‘ತಗಡು’ ಹೇಳಿಕೆಗೆ ಒಕ್ಕಲಿಗರ ಸಂಘದ ಆಕ್ಷೇಪ; ದರ್ಶನ್ ವಿರುದ್ಧ ಸುದ್ದಿಗೋಷ್ಠಿ
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ನಡುವಿನ ಜಟಾಪಟಿ ಈಗ ಬೇರೆ ಸ್ವರೂಪ ಪಡೆದುಕೊಳ್ಳುವ ಸೂಚನೆ ಸಿಕ್ಕಿದೆ. ತಗಡು ಎಂಬ ಪದವನ್ನು ದರ್ಶನ್ ಅವರು ಬಳಕೆ ಮಾಡಿದ್ದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘ ಕೂಡ ಸುದ್ದಿಗೋಷ್ಠಿ ನಡೆಸಲು ಸಜ್ಜಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ನಟ ದರ್ಶನ್ (Darshan) ಅವರು ‘ಕಾಟೇರ’ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ವೇಳೆ ‘ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಬಗ್ಗೆ ಆಡಿದ ಮಾತುಗಳಿಗೆ ಕೆಲವರಿಂದ ಖಂಡನೆ ವ್ಯಕ್ತವಾಗಿದೆ. ದರ್ಶನ್ ಅವರು ‘ತಗಡು’ ಎಂಬ ಪದ ಬಳಕೆ ಮಾಡಿದ್ದಕ್ಕೆ ಆಕ್ಷೇಪ ಎದುರಾಗಿದೆ. ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಅವರ ಬೆಂಬಲಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲು ರಾಜ್ಯ ಒಕ್ಕಲಿಗರ ಸಂಘ (Vokkaligara Sangha) ಮುಂದಾಗಿದೆ. ಇಂದು (ಫೆಬ್ರವರಿ 22) ಬೆಳಿಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆಯಲಾಗಿದ್ದು, ದರ್ಶನ್ ಅವರ ಹೇಳಿಕೆ ಬಗ್ಗೆ ಒಕ್ಕಲಿಗರ ಸಂಘದ ಪ್ರಮುಖರು ಮಾತನಾಡಲಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಕೆಂಪೇಗೌಡ ಭವನದ 2ನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ‘ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಸಿನಿಮಾ ನಿರ್ಮಾಪಕರೂ ಆಗಿರುವ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಖ್ಯಾತ ನಟರಾದ ದರ್ಶನ್ ಅವರು ಮಾತನಾಡಿದ ರೀತಿ ಸರಿಯಿಲ್ಲ. ಸುಮಾರು ಚಿತ್ರಗಳಿಗೆ ಬಂಡವಾಳ ಹೂಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಉಮಾಪತಿ ಅವರಿಗೆ ತಗಡು ಎಂದು ಅವಹೇಳನಕಾರಿ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿದ್ದು ಸರಿಯಲ್ಲ’ ಎಂದು ಒಕ್ಕಲಿಗರ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ಅವರು ಜೊತೆಯಾಗಿ ‘ರಾಬರ್ಟ್’ ಸಿನಿಮಾ ಮಾಡಿದ್ದರು. ಆ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಅವರಿಬ್ಬರ ನಡುವೆ ವೈಮನಸ್ಸು ಮೂಡಿತು. ಅದು ಈಗ ತಾರಕಕ್ಕೆ ಏರಿದೆ. ‘ಕಾಟೇರ’ ಸಿನಿಮಾದ ಟೈಟಲ್ ನೀಡಿದ್ದು ಮತ್ತು ಕಥೆ ಸಿದ್ಧ ಮಾಡಿಸಿದ್ದು ತಾವೇ ಎಂದು ಉಮಾಪತಿ ಹೇಳಿದ್ದನ್ನು ದರ್ಶನ್ ತಳ್ಳಿಹಾಕಿದರು. ಆ ಸಂದರ್ಭದಲ್ಲಿ ತಗಡು ಎಂಬ ಪದ ಬಳಕೆ ಮಾಡಿದರು. ಅದೇ ಈಗ ಚರ್ಚೆಯ ವಿಷಯ ಆಗಿದೆ.
ಇದನ್ನೂ ಓದಿ: ‘ಸಿನಿಮಾ ಆಗುವ ತನಕ ನಿರ್ಮಾಪಕ, ಆಮೇಲೆ ತಗಡು’; ದರ್ಶನ್ಗೆ ಉಮಾಪತಿ ತಿರುಗೇಟು
‘ಕಾಟೇರ’ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಒಟಿಟಿಯಲ್ಲೂ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದೆ. ಈ ಸಿನಿಮಾಗೆ ತರುಣ್ ಸುಧೀರ್ ಅವರು ನಿರ್ದೇಶನ ಮಾಡಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧಾನಾ ಅವರು ಹೀರೋಯಿನ್ ಆಗಿ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. 50ನೇ ದಿನದ ಸಂಭ್ರಮದಲ್ಲೇ ದರ್ಶನ್ ಆಡಿದ ಮಾತಿನಿಂದ ಜಟಾಪಟಿ ಜೋರಾಗಿದೆ. ಈ ಬಗ್ಗೆ ಒಕ್ಕಲಿಗರ ಸಂಘದವರು ಕೂಡ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಲು ಒಂದಾಗಿರುವುದರಿಂದ ಈ ವಿವಾದ ಇನ್ನೊಂದು ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಸುದ್ದಿಗೋಷ್ಠಿಯಲ್ಲಿ ಏನು ಮಾತನಾಡಲಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.