ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ ದೇಶದಲ್ಲಿಯೇ ಮೊದಲ ಕೊರೊನಾ ಸೋಂಕು ಪ್ರಕರಣ ವರದಿಯಾಗಿತ್ತು. ಈ ಸಾಂಕ್ರಾಮಿಕ ವಿರುದ್ಧದ ಹೋರಾಟ ಇನ್ನೂ ಮುಂದುವರಿದಿದೆ. ಒಂದಿಡಿ ವರ್ಷ ಭಾರತವನ್ನು ಕಾಡಿದ ಕೊರೊನಾ ಸೋಂಕಿಗೆ ಇದೀಗ ಲಸಿಕೆಯ ಭರವಸೆಯೇನೋ ಸಿಕ್ಕಿದೆ. ಆದರೆ ಅಷ್ಟರಲ್ಲಿ ರೂಪಾಂತರದ ಆತಂಕವೂ ಎದುರಾಗಿದೆ. ಒಂದು ಸಮಾಜವಾಗಿ ಭಾರತ ಕೊರೊನಾ ಬಿಕ್ಕಟ್ಟು ಎದುರಿಸಿದ್ದು ಆಧುನಿಕ ಇತಿಹಾಸದ ಯಶೋಗಾಥೆಗಳಲ್ಲಿ ಒಂದು. ಈ ಹೆಜ್ಜೆ ಗುರುತುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ.
ಸೋಂಕು ವರದಿಯಾದ ಆರಂಭದ ದಿನಗಳಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಮೊದಲ ಬಾರಿ ಜನತಾ ಕರ್ಫ್ಯೂ ಹೇರಲಾಯಿತು. ಆನಂತರ ಲಾಕ್ಡೌನ್, ನೈಟ್ ಕರ್ಫ್ಯೂ, ಸೀಲ್ ಡೌನ್ ಹೀಗೆ ಅನೇಕ ಕ್ರಮಗಳನ್ನು ಸರ್ಕಾರ, ಸ್ಥಳೀಯ ಆಡಳಿತ ಸಂಸ್ಥೆಗಳು ಕೈಗೊಂಡವು. ಸೋಂಕು ಪ್ರಕರಣಗಳ ಸಂಖ್ಯೆ ಏರುತ್ತಿದ್ದಂತೆ ಕೊರೊನಾ ಲಸಿಕೆ ರೂಪಿಸುವ ಪೈಪೋಟಿಯೂ ಹೆಚ್ಚಾಯಿತು.
ಇಡೀ ವಿಶ್ವವನ್ನೇ ಅಲ್ಲೋಲಕಲ್ಲೋಲ ಮಾಡಿದ ಈ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆಂದು ಸಿದ್ಧವಾಗಿರುವ ಲಸಿಕೆ ಸಾರ್ವಜನಿಕರಿಗೆ ಸಿಕ್ಕಿ, ಅದರ ಕಾರ್ಯವೈಖರಿ ಯಶಸ್ವಿಯಾಗುವವವರೆಗೆ ಸ್ವಚ್ಛತೆ, ಜಾಗ್ರತೆ ಮತ್ತು ಅಂತರ ಕಾಪಾಡುವ ಮೂಲಕ ರೋಗಬಾಧಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಕೊರೊನಾ ಭಯದ ಜತೆಗೇ ನಮ್ಮ ಬದುಕು ಸಾಗುತ್ತಿದೆ. ಜನವರಿಯಿಂದ ಡಿಸೆಂಬರ್ವರೆಗೆ ಕೊರೊನಾವೈರಸ್ ಯಾವ ರೀತಿ ರೂಪಾಂತರಗೊಂಡಿತು? ಪ್ರಕರಣಗಳ ಸಂಖ್ಯೆಯಲ್ಲಿನ ಏರಿಳಿಕೆ, ನಿಯಂತ್ರಣ ಕ್ರಮಗಳು ಏನೇನು? ಇಲ್ಲಿದೆ ವಿವರ.
ಜನವರಿ
ಜ.30- ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಮೊದಲ ಪ್ರಕರಣ ಪತ್ತೆ. ಅದರ ಮರುದಿನವೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾವೈರಸ್ ‘ಅಂತರರಾಷ್ಟ್ರೀಯ ಕಾಳಜಿಯ ಜಾಗತಿಕ ತುರ್ತು’ ( global emergency of international concern) ಎಚ್ಚರಿಕೆ ಘೋಷಿಸಿತು. ಚೀನಾದ ವುಹಾನ್ನಲ್ಲಿ ಕೊರೊನಾವೈರಸ್ ಸೋಂಕು ವ್ಯಾಪಿಸುತ್ತಿದಂತೆ ವೂಹಾನ್ನಲ್ಲಿದ್ದ ಭಾರತೀಯರನ್ನು ಸರ್ಕಾರ ವಾಪಸ್ ಕರೆತರಲು ಮುಂದಾಯ್ತು.
ಜ.31- ರಾತ್ರಿ 8 ಗಂಟೆಗೆ ವೂಹಾನ್ ತಲುಪಿದ ಏರ್ ಇಂಡಿಯಾ ವಿಮಾನವು 324 ಪ್ರಯಾಣಿಕರನ್ನು ಹೊತ್ತು ಫೆಬ್ರುವರಿ 1ರಂದು ಭಾರತಕ್ಕೆ ಬಂತು.
ಫೆಬ್ರುವರಿ
ಫೆ.3- ಚೀನಾದಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದಾಗ ಕೊರೊನಾ ವೈರಸ್ ‘ರಾಜ್ಯ ವಿಕೋಪ’ ಎಂದು ಕೇರಳ ಸರ್ಕಾರ ರಂದು ಘೋಷಣೆ ಮಾಡಿತು. ಇತರ ದೇಶಗಳಲ್ಲಿಯೂ ಸೋಂಕು ಪ್ರಕರಣ ಹೆಚ್ಚಿತ್ತಿರುವುದು ವರದಿಯಾಯಿತು.
ಫೆ.11- ವಿಶ್ವಆರೋಗ್ಯ ಸಂಸ್ಥೆಯು ಈ ರೋಗದ ಹೆಸರು ಕೋವಿಡ್ -19 ಎಂದು ಪ್ರಕಟಿಸಿತು. ಹೊಸ ಕೊರೊನಾವೈರಸ್ಗೆ SARS-CoV-2 ಎಂದು ಹೆಸರಿಡಲಾಯಿತು.
ಫೆ.29- ದೇಶದಲ್ಲಿನ ಮೊದಲ ಕೋವಿಡ್-19 ರೋಗಿ ಗುಣಮುಖರಾದರು.
ಮಾರ್ಚ್
ಮಾರ್ಚ್ 2- ದೆಹಲಿಯಲ್ಲಿ 45ರ ಹರೆಯದ ವ್ಯಕ್ತಿ ಮತ್ತು 24ರ ಹರೆಯದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂತು. ಇವರಿಬ್ಬರೂ ವಿದೇಶದಿಂದ ಮರಳಿದವರಾಗಿದ್ದಾರೆ.
ಮಾರ್ಚ್ 28- ಸೋಂಕು ಪ್ರಕರಣಗಳ ಸಂಖ್ಯೆ 1,000 ದಾಟಿತು. ಜೈಪುರದಲ್ಲಿ ಇಟಲಿಯಿಂದ ಬಂದಿದ್ದ ಪ್ರವಾಸಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದ್ದು, 23 ಹೊಸ ಪ್ರಕರಣಗಳು ಪತ್ತೆಯಾದವು. ಮೊದಲ ಬಾರಿ ಇಷ್ಟೊಂದು ಜನರಿಗೆ ಒಟ್ಟಿಗೆ ಸೋಂಕು ಪತ್ತೆಯಾಗಿತ್ತು.
ಮಾರ್ಚ್ 11- ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ‘ಸಾಂಕ್ರಾಮಿಕ’ ಎಂದು ಹೇಳಿತು.
ಮಾರ್ಚ್ 12- ಕರ್ನಾಟಕದ ಕಲಬುರ್ಗಿಯಲ್ಲಿ 76ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾದರು. ದೇಶದಲ್ಲಿ ಕೊರೊನಾದಿಂದಾಗಿ ಸಾವು ಸಂಭವಿಸಿದ ಮೊದಲ ಪ್ರಕರಣ ಇದು.
ಮಾರ್ಚ್ 22- 14 ಗಂಟೆಗಳ ಜನತಾ ಕರ್ಫ್ಯೂಗೆ ನರೇಂದ್ರ ಮೋದಿ ಕರೆ ನೀಡಿದ್ದರು.
ಮಾರ್ಚ್ 24- ದೇಶದಾದ್ಯಂತ ಲಾಕ್ಡೌನ್ ಘೋಷಣೆಯಾಯಿತು.
ಮಾರ್ಚ್ 30- ದೆಹಲಿಯ ನಿಜಾಮುದ್ದೀನ್ನ ತಬ್ಲೀಘಿ ಜಮಾತ್ ಪ್ರಧಾನ ಕಚೇರಿ ಮರ್ಕಜ್ ಪ್ರದೇಶವು ಕೋವಿಡ್-19ರ ಕೇಂದ್ರಸ್ಥಾನವಾಗಿ ಮಾರ್ಪಟ್ಟು ಹೊಸ ವಿವಾದಕ್ಕೂ ನಾಂದಿ ಹಾಡಿತು.
ಏಪ್ರಿಲ್
ಅನಿರೀಕ್ಷಿತ ಲಾಕ್ಡೌನ್ನಿಂದಾಗಿ ಕಂಗಾಲಾದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ನಡೆದುಕೊಂಡು ಹೊರಟರು. 6.60 ಲಕ್ಷ ವಲಸೆ ಕಾರ್ಮಿಕರಿಗಾಗಿ ದೇಶದಾದ್ಯಂತ 21,000 ಶಿಬಿರಗಳನ್ನು ಸಿದ್ಧಪಡಿಸಲಾಯಿತು. ತಮ್ಮ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿದ ವಲಸೆಕಾರ್ಮಿಕರ ವ್ಯಥೆ ಮನಕಲಕುವಂತಿತ್ತು.
ಏಪ್ರಿಲ್ 5- ರಾತ್ರಿ 9 ಗಂಟೆಗೆ 9 ನಿಮಿಷ ವಿದ್ಯುತ್ ಬಲ್ಬ್ ಆಫ್ ಮಾಡಿ ಕ್ಯಾಂಡಲ್ ಅಥವಾ ದೀಪ ಹಚ್ಚುವಂತೆ ಮೋದಿ ದೇಶದ ಜನತೆಗೆ ಕರೆ ನೀಡಿದರು. ಕೊರೊನಾ ಸಾಂಕ್ರಾಮಿಕ ವಿರುದ್ಧ ಒಗ್ಗಟಿನ ಹೋರಾಟಕ್ಕೆ ಸಾಂಕೇತಿಕವಾಗಿ ಈ ದೀಪ ಹಚ್ಚಲಾಗಿತ್ತು.
ಏಪ್ರಿಲ್ 6- ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 4,000 ದಾಟಿದ್ದು ಸಾವಿನ ಸಂಖ್ಯೆ 100 ದಾಟಿತು. ಇದಾಗಿ ಕೆಲವು ದಿನಗಳ ನಂತರ ಮೋದಿ 21 ದಿನಗಳ ಲಾಕ್ಡೌನ್ ಅನ್ನು ಮೇ 3ರ ವರೆಗೆ ವಿಸ್ತರಿಸಿದರು. ಏಪ್ರಿಲ್ ತಿಂಗಳಲ್ಲಿ ನಿಜಾಮುದ್ದೀನ್ ಮರ್ಕಜ್ ಭಾರತದ ಅತೀ ದೊಡ್ಡ ಕೊರೊನಾವೈರಸ್ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿತು. ಜಮಾತ್ನಲ್ಲಿ ಭಾಗವಹಿಸಿದವರಿಂದಲೇ ದೇಶದಲ್ಲಿ ಶೇ. 29.8 ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿತು.
ಏಪ್ರಿಲ್ 23- ಭಾರತದ ಅತಿದೊಡ್ಡ ಕೊಳಗೇರಿ ಎನಿಸಿದ ಮುಂಬೈನ ಧಾರಾವಿಯಲ್ಲಿ 214 ಹೊಸ ಪ್ರಕರಣಗಳು ಪತ್ತೆಯಾಯಿತು.
ಏಪ್ರಿಲ್ 28- ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಜ್ಞಾನಿಗಳು ಕೊರೊನಾ ಸೋಂಕು ಹರಡುವ SARS-CoV-2 ದೇಶದಲ್ಲಿ ಸಕ್ರಿಯವಾಗಿದೆ ಎಂದು ದೃಢಪಡಿಸಿದರು.
ಮೇ
ಮೇ 1- ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಶ್ರಮಿಕ್ ಎಕ್ಸ್ಪ್ರೆಸ್ ರೈಲುಗಳನ್ನು ಆರಂಭಿಸಲಾಯಿತು.
ಮೇ 4- ಲಾಕ್ಡೌನ್ 31ರವರೆಗೆ ವಿಸ್ತರಿಸಿತು. ಎರಡು ಬಾರಿ ಕೇಂದ್ರ ಗೃಹ ಸಚಿವಾಲಯವು ಲಾಕ್ಡೌನ್ ವಿಸ್ತರಣೆ ಮಾಡಿತು.
ಮೇ 5- ದೇಶದಾದ್ಯಂತ ಮದ್ಯದಂಗಡಿಗಳು ತೆರೆದವು.
ಮೇ 12- ಮೋದಿ ₹20 ಲಕ್ಷ ಕೋಟಿ ಮೌಲ್ಯದ ಆತ್ಮನಿರ್ಭರ್ ಪ್ಯಾಕೇಜ್ ಘೋಷಣೆ ಮಾಡಿದರು.
ಮೇ 19- ಕೊರೊನಾ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿತು.
ಮೇ 25- ಶೇ 30 ಪ್ರಯಾಣಿಕರೊಂದಿಗೆ ವಿಮಾನಗಳು ಹಾರಾಡಬಹುದು ಎಂಬ ಷರತ್ತಿನೊಂದಿಗೆ ದೇಶದೊಳಗೆ ವಿಮಾನ ಹಾರಾಟ ಆರಂಭವಾಯಿತು.
ಜೂನ್
ಜೂನ್ 4- ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ ಲಸಿಕೆಯ 100 ಕೋಟಿ ಡೋಸ್ ಪಡೆದುಕೊಳ್ಳಲು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಒಪ್ಪಂದ ಮಾಡಿಕೊಂಡಿತು. ದೇಶದಲ್ಲಿ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಯಿತು.
ಜೂನ್ 8- ಅನ್ಲಾಕ್ 1.0 ಮೂಲಕ ಮಾಲ್, ಹೋಟೆಲ್, ರೆಸ್ಟೊರೆಂಟ್ ಮತ್ತು ದೇಗುಲಗಳನ್ನು ತೆರೆಯಲು ಅನುಮತಿ ನೀಡಲಾಯಿತು.
ಜೂನ್ 11- ಕೊರೊನಾ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಬ್ರಿಟನ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಿತು. ಲಾಕ್ಡೌನ್ನಿಂದಾಗಿ ದೇಶದಲ್ಲಿ ನಿರುದ್ಯೋಗದ ಪ್ರಮಾಣವೂ ಶೇ 23.5ಕ್ಕೆ ಏರಿಕೆಯಾಯಿತು. ಕೋವಿಡ್ನಿಂದಾಗಿ ಮುಂಬೈ ನಗರದಲ್ಲಿ ಜನಜೀವನ ಹೆಚ್ಚು ಸಂಕಷ್ಟಕ್ಕೆ ಸಿಲುಕಿತು. ಜೂನ್ ತಿಂಗಳಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ 57ರಷ್ಟು ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿಯಾಗಿದ್ದವು.
ಜೂನ್ 27- ಸೋಂಕು ಪ್ರಕರಣವು 5 ಲಕ್ಷ ದಾಟಿದ್ದು ಸಾವಿನ ಸಂಖ್ಯೆ 15,000ಕ್ಕೇರಿತು. ಸೋಂಕಿನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ 60 ಮತ್ತು ಸೋಂಕಿತರ ಸಾವಿನ ಪ್ರಮಾಣ ಶೇ 3ರಷ್ಟು ಇತ್ತು.
ಜೂನ್ 29- ಭಾರತ್ ಬಯೋಟೆಕ್, ಐಸಿಎಂಆರ್ ಮತ್ತು ಪುಣೆಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿಯ ಸಹಯೋಗದಿಂದ ಕೋವಾಕ್ಸಿನ್ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿತು. ಇದು ಭಾರತದಲ್ಲೇ ತಯಾರಾದ ಕೊರೊನಾ ಲಸಿಕೆ.
ಜುಲೈ
ಜುಲೈ 1- ಅನ್ಲಾಕ್ 2.0 ಪ್ರಕ್ರಿಯೆ ಆರಂಭವಾಗಿ ವಿಮಾನ ಮತ್ತು ರೈಲು ಸಂಚಾರ ಆರಂಭವಾಯಿತು. ರಾತ್ರಿ ಕರ್ಫ್ಯೂ ಕೂಡಾ ಸಡಿಲಿಕೆಯಾಯಿತು. ಪ್ರಕರಣಗಳ ಸಂಖ್ಯೆ 6 ಲಕ್ಷ ದಾಟಿದ್ದು ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಿತು.
ಜುಲೈ 15- ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ ಆರಂಭವಾಯಿತು. ಫ್ರಾನ್ಸ್ ಮತ್ತು ಅಮೆರಿಕ ಬೈ ಲ್ಯಾಟರಲ್ ಏರ್ ಬಬಲ್ಸ್ ಸ್ಥಾಪಿಸಿದ ನಂತರ ಅಂತರಾಷ್ಟ್ರೀಯ ವಿಮಾನಯಾನ ಆರಂಭವಾಯಿತು.
ಆಗಸ್ಟ್
ಅನ್ಲಾಕ್ 3.0 ಪ್ರಕ್ರಿಯೆ ಆರಂಭವಾಯಿತು. ರಾತ್ರಿ ಕರ್ಫ್ಯೂ ತೆರವಾಗಿ, ಜಿಮ್, ಯೋಗ ಕೇಂದ್ರಗಳನ್ನು ತೆರೆಯಲು ಅವಕಾಶ ಸಿಕ್ಕಿತು.
ಆಗಸ್ಟ್ 8- ಕೊರೊನಾ ವೈರಸ್ನಿಂದಾಗಿ 196 ವೈದ್ಯರು ಸಾವಿಗೀಡಾಗಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಭಾರತೀಯ ವೈದ್ಯಕೀಯ ಒಕ್ಕೂಟ ಒತ್ತಾಯಿಸಿತು.
ಆಗಸ್ಟ್ 12- ಭಾರತೀಯ ಕಂಪನಿ ಜೈಡಸ್ ಕ್ಯಾಡಿಲ್ಲಾ ತಾನು ಅಭಿವೃದ್ಧಿಪಡಿಸಿದ ಲಸಿಕೆಯ 1ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದಿದೆ ಎಂದು ಹೇಳಿತು.
ಆಗಸ್ಟ್ 21- ಕೋವಿಡ್-19ಗಾಗಿ ಒಂದು ದಶಲಕ್ಷಕ್ಕೂ ಹೆಚ್ಚಿನ ರೋಗನಿರ್ಣಯ ಪರೀಕ್ಷೆಗಳನ್ನು ಸಂಗ್ರಹಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿ ಮಾಡಿತು. ಚೀನಾ ಮತ್ತು ಅಮೆರಿಕ ನಂತರ, ಭಾರತವು ವಿಶ್ವದ ಮೂರನೇ ಅತಿ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ನಡೆಸಿತ್ತು.
ಆಗಸ್ಟ್ 26- ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ‘ಕೋವಿಶೀಲ್ಡ್’ಗಾಗಿ ತನ್ನ ಕ್ವಿನಿಕಲ್ ಪರೀಕ್ಷೆಗಳನ್ನು ಆರಂಭಿಸಿತು.
ಆಗಸ್ಟ್ 31- ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 23.9ರಷ್ಟು ಕುಗ್ಗಿದೆ ಎಂದು ಹೇಳಿತು.
ಸೆಪ್ಟೆಂಬರ್
ವಿಶ್ವದ ಒಟ್ಟು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೆ ಬಂತು. ಅಮೆರಿಕ ಮೊದಲ ಸ್ಥಾನದಲ್ಲಿಯೇ ಮುಂದುವರಿಯಿತು. ‘ಅನ್ಲಾಕ್ 4’ ಮಾರ್ಗಸೂಚಿಗಳು ಜಾರಿಗೆ ಬಂದವು ಮತ್ತು ಆರು ತಿಂಗಳ ನಂತರ ದೇಶಾದ್ಯಂತ ಮೆಟ್ರೋ ಸೇವೆಗಳು ಪುನರಾರಂಭವಾಯಿತು.
ಸೆ.14- ಸಂಸತ್ತಿನ ಮಳೆಗಾಲ ಅಧಿವೇಶನವು ಅಂತರ ಕಾಪಾಡುವ ಕ್ರಮಗಳೊಂದಿಗೆ ಪ್ರಾರಂಭವಾಯಿತು. 29 ಸಂಸದರಿಗೆ ಕೋವಿಡ್-19 ಇರುವುದು ಪತ್ತೆಯಾಯಿತು. ಅಧಿವೇಶನವನ್ನು 18 ದಿನಗಳಿಗೆ ಮೊಟಕುಗೊಳಿಸಲಾಯಿತು. 20 ವರ್ಷಗಳಲ್ಲಿ ಕಡಿಮೆ ಅವಧಿಯ ಅಧಿವೇಶನ ನಡೆದದ್ದು ಇದೇ ಮೊದಲು.
ಸೆ.16- ಡಾಕ್ಟರ್ ರೆಡ್ಡಿ ಲ್ಯಾಬೊರೇಟರೀಸ್ ಕಂಪನಿಯು ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ (ಆರ್‌ಡಿಐಎಫ್) ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಒಪ್ಪಂದಕ್ಕೆ ಸಹಿ ಹಾಕಿತು.
ಸೆ.21- ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಭಾಗಶಃ ಪುನಃ ತೆರೆಯಲಾಯಿತು.
ಅಕ್ಟೋಬರ್
ಅ.5- ಆರೋಗ್ಯ ಸಚಿವ ಹರ್ಷವರ್ಧನ್ ಜುಲೈ 2021ರ ವೇಳೆಗೆ 20-25 ಕೋಟಿ ಜನರಿಗೆ ಚುಚ್ಚುಮದ್ದು ನೀಡುವ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಘೋಷಿಸಿದರು. ಜಗತ್ತು ಕೊರೊನಾವೈರಸ್ ಸೋಂಕುಗಳ ತೀವ್ರ ಏರಿಕೆ ಮತ್ತು ಎರಡನೇ ತರಂಗದ ಅಪಾಯವನ್ನು ಕಂಡಿದ್ದರೂ ಸಹ, ಅಕ್ಟೋಬರ್‌ನಲ್ಲಿ ಭಾರತದಲ್ಲಿ ಪ್ರಕರಣಗಳು ಕಡಿಮೆಯಾದವು.
ಅ.26- ಕೋವಿಡ್-19ರ ಲಸಿಕೆ ನೀಡುವ ಪ್ರಕ್ರಿಯೆಗಾಗಿ ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹಿಸಲು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಿತು.
ಅ.28- ಕೊರೊನಾ ಭೀತಿಯ ನಡುವೆಯೂ ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ನಡೆಯಿತು. ಶೇಕಡಾ 57.05 ರಷ್ಟು ಮತದಾನ ದಾಖಲಾಯಿತು.
ನವೆಂಬರ್
ನ.9- ಕೊರೊನಾ ವಿರುದ್ಧದ ಲಸಿಕೆ ಶೇ 90ರಷ್ಟು ಪರಿಣಾಮಕಾರಿ ಎಂದು ಫೈಜರ್ ಮತ್ತು ಬಯೋಟೆಕ್ ಕಂಪನಿಗಳು ಘೋಷಿಸಿದವು.
ನ.15- ಕೊರೊನಾ ಬಿಕ್ಕಟ್ಟು ನಿಭಾಯಿಸಲು ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 12 ಅಂಶಗಳ ಯೋಜನೆ ಮಂಡಿಸಿದರು. ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ ಕಾಣಿಸಿಕೊಂಡಿತು. ಸೋಂಕು ಹರಡುವ ಪ್ರಮಾಣ ಏಕಾಏಕಿ ಶೇ 15ರಷ್ಟು ಹೆಚ್ಚಾಯಿತು. ಆಸ್ಪತ್ರೆಗಳಲ್ಲಿ ಐಸಿಯು ಬೆಡ್ಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಬೇಕೆಂದು ದೆಹಲಿ ಸರ್ಕಾರ ಒತ್ತಾಯಿಸಿತು.
ನ.17- ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4.94 ಲಕ್ಷಕ್ಕೆ ಇಳಿಯಿತು. ಸೆಪ್ಟೆಂಬರ್‌ನಲ್ಲಿ ಇದು 10.17 ಲಕ್ಷ ಇತ್ತು. ದೈನಂದಿನ ಚೇತರಿಕೆ ಪ್ರಮಾಣವು ಹೊಸ ಪ್ರಕರಣಗಳಿಗಿಂತಲೂ ಹೆಚ್ಚಾಗಿದ್ದೇ ಇದಕ್ಕೆ ಕಾರಣ.
ನ.23- ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳನ್ನು ವರದಿ ಮಾಡುವ ಕಾರ್ಯವಿಧಾನ ಬಲಪಡಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೇಳಿತು.
ನ.28- ಗಂಭೀರ ಅಡ್ಡಪರಿಣಾಮಗಳು ಉಂಟಾಗಿವೆ ಎಂದು ಆರೋಪಿಸಿ, ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದವರು ಸೀರಮ್ ಸಂಸ್ಥೆಯಿಂದ ₹ 5 ಕೋಟಿ ಪರಿಹಾರ ಕೇಳಿದರು. ಈ ಆರೋಪ ನಿರಾಧಾರ ಎಂದು ನಂತರ ಸಾಬೀತಾಯಿತು.
ಡಿಸೆಂಬರ್
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಬೃಹತ್ ಪ್ರತಿಭಟನೆಯು ಕೊರೊನಾವೈರಸ್ ಏಕಾಏಕಿ ಏರಿಕೆಯಾಗುವ ಬಗ್ಗೆ ಕಳವಳ ಉಂಟುಮಾಡಿತು. ಭಾಗವಹಿಸಿದವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅವರು ಮಾಸ್ಕ್ ಧರಿಸಿರಲಿಲ್ಲ ಎಂಬುದು ಕಳವಳಕ್ಕೆ ಕಾರಣವಾಗಿತ್ತು.
ಫೈಜರ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ತುರ್ತು ಬಳಕೆಯ ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸುತ್ತಿರುವುದರಿಂದ, ಭಾರತವು ಈ ತಿಂಗಳು ಲಸಿಕೆ ನೀಡುವ ಯೋಜನೆ ಮತ್ತು ಆದ್ಯತೆಯ ಗುಂಪುಗಳನ್ನು ಘೋಷಿಸಿತು.
ಡಿ.21- ಹೊಸ ಮತ್ತು ಹೆಚ್ಚು ಸಾಂಕ್ರಾಮಿಕವಾಗಿ ಹರಡುವ ಸಾಮರ್ಥ್ಯವಿರುವ ರೂಪಾಂತರ ಕೊರೊನಾ ವೈರಾಣು ಬ್ರಿಟನ್ನಲ್ಲಿ ಪತ್ತೆಯಾಯಿತು. ಸೋಂಕು ಹರಡುವಿಕೆಯನ್ನು ತಡೆಯಲು ಬ್ರಿಟನ್ನೊಂದಿಗೆ ವಿಮಾನ ಸಂಚಾರವನ್ನು ಭಾರತ ನಿಷೇಧಿಸಿತು.
ಡಿ.24- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಹಂತದಲ್ಲಿ 51 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು. ಹೊಸ ವರ್ಷ ಮತ್ತು ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾತ್ರಿ ಕರ್ಫ್ಯೂ ಘೋಷಿಸಿದವು.
ಡಿ.29- ಬ್ರಿಟನ್ನಿಂದ ಭಾರತಕ್ಕೆ ಮರಳಿದ ಆರು ಪ್ರಯಾಣಿಕರಲ್ಲಿ ರೂಪಾಂತರಗೊಂಡ ಕೊರೊನಾವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿತು.
Published On - 3:41 pm, Wed, 30 December 20