
ಚೆನ್ನೈ, ನವೆಂಬರ್ 17: ಕರ್ನಾಟಕದ ಕಾಂಗ್ರೆಸ್ ನಾಯಕರೊಂದಿಗಿನ ಭೇಟಿಯ ವೇಳೆ ಮೆಕೆದಾಟು ವಿಚಾರ ಪ್ರಸ್ತಾಪಿಸದ ಮುಖ್ಯಮಂತ್ರಿ ವಿಜಯ್, ತಮಿಳುನಾಡಿನ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ಎಐಎಡಿಎಂಕೆ ಆರೋಪಿಸಿದೆ. ಅಧಿಕಾರಕ್ಕೆ ತಂದ ತಮಿಳುನಾಡಿನ ಜನರಿಗೆ ಇದು ಅವರು ಮಾಡಿದ ದ್ರೋಹವಾಗಿದ್ದು, ಪ್ರತಿಯೊಬ್ಬ ತಮಿಳರಿಗರ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಂಗ್ರೆಸ್‌ನ ಕೃಪೆಯಿಂದಲೇ ಅವರು ಸರ್ಕಾರ ನಡೆಸುತ್ತಿದ್ದು, ಕಾಂಗ್ರೆಸ್ ಬೆಂಬಲ ಹಿಂಪಡೆದರೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದರ ವಿರುದ್ಧ ಧ್ವನಿ ಎತ್ತಲು ವಿಜಯ್ ಅವರಿಗೆ ಧೈರ್ಯವಿಲ್ಲ. ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದಕ್ಕಿಂತ ಮುಖ್ಯಮಂತ್ರಿ ಕುರ್ಚಿಯಲ್ಲಿ ಉಳಿಯುವುದೇ ಅವರಿಗೆ ಆದ್ಯತೆಯಾಗಿದೆ. ವಿಜಯ್ ಅವರು ಬೆನ್ನೆಲುಬಿಲ್ಲದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಎಐಎಡಿಎಂಕೆ ವಾಗ್ದಾಳಿ ನಡೆಸಿದೆ.
ಸೋಮವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್; ಎ ಜರ್ನಿ ಆಫ್ ಲವ್’ ಆತ್ಮಕತೆ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿಯಾಗಿದ್ದರು. ಈ ಭೇಟಿಗೆ ತಮಿಳುನಾಡಿನ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ‘ಸಿನಿಮಾ ಶೈಲಿ’ಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ಡಿಎಂಕೆ ಕೂಡ ಕಿಡಿ ಕಾರಿದೆ. ಇದು ರಾಜ್ಯದ ಕೋಟ್ಯಂತರ ಜನರ ಬದುಕಿಗೆ ಸಂಬಂಧಿಸಿದ ವಿಚಾರವಾಗಿದ್ದು, ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುವ ಬದಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಇದನ್ನೂ ಓದಿ: ‘ನನ್ನ ಕುಟುಂಬದ ಕುರಿತ ಸುಳ್ಳು ಸಂಗತಿಗಳಿಂದ ನೋವಾಗಿತ್ತು’; ಆತ್ಮಕತೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ
ಡಿಎಂಕೆಯ ತಮಿಳು ಮುಖವಾಣಿ ‘ಮುರಸೋಲಿ’ಯಲ್ಲಿ ಕರ್ನಾಟಕ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಲಾಗಿದ್ದು, ಇತರ ಹಲವು ಸಮಸ್ಯೆಗಳಿರುವಾಗ ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಲಾಗಿದೆ. ಮೆಕೆದಾಟು ಅಣೆಕಟ್ಟು ನಿರ್ಮಾಣ ಮಾಡುವುದೇ ತಮ್ಮ ಜೀವನದ ಏಕೈಕ ಗುರಿ ಎಂಬಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದು ಡಿಎಂಕೆ ಪತ್ರಿಕೆ ಟೀಕಿಸಿದೆ.
ಮೆಕೆದಾಟು ವಿಚಾರ ಯಾವುದೇ ಸಿನಿಮಾವಲ್ಲ. ಇದು ಕೋಟ್ಯಂತರ ತಮಿಳರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯ. ಇಂತಹ ಗಂಭೀರ ವಿಚಾರದಲ್ಲಿ ಸಿನಿಮಾ ಡೈಲಾಗ್‌ಗಳನ್ನು ಹೇಳುತ್ತಾ ಆರು ತಿಂಗಳ ಕಾಲ ವ್ಯರ್ಥ ಮಾಡಿದ್ದಾರೆ. ಮೆಕೆದಾಟು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಡೆದುಕೊಳ್ಳಬೇಕು. ಸಿನಿಮಾಗಳಲ್ಲಿ ಬೇಕಾದರೆ ಏಕಾಂಗಿಯಾಗಿ ನಟಿಸಲಿ. ಆದರೆ, ಮುಖ್ಯಮಂತ್ರಿಯಾಗಿ ಕಾವೇರಿ ಮತ್ತು ಮೆಕೆದಾಟುವಿನಂತಹ ರಾಜ್ಯದ ಪ್ರಮುಖ ವಿಚಾರಗಳಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ಮುರಸೋಲಿ ಪತ್ರಿಕೆ ಮುಖಾಂತರ ಡಿಎಂಕೆ ಅಭಿಪ್ರಾಯಪಟ್ಟಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.