V Somanna: ಬಿಜೆಪಿ ನಾಯಕರ ಭೇಟಿಗೆ ದೆಹಲಿಗೆ ತೆರಳಿದ್ದ ವಿ. ಸೋಮಣ್ಣ ಹೇಳಿದ್ದೇನು?
ನನ್ನ ಇಲಾಖೆ ಕೆಲಸದ ವಿಚಾರವಾಗಿ ಇಲ್ಲಿಗೆ ಬಂದಿದ್ದೆ. ನಾನು ಬಂದ ಕೆಲಸ ಯಾವುದೇ ಸಮಸ್ಯೆ ಇಲ್ಲದೇ ಆಗಿದೆ. ಇದಕ್ಕೆ ಬೇಕಾದ ವಿಷಯದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ದೆಹಲಿ: ಪಕ್ಷದಲ್ಲಿ ಅಸಮಾಧಾನ ತೀವ್ರಗೊಂಡ ಬೆನ್ನಲ್ಲೇ ಸಚಿವ ವಿ. ಸೋಮಣ್ಣ (V Somanna) ಇಂದು ದೆಹಲಿ ನಾಯಕರ ಭೇಟಿಗೆ ತೆರಳಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಇಲಾಖೆ ಕೆಲಸದ ವಿಚಾರವಾಗಿ ಇಲ್ಲಿಗೆ ಬಂದಿದ್ದೆ. ನಾನು ಬಂದ ಕೆಲಸ ಯಾವುದೇ ಸಮಸ್ಯೆ ಇಲ್ಲದೇ ಆಗಿದೆ. ಇದಕ್ಕೆ ಬೇಕಾದ ವಿಷಯದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬಳಿಕ ಸಚಿವ ಪ್ರಲ್ಹಾದ ಜೋಶಿ ಅವರನ್ನು ಪಾರ್ಲಿಮೆಂಟ್ನಲ್ಲಿ ಭೇಟಿ ಮಾಡಿದೆ. ಆಮೇಲೆ ಧರ್ಮೇಂದ್ರ ಪ್ರಧಾನ್ ಅವರನ್ನ ಸಹ ಭೇಟಿ ಆಗಿದ್ದೇನೆ. ಯಾವುದೇ ವೈಯಕ್ತಿಕ ಕೆಲಸ ಅಲ್ಲಾ, ಬದಲಿಗೆ ಪಕ್ಷದ ಕೆಲಸಕ್ಕೆ ಬಂದಿದ್ದು ಅಷ್ಟೇ. ಅವರನ್ನು ಸಹ ಭೇಟಿ ಆಗಿದ್ದೇನೆ. ಈಗ ಮತ್ತೆ ಜೋಶಿ ಅವರ ಮನೆಗೆ ಹೋಗಿ, ಬೆಂಗಳೂರಿಗೆ ಹೋಗುತ್ತೇನೆ. ಅಮಿತ್ ಶಾ ಅವರನ್ನು ಭೇಟಿ ಆಗಿಲ್ಲ, ಅವರನ್ನು ಭೇಟಿ ಮಾಡಲು ನಾನು ಡೆಲ್ಲಿಗೆ ಬಂದಿಲ್ಲ ಎಂದರು.
ಊಹಾಪೋಹಗಳಿಗೆ ತೆರೆ ಎಳೆದ ವಿ, ಸೋಮಣ್ಣ
ಕೆಲ ಕಾರಣಗಳಿಂದ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡಿದ್ದ ಸಚಿವ ವಿ, ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಸೊಮಣ್ಣ ಕಾಂಗ್ರೆಸ್ ಸೇರ್ಪಡೆ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಬಿಜೆಪಿ ಪ್ರಮುಖ ನಾಯಕರು ಸೋಮಣ್ಣ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟು ದಿನಗಳಿಂದ ನಿಗೂಢ ನಡೆ ಇಟ್ಟುಕೊಂಡು ಬಂದಿದ್ದ ಸೋಮಣ್ಣ, ಇದೀಗ ಈ ಬಗ್ಗೆ ಮೌನ ಮುರಿದಿದ್ದು, ಇನ್ಮುಂದೆ ತೇಜೋವಧೆ ಮಾಡಬೇಡಿ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಿಲುವು ಪ್ರಕಟಿಸಿದ್ದಾರೆ. ಅಲ್ಲದೇ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ನಾಳೆ ದೆಹಲಿ ಪ್ರವಾಸ ಕೈಗೊಳ್ಳಲಿರುವ ಸಚಿವ ಸೋಮಣ್ಣ, ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಸಾಧ್ಯತೆ
ನಾನು ಕಾಂಗ್ರೆಸ್ಗೆ ಹೋಗುತ್ತೇನೆಂದು ವದಂತಿ
ಈ ಕುರಿತಾಗಿ ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಸೋಮಣ್ಣ, ನಾನು ಕಾಂಗ್ರೆಸ್ಗೆ ಹೋಗುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ಸಂಪರ್ಕಿಸಿಲ್ಲ. ನಾನು ಕಾಂಗ್ರೆಸ್ಗೆ ಹೋಗುತ್ತೇನೆಂದು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಗೊಂದಲಳಿಗೆ ತೆರೆ ಎಳೆದರು. ಪ್ರಧಾನಿ ಮೋದಿ, ಬೊಮ್ಮಾಯಿ ನಾಯಕತ್ವದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ನಾನು ಬಿಜೆಪಿ ನಾಯಕ, ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಸೇರ್ಪಡೆಯಾಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 5,24,426 ಮನೆಗಳ ನಿರ್ಮಾಣ; ಸಚಿವ ವಿ.ಸೋಮಣ್ಣ
ವಿ.ಸೋಮಣ್ಣ ಮನವೊಲಿಸಿದ ಪ್ರಲ್ಹಾದ ಜೋಶಿ
ಧಾರವಾಡದಲ್ಲಿ ನಡೆದ ಐಐಟಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದ ವಿ.ಸೋಮಣ್ಣರನ್ನು ನೇರವಾಗಿ ಹುಬ್ಬಳ್ಳಿಗೆ ಕರೆದುಕೊಂಡು ಬಂದ ನಾಯಕರು ಸಂಧಾನ ಸಭೆ ನಡೆಸಿದ್ದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಉಪಹಾರ ಸೇವನೆ ಮಾಡುತ್ತಲೇ ಚರ್ಚೆ ನಡೆಸಿದರು. ಬರೋಬ್ಬರಿ ಒಂದು ಗಂಟೆಗಳ ವಿ.ಸೋಮಣ್ಣರೊಂದಿಗೆ ಸಭೆ ಮಾಡಿ ಮನವೊಲಿಸುವಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಯಶಸ್ವಿಯಾಗಿದ್ದಾರೆ. ಸೋಮಣ್ಣ ಅವರು ಪಕ್ಷದ ಮೇಲೆ ಮುನಿಸುಗೊಳ್ಳಲು ಆರಂಭಿಸಿದ ನಂತರ ಇತ್ತೀಚೆಗಷ್ಟೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಭೇಟಿ ಮುನಿಸು ಶಮನಗೊಳಿಸುವುದಾಗಿದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.