ದಳಪತಿಗಳಿಗೆ ಮತ್ತೊಂದು ಶಾಕ್: ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ ಜೆಡಿಎಸ್ ಹಾಲಿ MLA
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶಾಸಕ ಗುಬ್ಬಿ ಶ್ರೀನಿವಾಸ್ ಜೆಡಿಎಸ್ ಆಚೆ ಹೋಗಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಜೆಡಿಎಸ್ ಶಾಸಕ ಶಾಕ್ ಕೊಟ್ಟಿದ್ದಾರೆ.
ತುಮಕೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಆರೇಳು ತಿಂಗಳು ಬಾಕಿ ಇದ್ದು, ಆಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಮೇಲಾಟಗಳು ನಡೆದಿವೆ. ಆದ್ರೆ, ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ಗೆ ಒಂದೊಂದೇ ಸಂಕಷ್ಟಗಳು ಎದುರಾಗುತ್ತಿವೆ.
ಹೌದು… ಕೆಲ ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಇನ್ನು ಕೆಲ ಶಾಸಕರು ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದರ ಮಧ್ಯೆ ಇದೀಗ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಧುಗಿರಿ ಕ್ಷೇತ್ರದ ಜೆಡಿಎಸ್ ಶಾಸಕ ವೀರಭದ್ರಯ್ಯ ಘೋಷಣೆ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಜೆಡಿಎಸ್ಗೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ಮುಕ್ತ ಕರ್ನಾಟಕ: ಹೊಸ ಪ್ಲಾನ್ನೊಂದಿಗೆ ಕುಮಾರಸ್ವಾಮಿ-ಕೆಸಿಆರ್ ದೃಢ ಸಂಕಲ್ಪ
IAS ಅಧಿಕಾರಿಯಾಗಿದ್ದ ವೀರಭದ್ರಯ್ಯನವರು 2013ರ ವಿಧಾನಸಭಾ ಚುನಾವಣೆ ವೇಳೆಗೆ ರಾಜೀನಾಮೆ ನೀಡಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣನವರ ಎದುರು ಸೋಲುಂಡಿದ್ದರು. ಬಳಿಕ 2018ರ ಚುನಾವಣೆಯಲ್ಲಿ ರಾಜಣ್ಣ ಅವರನ್ನು ಮಣಿಸಿ ಸೇಡು ತೀರಿಸಿಕೊಂಡಿದ್ರು. ಆದ್ರೆ, ಇದೀಗ ರಾಜಕೀಯದಿಂದ ದೂರ ಉಳಿಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ರಾಜಣ್ಣ ವಿರುದ್ಧ ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಹಾಗಾದ್ರೆ, ವೀರಭದ್ರಯ್ಯ ಅವರು ಕೊನೆದಾಗಿ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಏನು ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.
ಮಧುಗಿರಿ ತಾಲ್ಲೂಕಿನ ಸಿದ್ದಾಪುರದ ಬಳಿಯ ವೇಣುಗೋಪಾಲ ದೇವಾಲಯದ ಬಳಿ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡಿರುವ ಶಾಸಕ ವೀರಭದ್ರಯ್ಯ, ನನಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಕುಟುಂಬದವರು ಒತ್ತಡ ಹೇರುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳು, ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ನೀವೇ ಸ್ಪರ್ಧಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ಕಾರ್ಯಕರ್ತರ ಪ್ರೀತಿ ಅಭಿಮಾನಕ್ಕೆ ಬೆಲೆ ಕೊಡುತ್ತೇನೆ. ನಿಮ್ಮಗಳ ಶಕ್ತಿಯ ಬಗ್ಗೆ ನನಗೆ ಅರಿವಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಆದರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿರುವುದರಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯಲು ಬಯಸಿದ್ದೇನೆ. ರಾಜಕೀಯ ಹೊರತುಪಡಿಸಿ ನಿಮ್ಮೊಂದಿಗೆ ಇದ್ದೇ ಇರುತ್ತೇನೆ. ಈ ಕುರಿತು ಎಚ್.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಹಿರಿಯ ಮುಖಂಡರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.
ನಾನು ರಾಜಣ್ಣನವರ ಟೀಕೆಗಳಿಗೆ ಉತ್ತರ ಕೊಡುತ್ತಿಲ್ಲ, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟಿಸುತ್ತಿಲ್ಲ ಎಂದು ಕೆಲವರು ದೂರಿದ್ದಾರೆ. ಆದರೆ ಅದು ಸುಳ್ಳಾಗಿದ್ದು ಪಕ್ಷದ ಕೆಲಸದಲ್ಲಿ ತೊಡಗಿದ್ದೇನೆ. ಈ ಬಗ್ಗೆ ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ರಾಜಣ್ಣ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಆದರೆ ಎಚ್.ಡಿ ದೇವೇಗೌಡರ ವಿರುದ್ಧ ಮಾತನಾಡಿದಾಗ ಪ್ರತಿಭಟನೆ ನಡೆಸಿದ್ದೇನೆ ಎಂದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:17 pm, Thu, 6 October 22