ಮೈಸೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ತಂದೆಗೆ (ಸಿದ್ದರಾಮಯ್ಯ) ತ್ಯಾಗ ಮಾಡಿರುವ ಯತೀಂದ್ರ ಸಿದ್ದರಾಮಯ್ಯನವರಿಗೆ(yathindra siddaramaiah) ಸೂಕ್ತ ಸ್ಥಾನಮಾನ ನೀಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಯತೀಂದ್ರ ಸಿದ್ದರಾಮಯ್ಯಗೆ ಸರ್ಕಾರಿ ಸ್ಥಾನಮಾನದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಇನ್ನೊಂದೆಡೆ ಕ್ಷೇತ್ರದಲ್ಲಿ ತಂದೆಯ ಜವಾಬ್ದಾರಿ ನಿಭಾಯಿಸಲು ಯತೀಂದ್ರ ಸಿದ್ದರಾಮಯ್ಯ ಸಹ ಒಲವು ತೋರಿದ್ದಾರೆ.
ಇದನ್ನೂ ಓದಿ: ದಾಖಲೆ ಕೊಡ್ತಿನಿ ತನಿಖೆ ಮಾಡೋ ಧಮ್ ನಿಮ್ಗೆ ಇದ್ಯಾ; ಕಾಂಗ್ರೆಸ್ ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲ್
ವರುಣ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಹೆಚ್ಚು ಸಮಯ ಕೊಡಲಾಗದ ಹಿನ್ನೆಲೆಯಲ್ಲಿ ಸರ್ಕಾರಿ ಸ್ಥಾನಮಾನದ ನಿರೀಕ್ಷೆಯಲ್ಲಿ ಸಿಎಂ ಪುತ್ರ ಡಾ ಯತೀಂದ್ರ ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕಳೆದ ಬಾರಿಯಂತೆ ಸಣ್ಣ ಹುದ್ದೆ ನೀಡಿದರು ನಿಭಾಯಿಸುತ್ತೇನೆ. ತಂದೆಯವರು ಸಿಎಂ ಆಗಿರುವ ಕಾರಣ ಕ್ಷೇತ್ರದ ಜನರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಅವರನ್ನ ನೋಡಲು ಬರುವ ರಾಜ್ಯದ ಜನರನ್ನೆಲ್ಲಾ ಭೇಟಿಯಾಗಬೇಕು. ಆದ್ದರಿಂದ ವರುಣ ಕ್ಷೇತ್ರದ ಮತದಾರರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಜನರ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಅಧಿಕಾರಿಗಳಿಗೆ ಹೇಳಿ ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಇರಬೇಕು. ನನಗೆ ಯಾವುದಾದರು ಚಿಕ್ಕದಾದ ಸ್ಥಾನಮಾನ ನೀಡಿದರು ಸಹಕಾರಿ ಆಗುತ್ತದೆ ಎಂದರು.
ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದಯಲ್ಲ. ಆದರೂ ಅಂತದ್ದೆ ಸಣ್ಣ ಹುದ್ದೆ ನೀಡಿದರೂ ಜನರ ಸೇವೆ ಮಾಡಲು ನಾನು ಸಿದ್ದನಿದ್ದೇನೆ ಎಂದು ಸರ್ಕಾರಿ ಸ್ಥಾನಮಾನದ ಮೇಲೆ ಯತೀಂದ್ರ ಸಿದ್ದರಾಮಯ್ಯ ಆಸೆ ಹೊರಹಾಕಿದರು.
ಇನ್ನು ಲೋಕಸಭೆಗೆ ಸಿಎಂ ಪುತ್ರ ಡಾ ಯತೀಂದ್ರ ಸ್ಪರ್ಧೆ ಮಾಡಬೇಕೆನ್ನುವ ಬೆಂಬಲಿಗರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಸೂಚಿಸಿದರೆ ಆದೇಶ ಪಾಲಿಸಲು ಸಿದ್ದ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನಾಗಲಿ ತಂದೆಯವರಾಗಲಿ ಚರ್ಚೆ ನಡೆಸಿಲ್ಲ. ಚುನಾವಣೆಗೆ ಇನ್ನು 8 ತಿಂಗಳ ಕಾಲಾವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ಯಾರು ಸೂಕ್ತ ಅಭ್ಯರ್ಥಿ ಎಂದು ಗೊತ್ತಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ ಆದ್ದರಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೆವೆ. ಒಂದು ವೇಳೆ ನಾನು ಸ್ಪರ್ಧೆ ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದರೆ ಪಾಲನೆ ಮಾಡಬೇಕಾಗುತ್ತದೆ ಎಂದು ಹೈಕಮಾಂಡ್ ಹೇಳಿದರೆ ಸ್ಙರ್ಧೆಗೆ ರೆಡಿ ಎಂದರು.
ಮೈಸೂರಿನ ಅಭಿವೃದ್ಧಿಗೆ ಸಮರ್ಥ ನಾಯಕತ್ವದ ಅಗತ್ಯವಿದೆ. ಯತೀಂದ್ರ ಅವರಲ್ಲಿ ಆ ಸಾಮರ್ಥ್ಯವಿದೆ. ಹಾಗಾಗಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಶಾಸಕ ಕೆ ಹರೀಶ್ ಗೌಡ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನು ಕಾಂಗ್ರೆಸ್ ಪದವೀಧರ ಘಟಕದ ಜಿಲ್ಲಾಧ್ಯಕ್ಷ ರಮೇಶ್ ಸಹ ಯತೀಂದ್ರ ಸಿದ್ದರಾಮಯ್ಯನವರು ಎಂಎಲ್ ಸಿ ಮಾಡುವಂತೆ ಹೇಳಿದ್ದಾರೆ. ವಿಧಾನಪರಿಷತ್ ಸ್ಥಾನಕ್ಕೆ ಯತೀಂದ್ರ ಸಿದ್ದರಾಮಯ್ಯ ಅರ್ಹರು. ಸಿದ್ದರಾಮಯ್ಯರನ್ನ ಸೋಲಿಸಲು ಸ್ವತಃ ಅಮಿತ್ ಶಾ ಸೇರಿ ಬಿಜೆಪಿಯ ಘಟಾನುಘಟಿ ನಾಯಕರೇ ಆಗಮಿಸಿದ್ದರು. ಆದರೆ ಯತೀಂದ್ರ ಸಿದ್ದರಾಮಯ್ಯನವರು ಇಡೀ ಕ್ಷೇತ್ರ ಸಂಚರಿಸಿ ಸಿದ್ದರಾಮಯ್ಯರ ಗೆಲುವಿಗೆ ಶ್ರಮಿಸಿದ್ದಾರೆ. 5 ವರ್ಷ ಶಾಸಕರಾಗಿ ಉತ್ತಮ ಆಡಳಿತ ನಡೆಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಕ್ಯಾಬಿನೆಟ್ ನಲ್ಲಿ ಯತೀಂದ್ರರವರು ಎಂಎಲ್ ಸಿ ಯಾಗಿ ಸಚಿವರಾಗಿ ಕೆಲಸ ಮಾಡಬೇಕೆಂಬುದು ನಮ್ಮ ಒತ್ತಾಸೆ ಎಂದಿದ್ದರು.
ವರುಣಾ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಯತೀಂದ್ರ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ತಪ್ಪಿರುವುದಕ್ಕೆ ಅವರ ಅಭಿಮಾನಿಗಳು ತೀವ್ರ ನಿರಾಶರಾಗಿದ್ದಾರೆ. ಸಿದ್ದರಾಮಯ್ಯ ತಮ್ಮ ಮೂಲ ಕ್ಷೇತ್ರ ವರುಣಾಗೆ ಹಿಂತಿರುಗಿದ ಹಿನ್ನೆಲೆಯಲ್ಲಿ ಅವರ ಪುತ್ರ, ಡಾ.ಯತೀಂದ್ರ ಅವಕಾಶ ಕಳೆದುಕೊಂಡಿದ್ದಾರೆ. ಹೀಗಾಗಿ ಒಂದು ಕಡೆ ಯತೀಂದ್ರ ಸಿದ್ದರಾಮಯ್ಯನವರ ಅಭಿಮಾನಗಳಲ್ಲಿ ಸಂತಸವಾಗಿದ್ದರೆ, ಮತ್ತೊಂದೆಡೆ ಬೇಸರಗೊಂಡಿದ್ದಾರೆ. ತಂದೆಗಾಗಿ ರಾಜಕೀಯ ಭವಿಷ್ಯ ಬಲಿಕೊಟ್ಟಿದ್ದಾರೆ ಎನ್ನುವ ಅಸಮಾಧಾನ ಕೇಳಿ ಬಂದಿತ್ತು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:23 am, Wed, 5 July 23