Upcoming IPO: ದೀರ್ಘಾವಧಿ ಹೂಡಿಕೆಗೆ ಯೋಚಿಸುತ್ತಿದ್ದೀರಾ? ಈ ತಿಂಗಳು ಐಪಿಒ ಬಿಡುಗಡೆ ಮಾಡುವ ಕಂಪನಿಗಳ ವಿವರ ಇಲ್ಲಿದೆ
ನವೆಂಬರ್ ತಿಂಗಳೊಂದರಲ್ಲೇ 10 ಐಪಿಒಗಳು ಖರೀದಿಗೆ ಮುಕ್ತವಾಗಿದ್ದವು. ಕೊನೆಯ, ಅಂದರೆ ಡಿಸೆಂಬರ್ ತಿಂಗಳಿನಲ್ಲಿಯೂ ಹೆಚ್ಚು ಸಂಖ್ಯೆಯ ಐಪಿಒಗಳು ಲಭ್ಯವಾಗುವ ನಿರೀಕ್ಷೆ ಇದೆ. ಈ ತಿಂಗಳು ಐಪಿಒ ಆಫರ್ ನೀಡುವ ಕೆಲವು ಕಂಪನಿಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಈ ವರ್ಷ ಆರಂಭದ ತಿಂಗಳುಗಳಲ್ಲಿ ಕಡಿಮೆ ಸಂಖ್ಯೆಯ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ (Stock Market) ಲಿಸ್ಟಿಂಗ್ ಮಾಡಿಕೊಂಡಿದ್ದು, ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPO) ಮೂಲಕ ಷೇರು ಮಾರಾಟ ಮಾಡಿದ್ದವು. ಆದರೆ ವರ್ಷದ ಕೊನೆಯ ತಿಂಗಳುಗಳು ಸಮೀಪಿಸುತ್ತಿದ್ದಂತೆ ಐಪಿಒಗಳ ಸಂಖ್ಯೆ ಹೆಚ್ಚಾಗಿದೆ. ನವೆಂಬರ್ ತಿಂಗಳೊಂದರಲ್ಲೇ 10 ಐಪಿಒಗಳು ಖರೀದಿಗೆ ಮುಕ್ತವಾಗಿದ್ದವು. ಕೊನೆಯ, ಅಂದರೆ ಡಿಸೆಂಬರ್ ತಿಂಗಳಿನಲ್ಲಿಯೂ ಹೆಚ್ಚು ಸಂಖ್ಯೆಯ ಐಪಿಒಗಳು ಲಭ್ಯವಾಗುವ ನಿರೀಕ್ಷೆ ಇದೆ. ದೀರ್ಘಾವಧಿಯ ಹೂಡಿಕೆಗೆ ಹೂಡಿಕೆದಾರರು ಈ ಐಪಿಒಗಳನ್ನು ಗಮನಿಸಬಹುದು ಎಂದಿದ್ದಾರೆ ಷೇರುಪೇಟೆ ಹೂಡಿಕೆ ತಜ್ಞರು. ಸದ್ಯ ಷೇರು ಮಾರುಕಟ್ಟೆ ವಹಿವಾಟು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದರ ಲಾಭವನ್ನು ಪಡೆಯಲು ಮುಂದಾಗಿರುವ ಕಂಪನಿಗಳು ಐಪಿಒಗೆ ಮುಂದಾಗಿವೆ ಎನ್ನಲಾಗಿದೆ.
ಈ ತಿಂಗಳು ಐಪಿಒ ಆಫರ್ ನೀಡುವ ಕೆಲವು ಕಂಪನಿಗಳ ವಿವರವನ್ನು ಇಲ್ಲಿ ನೀಡಲಾಗಿದೆ;
ಫಾರ್ಮ್ಈಸಿ ಐಪಿಒ
ವರದಿಗಳ ಪ್ರಕಾರ, ಭಾರತದ ಅತಿದೊಡ್ಡ ಡಿಜಿಟಲ್ ಆರೋಗ್ಯ ಸೇವೆ ತಾಣ ಫಾರ್ಮ್ಈಸಿ 6,200 ಕೋಟಿ ಮೊತ್ತದ ಷೇರುಗಳ ಐಪಿಒಗೆ ಮುಂದಾಗಿದೆ ಎನ್ನಲಾಗಿದೆ. ಈ ಪೈಕಿ ಆರ್ಗಾನಿಕ್ ಗ್ರೋಥ್ಗಾಗಿ 1,259 ಕೋಟಿ ರೂ. ಸಂಗ್ರಹಿಸಲು ಕಂಪನಿ ಗುರಿ ಹೊಂದಿದೆ ಎನ್ನಲಾಗಿದೆ. ಉಳಿದ ಮೊತ್ತವನ್ನು ಪ್ರಿಪೇಮೆಂಟ್ ಅಥವಾ ರಿಪೇಮೆಂಟ್ಗೆ ಬಳಸಿಕೊಳ್ಳಲು ಕಂಪನಿ ನಿರ್ಧರಿಸಿದೆ ಎನ್ನಲಾಗಿದೆ.
ಪುರಾಣಿಕ್ ಬ್ಯುಲ್ಡರ್ಸ್ ಲಿಮಿಟೆಡ್ ಐಪಿಒ
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದಶಕಗಳ ಅನುಭವ ಉಳ್ಳ ಪುರಾಣಿಕ್ ಬ್ಯುಲ್ಡರ್ಸ್ ಲಿಮಿಟೆಡ್ ಕೂಡ ಈ ತಿಂಗಳು ಐಪಿಒ ನೀಡಲು ಮುಂದಾಗಿದೆ. ವಾಣಿಜ್ಯ ಮತ್ತು ವಸತಿ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಈ ಕಂಪನಿ ಸುಮಾರು 510 ಕೋಟಿ ರೂ. ಮೊತ್ತದ ಐಪಿಒ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಆದರೆ, ಐಪಿಒ ಮೊತ್ತ ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗಿದೆ. ಇದೊಂದು ಉತ್ತಮ ಲಾಭ ಗಳಿಸುವ ಕಂಪನಿಯಾಗಿದೆ. ಆದರೆ, ಕೋವಿಡ್ ಸಾಂಕ್ರಾಮಿಕದ ನಂತರ ಕಂಪನಿಯ ಲಾಭ ಪ್ರಮಾಣ ತುಸು ಕಡಿಮೆಯಾಗಿತ್ತು.
ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಮಾರ್ಚ್ನಲ್ಲಿ ಡಿಎ ಹೆಚ್ಚಳ ನಿರೀಕ್ಷೆ
ಓಯೋ ರೂಮ್ಸ್ ಐಪಿಒ
ಓಯೋ ರೂಮ್ಸ್ ಕೂಡ ಶೀಘ್ರದಲ್ಲೇ ಐಪಿಒ ಕೊಡುಗೆ ನೀಡುವ ಸಾಧ್ಯತೆ ಇದೆ. 8,430 ಕೋಟಿ ರೂ. ಮೊತ್ತದ ಐಪಿಒ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಆದರೆ, ಸದ್ಯ ಕಂಪನಿಯ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು 333 ಕೋಟಿ ನಷ್ಟ ಅನುಭವಿಸಿದೆ.
ಲ್ಯಾಂಡ್ಮಾರ್ಕ್ ಕಾರ್ಸ್ ಲಿಮಿಟೆಡ್ ಐಪಿಒ
ಮರ್ಸಿಡಿಸ್ ಬೆಂಜ್, ವೋಕ್ಸ್ವೇಗನ್, ಹೋಂಡಾ, ಜೀಪ್, ರೆನಾಲ್ಟ್ ವಾಹನಗಳ ಮಾರಾಟದ ಡೀಲರ್ಶಿಪ್ ಹೊಂದಿರುವ ಲ್ಯಾಂಡ್ಮಾರ್ಕ್ ಕಾರ್ಸ್ ಲಿಮಿಟೆಡ್ ಈ ತಿಂಗಳು ಐಪಿಒ ಬಿಡುಗಡೆ ಮಾಡಲು ಮುಂದಾಗಿದೆ. ಐಪಿಒದ ಒಟ್ಟು ಗಾತ್ರ 762 ಕೋಟಿ ರೂ. ಇರಲಿದ್ದು, ಈ ಪೈಕಿ 150 ಕೋಟಿ ರೂ. ಮೊತ್ತದ ಹೊಸ ಐಪಿಒ ಬಿಡುಗಡೆ ಮಾಡಲಿದೆ. 19 ಮತ್ತು 20ನೇ ಹಣಕಾಸು ವರ್ಷದಲ್ಲಿ ಕಂಪನಿಯು ಲಾಭದಾಯಕವಾಗಿರಲಿಲ್ಲ. ಆದರೆ, 21ನೇ ಹಣಕಾಸು ವರ್ಷದಲ್ಲಿ 11.15 ಕೋಟಿ ರೂ. ಲಾಭ ಗಳಿಸಿದೆ.
ಟಿಬಿಒ ಟೆಕ್ ಲಿಮಿಟೆಡ್ ಐಪಿಒ
ಜಾಗತಿಕ ಮಟ್ಟದಲ್ಲಿ ಪ್ರಯಾಣ, ಪ್ರವಾಸಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಟಿಬಿಒ ಟೆಕ್ ಲಿಮಿಟೆಡ್ 2,100 ಕೋಟಿ ರೂ. ಮೊತ್ತದ ಐಪಿಒಗೆ ಚಿಂತನೆ ನಡೆಸಿದೆ. ಈಗಾಗಲೇ ಇರುವ 900 ಕೋಟಿ ರೂ. ಮೊತ್ತದ ಷೇರುಗಳ ಮಾರಾಟ ಮಾಡಲಿದ್ದು, ಉಳಿದ ಮೊತ್ತಕ್ಕೆ ಹೊಸ ಷೇರುಗಳನ್ನು ಇಶ್ಯೂ ಮಾಡಲಿದೆ.
ಗೋ ಏರ್ಲೈನ್ಸ್ ಐಪಿಒ
ಗೋ ಫಸ್ಟ್ ಎಂದೂ ಪ್ರಸಿದ್ಧವಾಗಿರುವ, ವಾಡಿಯಾ ಗ್ರೂಪ್ನ ಗೋ ಏರ್ಲೈನ್ಸ್ 25 ಪ್ರಮುಖ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ಕಂಪನಿ ಕೂಡ ಡಿಸೆಂಬರ್ನಲ್ಲಿ ಐಪಿಒಗೆ ಉದ್ದೇಶಿಸಿದೆ. ಆದರೆ, ಎಷ್ಟು ಮೊತ್ತದ ಐಪಿಒ ಬಿಡುಗಡೆ ಮಾಡಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ