ವೈಎಸ್‌ಆರ್‌ಸಿಪಿಗೆ ಸಂಸದ ವಿಪಿಆರ್ ರಾಜೀನಾಮೆ; ಟಿಡಿಪಿ ಸೇರುವ ಸಾಧ್ಯತೆ
ವಿಪಿಆರ್ ಎಂದು ಕರೆಯಲ್ಪಡುವ ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ ಬುಧವಾರ ರಾಜೀನಾಮೆ ನೀಡಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ಅವರು ನೆಲ್ಲೂರು ಸಂಸತ್ ಸ್ಥಾನದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.
ಹೈದರಾಬಾದ್ ಫೆಬ್ರುವರಿ 21: ಆಂಧ್ರಪ್ರದೇಶದ (Andhra Pradesh) ಆಡಳಿತ ಪಕ್ಷ ವೈಎಸ್‌ಆರ್‌ಸಿಪಿಯ (YSRCP) ಮತ್ತೊಬ್ಬ ಸಂಸದರು ರಾಜೀನಾಮೆ ನೀಡಿದ್ದಾರೆ. ವಿಪಿಆರ್ ಎಂದು ಕರೆಯಲ್ಪಡುವ ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ (Vemireddy Prabhakar Reddy) ಅವರು ವೈಎಸ್‌ಆರ್‌ಸಿಪಿ ಟಿಕೆಟ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ವಿಪಿಆರ್ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ರೆಡ್ಡಿ ಒಬ್ಬ ಉದ್ಯಮಿ. ಅವರು 2018 ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು 6 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಅವರು ನೆಲ್ಲೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕಾಗಿತ್ತು. ಆದರೆ ಪಕ್ಷವು ತನ್ನ ಸಂಸತ್ತಿನ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ತನ್ನೊಂದಿಗೆ ಸಮಾಲೋಚಿಸದೆ ಆಯ್ಕೆ ಮಾಡಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿಪಿಆರ್ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ಅವರು ನೆಲ್ಲೂರು ಸಂಸತ್ ಸ್ಥಾನದಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಈಗಾಗಲೇ ನೆಲ್ಲೂರಿನ ಟಿಡಿಪಿ ಮುಖಂಡರು ಬೆಂಬಲ ವ್ಯಕ್ತಪಡಿಸಲು ಅವರ ನಿವಾಸದಲ್ಲಿ ಜಮಾಯಿಸಿದ್ದಾರೆ. ನಾಲ್ಕು ದಿನಗಳ ಹಿಂದೆಯಷ್ಟೇ ಗಣಿ ಉದ್ಯಮಿ ಶ್ರೀಶೈಲ ದೇವಸ್ಥಾನಕ್ಕೆ ₹ 11 ಕೋಟಿ ಮೌಲ್ಯದ 23.6 ಅಡಿ ಎತ್ತರದ ಚಿನ್ನದ ರಥವನ್ನು ಕೊಡುಗೆಯಾಗಿ ನೀಡಿದ್ದರು. ಅವರ ಪತ್ನಿ ಪ್ರಶಾಂತಿ ರೆಡ್ಡಿ ಅವರು ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹುದ್ದೆ ಹೊಂದಿದ್ದು, ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಈಗಾಗಲೇ ಮೂವರು ವೈಎಸ್‌ಆರ್‌ಸಿಪಿ ಸಂಸದರು ಪಕ್ಷ ತೊರೆದಿದ್ದಾರೆ. ಎರಡು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದ ಮಂಗಳಗಿರಿ ಕ್ಷೇತ್ರದ ವೈಎಸ್‌ಆರ್‌ಸಿಪಿ ಶಾಸಕ ಅಲ್ಲಾ ರಾಮಕೃಷ್ಣ ರೆಡ್ಡಿ ನಿನ್ನೆ ಪಕ್ಷಕ್ಕೆ ಮರಳಿದ್ದಾರೆ. ಶಾಸಕರು ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಮರು ಸೇರ್ಪಡೆಗೊಂಡರು. ಕಳೆದ ತಿಂಗಳು ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಅಲ್ಕಾ ರಾಮಕೃಷ್ಣ ರೆಡ್ಡಿ ಅವರು 2019 ರಲ್ಲಿ ಮಂಗಳಗಿರಿಯಿಂದ ನಾರಾ ಲೋಕೇಶ್ ಅವರನ್ನು ಸೋಲಿಸಿದ್ದು ಅವರನ್ನು ಸೋಲಿಸಲು ಮತ್ತೆ ಕಣಕ್ಕಿಳಿಯುವುದಾಗಿ ಶಪಥ ಮಾಡಿದ್ದಾರೆ.
ಇದನ್ನೂ ಓದಿ: ಇಂಡಿಯಾ ಬಣಕ್ಕೆ ಸೇರಿಲ್ಲ, ರಾಜಕೀಯ ಮೈತ್ರಿ ಕುರಿತು ಚರ್ಚೆ ನಡೆಯುತ್ತಿದೆ: ಕಮಲ್ ಹಾಸನ್
ಇಂದು, ಆಂಧ್ರಪ್ರದೇಶದಿಂದ ಮೂರು ವೈಎಸ್‌ಆರ್‌ಸಿಪಿ ಅಭ್ಯರ್ಥಿಗಳಾದ ವೈ ವಿ ಸುಬ್ಬಾ ರೆಡ್ಡಿ, ಜಿ ಬಾಬು ರಾವ್ ಮತ್ತು ಎಂ ರಘುನಾಥ ರೆಡ್ಡಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Wed, 21 February 24