ಚುನಾವಣೆಯಲ್ಲಿ ಪ್ರತಾಪ್​ ಸಿಂಹ ವಿರುದ್ಧ ಡಾಲಿ ಸ್ಪರ್ಧಿಸೋದು ನಿಜವೇ? ಉತ್ತರಿಸಿದ ಧನಂಜಯ

ಅನೇಕ ನಟ-ನಟಿಯರು ರಾಜಕೀಯಕ್ಕೆ ಬಂದು ಯಶಸ್ಸು ಕಂಡಿದ್ದಾರೆ. ಅದೇ ರೀತಿ ಡಾಲಿ ಧನಂಜಯ್​ ಕೂಡ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಬಹುದು ಎಂಬ ಗುಮಾನಿ ಕೂಡ ಕೆಲವರಿಗೆ ಇದೆ. ಈ ಕುರಿತಾಗಿ ಡಾಲಿ ಧನಂಜಯ್​ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ. ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಚುನಾವಣೆಯಲ್ಲಿ ಪ್ರತಾಪ್​ ಸಿಂಹ ವಿರುದ್ಧ ಡಾಲಿ ಸ್ಪರ್ಧಿಸೋದು ನಿಜವೇ? ಉತ್ತರಿಸಿದ ಧನಂಜಯ
ಡಾಲಿ ಧನಂಜಯ್​, ಪ್ರತಾಪ್​ ಸಿಂಹ
Follow us
ಮದನ್​ ಕುಮಾರ್​
|

Updated on: Feb 22, 2024 | 7:26 AM

ಖ್ಯಾತ ನಟ ಡಾಲಿ ಧನಂಜಯ್​ (Daali Dhananjay) ಅವರು ಸಮಾಜದ ಕೆಲವು ಆಗುಹೋಗುಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಹಾಗಾಗಿ ಅವರು ರಾಜಕೀಯಕ್ಕೆ ಬರಲಿ ಎಂಬ ಆಸೆ ಕೆಲವರಿಗೆ ಇದೆ. ಇತ್ತೀಚೆಗೆ ಆ ಬಗ್ಗೆ ಒಂದು ಗಾಸಿಪ್​ ಹಬ್ಬಿತ್ತು. ಲೋಕಸಭಾ (Loksabha Elections) ಚುನಾವಣೆಯಲ್ಲಿ ಪ್ರತಾಪ್​ ಸಿಂಹ (Prathap Simha) ವಿರುದ್ಧ ಡಾಲಿ ಧನಂಜಯ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ಹರಡಿದೆ. ಈ ಬಗ್ಗೆ ಮೊದಲ ಬಾರಿಗೆ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಫೋಟೋ’ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಈ ಬಗ್ಗೆ ಮಾತನಾಡಿದ್ದಾರೆ. ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

‘ಕಲಾವಿದರಾದ ನಾವು ಎಮೋಷನಲ್​ ಆಗಿರುತ್ತೇವೆ. ಹಾಗಾಗಿ ಕೆಲವು ಬೆಳವಣಿಗೆಗಳಿಗೆ ರಿಯಾಕ್ಟ್​ ಮಾಡಿರುತ್ತೇವೆ. ರಾಜಕಾರಣ ಬೇರೆ, ನಾಯಕನಾಗಿರುವುದು ಬೇರೆ. ಅದಕ್ಕೆ ಅದರದ್ದೇ ಆದಂತಹ ಗುಣಗಳು ಇರುತ್ತವೆ. ಅದನ್ನೆಲ್ಲ ನಿಭಾಯಿಸುವ ಶಕ್ತಿ ಇರಬೇಕು. ಅದಕ್ಕೆಲ್ಲ ಸದ್ಯಕ್ಕೆ ನಾನು ಸಿದ್ಧನಿಲ್ಲ’ ಎಂದು ಡಾಲಿ ಹೇಳಿದ್ದಾರೆ. ಒಂದು ವೇಳೆ ಆಫರ್​ ಬಂದರೆ ರಾಜಕೀಯಕ್ಕೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ‘ಖಂಡಿತಾ ಇಲ್ಲ’ ಎಂದು ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ: ಬಜೆಟ್​ನಲ್ಲಿ ಡಾಲಿ ಸಾಹಿತ್ಯ; ‘ಡೇರ್​ಡೆವಿಲ್​ ಮುಸ್ತಾಫಾ’ ಚಿತ್ರದ ಸಾಲು ಓದಿದ ಸಿಎಂ

‘ನೀವು ಗಮನಿಸಿರಬಹುದು. ಬೇರೆ ಅಭ್ಯರ್ಥಿಗಳ ಪರವಾಗಿ ನಾನು ಚುನಾವಣಾ ಪ್ರಚಾರಗಳಿಗೆ ಹೋಗಿಲ್ಲ. ಯಾರೂ ಕರೆದಿಲ್ಲ ಅಂತೇನೂ ಇಲ್ಲ. ನನಗೂ ಎಲ್ಲ ಪಕ್ಷಗಳಲ್ಲಿ ಗೆಳೆಯರು ಇದ್ದಾರೆ. ಕರೆದಿದ್ದರೂ ಕೂಡ ನಾನು ಎಲೆಕ್ಷನ್​ ಪ್ರಚಾರಕ್ಕೆ ಹೋಗಿಲ್ಲ. ಯಾಕೆಂದರೆ, ಅದರಲ್ಲಿ ತೊಡಗಿಕೊಳ್ಳಲು ನನಗೆ ಇಷ್ಟ ಇಲ್ಲ. ನಾನು ಕಾಮನ್​ ಮ್ಯಾನ್​ ಆಗಿ ಇರುಲು ಇಷ್ಟಪಡುತ್ತೇನೆ. ಈ ಬಾರಿ ಕೂಡ ಎಲೆಕ್ಷನ್ ಕ್ಯಾಂಪೇನ್​ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ’ ಎಂದು ಡಾಲಿ ಧನಂಜಯ ಹೇಳಿದ್ದಾರೆ.

ಇದನ್ನೂ ಓದಿ: ಸೆಟ್ಟೇರಿತು ಡಾಲಿ ನಿರ್ಮಾಣದ ಹೊಸ ಸಿನಿಮಾ ‘ಜೆಸಿ’; ಈ ಚಿತ್ರಕ್ಕೆ ಪ್ರಖ್ಯಾತ್​ ಹೀರೋ

‘ರಾಜಕಾರಣ ನನಗೆ ಗೊತ್ತಿಲ್ಲ. ಸಮಾಜದಲ್ಲಿ ಕೆಳಗೆ ಇರುವ ಜನರನ್ನು ಮೇಲಕ್ಕೆ ಎತ್ತುವ ಕೆಲಸ ಮಾಡುವವನೇ ಒಳ್ಳೆಯ ನಾಯಕ. ಅವರು ಯಾವ ಪಕ್ಷದಲ್ಲಾದರೂ ಇರಲಿ. ಅವರಿಗೆ ಸ್ಪಂದಿಸುವವರೆಲ್ಲ ಒಳ್ಳೆಯ ಪ್ರಜೆಗಳು’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಲಿಡ್ಕರ್​ ಉತ್ಪನ್ನಗಳಿಗೆ ಧನಂಜಯ್​ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇತ್ತೀಚೆಗೆ ಬಜೆಟ್​ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಡಾಲಿ ಬರೆದ ಸಾಲುಗಳನ್ನು ಓದಿದ್ದರು. ಈ ಎಲ್ಲ ಕಾರಣಗಳಿಂದಾಗಿ ಧನಂಜಯ್​ ಹೆಸರು ರಾಜಕೀಯ ವಲಯದಲ್ಲಿ ಹೆಚ್ಚು ಕೇಳಿಬರಲು ಆರಂಭಿಸಿದೆ. ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್​ಗಳಿಗೆ ಅವರು ಉತ್ತರ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.