Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಇಲಾಖೆಯಲ್ಲಿ ಕಳಂಕಿತ ಆರೋಪ: ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಮುಂದಾದ ಸಚಿವ ದಿನೇಶ್ ಗುಂಡೂರಾವ್

ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಾರ್ಯತಂತ್ರ ರೂಪಿಸಿದ್ದು, ಆರೋಗ್ಯ ಹಾಗೂ ಆಯುಷ್ ಇಲಾಖೆಗಳಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ. ಆ ಮೂಲಕ ದೊಡ್ಡ ದೊಡ್ಡ ಮಿಕಗಳಿಗೆ ಗೇಟ್ ಪಾಸ್ ಕೊಡಿಸಲು ಹೊರಟಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಕಳಂಕಿತ ಆರೋಪ: ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಮುಂದಾದ ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 08, 2023 | 5:52 PM

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಕಳೆದ ಸರ್ಕಾರದ ಅವಧಿಯಲ್ಲಾದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಜೊತೆಗೆ, ಕಳಂಕಿತ ಆರೋಪ ಹೊಂದಿರುವ ಅಧಿಕಾರಿಗಳ ಮೇಲೂ ಸಚಿವ ದಿನೇಶ್ ಗುಂಡೂರಾವ್ (dinesh gundurao) ಕಂಗೆಣ್ಣು ಬೀರಿದ್ದಾರೆ. ಆರೋಗ್ಯ ಹಾಗೂ ಆಯುಷ್ ಇಲಾಖೆಗಳಲ್ಲಿ ಮೇಜರ್ ಸರ್ಜರಿಗೆ ಕೈ ಹಾಕಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೊಡ್ಡ ಮಿಕಗಳಿಗೆ ಗೇಟ್ ಪಾಸ್ ಕೊಡಿಸುತ್ತಿದ್ದಾರೆ.

ಕೋವಿಡ್ ಪ್ರಕರಣಗಳನ್ನ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ಇದೀಗ ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಾರ್ಯತಂತ್ರ ರೂಪಿಸಿದ್ದಾರೆ. ಆಯುಷ್ ಇಲಾಖೆಯಲ್ಲಿ ನಕಲಿ ವೈದ್ಯರ ಸೃಷ್ಟಿಗೆ ಕಾರಣರಾದವರ ಬುಡವನ್ನ ಕಿತ್ತೆಸೆಯಲು ಮುಂದಾಗಿರುವ ಸಚಿವರು, ಈ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ನೂರಾರು ನಕಲಿ ವೈದ್ಯರಿಗೆ ಆಯುಷ್ ಇಲಾಖೆಯಿಂದ ನಕಲಿ ಸರ್ಟಿಫಿಕೇಟ್ ಕೊಟ್ಟಿರುವ ಬಗ್ಗೆ ಆಂತರಿಕ ವರದಿ ತರಿಸಿಕೊಂಡಿರುವ ಸಚಿವರು, ಒಬ್ಬೊಬ್ಬ ಅಧಿಕಾರಿಗಳಿಗೆ ಗೇಟ್ ಪಾಸ್ ಕೊಡಿಸಿದ್ದಾರೆ.

ಈ ಹಿಂದೆ ಮೂರು ನಾಲ್ಕು ಬಾರಿ ಅಮಾನತ್ತಾಗಿದ್ದ, ಆಯುರ್ವೇದದ ಹೆಸರಿನಲ್ಲಿ ನಕಲಿ ವೈದ್ಯರನ್ನ ಸೃಷ್ಟಿ ಸಿದ್ದ ಆರೋಪ ಹೊತ್ತಿರುವ ಹಿರಿಯ ಆಯುಷ್ ವೈದ್ಯಾಧಿಕಾರಿ ವೆಂಕಟರಾಮಯ್ಯ ಅವರನ್ನ ಅಮಾನತ್ತುಗೊಳಿಸಲಾಗಿದೆ. 13 ಪ್ರಕರಣಗಳಲ್ಲಿ ಡಾ. ವೆಂಕಟರಾಮಯ್ಯ ಅವರ ಮೇಲೆ ದೋಷಾರೋಪಣೆಯಿದ್ದು, ಇಲಾಖೆ ತನಿಖೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ: ಆಯುಷ್ ಇಲಾಖೆ ಮುಖ್ಯ ಆಡಳಿತಾಧಿಕಾರಿಗೆ ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಆರೋಪ: ಹಿರಿಯ ವೈದ್ಯಾಧಿಕಾರಿ ಅಮಾನತು

ಇದೀಗ ಹಿರಿಯ ವೈದ್ಯಾಧಿಕಾರಿ ಡಾ. ವೆಂಕಟರಮಣಯ್ಯ ವಿರುದ್ದ ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಆರೋಪ ಕೇಳಿಬಂದ ಹಿನ್ನೆಲೆ, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತ್ತು ಮಾಡಿ ಆದೇಶಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 2021 ರ ನಿಯಮ 3(1) (i) (ii) (iii) ಉಲ್ಲಂಘಿಸಿರುವುದರಿಂದ ಕರ್ನಾಟಕ ನಾಗರಿಕ ಸೇವಾ 1957ರ ನಿಯಮ 10(3) ಪ್ರಕಾರ ಅಧಿಕಾರವನ್ನು ಚಲಾಯಿಸಿ, ಡಾ. ವೆಂಕಟರಾಮಯ್ಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಆಯುಷ್ ಇಲಾಖೆ ಮುಖ್ಯ ಆಡಳಿತಾಧಿಕಾರಿ ಎಸ್​ ಶೈಲಜ ಎನ್ನುವವರು ಫೆಬ್ರವರಿ 6ರಂದು ಮಧ್ಯಾಹ್ನ ಸುಮಾರು 4.30 ವೇಳೆಯಲ್ಲಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ ಡಾ. ವೆಂಕಟರಾಮಯ್ಯ ಕೊಲೆ ಬೆದರಿಕೆ ಹಾಕಿ ಬೈದು ಹೀಯಾಳಿಸಿ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇಂತಹ ಬೆದರಿಕೆಗಳಿಂದ ಕೆಲಸ ಮಾಡಲು ತೊಂದರೆ ಆಗುತ್ತಿದೆ ಎಂದು ಎಸ್​ ಶೈಲಜ ಅವರು ಫೆಬ್ರವರಿ 7ರಂದು ದೂರು ನೀಡಿದ್ದರು.

ಇದನ್ನೂ ಓದಿ: ಬಜೆಟ್​​ ಮಂಡನೆ ವೇಳೆ ಭದ್ರತಾ ಲೋಪ: ಬಿಗಿ ಬಂದೋಬಸ್ತ್​ ಮಧ್ಯೆಯೂ ವಿಧಾನಸೌಧ ಹೊಕ್ಕ ವ್ಯಕ್ತಿ ಯಾರು?

ಕಳೆದ ಎಂಟು ತಿಂಗಳುಗಳಿಂದ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ ವೆಂಕಟರಾಮಯ್ಯ ಅವರ ಮೇಲೆ ನಕಲಿ ವೈದ್ಯರನ್ನು ಸೃಷ್ಟಿಸಿದ ಹಾಗೂ ನಕಲಿ ವೈದ್ಯರಿಗೆ ಜಿಲ್ಲಾವಾರು ಕೆ ಪಿ ಎಮ್ ಇ ನೋಂದಣಿ ನೀಡಲು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಶಿಫಾರಸು ಮಾಡಿದ ಆರೋಪಗಳು ಕೇಳಿ ಬಂದಿದ್ದವು. ಎರಡು ವರ್ಷಗಳ ಹಿಂದೆ ಆಯುರ್ವೇದ ವೈದ್ಯ ವಿದ್ಯಾರ್ಥಿಗಳ ನೋಂದಣಿಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ ಅಮಾನತ್ತಾಗಿದ್ದರು.

ತಮ್ಮ ಆಪ್ತ ನಕಲಿ ವೈದ್ಯರಿಗಾಗಿ ತಮ್ಮದೇ ನೋಂದಣಿ ಪುಸ್ತಕ ರಚಿಸಿಕೊಂಡಿದ್ದರು ಎಂಬ ಆರೋಪ ಕೂಡ ಇತ್ತು. ಅಲ್ಲದೇ ಆನ್ಲೈನ್ ಬಯೋಮೆಟ್ರಿಕ್ ರಿಜಿಸ್ಟ್ರೇಶನ್ ಡಿಜಿಟಲ್ ವ್ಯವಸ್ಥೆಯನ್ನೂ ನಾಶಪಡಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:49 pm, Sat, 8 July 23