ಬೆಂಗಳೂರು/ಹಾವೇರಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಒಂದು ಪಕ್ಷದಲ್ಲಿ ರಾಜಕೀಯ ನೆಲೆ ಸಿಗುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಬೇರೆ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಈ ಪಟ್ಟಿಗೆ ಇದೀಗ ಮಾಜಿ ಶಾಸಕ ಯು.ಬಿ. ಬಣಕಾರ್ (U B Banakar) ಸೇರ್ಪಡೆಯಾಗಿದ್ದಾರೆ.
ಹೌದು…. ಮೊನ್ನೇ ಅಷ್ಟೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಶಾಸಕ ಯು.ಬಿ.ಬಣಕಾರ್ ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ನಾಳೆ(ನವೆಂಬರ್ 21) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಯಡಿಯೂರಪ್ಪನವರ ಆಪ್ತ, ಮಾಜಿ ಶಾಸಕ ಬಿಜೆಪಿಗೆ ಗುಡ್ ಬೈ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (BS Yediyurappa) ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಮಾಜಿ ಶಾಸಕ ಬಣಕಾರ್, ತಾಲೂಕಿನಲ್ಲಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ತೊರೆದಿದ್ದಾರೆ. ಎದುರಾಳಿಯಾಗಿದ್ದ ಬಿ.ಸಿ. ಪಾಟೀಲ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಬಣಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಣಕಾರ್ ಅವರನ್ನು ಸಮಾಧಾನಪಡಿಸಲು ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಜೊತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಆದ್ರೆ, ಇದೀಗ ಬಣಕರ್ ಎಲ್ಲಾ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿದ್ದರು. ಬಳಿಕ ಕ್ಷೇತ್ರದ ಮುಖಂಡರ ಬಳಿ ಚರ್ಚಿಸಿ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಇದೀಗ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಬಿ,ಸಿ,ಪಾಟೀಲ್ ವಿರುದ್ಧ ಕಣಕ್ಕೆ?
2018ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಬಿಜೆಪಿಯ ಯು.ಬಿ.ಬಣಕಾರ್ ವಿರುದ್ಧ ಗೆಲುವು ಸಾಧಿಸಿದ್ದರು. ಆದ್ರೆ, ನಂತರ ನಡೆದ ರಾಜಕೀಯ ಬದಲಾವಣೆಯಿಂದಲಾಗಿ ಬಿ.ಸಿ. ಪಾಟೀಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ನಂತರ ನಡೆದ ಹಿರೇಕೆರೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಣಕಾರ್ ಅವರನ್ನು ಸಮಾಧಾನ ಮಾಡಿ ಬಿಸಿ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆ ಚುನಾವಣೆಯಲ್ಲಿ ಬಿಸಿ ಪಾಟೀಲ್ ಗೆದ್ದು ಇದೀಗ ಮಂತ್ರಿಯಾಗಿದ್ದಾರೆ.
2 ಬಾರಿ ಹಿರೇಕೆರೂರು ಕ್ಷೇತ್ರದ ಶಾಸಕರಾಗಿದ್ದ ಯು.ಬಿ.ಬಣಕಾರ್ 1994 ಹಾಗೂ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದ್ರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ವಿರುದ್ಧ ಸೋಲುಕಂಡಿದ್ದರು. ಆದ್ರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಟಿಕೆಟ್ ಬಿ.ಸಿ. ಪಾಟೀಲ್ಗೆ ಖಚಿತ ಎನ್ನಲಾಗಿದೆ. ಇದರಿಂದ ತಮ್ಮ ರಾಜಕೀಯ ನೆಲೆ ಕಂಡುಕೊಳ್ಳಲು ಬಣಕಾರ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ಅಲ್ಲದೇ 2023ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬಣಕಾರ್, ಬಿಸಿ ಪಾಟೀಲ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಬಣಕಾರ್ ಹಾಗೂ ಬಿಸಿ ಪಾಟೀಲ್ ಮತ್ತೆ ರಾಜಕೀಯ ಎದುರಾಳಿಗಳಾಗಲಿದ್ದು, ಪಕ್ಷ ಮಾತ್ರ ಬದಲಾಗಲಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:43 pm, Sun, 20 November 22