ಬೆಂಗಳೂರು, (ಜನವರಿ 16): ಲೋಕಸಭಾ ಚುನಾವಣೆ (Loksabha Elections 2024) ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ಮತ್ತೆ ಪಕ್ಷಾಂತರ ಪರ್ವ ಶುರುವಾಗುವ ಸುಳಿವು ಸಿಕ್ಕಿದೆ. ಇದಕ್ಕೆ ಪೂಕರವೆಂಬಂತೆ ಬಿಜೆಪಿ ಮುಖಂಡ ಹಾಗೂ ತುಮಕೂರು(Tumakuru) ಮಾಜಿ ಸಂಸದ ಎಸ್‌ಪಿ ಮುದ್ದಹನುಮೇಗೌಡ (muddahanumegowda) ಅವರು ವಾಪಸ್ ಕಾಂಗ್ರೆಸ್‌ಗೆ ಹಿಂದಿರುಗಲು ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟು ದಿನ ರಾಜ್ಯದ ಪ್ರಮುಖ ಕೈ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದೀಗ ಅಂತಿಮವಾಗಿ ಮುದ್ದಹನುಮೇಗೌಡ್ರು ಇಂದು (ಜನವರಿ 16) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಬಿಜೆಪಿ ತೊರೆದು ವಾಪಸ್ ಕೈ ಹಿಡಿಯುವುದು ಬಹುತೇಕ ಖಚಿತವಾದಂತಿದೆ.
ಅತ್ತ ತುಮಕೂರಿನಲ್ಲಿ ಸಚಿವ ಕೆಎನ್ ರಾಜಣ್ಣ ಅವರು ಪರೋಕ್ಷವಾಗಿ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಮುದ್ದಹನುಮೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಅಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದವು. ಈ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರವನ್ನು ಅನಿವಾರ್ಯವಾಗಿ ಜೆಡಿಎಸ್ಗೆ ಬಿಟ್ಟು ಕೊಡುವ ಪ್ರಸಂಗ ಬಂದಿತ್ತು. ಹಾಗಾಗಿ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕಟ್ ಮಾಡಿ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕಣ್ಣಕ್ಕಿಳಿಸಲಾಗಿತ್ತು. ಇದರಿಂದ ಮುನಿಸಿಕೊಂಡ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ್ರಿಗೆ ಕೇಸರಿ ಪಾರ್ಟಿಯಲ್ಲೂ ಸಹ ಮನ್ನಣೆ ಸಿಗಲಿಲ್ಲ. ಈ ಬಾರಿಯೂ ಸಹ ತುಮಕೂರು ಲೋಕಸಭಾ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂಬ ಸುಳಿವು ಗೌಡರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಲು ಸಜ್ಜಾಗಿದ್ದಾರೆ. ಈಗಾಗಲೇ ತುಮಕೂರು ಕಾಂಗ್ರೆಸ್ ನಾಯಕರಾದ ಕೆಎನ್ ರಾಜಣ್ಣ, ಡಾ.ಜಿ ಪರಮೇಶ್ವರ್ ಅವರ ಭೇಟಿ ಮಾಡಿ ಸೇರಿಸಿಕೊಳ್ಳುವಂತೆ ಮನವೊಲಿಸಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಬರುವ ಬಗ್ಗೆ ಮಾತುಕತೆ ನಡೆಸಿದ್ದರು. ಇದೀಗ ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯೊಂದೇ ಬಾಕಿ ಎಂದು ತಿಳಿದುಬಂದಿದೆ.
ಇನ್ನು ಮುದ್ದಹನುಮೇಗೌಡ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಬಗ್ಗೆ ಇಂದು ಸಂಜೆ ಅಷ್ಟೇ ಸಚಿವ ಕೆಎನ್ ರಾಜಣ್ಣ ಸುಳಿವು ಕೊಟ್ಟಿದ್ದಾರೆ. ಇಂದು ತುಮಕೂರಿನಲ್ಲಿ ಮಾತನಾಡಿರುವ ರಾಜಣ್ಣ. ಮುದ್ದಹನುಮೇಗೌಡಗೆ ಪಕ್ಷ ಬಿಡದಂತೆ ನಾನು, ಪರಮೇಶ್ವರ್ ಹೇಳಿದ್ವಿ. ನಿಮ್ಮ ಜೊತೆ ನಾವು ಇರುತ್ತೇವೆ ಅಂತಾ ಹೇಳಿದ್ರೂ ಪಕ್ಷ ಬಿಟ್ಟು ಹೋದ್ರು. ರಾಜಕೀಯದಲ್ಲಿ ಯಾರು ಸ್ನೇಹಿತರು ಅಲ್ಲ, ಯಾರು ಶತ್ರುಗಳು ಅಲ್ಲ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವನ್ನ ಹೈಕಮಾಂಡ್ ನಿರ್ಧರಿಸುತ್ತೆ. ಆದ್ರೆ, ನಿಮಗೆಲ್ಲಾ ಗೊತ್ತಿರುವವರು ಅಭ್ಯರ್ಥಿ ಆಗುತ್ತಾರೆ ಎಂದು ಪರೋಕ್ಷವಾಗಿಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಂದು ಒಂದು ಸಣ್ಣ ಸುಳಿವು ನೀಡಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Tue, 16 January 24