ಪರಿಷತ್ ಚುನಾವಣೆ: ಸೂರಜ್ ರೇವಣ್ಣ ಹಾಗೂ ಬೆಂಗಳೂರು ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಹೊಂದಿರುವ ಆಸ್ತಿ ಎಷ್ಟು?!
ಜೆಡಿಎಸ್ ಅಭ್ಯರ್ಥಿ ಹಾಗೂ ಹೆಚ್ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ, ಬೆಂಗಳೂರು ನಗರ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್, ಬೆಂಗಳೂರು ನಗರ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಆಸ್ತಿ ವಿವರಗಳು ಲಭ್ಯವಾಗಿವೆ.
ಬೆಂಗಳೂರು: ವಿಧಾನಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. 10 ಸ್ಥಾನಗಳಿಗೆ ಪರಿಷತ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಚುನಾವಣೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದೀಗ, ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹಾಗೂ ಹೆಚ್ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ, ಬೆಂಗಳೂರು ನಗರ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್, ಬೆಂಗಳೂರು ನಗರ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಆಸ್ತಿ ವಿವರಗಳು ಲಭ್ಯವಾಗಿವೆ.
ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಆಸ್ತಿ ವಿವರ ಬೆಂಗಳೂರು ನಗರ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಆಸ್ತಿ ವಿವರ ಸಲ್ಲಿಸಿದ್ದಾರೆ. 1,643 ಕೋಟಿ ರೂ. ಸ್ಥಿರಾಸ್ತಿ ಹಾಗೂ 97 ಕೋಟಿ ರೂ. ಚರಾಸ್ತಿ ಇರುವ ಬಗ್ಗೆ ಉಲ್ಲೇಖಿಸಲಾಗಿದೆ. ಒಟ್ಟು ಮೂರು ಕ್ರಿಮಿನಲ್ ಮೊಕದ್ದಮೆಗಳು ಪೆಂಡಿಂಗ್ ಇವೆ ಎಂಬ ಬಗ್ಗೆ ತಿಳಿಸಿದ್ದಾರೆ. 23 ಬ್ಯಾಂಕ್ ಖಾತೆ, ₹58 ಕೋಟಿ ಲೋನ್ ಹೊಂದಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ₹2 ಕೋಟಿ 99 ಲಕ್ಷ ಬೆಲೆಬಾಳುವ ಮೂರು ಕಾರುಗಳಿವೆ.
₹1 ಕೋಟಿ 11 ಲಕ್ಷ ಬೆಲೆಬಾಳುವ ವಾಚ್ ಹೊಂದಿದ್ದಾರೆ. ಅಂದಾಜು 4.5 ಕೆಜಿ ಚಿನ್ನಾಭರಣ ಹೊಂದಿದ್ದಾರೆ. ಯೂಸುಫ್ ಬಳಿ ಒಂದೊಂದು ಲಕ್ಷದ ನಾಲ್ಕು ಮೊಬೈಲ್ ಇದೆ. 48 ಕೋಟಿ ರೂ. ಬೆಲೆಬಾಳುವ ಒಟ್ಟು ಮೂರು ಕೃಷಿ ಭೂಮಿ ಹಾಗೂ ₹3 ಕೋಟಿ ಬೆಲೆ ಬಾಳುವ ಮನೆ ಹೊಂದಿದ್ದಾರೆ.
ಬೆಂಗಳೂರು ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಆಸ್ತಿ ವಿವರ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಸ್ಥಿರಾಸ್ತಿ ₹34.68 ಕೋಟಿ, ಚರಾಸ್ತಿ ₹1.98 ಕೋಟಿ ರೂಪಾಯಿ ಆಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಗೋಪಿನಾಥ್ ರೆಡ್ಡಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಗೋಪಿನಾಥ್ ರೆಡ್ಡಿ ವಾರ್ಷಿಕ ಆದಾಯ 44,660 ರೂಪಾಯಿ ಆಗಿದೆ. ಪತ್ನಿ ಎಸ್.ಕೆ. ಗಾಯತ್ರಿ ವಾರ್ಷಿಕ ಆದಾಯ 13,26,870 ರೂ. ಆಗಿದೆ. 3.25 ಲಕ್ಷ ನಗದು ಹೊಂದಿರುವ ಗೋಪಿನಾಥ್ ರೆಡ್ಡಿ ತಮ್ಮ ಬ್ಯಾಂಕ್ ಖಾತೆಯಲ್ಲಿ ₹39,66,563 ಹೊಂದಿದ್ದಾರೆ.
ಪತ್ನಿ ಎಸ್.ಕೆ. ಗಾಯತ್ರಿ ಬ್ಯಾಂಕ್ ಖಾತೆಯಲ್ಲಿ ₹26,61,266 ಇದೆ. ಪತ್ನಿಯ ಹೆಸರಿನಲ್ಲಿ 1.29 ಕೋಟಿ ರೂಪಾಯಿ ಸಾಲ ಇದೆ. ಕುಟುಂಬದ ಹೆಸರಿನಲ್ಲಿ 39.90 ಲಕ್ಷ ರೂಪಾಯಿ ಸಾಲ ಇರುವುದಾಗಿ ತಿಳಿಸಲಾಗಿದೆ. ಒಟ್ಟು 43 ಲಕ್ಷ ರೂ. ಮೌಲ್ಯದ ಮೂರು ವಾಹನಗಳಿವೆ. ಗೋಪಿನಾಥ್ ರೆಡ್ಡಿ ಬಳಿ ₹23.85 ಲಕ್ಷ ಮೊತ್ತದ ಚಿನ್ನಾಭರಣ ಇದೆ. 13 ಸಾವಿರ ರೂಪಾಯಿ ಮೌಲ್ಯದ 230 ಗ್ರಾಂ ಬೆಳ್ಳಿ ವಸ್ತು ಇರುವುದಾಗಿ ಮಾಹಿತಿ ನೀಡಲಾಗಿದೆ. ಪತ್ನಿ ಬಳಿ 47.25 ಲಕ್ಷ ರೂ. ಮೌಲ್ಯದ 1,050 ಗ್ರಾಂ ಚಿನ್ನ ಹಾಗೂ 6.70 ಲಕ್ಷ ರೂಪಾಯಿ ಮೌಲ್ಯದ 10 ಕೆಜಿ ಬೆಳ್ಳಿ ಇದೆ.
ಹಾಸನ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಆಸ್ತಿ ವಿವರ ಡಾ. ಸೂರಜ್ ರೇವಣ್ಣ ಸ್ಥಿರಾಸ್ತಿ 3,53,16,463 ರೂಪಾಯಿ ಆಗಿದೆ. ಚರಾಸ್ತಿ 61 ಕೋಟಿ 68 ಲಕ್ಷದ 22 ಸಾವಿರ 761 ರೂ. ಆಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಸೂರಜ್, ಹಾಸನದ ಪರಿಷತ್ ಚುನಾವಣೆ ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆ. ಹೆಚ್.ಡಿ. ದೇವೇಗೌಡ, ಅಜ್ಜಿ ಚೆನ್ನಮ್ಮ, ಅತ್ತೆಯರು, ಅಪ್ಪ, ಅಮ್ಮನಿಂದ ಪಡೆದಿರುವ ಸಾಲ 14,97,74,989 ರೂ. ಆಗಿದೆ. ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಬಳಿ 1 ಕೆಜಿ ಚಿನ್ನಾಭರಣ ಇದೆ. 18 ಕೆಜಿ ಬೆಳ್ಳಿ, 1 ಟ್ರ್ಯಾಕ್ಟರ್, 36 ಹಸು, 6 ಎತ್ತು, 8 ಎಮ್ಮೆ ಇದೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವ ಅನುಮಾನವಿದೆ: ಜಿ ಪರಮೇಶ್ವರ್
ಇದನ್ನೂ ಓದಿ: ಪರಿಷತ್ ಚುನಾವಣೆ: ಬೆಳಗಾವಿ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ