
2014 ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ತಂತ್ರಗಾರಿಕಾ ತಂಡದಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿದ್ದ ಸುನಿಲ್‌ ಕನುಗೋಳ್, 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019 ರ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನ ಎಂ. ಕೆ ಸ್ಟಾಲಿನ್‌ ಅವರ ರಾಜಕೀಯ ತಂತ್ರಗಾರರಾಗಿದ್ದ ವೇಳೆ ಅವರು ನಡೆಸಿದ್ದ ʻನಮಕ್ಕು ನಾಮೆʼ ಎಂಬ ಹೆಸರಿನ ಪ್ರಚಾರ ಆಂದೋಲನ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು.

ಕೆಲವೊಂದಷ್ಟು ಆಂತರಿಕ ಕಾರಣಗಳಿಂದಾಗಿ ಬಿಜೆಪಿ ತೊರೆದು ʻಕೈʼ ಪಾಳಯದೊಂದಿಗೆ ಕೈಜೋಡಿಸಿದ್ದ ಕನಗೋಲು ಅವರಿಂದಾಗಿ ಕಾಂಗ್ರೆಸ್‌ ಭರಪೂರ ಲಾಭ ಪಡೆದುಕೊಂಡಿತು. ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಜೊತೆ ಸೇರಿದ್ದು ಬಿಜೆಪಿ ಉನ್ನತ ಮಟ್ಟದ ನಾಯಕರಿಗೇ ಶಾಕ್‌ ನೀಡಿತ್ತು ಎಂಬುದಂತೂ ಸತ್ಯ.

ತಮ್ಮ ಹೋಂ ಗ್ರೌಂಡ್‌ ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಟ್ರಾಟಜಿ ಟೀಂನ ನೇತೃತ್ವ ಹಿಡಿದ ಮೇಲೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವಲ್ಲಿ ಅವರೇ ಪ್ರಮುಖ ಪಾತ್ರ ವಹಿಸಿದ್ದರು ಎನ್ನಬಹುದು. ಅವರ ಉದ್ದೇಶವಂತೂ ನೇರವಾಗಿದ್ದಂತಿತ್ತು… ತನ್ನನ್ನು ಮಟ್ಟ ಹಾಕಲು ಪ್ರಯತ್ನಿಸಿದವರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ಮತ್ತು ಪಕ್ಷದಲ್ಲಿ ತಾನು ಗುರುತಿಸಿಕೊಳ್ಳುವಂತೆ ಮಾಡಬೇಕು ಎಂಬುದು. ಈ ಅವರ ಹಠವೂ ರಾಜ್ಯದಲ್ಲಿ ಕಮಲ ಪತನಕ್ಕೆ ನಾಂದಿ ಹಾಡಿತು. ಇದಕ್ಕಾಗಿಯೇ ಅವರು ಮೋದಿ ಅಲೆಯ ಮಧ್ಯೆಯೂ ಬಿಜೆಪಿಯನ್ನು ಕಟ್ಟಿ ಹಾಕುವಲ್ಲಿ ಇನ್ನಿಲ್ಲದ ಶ್ರಮ ಹಾಕಿದ್ದರು.

ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಬೆಂಬಲದಿಂದಾಗಿ ಕಾಂಗ್ರೆಸ್‌ ಸೇರಿದ್ದ ಸುನೀಲ್‌ ಕನುಗೋಳ್ ಮತ್ತು ತಮ್ಮ ರಾಜಕೀಯ ತಜ್ಞರನ್ನೊಳಗೊಂಡ ತಂಡಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೇರಿಸುವ ಮಹತ್ವದ ಜವಾಬ್ದಾರಿಯನ್ನು ನೀಡಲಾಯ್ತು. ಈ ವೇಳೆಗೆ ಸಿದ್ದರಾಮಯ್ಯ ಬಣ-ಡಿಕೆ ಶಿವಕುಮಾರ್ ಬಣ ಎಂದು ಹರಿದು ಹಂಚಿಹೋಗಿದ್ದ ರಾಜ್ಯ ಕಾಂಗ್ರೆಸ್‌ನ್ನು ಒಂದು ಮಾಡಿದ ಕನಗೋಲು ಟೀಂ ಅಲ್ಲೇ ಕರ್ನಾಟಕವನ್ನು ಗೆಲ್ಲುವ ಮೊದಲ ಹೆಜ್ಜೆಗೆ ಮುನ್ನುಡಿಯಿಟ್ಟಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೇರಿಸಲೇಬೇಕೆಂಬ ಪಣ ತೊಟ್ಟಿದ್ದ ಇವರ ತಂಡ ಜವಾಬ್ದಾರಿ ಸಿಕ್ಕಿದಂದಿನಿಂದ ಪ್ರತಿ ದಿನವೂ ಬಿಡುವಿಲ್ಲದಂತೆ ತಮ್ಮನ್ನು ತೊಡಗಿಸಿಕೊಂಡಿತ್ತು. ಕರ್ನಾಟಕದ ಪ್ರತಿ ಮಂದಿಯನ್ನು ತಲುಪುವಂತಹಾ ಪ್ರಣಾಳಿಕೆಯನ್ನೂ ಸಿದ್ಧಪಡಿಸಿತ್ತು. ಕನಗೋಲು ಮತ್ತವರ ತಂಡ ವಾರದ 7 ದಿನವೂ ದುಡಿದು, ದಿನವೊಂದಕ್ಕೆ 20 ಗಂಟೆಗಳಷ್ಟು ಕಾಲ ಶ್ರಮ ವಹಿಸಿದ್ದರ ಪರಿಣಾಮವೇ ಈಗ ಕಾಂಗ್ರೆಸ್​ಗೆ 135 ಸೀಟು ಬಂದಿದೆ. ಈ ದೈತ್ಯ ವಿಜಯದ ಮೂಲಕ ಕಾಂಗ್ರೆಸ್‌ನಲ್ಲಿ ಕನಗೋಲು ಮತ್ತು ತಂಡ ತನ್ನದೇ ಆದ ಛಾಪು ಮೂಡಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೂ ಮೊದಲು ನಡೆಯಲಿರುವ ತೆಲಂಗಾಣ, ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ʻಕನಗೋಲು ಆಂಡ್‌ ಟೀಂʼ ಬಲ ತುಂಬಲಿದೆ.

Published On - 8:29 am, Thu, 1 June 23