ಮುಂಬೈ: ಸತತ ಎರಡು ದಿನಗಳ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆಗಳು (Stock Market) ಶುಕ್ರವಾರ ಸಂಜೆ ತುಸು ಗಳಿಕೆಯೊಂದಿಗೆ ವಾರಾಂತ್ಯದ ವಹಿವಾಟು ಮುಗಿಸಿವೆ. ಏಷ್ಯಾ ಮಾರುಕಟ್ಟೆ ಬೆಳವಣಿಗೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿಗೆ ಮುಂದಾಗಿರುವುದು ಸೆನ್ಸೆಕ್ಸ್ (BSE Sensex) ಮತ್ತು ನಿಫ್ಟಿಯಲ್ಲಿ (Nifty) ಚೇತರಿಕೆಗೆ ಕಾರಣವಾಯಿತು. ರೂಪಾಯಿ ಮೌಲ್ಯದಲ್ಲಿ ಗಣನೀಯ ಚೇತರಿಕೆಯೂ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸಫಲವಾಯಿತು.
ಬಿಎಸ್ಇ ಸೆನ್ಸೆಕ್ಸ್ 113.95 ಅಂಶ ಚೇತರಿಸಿ, ಶೇಕಡಾ 0.19ರ ಹೆಚ್ಚಳದೊಂದಿಗೆ 60,950.36ರಲ್ಲಿ ವಹಿವಾಟು ಮುಗಿಸಿತು. ನಿಫ್ಟಿ ಶೇಕಡಾ 0.36ರ ಹೆಚ್ಚಳದೊಂದಿಗೆ, 64.45 ಅಂಶ ಚೇತರಿಸಿಕೊಂಡು 18,117.15 ರಲ್ಲಿ ವಾರದ ವಹಿವಾಟು ಕೊನೆಗೊಳಿಸಿತು.
ಯಾವೆಲ್ಲ ಕಂಪನಿಗಳಿಗೆ ಲಾಭ?
ಬಜಾಜ್ ಫಿನ್ಸರ್ವ್ ಗಳಿಕೆದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 4.45ರ ವೃದ್ಧಿಯಾಗಿದೆ. ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಎಸ್ಬಿಐ, ರಿಲಯನ್ಸ್ ಇಂಡಸ್ಟ್ರೀಸ್, ಏಷ್ಯನ್ ಪೈಂಟ್ಸ್, ಬಜಾಜ್ ಫಿನ್ಸರ್ವ್ ಮತ್ತು ವಿಪ್ರೋ ಷೇರುಗಳ ಮೌಲ್ಯದಲ್ಲಿ ವೃದ್ಧಿಯಾಯಿತು.
ಕಳೆದುಕೊಂಡ ಕಂಪನಿಗಳಿವು…
ಡಾ. ರೆಡ್ಡೀಸ್, ಇನ್ಫೋಸಿಸ್, ಹಿಂದೂಸ್ತಾನ್ ಯುನಿಲೀವರ್, ಎಚ್ಡಿಎಫ್ಸಿ ಬ್ಯಾಂಕ್, ಎನ್ಟಿಪಿಸಿ, ಪವರ್ಗ್ರಿಡ್, ಭಾರ್ತಿ ಏರ್ಟೆಲ್ ಷೇರುಗಳ ಮೌಲ್ಯದಲ್ಲಿ ಸುಮಾರು ಶೇಕಡಾ 1.49ರ ಕುಸಿತ ಕಂಡುಬಂತು.
ವಿದೇಶಿ ಹೂಡಿಕೆ ನೆರವಾಯ್ತೆಂದ ವಿಶ್ಲೇಷಕರು
ಬ್ಯಾಂಕ್ ಆಫ್ ಇಂಗ್ಲೆಂಡ್ ತನ್ನ ಹಣಕಾಸು ನೀತಿಯಲ್ಲಿ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಿಸಿರುವುದನ್ನು ಉಲ್ಲೇಖಿಸಿದ್ದು, ಕಠಿಣ ಕ್ರಮದ ಸೂಚನೆ ನೀಡಿದೆ. ಆರ್ಥಿಕ ಹಿಂಜರಿಕೆಯ ಕಾರಣ ಫಾರ್ಮಾ, ಐಟಿ ಕ್ಷೇತ್ರದ ಷೇರುಗಳ ಮಾರಾಟ ಮುಂದುವರಿದಿದೆ. ಡಾಲರ್ ವೃದ್ಧಿಯಾಗಿರುವುದು ಜಾಗತಿಕ ಕೇಂದ್ರೀಯ ಬ್ಯಾಂಕ್ಗಳ ಮೇಲೆ ಪ್ರಭಾವ ಬೀರಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮುಂದುವರಿಸಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.
ಇದನ್ನೂ ಓದಿ: ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಸೇವಾ ಶುಲ್ಕ ಪರಿಷ್ಕರಿಸಿದ ಪೇಮೆಂಟ್ಸ್ ಬ್ಯಾಂಕ್; ಇಲ್ಲಿದೆ ಪರಿಷ್ಕೃತ ದರ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 677.62 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದರೊಂದಿಗೆ ಒಂದು ವಾರದ ಹಿಂದೆ ಇದ್ದ ಟ್ರೆಂಡ್ ಕೊನೆಯಾಗಿದೆ. ವಾರದ ಹಿಂದೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂಪಡೆಯುವಿಕೆಗೆ ಮುಂದಾಗಿದ್ದರಿಂದ ಷೇರುಪೇಟೆಯಲ್ಲಿ ಅನಿಶ್ಚಿತತೆ ಮೂಡಿತ್ತು.
ಷೇರುಪೇಟೆ ವಾರದ ಹಿನ್ನೋಟ
ವಾರದ ಮಟ್ಟಿಗೆ ಹೇಳುವುದಾದರೆ ಸೆನ್ಸೆಕ್ಸ್ 990.51ರ ಚೇತರಿಕೆ ದಾಖಲಿಸಿದ್ದು, ಶೇಕಡಾ 1.65ರ ಬೆಳವಣಿಗೆ ಸಾಧಿಸಿದೆ. ನಿಫ್ಟಿ 330.35 ಅಂಶ ಚೇತರಿಸಿ ಶೇಕಡಾ 1.85ರ ವೃದ್ಧಿ ದಾಖಲಿಸಿದೆ. ಆರೋಗ್ಯ, ಐಟಿ, ಟೆಕ್ ಕ್ಷೇತ್ರದ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿದೆ.
ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ವೃದ್ಧಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 2.34ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್ಗೆ 96.89 ಡಾಲರ್ ಆಯಿತು. ಈ ಮಧ್ಯೆ, ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 47 ಪೈಸೆ ವೃದ್ಧಿಯಾಗಿ 82.41 ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಕಳೆದ ವಾರ ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಮತ್ತೆ ಚೇತರಿಕೆಯ ಹಾದಿ ಹಿಡಿದಿದೆ.
ವಿದೇಶಿ ವಿನಿಮಯ ಮೀಸಲು 53,108 ಡಾಲರ್ಗೆ
ಅಕ್ಟೋಬರ್ 28ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 655.99 ಕೋಟಿ ಡಾಲರ್ ಹೆಚ್ಚಾಗಿ 53,108 ಕೋಟಿ ಡಾಲರ್ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ