ಬಿಜೆಪಿ ಪಕ್ಷದಲ್ಲಿ ಯಾರೇ ರಾಜ್ಯಾಧ್ಯಕ್ಷರಾದ್ರೂ ಸಂತಸ: ಡಿಸಿಎಂ ಡಿಕೆ ಶಿವಕುಮಾರ್
ದಸರಾ ಮುಗಿಯುವುದರೊಳಗೆ ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ. ಆದರಲ್ಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿದೆ. ಈ ಕುರಿತಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, 5 ತಿಂಗಳಾದ್ರೂ ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿಲ್ಲ.ಭಾರತೀಯ ಜನತಾ ಪಾರ್ಟಿಯಲ್ಲಿ ಯಾರೇ ಆದರೂ ಸಂತಸ ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 23: 5 ತಿಂಗಳಾದ್ರೂ ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿಲ್ಲ. ಹಾಗಾಗಿ ಭಾರತೀಯ ಜನತಾ ಪಾರ್ಟಿಯಲ್ಲಿ ಯಾರೇ ಆದರೂ ಸಂತಸ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಬಿಜೆಪಿಯಲ್ಲಿ ಟಿಕೆಟ್ ವ್ಯಾಪಾರ ನಡೆದಿದೆ. ಈಗಾಗಲೇ ಒಂದು ದೂರು ದಾಖಲಾಗಿದೆ ಎಂದು ಹೇಳಿದ್ದಾರೆ.
ನಿಗಮ ಮಂಡಳಿ ನೇಮಕ ವಿಚಾರವಾಗಿ ಮಾತನಾಡಿದ ಅವರು, ಹಬ್ಬ ಮುಗಿದ ಬಳಿಕ ಈ ಬಗ್ಗೆ ಚರ್ಚಿಸುತ್ತೇವೆ. ನಾನು, ಸಿಎಂ ಸಿದ್ದರಾಮಯ್ಯ ಕೂತು ನಿಗಮ ಮಂಡಳಿ ನೇಮಕ ಬಗ್ಗೆ ಮಾತನಾಡುತ್ತೇವೆ. ಸಿಎಂ, ನಾನು ಚರ್ಚೆ ನಡೆಸಿದ ಬಳಿಕ ದೆಹಲಿಯವರು ಆಗಮಿಸುತ್ತಾರೆ. ರಾಜ್ಯ ಕಾಂಗ್ರೆಸ್ ಘಟಕದ ಉಸ್ತುವಾರಿ ಸುರ್ಜೇವಾಲ ಬ್ಯುಸಿ ಇದ್ದಾರೆ. ಅವರು ಬಂದ ಮೇಲೆ ಫೈನಲ್ ಮಾಡುತ್ತೇವೆ. ಶಾಸಕರು, ಕಾರ್ಯಕರ್ತರಿಗೆ ಆದಷ್ಟು ಬೇಗ ಅಧಿಕಾರ ಕೊಡುತ್ತೇವೆ ಎಂದು ಹೇಳಿದ್ದಾರೆ.
ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ: ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ
ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿಬಂದಿದೆ. ಸದ್ಯ ಈ ಕುರಿತಾಗಿ ಮೈಸೂರಿನಲ್ಲಿ ಟಿವಿ9ಗೆ ಸಚಿವೆ ಶೋಭಾ ಕರದ್ಲಾಂಜೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷೆ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಶೋಭಾ ಕರಂದ್ಲಾಜೆ ಮೊದಲ ಪ್ರತಿಕ್ರಿಯೆ, ಶುಭಾಶಯ ಕೋರಿದ ಪ್ರತಾಪ್ ಸಿಂಹ
ನನಗೆ ಒಳ್ಳೇ ಖಾತೆ ಸಿಕ್ಕಿದೆ, ಅಲ್ಲಿಯೇ ಒಳ್ಳೇ ಕೆಲಸ ಮಾಡುತ್ತಿದ್ದೇನೆ. ನನಗೆ ವರಿಷ್ಠರಿಂದಲೂ ಯಾವ ಸೂಚನೆ ಬಂದಿಲ್ಲ. ಇಂತಹ ಸುದ್ದಿ ಹೇಗೆ ಬರುತ್ತಿವೆಯೋ ನನಗೆ ಗೊತ್ತಿಲ್ಲ. ನನ್ನ ಇಚ್ಛೆ ಇರುವುದು ಮುಂದೆಯೂ ಮೋದಿ ಪ್ರಧಾನಿಯಾಗಬೇಕು. ಮೋದಿ ಮತ್ತೆ ಪ್ರಧಾನಿ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 2 ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಾತಿ ನಿರೀಕ್ಷೆ: ಮುಂಚೂಣಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಹೆಸರು
ದೆಹಲಿಯಲ್ಲೇ ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಲಿದೆ. ನಳಿನ್ ಕುಮಾರ್ ಕಟೀಲ್ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಹೊಸ ನೇಮಕಾತಿ ಮಾಡಲಾಗುತ್ತಿದ್ದು, ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.