ತೆರೆಗೆ ಬರುತ್ತಿದೆ ಕಬ್ಬಡ್ಡಿ ಆಟಗಾರನ ದುರಂತದ ಕಥೆ
Parshu: ಕಬ್ಬಡ್ಡಿ ಆಟಗಾರನೊಬ್ಬ ಬದುಕಿನಲ್ಲಿ ನಡೆದ ನೈಜ ಘಟನೆಯನ್ನು ಆಧಾರವಾಗಿಟ್ಟು ಸಿನಿಮಾ ಒಂದು ತೆರೆಗೆ ಬರುತ್ತಿದೆ. ಸಿನಿಮಾಕ್ಕೆ ಸಿಂಪಲ್ ಸುನಿ, ಮಾಜಿ ಪೊಲೀಸ್ ಅಧಿಕಾರಿ ಉಮೇಶ್ ಇನ್ನಿತರರು ಬೆಂಬಲ ನೀಡಿದ್ದಾರೆ.
ಮಾಸ್, ಕಮರ್ಶಿಯಲ್ ಸಿನಿಮಾಗಳ ಅಬ್ಬರದ ನಡುವೆ ಆಗೊಮ್ಮೆ-ಈಗೊಮ್ಮೆ ನೈಜ ಘಟನೆ ಆಧರಿತ ಸಿನಿಮಾ ಕನ್ನಡ ಚಿತ್ರರಂಗದಲ್ಲಿ (Sandalwood) ಬರುತ್ತಲೇ ಇರುತ್ತವೆ. ಇದೀಗ ಹೊಸ ತಂಡವೊಂದು ರಾಜ್ಯ ಮಟ್ಟದ ಕಬ್ಬಡ್ಡಿ ಆಟಗಾರನೊಬ್ಬನ ದುರಂತದ ಕಥೆಯನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈಹಾಕಿದೆ. ಸಿನಿಮಾಕ್ಕೆ ‘ಪರ್ಶು’ ಎಂದು ಹೆಸರಿಡಲಾಗಿದ್ದು, ಸಿನಿಮಾಕ್ಕೆ ಸಿಂಪಲ್ ಸುನಿ, ಮಾಜಿ ಪೊಲೀಸ್ ಅಧಿಕಾರಿ, ನಟಿ ಸಪ್ತಮಿ ಗೌಡ ಅವರ ತಂದೆ ಹೆಚ್ ಸಿ ಉಮೇಶ್, ಕಾಶಿನಾಥ್ ಅವರ ಪುತ್ರ ಅಭಿಮನ್ಯು ಇನ್ನಿತರರು ಶುಭ ಹಾರೈಸಿ ಬೆಂಬಲ ನೀಡಿದ್ದಾರೆ.
‘ಪರ್ಶು’ ಸಿನಿಮಾವನ್ನು ರುದ್ರ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ್ ಅವರಿಗೆ ಇದು ಮೊದಲ ಸಿನಿಮಾ. ಹಾಗೆಂದು ಇವರಿಗೆ ಸಿನಿಮಾ ಹೊಸದೇನಲ್ಲ. ಶ್ರೀನಿವಾಸ್, ಊರ್ವಶಿ ಚಿತ್ರಮಂದಿರದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡಿದ್ದಾರೆ. ಇದೀಗ ನಿರ್ದೇಶಕರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಪರ್ಶು’ ಸಿನಿಮಾಕ್ಕೆ ಪರಶುರಾಮ್ ಬಂಡವಾಳ ಹೂಡುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಕಬ್ಬಡ್ಡಿ ಆಟಗಾರನ ಪಾತ್ರದಲ್ಲಿ ಪರಶುರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. 2014 ಮತ್ತು 2015ರಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಮೈಸೂರು ಭಾಗದ ರಾಜ್ಯಮಟ್ಟದ ಕಬ್ಬಡ್ಡಿ ಆಟಗಾರನೊಬ್ಬನ ಕಥೆ ಇದು. ದೊಡ್ಡ ಆಟಗಾರನಾಗಬೇಕು ಎನ್ನುವ ಕನಸುಕಂಡಿದ್ದ ವ್ಯಕ್ತಿಯ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕುಳುಹಿಸಿ ಆತನ ಜೀವನ ಮತ್ತು ಇಡೀ ಕುಟುಂಬದ ಬದುಕನ್ನೇ ಕಿತ್ತುಕೊಂಡ ಕತೆ ಇದರಲ್ಲಿದೆ.
ಇದನ್ನೂ ಓದಿ:ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ ಸಿಂಪಲ್ ಸುನಿ? ‘ಅವತಾರ ಪುರುಷ’ ನಿರ್ದೇಶಕ ಹೇಳಿದ್ದಿದು..
ಸಿನಿಮಾದ ಪೋಸ್ಟರ್ ಅನಾವರಣ ಮಾಡಿ ಮಾತನಾಡಿದ ಮಾಜಿ ಪೊಲೀಸ್ ಅಧಿಕಾರಿ ಹೆಚ್ ಸಿ ಉಮೇಶ್, ‘ಈ ಸಿನಿಮಾಗೆ ನಾನು ಕೂಡ ಸಾಕಷ್ಟು ಇನ್‌ಪುಟ್ ಕೊಡುತ್ತಿದ್ದೀನಿ. ನನ್ನ ಬೆಂಬಲ ಖಂಡಿತ ಇರುತ್ತೆ’ ಎಂದು ಹೇಳಿದರು. ಇನ್ನು ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ‘ಈ ಕಥೆ ತುಂಬಾ ಚೆನ್ನಾಗಿ ಇದೆ. ನೈಜ ಘಟನೆ ಆಧಾರಿತ ಸಿನಿಮಾ, ಪರಶು ಅವರೇ ಈ ಸಿನಿಮಾಗೆ ಸೂಕ್ತ’ ಎಂದು ಹೇಳಿದರು. ನಟ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಮಾತನಾಡಿ, ‘ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ಜೊತೆಗೆ ಅಷ್ಟೇ ನೋವು ಕೂಡ ಆಯ್ತು. ಕರಳು ಹಿಂಡುವ ಕಥೆ’ ಎಂದರು.
ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಬಡವರ ಮೇಲಿನ ದೌರ್ಜನ್ಯದ ಬಗ್ಗೆ ಇರುವ ಸಿನಿಮಾವಾಗಿದೆ. ಈ ಕಥೆ ಮಾಡುವಾಗ ಆ ಕುಟುಂಬದ ಜೊತೆ ಒಂದಿಷ್ಟು ದಿನ ಇದ್ದೆ’ ಎಂದರು. ನಾಯಕ ಮತ್ತು ನಿರ್ಮಾಪಕ ಪರಶುರಾಮ್ ಮಾತನಾಡಿ, ‘ಅನೇಕ ವರ್ಷಗಳಿಂದ ಈ ಸಿನಿಮಾದ ಕಥೆಗಾಗಿ ಕೆಲಸ ಮಾಡಿದ್ದೀನಿ. ಯಾವುದೇ ತಪ್ಪು ಮಾಡದ ಉತ್ತಮ ಆಟಗಾರನ ದುರಂತ ಬದುಕಿನ ಘಟನೆ ಇದು. ಸಿನಿಮಾಗೆ ಸಹಾಯ ಮಾಡಿ’ ಎಂದು ಮನವಿ ಮಾಡಿದರು. ಅನೇಕ ವರ್ಷಗಳಿಂದ ಈ ಸಿನಿಮಾಗಾಗಿ ತಯಾರಿ ನಡೆಯುತ್ತಿದ್ದು ಇದೀಗ ಅಧಿಕೃತವಾಗಿ ಟೈಟಲ್ ಪೋಸ್ಟರ್ ಲಾಂಚ್ ಮಾಡುವ ಶೂಟಿಂಗ್‌ಗೆ ಸಿದ್ಧವಾಗಿದೆ ಸಿನಿಮಾತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಹೇಳಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ