ಸಾಂಗ್​ ರೆಕಾರ್ಡಿಂಗ್ ಪೂಜೆ: ಮರೆಯಾದ ಸಂಸ್ಕೃತಿಗೆ ಗುರು ದೇಶಪಾಂಡೆ ಮರುಜೀವ

ಹೊಸ ಸಿನಿಮಾಗಾಗಿ ಗುರು ದೇಶಪಾಂಡೆ, ಭರತ್​ ಬಿ.ಜೆ. ಹಾಗೂ ಬಿ.ಎಂ. ಗಿರಿರಾಜ್​ ಒಂದಾಗಿದ್ದಾರೆ. ಈ ಮೂವರ ಕಾಂಬಿನೇಷನ್​ನಲ್ಲಿ ನೂತನ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಹಾಡುಗಳ ರೆಕಾರ್ಡಿಂಗ್​ಗೂ ಮುನ್ನ ಪೂಜೆ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಸಾಂಗ್​ ರೆಕಾರ್ಡಿಂಗ್ ಪೂಜೆ: ಮರೆಯಾದ ಸಂಸ್ಕೃತಿಗೆ ಗುರು ದೇಶಪಾಂಡೆ ಮರುಜೀವ
ಬಿ.ಎಂ. ಗಿರಿರಾಜ್​, ಭರತ್​ ಬಿ.ಜೆ., ಗುರು ದೇಶಪಾಂಡೆ
Follow us
ಮದನ್​ ಕುಮಾರ್​
|

Updated on: Feb 22, 2024 | 3:10 PM

ಗುರು ದೇಶಪಾಂಡೆ (Guru Deshpande) ಅವರು ನಿರ್ದೇಶನ ಮಾತ್ರವಲ್ಲದೇ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಆ ಮೂಲಕ ಅನೇಕರಿಗೆ ಅವಕಾಶ ನೀಡುತ್ತಿದ್ದಾರೆ. ‘ಜಿ ಸಿನಿಮಾಸ್’ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ಹೊಸ ಸಿನಿಮಾಗೆ ಹಾಡುಗಳ ಧ್ವನಿಮುದ್ರಣ ಪೂಜೆ ಮಾಡಲಾಗಿದೆ. ಸದ್ಯಕ್ಕೆ ಈ ಸಿನಿಮಾದ ಶೀರ್ಷಿಕೆ ಬಹಿರಂಗ ಆಗಿಲ್ಲ. ಮುಖ್ಯ ಭೂಮಿಕೆಯಲ್ಲಿ ಯಾರು ನಟಿಸುತ್ತಾರೆ ಎಂಬುದನ್ನು ಕೂಡ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ನಾಗರಭಾವಿಯ ‘ಲೂಪ್ ಸ್ಟುಡಿಯೋಸ್’ನಲ್ಲಿ ಇತ್ತೀಚೆಗೆ ಸಾಂಗ್​ ರೆಕಾರ್ಡಿಂಗ್​ ಪೂಜೆ ನೆರವೇರಿಸಲಾಯಿತು. ಈ ಕಾಲದಲ್ಲಿ ಹಾಡುಗಳ ರೆಕಾರ್ಡಿಂಗ್​ಗೂ ಮೊದಲು ಪೂಜೆ ಮಾಡುವುದು ಕಡಿಮೆ ಆಗಿದೆ. ಆ ಪದ್ಧತಿಗೆ ಗುರು ದೇಶಪಾಂಡೆ ಮರು ಜೀವ ನೀಡಿದ್ದಾರೆ. ಬಿ.ಎಂ ಗಿರಿರಾಜ್ (BM Giriraj) ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಭರತ್​ ಬಿ.ಜೆ. (Bharath BJ) ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

‘ಜಟ್ಟ’, ‘ಮೈತ್ರಿ’ ಮುಂತಾದ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಬಿ.ಎಂ. ಗಿರಿರಾಜ್ ಹಾಗೂ ‘ಸಿಂಪಲ್ಲಾಗ್​ ಒಂದು ಲವ್​ ಸ್ಟೋರಿ’, ‘ಬ್ಯೂಟಿಫುಲ್​ ಮನಸುಗಳು’ ಖ್ಯಾತಿಯ ಸಂಗೀತ ನಿರ್ದೇಶಕ ಭರತ್​ ಬಿ.ಜೆ. ಅವರು ಒಂದಾಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ‘ಈ ಮೊದಲೆಲ್ಲ ಸಾಂಗ್ ರೆಕಾರ್ಡಿಂಗ್ ಪೂಜೆ ಅಂದರೆ ಒಂದು ಸಡಗರದ ರೀತಿ ಇರುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಆ ಸಂಸ್ಕೃತಿ ಮರೆತುಹೋಗಿದೆ. ಗುರು ದೇಶಪಾಂಡೆ ಅವರು ಮತ್ತೆ ಸಾಂಗ್ ರೆಕಾರ್ಡಿಂಗ್ ಪೂಜೆ ಮಾಡಿಸುವ ಮೂಲಕ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಒಳ್ಳೆಯ ದಿನದಂದು ಪೂಜೆ ಆರಂಭಿಸಿದ್ದೇವೆ’ ಎಂದು ಗಿರಿರಾಜ್​ ಹೇಳಿದ್ದಾರೆ.

‘ಈ ಚಿತ್ರದ ಕಥೆ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತದೆ. ಮರೆಯಾಗುತ್ತಿರುವ ಸಂಸ್ಕೃತಿಯನ್ನು ಮತ್ತೆ ತರುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇವೆ’ ಎಂದಿದ್ದಾರೆ ಗಿರಿರಾಜ್​. ‘ಈ ಸಿನಿಮಾದಲ್ಲಿ ನಾಲ್ಕು ಹಾಡುಗಳು ಇರಲಿದೆ’ ಎಂದು ಭರತ್​ ಬಿ.ಜೆ. ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗೀತರಚನೆಕಾರ ಪುನೀತ್ ಆರ್ಯ ಮತ್ತು ವಿತರಕ ವೆಂಕಟ್ ಗೌಡ ಹಾಜರಿದ್ದರು.

ಇದನ್ನೂ ಓದಿ: ಆದಿ ನಟನೆಯ ‘ಕಾಂಗರೂ’ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಶಿವಣ್ಣ

ಈ ಸಿನಿಮಾದ ಬಗ್ಗೆ ಗುರು ದೇಶಪಾಂಡೆ ಮಾಹಿತಿ ಹಂಚಿಕೊಂಡಿದ್ದಾರೆ. ‘ನಮ್ಮ ಜಿ ಅಕಾಡೆಮಿ ಮೂಲಕ ಹಲವು ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಕೇವಲ ನಟನೆ ಕಲಿಸಿದರೆ ಸಾಲದು. ಸೂಕ್ತ ವೇದಿಕೆಯನ್ನೂ ಅವರಿಗೆ ಕಲ್ಪಿಸಿಕೊಡಬೇಕು. ಅದರಲ್ಲೂ ಮುಖ್ಯವಾಗಿ, ಮಧ್ಯಮವರ್ಗದ ಮಕ್ಕಳಿಗೆ ಅವಕಾಶ ಬೇಕು. ಹಾಗಾಗಿ ನಮ್ಮ ಚಿತ್ರದಲ್ಲಿ ಜಿ ಅಕಾಡೆಮಿಯ 15ಕ್ಕೂ ಹೆಚ್ಚು ಮಕ್ಕಳು ಅಭಿನಯಿಸಲಿದ್ದಾರೆ’ ಎಂದಿದ್ದಾರೆ ಗುರು ದೇಶಪಾಂಡೆ.

‘ಸ್ಯಾಂಡಲ್​ವುಡ್​ನ ಖ್ಯಾತ ನಟರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಲಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ. ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಮತ್ತು ಪ್ರಶಸ್ತಿ ಚಿತ್ರಗಳು ಎಂಬ 2 ವಿಭಾಗಗಳಿವೆ. ಆದರೆ ಬೇರೆ ಕಡೆಗಳಲ್ಲಿ ಆ ರೀತಿಯಿಲ್ಲ. ಒಳ್ಳೆಯ ಕಥಾವಸ್ತು ಇರುವ ಸಿನಿಮಾಗಳನ್ನು ಪ್ರೇಕ್ಷಕರು ಖಂಡಿತಾ ನೋಡುತ್ತಾರೆ’ ಎಂದು ಗುರು ದೇಶಪಾಂಡೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.