ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್ನಿಂದ ಗೊಂದಲ ಸೃಷ್ಟಿ: ಈಶ್ವರಪ್ಪ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಇದೆಲ್ಲಾ ಕಾಂಗ್ರೆಸ್ನವರು ಗೊಂದಲ ಸೃಷ್ಟಿಸುವುದು ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದರು.
ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ನವರು ಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದರು. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಮುಖ್ಯಮಂತ್ರಿ ಬದಲಾವಣೆ ವಿಚಾರವೂ ಮುನ್ನೆಲೆಗೆ ಬಂದ ಹಿನ್ನೆಲೆ ಈಶ್ವರಪ್ಪ ಅವರು ಈ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿನ ಮಳೆ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಮೊನ್ನೆ ನಾಲ್ಕು ಪಟ್ಟು ಮಳೆಯಾಗಿದೆ. ನಗರಗಳಲ್ಲಿ ಅನೇಕ ಸಮಸ್ಯೆಗಳಿದ್ದು, ಇವುಗಳ ಪರಿಹಾರಕ್ಕೆ ನಗರ ಪಾಲಿಕೆ, ಸ್ಮಾರ್ಟ್ ಸಿಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಜೂ.1ರ ಒಳಗೆ ಎಲ್ಲಾ ವಾರ್ಡ್ಗಳ ಪೈಪ್ಗಳಲ್ಲಿ ತುಂಬಿರುವ ಹೂಳು ತೆಗೆಸುವಂತೆ ಸೂಚಿಸಲಾಗಿದೆ. ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಜೂ.1ರಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮುಸ್ಲಿಮರ ವೋಟಿನಿಂದ ಕರ್ನಾಟಕ ಗೆಲ್ಲಲು ಆಗಲ್ಲ, ಕಾಂಗ್ರೆಸ್ ಉದ್ಧಾರ ಆಗಲ್ಲ: ಈಶ್ವರಪ್ಪ
ಹೆಗ್ಡೆವಾರ್ ವಿಚಾರ ಪಠ್ಯದಲ್ಲಿ ಸೇರಿಸಿದರೆ ಏಕೆ ಹೊಟ್ಟೆ ಉರಿ?
ಆರ್ಎಸ್ಎಸ್ ಸಂಸ್ಥಾಪಕ ಬಲಿರಾಮ್ ಹೆಗ್ಡೆವಾರ್ ಅವರ ವಿಚಾರ ಪಠ್ಯ ಪುಸ್ತಕದಲ್ಲಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಪಠ್ಯದಲ್ಲಿ ಸೇರಿಸಿದರೆ ಕಾಂಗ್ರೆಸ್ನವರಿಗೆ ಏಕೆ ಹೊಟ್ಟೆ ಉರಿ? ವ್ಯಕ್ತಿತ್ವದ ಬಗ್ಗೆ ನಾವು ಪಠ್ಯಕ್ರಮದಲ್ಲಿ ಸೇರಿಸುತ್ತಿದ್ದೇವೆ. ಭಗತ್ ಸಿಂಗ್, ನಾರಾಯಣ ಗುರು ವಿಚಾರ ಪಠ್ಯದಿಂದ ತೆಗೆಯುವುದಿಲ್ಲ. ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡುತ್ತಿರುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ರಾಷ್ಟ್ರದ್ರೋಹಿಗಳು. ಬಿಜೆಪಿ ಸರ್ಕಾರ ಧರ್ಮ ರಕ್ಷಣೆ, ರಾಷ್ಟ್ರ ರಕ್ಷಣೆ ಮಾಡುತ್ತಿದೆ ಎಂದರು.
ಇದನ್ನೂ ಓದಿ: ದತ್ತಪೀಠವಿರುವ ಸ್ಥಳದಲ್ಲಿ ಮಾಂಸಾಹಾರ ಸೇವನೆ ವಿರೋಧಿಸಿ ಹಿಂದೂ ಸಂಘಟನೆ ಸದಸ್ಯರ ಪ್ರತಿಭಟನೆ
ಬಿಜೆಪಿ ಸರ್ಕಾರ ಧರ್ಮ ವಿವಾದ ಸೃಷ್ಟಿಸಿದೆ ಎಂಬ ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್. ರಾಜಣ್ಣ ಆರೋಪವನ್ನು ತಳ್ಳಿಹಾಕಿದ ಈಶ್ವರಪ್ಪ, ಹಿಜಾಬ್ ವಿವಾದ ಸೃಷ್ಟಿಸಲು ವಿದ್ಯಾರ್ಥಿನಿಯರಿಗೆ ಹೇಳಿದ್ವಾ? ಬಿಕಿನಿ ಬೇಕಾದರೂ ಹಾಕಿಕೊಳ್ಳಲಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. ಶಾಲಾ ಕಾಲೇಜಿಗೆ ಹಾಗೆ ಹೋಗ್ತಾರಾ? ಮೆಕ್ಕಾ ಕಡೆ ಮುಖ ಮಾಡಿ ಹಲಾಲ್ ಮಾಡಿ ಎಂದು ಹೇಳಿದ್ವಾ? ಅವರು ಬೇಕಾದರೆ ಮಾಡಲಿ, ನಾವ್ಯಾಕೆ ಮೆಕ್ಕಾ ಕಡೆ ಮುಖ ಮಾಡಬೇಕು? ಎಂದು ವಾಗ್ದಾಳಿ ನಡೆಸಿದರು.
ಅದು ದತ್ತಪೀಠವೇ, ಬಾಬಾಬುಡನ್ಗಿರಿ ಎಂದರೆ ಆಗುತ್ತಾ?
ಇತ್ತೀಚೆಗಷ್ಟೆ ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಹಾಗೂ ನಮಾಜ್ ಮಾಡಿರುವ ವಿಡಿಯೋಗಳು ವೈರಲ್ ಆಗಿದ್ದವು. ಇದಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಇವರಿಗೆ ಕಾಂಗ್ರೆಸ್ ನಾಯಕರೇ ಕುಮ್ಮಕ್ಕು ಕೊಡುತ್ತಿದ್ದಾರೆ. ಗೋರಿ ನಿರ್ಮಿಸಿ ಬಾಬಾಬುಡನ್ಗಿರಿ ಎಂದರೆ ಆಗುತ್ತಾ? ಬಾಬಾಬುಡನ್ಗಿರಿ ದತ್ತಪೀಠ ಹೆಸರಿನಿಂದಲೇ ಇದೆ. ನ್ಯಾಯಾಲಯದ ಆದೇಶದಂತೆ ಅದು ದತ್ತಪೀಠವೇ ಆಗಿದೆ. ನ್ಯಾಯಾಲಯದ ಆದೇಶಕ್ಕೆ ನಾವು ಬೆಲೆ ಕೊಡುತ್ತೇವೆ ಎಂದರು.
ಇದನ್ನೂ ಓದಿ: ಹಿಂದಿನಿಂದಲೂ ನಾರಾಯಣಗುರುವನ್ನು ಬದಿಗೆ ಸರಿಸುತ್ತಿದ್ದಾರೆ: ಡಿಕೆ ಶಿವಕುಮಾರ್ ಆರೋಪ
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 4:11 pm, Sun, 22 May 22