ಹಿರಿಯ ವಕೀಲ ಫಾಲಿ ನಾರಿಮನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕುಮಾರಸ್ವಾಮಿ
ಲೋಕಸಭಾ ಚುನಾವಣೆ ಸಂಬಂಧ ಟಿಕೆಟ್ ಬಗ್ಗೆ ಚರ್ಚಿಸಲು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಜೊತೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದು, ಇಂದು ಅಥವಾ ನಾಳೆ ಬಿಜೆಪಿ ವರಿಷ್ಠರ ಭೇಟಿಯಾಗಲಿದ್ದಾರೆ. ಲೋಕಸಭೆ ಚುನಾವಣೆ, ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದೆಹಲಿ, ಫೆಬ್ರವರಿ 21: ನವದೆಹಲಿಯಲ್ಲಿ ಇಂದು ನಿಧನರಾದ ಪ್ರಖ್ಯಾತ ಸಂವಿಧಾನ ತಜ್ಞರಾದ ಫಾಲಿ ಎಸ್. ನರೀಮನ್ ಅವರ ನಿವಾಸಕ್ಕೆ ತೆರಳಿದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಗೌರವ ಸಮರ್ಪಣೆ ಮಾಡಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಹೆಚ್‌ಡಿ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿಗಳು, ಭಾರತ ಕಂಡ ಶ್ರೇಷ್ಠ ಕಾನೂನು ತಜ್ಞರಲ್ಲಿ ಪ್ರಮುಖರು, ಕಾವೇರಿ ಸೇರಿದಂತೆ ನಾಡಿನ ಅನೇಕ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕದ ಜತೆ ಅಚಲವಾಗಿ ನಿಂತಿದ್ದ ಪದ್ಮಭೂಷಣ ಶ್ರೀ ಫಾಲಿ ನರೀಮನ್ ಅವರ ನಿಧನ ನನಗೆ ಅತೀವ ದುಃಖ ಉಂಟು ಮಾಡಿದೆ ಎಂದಿದ್ದಾರೆ.
ನಂಬಿದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಜನ ಸಾಮಾನ್ಯರಿಗೂ ನ್ಯಾಯ ಧಕ್ಕುವಂತೆ ಮಾಡುವಲ್ಲಿ ನರೀಮನ್ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು, ಅದಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಅವರ ಅಗಲಿಕೆ ದೇಶಕ್ಕೆ, ಅದರಲ್ಲೂ ಕರ್ನಾಟಕಕ್ಕೆ ತುಂಬಲಾಗದ ನಷ್ಟ ಎನ್ನುವುದು ನನ್ನ ಭಾವನೆ. ಆ ಚೇತನಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಭಿಮಾನಿಗಳು, ಕುಟುಂಬದ ಸದಸ್ಯರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ನಿಧನರಾದ ಪ್ರಖ್ಯಾತ ಸಂವಿಧಾನ ತಜ್ಞರಾದ ಶ್ರೀ ಫಾಲಿ ಎಸ್. ನರೀಮನ್ ಅವರ ನಿವಾಸಕ್ಕೆ ತೆರಳಿ ಗೌರವ ಸಮರ್ಪಣೆ ಮಾಡಿ ಅಂತಿಮ ದರ್ಶನ ಪಡೆಯಲಾಯಿತು.
ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರು ನನ್ನ ಜತೆಯಲ್ಲಿದ್ದರು.#FaliSNariman pic.twitter.com/2Hhu4Cq48b
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 21, 2024
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಪಕ್ಷಗಳು ಗೆಲುವಿನ ರಣತಂತ್ರ ರೂಪಿಸುತ್ತಿವೆ. ಲೋಕ ಸಮರಕ್ಕಾಗಿಯೇ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್-ಬಿಜೆಪಿ ನಾಯಕರು ಕಾಂಗ್ರೆಸ್ ಕಟ್ಟಿಹಾಕಲು ಪ್ಲ್ಯಾನ್ ಮಾಡಿದ್ದಾರೆ. ಇದರ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಲು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ದೆಹಲಿಗೆ ಹೋಗಿದ್ದಾರೆ. ಇಂದು ರಾತ್ರಿ 9.30ಕ್ಕೆ ದೆಹಲಿಯ ಕೃಷ್ಣಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಭೇಟಿಯಾಗಲಿರುವ ಕುಮಾರಸ್ವಾಮಿ ಲೋಕಸಭಾ ಚುನಾವಣೆ ಸಂಬಂಧ ಚರ್ಚೆ ಮಾಡಲಿದ್ದಾರೆ. ಜೊತೆಗೆ ರಾಜ್ಯಸಭಾ ಚುನಾವಣೆ ಬಗ್ಗೆಯೂ ಚರ್ಚಿಸಲಿದ್ದು, ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಜೆಡಿಎಸ್-ಜೆಡಿಎಸ್ ಮೈತ್ರಿಕೂಟದ ಜೊತೆ ಸೇರಿ ಲೋಕಸಭೆ ಚುನಾವಣೆ ಎದುರಿಸುವುದಕ್ಕೆ ಮುಂದಾಗಿದೆ. ಆದರೆ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಸೀಟು ಹಂಚಿಕೆ ಗೊಂದಲ ಇನ್ನೂ ಕಡಿಮೆ ಆಗಿಲ್ಲ. ಹಾಸನ, ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಎರಡೂ ಪಕ್ಷಗಳೂ ತಯಾರಿಲ್ಲ.
ಇದನ್ನೂ ಓದಿ: ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಹೆಚ್‌ಡಿ ಕುಮಾರಸ್ವಾಮಿ: ಡಿಕೆ ಶಿವಕುಮಾರ್ ವಾಗ್ದಾಳಿ
ಮೈತ್ರಿ ಸಮನ್ವಯಕ್ಕಾಗಿಯೇ ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ, ಕ್ಲಸ್ಟರ್ ಮೀಟಿಂಗ್ನಲ್ಲಿ ಮೈಸೂರು, ಚಾಮರಾಜಗರ, ಮಂಡ್ಯ, ಹಾಸನ ಕ್ಷೇತ್ರದ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದರು. ಮೈತ್ರಿ ಬಗ್ಗೆ ಅಪಸ್ವರ ಎತ್ತದಂತೆ ಸೂಚಿಸಿದ್ದರು. ಇದಾದ ಬಳಿಕವೂ ವಾಕ್ಸಮರ ಮುಂದುವರಿದಿತ್ತು. ಹಾಸನ ಟಿಕೆಟ್ ವಿಚಾರವಾಗಿ ಹೆಚ್‌ಡಿ ಕುಮಾರಸ್ವಾಮಿ ಮತ್ತು ಪ್ರೀತಂಗೌಡ ಮಧ್ಯೆ ಅಣ್ತಮ್ಮ ಮಾತಿನ ಯುದ್ಧ ನಡೆಯುತ್ತಿದೆ.
ಇತ್ತೀಚೆಗೆ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಹಿಂದೆ ಅಮಿತ್ ಶಾ ಜೊತೆ ಜೆಡಿಎಸ್ ನಾಯಕರ ಮೈತ್ರಿ ಮಾತುಕತೆ ವೇಳೆ ರಾಜ್ಯಕ್ಕೆ ಬಂದಾಗ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದ್ದರಂತೆ. ಹೀಗಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡುದ್ದರು. ಅಮಿತ್ ಶಾ ಕುಮಾರಸ್ವಾಮಿ ನಿವಾಸದ ಭೇಟಿ ಹಿಂದೆ ಸಾಕಷ್ಟು ಲೆಕ್ಕಾಚಾರ ಕೂಡ ಅಡಗಿದ್ದವು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಎಚ್ಡಿಕೆ ಮತ್ತವರ ಕುಟುಂಬ ಕೇಸರಿ ಶಾಲು ಕಿತ್ತೆಸೆಯುವುದು ನಿಶ್ಚಿತ: ಸಿದ್ದು ಭವಿಷ್ಯ
ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ಮಂಡ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಂಡ್ಯದಲ್ಲಿ ಸ್ವಾಭಿಮಾನದ ಅಸ್ತ್ರ ಹೂಡಿ ಈಗಾಗಲೇ ಸಂಸದರಾಗಿರುವ ಸುಮಲತಾ, ಈ ಬಾರಿಯೂ ಸ್ಪಧೆಗಿಳಿಯುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಯಾಕಂದರೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಒಪ್ಪಂದ ನಡೆದಿದೆ. ಇದ್ರಿಂದ ಕೆರಳಿದ್ದ ಸುಮಲತಾ ನೇರವಾಗಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿದ ಸುಮಲತಾ ಬಳಿಕ ಪ್ರಧಾನಿ ನರೇಂದ್ರ ಮೋದಿಯವ್ರನ್ನೂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.