AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕ್ರಂ ಸಿಂಹ ಬಂಧನ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮರಗಳ್ಳತನ ಆರೋಪದ ಮೇಲೆ ಸಂಸದ ಪ್ರತಾಪ್​ ಸಿಂಹನ ಸಹೋದರ ವಿಕ್ರಂ ಸಿಂಹ ಅವರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಪ್ರತಾಪ್​ ಸಿಂಹ ಮಾತನಾಡಿ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು

ವಿಕ್ರಂ ಸಿಂಹ ಬಂಧನ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಸಂಸದ ಪ್ರತಾಪ್​ ಸಿಂಹ
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ|

Updated on: Dec 31, 2023 | 11:50 AM

Share

ಮೈಸೂರು, ಡಿಸೆಂಬರ್​ 31: ವಿಕ್ರಂ ಸಿಂಹ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಕುಟುಂಬ ರಾಜಕಾರಣ ಮುಂದುವರಿಯಲಿ. ನನ್ನ ಕುಟುಂಬದವರನ್ನು ಬೀದಿಗೆ ತರುತ್ತಿದ್ದೀರಿ. ವಯಸ್ಸಾಗಿರುವ ನಮ್ಮ ತಾಯಿ, ತಂಗಿಯನ್ನೂ ಅರೆಸ್ಟ್ ಮಾಡಿ. ತಾಯಿ ಚಾಮುಂಡಿ, ಮೈಸೂರು ಮತ್ತು ಕೊಡಗು ಜನ ನನ್ನ ಕೈ ಬಿಡಲ್ಲ ಎಂದು ಸಂಸದ ಪ್ರತಾಪ್​ ಸಿಂಹ (Pratap Simha) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಹರಿಹಾಯ್ದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶನಿವಾರ (ಡಿ.30) ನನ್ನ ಸೋದರ (ವಿಕ್ರಂ ಸಿಂಹ)ನನ್ನು ಮಧ್ಯಾಹ್ನ ಮೂರು ಗಂಟೆಗೆ ಅರೆಸ್ಟ್ ಮಾಡಿದ್ದೀರಿ. ಆದರೆ ಈವರೆಗೆ ಯಾಕೆ‌ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ? ನನ್ನ ಮೇಲೆ‌ ಎರಡು‌ ಕ್ರಿಮಿನಲ್‌ ಕೇಸ್ ದಾಖಲು ಮಾಡಿದ್ದೀರಿ. ಮಾನ್ಯ ಸಿದ್ದರಾಮಯ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಅವರನ್ನ ನಾನು ಶ್ಲಾಘಿಸಬೇಕು ಅಂದುಕೊಂಡಿದ್ದೇನೆ. ಮಗನ ರಾಜಕೀಯ ಭವಿಷ್ಯಕ್ಕೆ ಏನಾದರೂ ಮಾಡುತ್ತಾರೆ. ತಮ್ಮ ಮಗನನ್ನು ಎಂಪಿ ಚುನಾವಣೆಯಲ್ಲಿ ಗೆಲ್ಲಿಸಲು, ಸಿದ್ದರಾಮಯ್ಯ ಯಾರನ್ನ ಬೇಕಾದರೂ ತುಳಿಯುತ್ತಾರೆ. ತುಳಿಯುವುದನ್ನು ಸಿದ್ದರಾಮಯ್ಯ ಅವರಿಂದ ಕಲಿಯಬೇಕು ಎಂದು ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯನವರಂಥ ತಂದೆ ಎಲ್ಲರಿಗೂ ಸಿಗಲ್ಲ. ನಿಜಕ್ಕೂ‌ ನಿಮ್ಮನ್ನ ಮೆಚ್ಚಿದ್ದೇನೆ. ನಾನು ಅಡ್ಡಿ ಆಗಿದ್ದೇನೆಂದು ನನ್ನನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಕುಟುಂಬ ರಾಜಕಾರಣವೇ ಮುಂದುವರಿಯಲಿ. ನಿಮಗೆ ಬಹಳಷ್ಟು‌ ದಾರಿಗಳಿಲ್ಲ. ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡುವುದಿಲ್ಲ. ಮತ್ತು ಮೈಸೂರು-ಕೊಡಗು ಕ್ಷೇತ್ರದ ಜನರು ನಿಮ್ಮನ್ನು ಬಿಡುವುದಿಲ್ಲ ಎಂದು ಕಿಡಿಕಾರಿದರು.

ನೀವು ಬ್ರಿಲಿಯೆಂಟ್ ಪಾಲಿಟಿಷಿಯನ್. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನ ಮರೆಮಾಚಲು, ನನ್ನ ವಿಷಯ ಇಟ್ಟುಕೊಂಡು ಮೀಡಿಯಾ ಅಟೆನ್ಷನ್ ಡೈವರ್ಟ್ ಮಾಡಿದ್ರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ‌ ಎಲ್ಲರೂ ನನ್ನ ವಿರುದ್ಧ ಮಾತಾಡುತ್ತೀರಿ. ಸಂಸತ್​ ಪಾಸ್​​ ವಿಚಾರವಾಗಿ ನನ್ನ ಹೆಸರು ಇಟ್ಟುಕೊಂಡು, ತನಿಖೆ ನಡೆಸಬೇಕೆಂದು ಹೇಳುತ್ತೀರಿ. ಇಲ್ಲಿ ನಿಮ್ಮ ಮಗ ನನ್ನ ವಿರುದ್ಧ ತನಿಖೆ‌‌ ಆಗಬೇಕು ಅಂತಾರೆ ಎಂದು ಪ್ರತಾಪ್​ ಸಿಂಹ ತಿಳಿಸಿದರು.

ಇದನ್ನೂ ಓದಿ: ಮರಗಳ ಮಾರಣಹೋಮಕ್ಕೂ‌ ನನಗೂ ಯಾವುದೇ ಸಂಬಂಧವಿಲ್ಲ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಸ್ಪಷ್ಟನೆ

ಡಿ. 16 ರಂದು ಬೇಲೂರಿನ ಜಮೀನಿನ ವಿಚಾರವಾಗಿ ನನ್ನ ತಮ್ಮನ ಹೆಸರು ಎಳೆದು ತಂದ್ರಿ. ಮರವನ್ನು ಕಡಿದಿದ್ದಾರೆ‌ ಎಂದು ಎಫ್ಐಆರ್ ದಾಖಲಾಯ್ತು. ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರವಿ ಎಂಬವರು ಸಹಾಯ ಮಾಡಿ, ಪರಾರಿಯಾಗಿದ್ದಾರೆ. ಈವರಗೆ ಮೂವರನ್ನು ಹಿಡಿಯಲು ಆಗಿಲ್ಲ. ಎಲ್ಲಾ ಮರಗಳನ್ನ ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. 24ನೇ ತಾರೀಖಿನವರಗೆ ನೀವು ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದರು.

ಹನುಮ ಜಯಂತಿ‌ ಸಂದರ್ಭದಲ್ಲಿ ನಾನು ಒಂದು‌ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್​ ಸಿಂಹನ ತಮ್ಮ ಮರಗಳ್ಳತನ ಮಾಡಿದ್ದಾನೆ ಅಂತ ಕಾಂಗ್ರೆಸ್​ ಟ್ವಿಟರ್​ ಪೇಜ್​​ನಲ್ಲಿ ಪೋಸ್ಟ್ ಹಾಕಿದ್ರಿ. ಎಫ್​ಐಆರ್​ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನು ಬಂಧಿಸುವ ಮೂಲಕ ಪ್ರತಾಪ್​ ಸಿಂಹನನ್ನು ಮುಗಿಸುವ ಯತ್ನ ಮಾಡುತ್ತಿದ್ದೀರಿ. ನನ್ನ ತಮ್ಮ ತಲೆ ಮರೆಸಿಕೊಂಡಿದ್ದಾನಾ? ಎರಡು ‌ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ