Banking Stocks: ಒಂದೇ ತಿಂಗಳಲ್ಲಿ ಶೇ 122ರವರೆಗೆ ಗಳಿಕೆ ದಾಖಲಿಸಿವೆ ಈ ಬ್ಯಾಂಕಿಂಗ್ ಷೇರುಗಳು

| Updated By: Ganapathi Sharma

Updated on: Dec 14, 2022 | 5:14 PM

50 ರೂ.ಗಿಂತ ಕಡಿಮೆ ಮೌಲ್ಯದ, ಶೇಕಡಾ 37ರಿಂದ 122ರ ವರೆಗೆ ಗಳಿಕೆ ದಾಖಲಿಸಿದ ಬ್ಯಾಂಕಿಂಗ್ ಷೇರುಗಳ ವಿವರ ಇಲ್ಲಿದೆ.

Banking Stocks: ಒಂದೇ ತಿಂಗಳಲ್ಲಿ ಶೇ 122ರವರೆಗೆ ಗಳಿಕೆ ದಾಖಲಿಸಿವೆ ಈ ಬ್ಯಾಂಕಿಂಗ್ ಷೇರುಗಳು
ಸಾಂದರ್ಭಿಕ ಚಿತ್ರ
Follow us on

ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು (Banking Stocks) ಇತ್ತೀಚೆಗೆ ಹೂಡಿಕೆದಾರರ (Investors) ಪ್ರಮುಖ ಆಕರ್ಷಣೆಯಾಗಿವೆ. ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಷೇರುಗಳು ಕಳೆದ ಕೆಲವು ದಿನಗಳಿಂದ ಷೇರುಪೇಟೆಯಲ್ಲಿ (Stock Market) ಉತ್ತಮ ವಹಿವಾಟು ನಡೆಸುತ್ತಿವೆ. ಈ ಪೈಕಿ ಕೆಲವೊಂದು 52 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಸಾಲ ನೀಡಿಕೆಯಲ್ಲಿ ಹೆಚ್ಚಳ, ಅನುತ್ಪಾದಕ ಆಸ್ತಿ (NPAs) ಪ್ರಮಾಣದಲ್ಲಿ ಇಳಿಕೆ, ಬಡ್ಡಿ ಗಳಿಕೆಯಲ್ಲಿ ಗಣನೀಯ ಹೆಚ್ಚಳ ಮತ್ತಿತರ ಕಾರಣಗಳು ಬ್ಯಾಂಕಿಂಗ್ ಷೇರುಗಳ ಮೌಲ್ಯ ವೃದ್ಧಿಗೆ ಕಾರಣ ಎಂಬುದು ಷೇರು ಮಾರುಕಟ್ಟೆ ತಜ್ಞರ ಅಭಿಮತ. 50 ರೂ.ಗಿಂತ ಕಡಿಮೆ ಮೌಲ್ಯದ, ಶೇಕಡಾ 37ರಿಂದ 122ರ ವರೆಗೆ ಗಳಿಕೆ ದಾಖಲಿಸಿದ ಬ್ಯಾಂಕಿಂಗ್ ಷೇರುಗಳ ವಿವರ ಇಲ್ಲಿದೆ.

ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್

ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ ಕಳೆದ ಕೆಲವು ದಿನಗಳಿಂದ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ದಾಖಲಿಸುತ್ತಿದ್ದು, 52 ವಾರಗಳ ಗರಿಷ್ಠ ಮಟ್ಟ ತಲುಪಿದೆ. ಬುಧವಾರದ ವಹಿವಾಟಿನಲ್ಲಿ ಷೇರು ಶೇಕಡಾ 3ರ ವೃದ್ಧಿ ದಾಖಲಿಸಿ 42.20 ರೂ.ನಲ್ಲಿ ವಹಿವಾಟು ನಡೆಸಿದೆ. ಕಳೆದ ತಿಂಗಳು ಈ ಬ್ಯಾಂಕ್​ನ ಷೇರು ಶೇಕಡಾ 122ರ ಗಳಿಸಿತ್ತು. 18.40 ರೂ.ನಿಂದ ಈ ಮಟ್ಟಕ್ಕೆ ತಲುಪಿದೆ.

ಇದನ್ನೂ ಓದಿ: ICICI Bank Share Price: ಐದೇ ತಿಂಗಳಲ್ಲಿ ಶೇ 40ರಷ್ಟು ವೃದ್ಧಿ ಕಂಡ ಐಸಿಐಸಿಐ ಬ್ಯಾಂಕ್ ಷೇರು ಮೌಲ್ಯ; ಈಗ ಖರೀದಿ ಸೂಕ್ತವೇ?

ಸೆಪ್ಟೆಂಬರ್​​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಈ ಬ್ಯಾಂಕ್​ನ ನಿವ್ವಳ ಲಾಭ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 27.52 ಹೆಚ್ಚಳವಾಗಿತ್ತು. ಬ್ಯಾಂಕ್ 278 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಯುಸಿಒ ಬ್ಯಾಂಕ್

ಯುಸಿಒ ಬ್ಯಾಂಕ್ ಷೇರುಗಳು ಶೇಕಡಾ 9.47ರಷ್ಟು ಹೆಚ್ಚಳದೊಂದಿಗೆ ಟ್ರೇಡಿಂಗ್ ನಡೆಸುತ್ತಿವೆ. ಬುಧವಾರ ಮಧ್ಯಾಹ್ನದ ವಹಿವಾಟಿನಲ್ಲಿ ಈ ಬ್ಯಾಂಕ್ ಷೇರುಗಳು 31.80 ರೂ.ನಂತೆ ವಹಿವಾಟು ನಡೆಸಿವೆ. ಮಂಗಳವಾರವೂ ಶೇಕಡಾ 20ರಷ್ಟು ವೃದ್ಧಿ ದಾಖಲಿಸಿತ್ತು. ಕಳೆದ ಆರು ಟ್ರೇಡಿಂಗ್ ಸೆಷನ್​ನಲ್ಲಿ ಬ್ಯಾಂಕ್​ನ ಷೇರು ಮೌಲ್ಯ 20.30 ರೂ.ನಿಂದ 29.05ಕ್ಕೆ ತಲುಪಿತ್ತು.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಷೇರು ಮಂಗಳವಾರದ ವಹಿವಾಟಿನ ಸಂದರ್ಭ 52 ವಾರಗಳ ಗರಿಷ್ಠ ಮಟ್ಟ ತಲುಪಿ ಶೇಕಡಾ 17.33ರ ಗಳಿಕೆ ದಾಖಲಿಸಿತ್ತು. 40.02 ರೂ.ನಂತೆ ವಹಿವಾಟು ನಡೆಸಿತ್ತು. ಕಳೆದ ವಾರವೊಂದರಲ್ಲೇ ಬ್ಯಾಂಕ್​ನ ಷೇರು ಮೌಲ್ಯ 26.35 ರೂ.ನಿಂದ 39.60 ರೂ.ಗೆ ಹೆಚ್ಚಳವಾಗಿತ್ತು. ಕಳೆದ ಮೂರು ತಿಂಗಳಲ್ಲಿ ಒಟ್ಟಾರೆಯಾಗಿ ಶೇಕಡಾ 92.23ರ ವೃದ್ಧಿ ದಾಖಲಿಸಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ

ಬ್ಯಾಂಕ್ ಆಫ್ ಮಹಾರಾಷ್ಟ್ರ ಷೇರುಗಳು ಮಂಗಳವಾರದ ವಹಿವಾಟಿನ ವೇಳೆಗೆ ಶೇಕಡಾ 13.70 ಗಳಿಕೆ ದಾಖಲಿಸಿವೆ. 52 ವಾರಗಳ ಗರಿಷ್ಠ ವಹಿವಾಟು ದಾಖಲಿಸಿವೆ. ಮಂಗಳವಾರಕ್ಕೆ ಕೊನೆಗೊಂಡ 9 ಟ್ರೇಡಿಂಗ್ ಸೆಷನ್​ಗಳಲ್ಲಿ ಬ್ಯಾಂಕ್​ನ ಷೇರು ಮೌಲ್ಯ 33.6 ರೂ.ಗೆ ತಲುಪಿದೆ. ಅಕ್ಟೋಬರ್​​ನಲ್ಲಿ ಷೇರು ಮೌಲ್ಯ 17.80 ರೂ. ಇತ್ತು. ಬುಧವಾರ ಮಧ್ಯಾಹ್ನದ ವೇಳೆಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಷೇರು ಮತ್ತೆ ಶೇಕಡಾ 7ರ ಗಳಿಕೆ ದಾಖಲಿಸಿ 34.95 ರೂ.ನಲ್ಲಿ ವಹಿವಾಟು ನಡೆಸಿದೆ.

ಸೌತ್ ಇಂಡಿಯನ್ ಬ್ಯಾಂಕ್

ಕಳೆದ ಒಂದು ತಿಂಗಳ ಅವಧಿಯಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ಷೇರುಮಾರುಕಟ್ಟೆಯಲ್ಲಿ ತೋರುತ್ತಿರುವ ಸಕಾರಾತ್ಮಕ ಟ್ರೆಂಡ್​ನಿಂದ ಷೇರುದಾರರು ಹರ್ಷಗೊಂಡಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಷೇರು ಮೌಲ್ಯ 14.20 ರೂ.ನಿಂದ ಸುಮಾರು 20 ರೂ.ಗೆ ತಲುಪಿದೆ. ಅಂದರೆ ಶೇಕಡಾ 38ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. ಸೆಪ್ಟೆಂಬರ್​​​ನಲ್ಲಿ ಷೇರು ಮೌಲ್ಯ 8.60 ರೂ. ಇತ್ತು. ಅಂದರೆ ಈವರೆಗೆ ಶೇಕಡಾ 127ರಷ್ಟು ಗಳಿಕೆ ದಾಖಲಿಸಿದಂತಾಗಿದೆ. ಬುಧವಾರದ ವಹಿವಾಟಿನಲ್ಲಿ ಷೇರು ಮೌಲ್ಯ 19.8 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ