ಮುಂಬೈ: ಸತತ ಏಳು ದಿನಗಳಿಂದ ಗಳಿಕೆಯ ಓಟ ಮುಂದುವರಿಸಿದ್ದ ಷೇರುಪೇಟೆ (Stock Market) ಮಂಗಳವಾರ ಮುಗ್ಗರಿಸಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿನ ವಹಿವಾಟು ಕುಸಿತ, ಯುರೋಪಿಯನ್ ಮಾರುಕಟ್ಟೆಗಳ ಮಿಶ್ರ ಫಲಿತಾಂಶಗಳು ಬಿಎಸ್ಇ (BSE) ಮತ್ತು ನಿಫ್ಟಿ (NSE Nifty) ವಹಿವಾಟಿನ ಮೇಲೆ ಪರಿಣಾಮ ಬೀರಿವೆ. ದಿನದ ವಹಿವಾಟಿನ ಆರಂಭದಲ್ಲಿ ಗಳಿಕೆ ದಾಖಲಿಸಿದ್ದ ಬಿಎಸ್ಇ 317.87 ಅಂಶ ಇಳಿಕೆಯೊಂದಿಗೆ 59,513.79 ರಲ್ಲಿ ವಹಿವಾಟು ಕೊನೆಗೊಳಿಸಿತು. ಎನ್ಎಸ್ಇ ನಿಫ್ಟಿ ಕೂಡ 74.40 ಇಳಿಕೆಯಾಗಿ 17,656.35 ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು.
ಸೆನ್ಸೆಕ್ಸ್ನಲ್ಲಿ ನೆಸ್ಲೆ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫಿನ್ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್ಡಿಎಫ್ಸಿ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಹಾಗೂ ಏಷ್ಯನ್ ಪೇಂಟ್ಸ್ ಷೇರುಗಳ ವಹಿವಾಟಿನಲ್ಲಿ ಕುಸಿತ ಕಂಡಿತು.
ಟೆಕ್ ಮಹೀಂದ್ರಾ, ಮಾರುತಿ, ಎಲ್ ಆ್ಯಂಡ್ ಟಿ, ಡಾ. ರೆಡ್ಡೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎನ್ಟಿಪಿಸಿ ಷೇರುಗಳು ಗಳಿಕೆ ದಾಖಲಿಸಿದವು.
ಇದನ್ನೂ ಓದಿ: Muhurat Trading: ಉತ್ತಮ ಗಳಿಕೆಯೊಂದಿಗೆ ಮುಹೂರ್ತ ಟ್ರೇಡಿಂಗ್ ಮುಗಿಸಿದ ನಿಫ್ಟಿ, ಸೆನ್ಸೆಕ್ಸ್, ಇಲ್ಲಿದೆ ಗಳಿಕೆ ವಿವರ
ಸಿಯೋಲ್, ಶಾಂಘೈ, ಹಾಂಗ್ಕಾಂಗ್ ನಗರಗಳಲ್ಲಿ ಮಾರುಕಟ್ಟೆ ವಹಿವಾಟು ಕುಸಿತ ಕಂಡರೆ, ಟೋಕಿಯೊದಲ್ಲಿ ಮಾತ್ರ ವಹಿವಾಟು ವೃದ್ಧಿ ದಾಖಲಿಸಿತು. ಯುರೋಪ್ನಲ್ಲಿ ಷೇರುಮಾರುಕಟ್ಟೆ ಮಿಶ್ರ ವಹಿವಾಟು ದಾಖಲಿಸಿತು.
ಕಳೆದ 7 ದಿನಗಳಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಉತ್ತಮ ವಹಿವಾಟು ನಡೆಸಿದ್ದವು. ಪ್ರತಿ ದಿನ ಗಳಿಕೆಯೊಂದಿಗೆ ವಹಿವಾಟು ಮುಗಿಯುತ್ತಿತ್ತು. ಸೋಮವಾರ ಸಂಜೆ ದೀಪಾವಳಿ ಪ್ರಯುಕ್ತ ನಡೆದ ಮುಹೂರ್ತ ಟ್ರೇಡಿಂಗ್ನಲ್ಲಿಯೂ ಮಾರುಕಟ್ಟೆ ವಹಿವಾಟು ಚೆನ್ನಾಗಿಯೇ ನಡೆದಿತ್ತು. ಸೋಮವಾರ ಸಂಜೆ 6.15ರಿಂದ 7.15ರ ವರೆಗೆ ನಡೆದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 524.51 ಅಂಶ ಏರಿಕೆ ಕಂಡು 89,831.66ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ನಿಫ್ಟಿ 154.45 ಅಂಶ ಚೇತರಿಕೆ ಕಂಡು 17,730.75ರಲ್ಲಿ ವಹಿವಾಟು ಕೊನೆಗೊಳಿಸಿತ್ತು.
ರೂಪಾಯಿ ಮೌಲ್ಯ ತುಸು ವೃದ್ಧಿ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 7 ಪೈಸೆ ಚೇತರಿಕೆ ದಾಖಲಿಸಿ 82.81 ಆಯಿತು. ಕಚ್ಚಾ ತೈಲ ಬೆಲೆ ಇಳಿಕೆ ಮತ್ತು ಖರೀದಿ ಪ್ರಕ್ರಿಯೆಯು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿತು.
ವಹಿವಾಟಿನ ಆರಂಭದ ಕೆಲವು ಗಂಟೆಗಳಲ್ಲಿ ಉತ್ತಮ ಚೇತರಿಕೆ ಕಂಡಿದ್ದ ರೂಪಾಯಿ ಒಂದು ಹಂತದಲ್ಲಿ 26 ಪೈಸೆ ವೃದ್ಧಿಯಾಗಿ 82.62 ರಲ್ಲಿ ವಹಿವಾಟು ನಡೆಸಿತ್ತು. ಈ ಮೂಲಕ ಭರವಸೆ ಮೂಡಿಸಿತ್ತು. ಆದರೆ ನಂತರದ ಟ್ರೆಂಡ್ಗಳಲ್ಲಿ ಮೌಲ್ಯ ಇಳಿಕೆಯಾಯಿತು. ಅಂತಿಮವಾಗಿ 82.81ರಲ್ಲಿ ವಹಿವಾಟು ಕೊನೆಗೊಳಿಸಿತು. ಸೋಮವಾರ ದೀಪಾವಳಿ ಪ್ರಯುಕ್ತ ವಿನಿಮಯ ಮಾರುಕಟ್ಟೆ ಕಾರ್ಯ ನಿರ್ವಹಿಸಿರಲಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ