New Book; ಅಚ್ಚಿಗೂ ಮೊದಲು: 3019 AD- ಗತಕಾಲವು ಸದಾ ನಮ್ಮೊಂದಿಗೇ ಇರುತ್ತದೆ

|

Updated on: Mar 04, 2021 | 3:28 PM

‘ನಾನು ಯಾಕೆ ಬರೆಯುತ್ತೇನೆ ಅನ್ನುವುದಕ್ಕಿಂತ, ಬರೆಯದಿದ್ದರೆ ಏನಾಗುತ್ತದೆ?; ನನ್ನೊಳಗೆ ಸತತವಾಗಿ ಹುಟ್ಟಿಕೊಳ್ಳುತ್ತಲೇ ಇರುವ ಆಲೋಚನೆಗಳನ್ನು ಬರಹಕ್ಕಿಳಿಸದಿದ್ದರೆ ಹೊಸ ವಿಚಾರಗಳಿಗೆ ಜಾಗವೇ ಇರುವುದಿಲ್ಲ. ಬರೆಯದಿದ್ದರೆ ವೈದ್ಯವೃತ್ತಿಯ ಒತ್ತಡಗಳಿಂದ ಪಾರಾಗಲು ಸಾಧ್ಯವೇ ಇಲ್ಲ.‘ ಡಾ. ಶಾಂತಲ

New Book; ಅಚ್ಚಿಗೂ ಮೊದಲು: 3019 AD- ಗತಕಾಲವು ಸದಾ ನಮ್ಮೊಂದಿಗೇ ಇರುತ್ತದೆ
ಡಾ. ಶಾಂತಲ
Follow us on

ಈಗೀಗ ಓದುವವರು ಕಡಿಮೆ, ಬರೆಯುವವರೇ ಹೆಚ್ಚು; ದಶಕಗಳಿಂದ ಸಾಹಿತ್ಯ ವಲಯದಿಂದ ಕೇಳಿಬರುತ್ತಿರುವ ಪುನರಾವರ್ತಿತ ಸಾಲು ಇದು. ಹಾಗಿದ್ದರೆ ನಾವೇಕೆ ಓದುತ್ತೇವೆ, ನಾವೇಕೆ ಬರೆಯುತ್ತೇವೆ? ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಹೊಸ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಡಾ.ಶಾಂತಲ ಬೆಂಗಳೂರಿನವರು. ವೃತ್ತಿಯಿಂದ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯೆ. ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ. ಇವರ ಕಥೆ, ಕಾದಂಬರಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿವೆ. ವೈದ್ಯಕೀಯ ಪಠ್ಯಪುಸ್ತಕಗಳಲ್ಲಿ ಇವರ ಲೇಖನಗಳು ಅಡಕವಾಗಿವೆ. ವಿಜ್ಞಾನ ಪ್ರಪಂಚದ ಆಗುಹೋಗುಗಳನ್ನು ಬೆರಗುಗಣ್ಣಿನಿಂದ ನೋಡುವ ಇವರಿಗೆ ವೈಜ್ಞಾನಿಕ ಕಾದಂಬರಿಗಳೆಂದರೆ ಅಚ್ಚುಮೆಚ್ಚು. ಈ ಹಿನ್ನೆಲೆಯಲ್ಲಿ ಹೊರಬರುತ್ತಿರುವ ಇವರ 3019 AD ವೈಜ್ಞಾನಿಕ ಕಾದಂಬರಿಯನ್ನು ಮೈಲ್ಯಾಂಗ್​ ಪ್ರಕಟಿಸುತ್ತಿದೆ. ಇದೇ 7ರಂದು ಇ-ಬುಕ್, ಆಡಿಯೋ ಮತ್ತು ಪ್ರಿಂಟ್ ಆವೃತ್ತಿಯಲ್ಲಿ ಇದು ಓದುಗರಿಗೆ ಲಭ್ಯವಾಗಲಿದೆ.

***

ಈ ಕಾದಂಬರಿಯಲ್ಲಿ ತೀರಾ ಮುಂದುವರಿದ ತಂತ್ರಜ್ಞಾನದ ಜಗತ್ತನ್ನು ಓದಿನ ಮೂಲಕ ಕಂಡುಕೊಳ್ಳುತ್ತೀರಿ. ಗುರುತಿಸಲಾಗದಷ್ಟು ಬದಲಾಗಿ ಹೋದ ಮಾನವ ಬದುಕನ್ನು ಕಾಣುತ್ತೀರಿ. ಹಾಗೆಯೇ, ವಿಲಕ್ಷಣವಾದ ಜೀವನ ಮೌಲ್ಯಗಳ ತಿಕ್ಕಾಟವನ್ನೂ ನೋಡಿ ಬೆರಗಾಗುತ್ತೀರಿ. ಅತ್ಯಾಧುನಿಕ ಜಗತ್ತಿನಲ್ಲೂ ಮನುಷ್ಯ ಜೀವಿಯ ಅತಿ ಪುರಾತನ ಸಂವೇದನೆಗಳನ್ನೂ, ತೊಳಲಾಟಗಳನ್ನೂ ನೋಡಿ ನಿಟ್ಟುಸಿರಿಡುತ್ತೀರಿ. ಎಂದೂ ಅಳಿಸಲಾಗದ ಮನುಷ್ಯನ ಆಶಾಭಾವಕ್ಕೂ, ಹೋರಾಟದ ಚೈತನ್ಯಕ್ಕೂ ಸಾಕ್ಷಿಯಾಗುತ್ತೀರಿ.
ಪವಮಾನ್ ಅಥಣಿ, ಮೈಲ್ಯಾಂಗ್ ಪ್ರಕಾಶನ

***

ಇದು ಕನ್ನಡದಲ್ಲಿ ಬಂದ ಅತ್ಯಂತ ಹೊಸ ಪ್ರಕಾರದ ಕಾದಂಬರಿ ಅನ್ನಲು ಯಾವುದೇ ಅಡ್ಡಿಯಿಲ್ಲ. ಲಕ್ಷ ವರ್ಷಗಳ ಹಿಂದೆ ಮನುಷ್ಯರಲ್ಲಿ ಹಲವು ಪ್ರಭೇದಗಳಿದ್ದವು ಎಂದು ನಾವು ಶಾಲೆಯಲ್ಲಿ ಓದುತ್ತಿದ್ದೆವು. ಈ ಕಾದಂಬರಿಯಲ್ಲಿ, ಸಾವಿರ ವರ್ಷದ ನಂತರದ ಭೂಮಿಯಲ್ಲಿ ಮತ್ತೆ ಮನುಷ್ಯರಲ್ಲಿ ನಾಲ್ಕೈದು ಪ್ರಭೇದಗಳಿರುತ್ತವೆ, ಆದರೆ ಇವೆಲ್ಲವೂ ನೈಸರ್ಗಿಕವಾಗಿ ವಿಕಸಿತವಾದ ಮನುಷ್ಯರ ಪ್ರಭೇದಗಳಾಗಿರದೇ ಮನುಷ್ಯನು ತನ್ನ ಬುದ್ಧಿಶಕ್ತಿಯಿಂದ ನಿಸರ್ಗದ ನಿಯಮಗಳನ್ನು ಮೀರಿ ಹುಟ್ಟುಹಾಕಿದ ಹೊಸ ಪ್ರಭೇದಗಳಾಗಿರುತ್ತವೆ ಅನ್ನುವುದೇ ಒಂದು ಮೈನವಿರೇಳಿಸುವ ಕಲ್ಪನೆ. ದೇಶದೇಶಗಳ ನಡುವೆ ಇಂದು ಸ್ಪರ್ಧೆಯನ್ನು ನೋಡಬಹುದು, ಆದರೆ 3019 AD ಯಲ್ಲಿ ಭೂಮಿಯೇ ಬೇರೆ ಗ್ರಹಗಳ ಜೊತೆಗೆ ಪೈಪೋಟಿ ನಡೆಸುವ ಕಲ್ಪನೆ? ಈ ಕಾದಂಬರಿಯಲ್ಲಿ ನಿಮಗೆ ಸಿಗಲಿದೆ. ಹಾಲಿವುಡ್ ಸಿನೆಮಾಗಳಲ್ಲಿ ಸೈನ್ಸ್ ಫಿಕ್ಷನ್ ಅಂದರೆ ಹಿಂಸೆ, ರಕ್ತಪಾತದ್ದೇ ಸರಕು. ಆದರೆ ಇಲ್ಲಿ ಒಂದು ಸಂಘರ್ಷದ ಕಥೆಯನ್ನು ಸಂವೇದನಾಪೂರ್ಣವಾಗಿ, ಸೊಗಸಾಗಿ ಹೇಗೆ ಹೇಳುವುದು ಎಂಬುದನ್ನು ಕಾಣಬಹುದಾಗಿದೆ. ಇದು ಕನ್ನಡ ಓದುಗರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ ಎನ್ನುವುದು ನನ್ನ ಗಟ್ಟಿ ನಂಬಿಕೆ.
ಸಚಿನ್ ನಾಯಕ್, ಧ್ವನಿ ಕಲಾವಿದರು

ಸೌಜನ್ಯ: ಅಂತರ್ಜಾಲ

‘ಗತಕಾಲವು ಸದಾ ನಮ್ಮೊಂದಿಗೇ ಇರುತ್ತದೆ’
                                                      -ರಬೀಂದ್ರನಾಥ ಟ್ಯಾಗೋರ್

ಅಂದು ಸಂಜೆ ಇಳಾ ಮತ್ತೊಂದು ಮಿಂಚಂಚೆಯನ್ನು ಕಳುಹಿಸಿದ್ದಳು. ಅದು ಹೂಮಾನ್ ಆದಿಪಂತಿಯ ದಿನಚರಿಯ ಭಾಷಾಂತರಿಸಿದ ಟಿಪ್ಪಣಿಯಾಗಿತ್ತು. 

‘‘ನನ್ನ ಹದಿನಾರನೆಯ ಹುಟ್ಟುಹಬ್ಬದ ಆಸುಪಾಸಿನಲ್ಲಿ ಸರ್ಕಾರವು ಅಪ್ಪನಿಗೊಂದು ವಿಶೇಷ ಸಂದೇಶ ರವಾನಿಸಿದ್ದರೂ, ಆಗ ಅಪ್ಪ ಅದನ್ನು ಯಾರಿಗೂ ತಿಳಿಸಿರಲಿಲ್ಲ. ಆದರೆ ನಮಗೆ ಅಮರ್ತ್ಯ ಹುಟ್ಟಿದ ದಿನದಂದು, ತಡರಾತ್ರಿಯಲ್ಲಿ ನನ್ನನ್ನು ಸಂಧಿಸಿ, ಅಪ್ಪ ಆ ಸ್ಫೋಟಕ ಸುದ್ದಿ ತಿಳಿಸಿದ್ದರು.

‘‘ಹೂಮಾನ್, ಅಮರ್ತ್ಯ ನಿನ್ನ ಎರಡನೆಯ ಮಗನಿರಬಹುದು ಎಂದು ನನಗೆ ಶಂಕೆ’’ ಎಂದಾಗ ಮಗು ಹುಟ್ಟಿದ ಸಂಭ್ರಮ ಜರ‍್ರೆಂದು ಇಳಿದುಹೋಯಿತು.

‘ಏನಪ್ಪ, ನೀವು ಹೇಳುತ್ತಿರುವುದು?”

“ನಿನಗಿರುವ ಸಾಮರ್ಥ್ಯ-ಬುದ್ಧಿಮತ್ತೆಯನ್ನು ಪರಿಗಣಿಸಿದ ಸರ್ಕಾರ ನಿನ್ನನ್ನು ಕ್ಲೋನ್ ಮಾಡಲು ನಿನ್ನ ಹದಿನಾರನೆಯ ವಯಸ್ಸಿನಲ್ಲಿ ನಮಗೆ ಅವಕಾಶ ಕೊಟ್ಟಿತು. ನಾವ್ಯಾರೂ ಅದನ್ನು ಒಪ್ಪುವುದೇ ಇಲ್ಲವೆಂದು, ಆಗ ಅದನ್ನು ನಿಮಗ್ಯಾರಿಗೂ ನಾನು ತಿಳಿಸಲಿಲ್ಲ.”

“ಓಹ್! ಸರಿ ಬಿಡಿ. ಮತ್ತೇನು?” ಇಷ್ಟು ವರ್ಷಗಳು ಸುಮ್ಮನಿದ್ದು, ಕೆಲವೇ ಗಂಟೆಗಳ ಹಿಂದೆ, ಹೊಸ ಅಪ್ಪನಾಗಿ ನಾನು ಹುಟ್ಟುಪಡೆದು ಖುಷಿಪಡುತ್ತಿದ್ದಾಗ, ಯಾಕೆ ಇದನ್ನು ಇಂದೇ ಹೇಳಬೇಕೆನಿಸಿತು ಎಂದು ಅಪ್ಪನ ಮೇಲೆ ಕೋಪವೂ ಉಂಟಾಯಿತು.

“ನಾವು ಕಟ್ಟಾ ಗಾಂಪರು, ನಮ್ಮ ಸಿದ್ಧಾಂತಗಳಿಗೆ ಇದು ವಿರುದ್ಧವೆಂದು ತಿಳಿಸಿ ನಾನು ನಿರಾಕರಿಸಿದ್ದೆ. ತದನಂತರ ಮತ್ತೆಂದೂ ಸರ್ಕಾರದಿಂದ ಈ ಪ್ರಸ್ತಾಪ ಬರಲಿಲ್ಲ” ಅವರ ಮಾತುಗಳ ಒಳ ಅರ್ಥವು ನನಗೆ ತಿಳಿಯಲೆಂದು ಕೆಲವು ಕ್ಷಣಗಳ ಕಾಲ ಸುಮ್ಮನಿದ್ದರು.

“ಹಾಂ? ಅಂದರೆ?” ಅಪ್ಪ ಹೇಳಿದ ವಾಕ್ಯಗಳ ಇಂಗಿತ ನನಗೆ ಗೋಚರವಾಗುತ್ತಿದ್ದಂತೆ, ನನ್ನ ಮೆದುಳು ಅದನ್ನು ನಿರಾಕರಿಸಿತು, ಹೃದಯ ಪೇಚಾಡಿತು.

“ಹೌದು, ನನ್ನ ಬಲವಾದ ಶಂಕೆಗೆ ಸರ್ಕಾರದ ಈ ಮೌನವೇ ಕಾರಣ. ವ್ಯವಸ್ಥೆಗೆ ಬಹಳ ಬೇಕೆನಿಸಿದ್ದರೆ ಅವರೇ ಪದೇ ಪದೆ ಅನೇಕ ಆಮಿಷ-ಸೌಲಭ್ಯಗಳನ್ನೊಡ್ಡಿ ಕ್ಲೋನ್ ಮಾಡಿಸಿಕೊಳ್ಳಲು ಒಪ್ಪಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಮತ್ತೆಂದೂ ಕೋರದೆ ಸುಮ್ಮನಿದ್ದರೆಂದರೆ ಒಂದೇ ಕಾರಣ. ನಿನ್ನಂತಹ ಮೇಧಾವಿಯನ್ನು ನಿನ್ನ ಅನುಮತಿ-ಸಮ್ಮತವಿಲ್ಲದೆಯೇ ಕ್ಲೋನ್ ಮಾಡಿರಬಹುದು ಎಂದೇ ನನಗೆ ಭಯ-ಶಂಕೆ ಇದೆ.”

“ಅಪ್ಪ ಅದು ಸಾಧ್ಯವಿಲ್ಲ ಬಿಡಿ. ಹಾಗೆ ಮಾಡುವುದು ಕಾನೂನು ಬಾಹಿರವೆಂದು ಎಲ್ಲರಿಗೂ ತಿಳಿದಿರುವ ವಿಷಯ.” ನಾನು ಅಪ್ಪನಿಗೆ ಹಾಗೆ ಹೇಳಿದರೂ ನನ್ನ ಮನಸಿನಾಳದಲ್ಲಿ ಸಣ್ಣ ನಡುಕ ಹುಟ್ಟಿತು.

“ಹೂಮಾನ್, ನಿನ್ನಂತಹ ಅಸಾಮಾನ್ಯ ಸಾಮರ್ಥ್ಯವುಳ್ಳವರನ್ನು ಸಂಸ್ಥೆ ಅಷ್ಟು ಸಲೀಸಾಗಿ ಬಿಟ್ಟುಕೊಡುವುದಿಲ್ಲ. ‘ಭೂ-ಸಾರ್ವಭೌಮತ್ವಕ್ಕಾಗಿ ಎಲ್ಲವೂ ಸೂಕ್ತ-ಯುಕ್ತ’ ಎಂಬ ಇತ್ತೀಚಿನ ಉದ್ಘೋಷಣೆ ವ್ಯಾಪಕವಲ್ಲವೇ? ಅದನ್ನು ಸಮರ್ಥನೆಗಾಗಿ ಉಪಯೋಗಿಸುತ್ತಾರೆ. ಹೀಗೆ ಸಮ್ಮತವಿಲ್ಲದೆಯೇ ಅವಳಿಗಳನ್ನು ಮಾಡುತ್ತಿರುವರೆಂಬ ದಟ್ಟ ವದಂತಿಗಳು ಕೆಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ಅಲ್ಲದೆ ಮುಂಬರುವ ಕೆಲವೇ ದಶಕಗಳಲ್ಲಿ ಏನಾದರೂ ನೆವಗಳನ್ನು ಒಡ್ಡುತ್ತಾ, ಗಾಂಪರೆಂಬ ಪಂಗಡವೇ ಅಸ್ತಿತ್ವದಲ್ಲಿರದಂತೆ ಮಾಡಿಬಿಡುವುದು ಖಚಿತ. ಉಳಿಯಲಾರದವರ ಸಿದ್ಧಾಂತಗಳ ಉಲ್ಲಂಘನೆಯಾದರೇನು? ಅದಕ್ಕಾಗಿ ಹೋರಾಡಲು ಉಳಿಯುವವರು ಯಾರು ಎಂಬ ಧೋರಣೆ ಇವರದ್ದು!’ 

‘‘….’’

ನನಗೆ ಅರಿವಿಲ್ಲದೆಯೇ ನನ್ನ ಪ್ರತಿರೂಪಿ ಸೃಷ್ಟಿಯಾಗಿರಬಹುದೆಂದು ಅನಿಸಿದಾಗ ಕೋಪ-ದುಃಖ-ನಿಸ್ಸಹಾಯಕತೆ ಆವರಿಸಿದವು. ಪುಟ್ಟ ಅಮರ್ತ್ಯನ ಹುಟ್ಟಿನಿಂದ ಒದಗಿದ್ದ ಸಂತೋಷವನ್ನು ಸಂಪೂರ್ಣವಾಗಿ ಅನುಭವಿಸಲು ಆಗಲೇ ಇಲ್ಲ.

“ಮಗನೆ, ನಿನ್ನ ಪ್ರತಿರೂಪಿಯನ್ನು ಸೃಷ್ಟಿಸಲು ಅವರಿಗೆ ಬೇಕಾದದ್ದು ನಿನ್ನ ಒಂದೇ ಒಂದು ಜೀವಕಣ. ವರ್ಷಾನುವರ್ಷ ಮಾಮೂಲು ಆರೋಗ್ಯ ತಪಾಸಣೆಗಾಗಿ ನೀನು ಕೊಡುವ ರಕ್ತ-ಉಗುಳು-ಮೂತ್ರ-ವೀರ್ಯದಲ್ಲಿನ ಕೋಟ್ಯಾಂತರ ಕಣಗಳಲ್ಲಿ ಕೆಲವೇ ಸಾಕು ನಿನ್ನ ಪ್ರತಿರೂಪಿಯನ್ನು ಸೃಷ್ಟಿಸಲು.”

“ಮುಂದೇನು ಮಾಡುವುದು? ಕ್ಲೋನ್ ಮಾಡಿರುವುದು ನಿಜವೇ ಎಂದು ತನಿಖೆ ಮಾಡೋಣ. ಹಕ್ಕುಗಳ ಉಲ್ಲಂಘನೆ ಎಂದು ಸರ್ಕಾರದ ವಿರುದ್ಧವೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳೋಣವೆ?”

“ಹುಚ್ಚಪ್ಪ” ಎಂದು ನಕ್ಕಿದ್ದರು. “ತನ್ನನ್ನು ಮೇಯುತ್ತಿರುವ ಬೇಲಿಯಿಂದ ಗಾಯವಾಗಿ ಬಿದ್ದುಕೊಂಡಿರುವ ಹೊಲ ತಪ್ಪಿಸಿಕೊಂಡು ಹೋಗಲಾದೀತೆ? ಮತ್ಯಾವ ಬೇಲಿಯ ಬಳಿ ಹೋಗಿ ನ್ಯಾಯ ಕೇಳಿ ಗೆಲ್ಲುವುದು? ಏನನ್ನೂ ಮಾಡಲಾರೆವು! ಮುಂದೆಂದಾದರೂ ಪ್ರತಿರೂಪಿಯನ್ನು ನೀನು ಭೇಟಿಯಾದರೆ, ನಿನಗೆ ಆಘಾತವಾಗಬಾರದೆಂದು ತಿಳಿಸಿದೆ. ನನ್ನ ಪಾಲಿಗೆ ಅಮರ್ತ್ಯನೊಬ್ಬನೇ ನನ್ನ ವಂಶಸ್ಥ. ನಿನ್ನ ಪ್ರತಿರೂಪಿಯನ್ನು ಮಗ ಅಥವಾ ಮೊಮ್ಮಗನೆಂದು ಎಂದೂ ನಾನು ಒಪ್ಪುವುದಿಲ್ಲ” ಎಂದು ಗದ್ಗದಿತವಾಗಿ ನುಡಿದು, “ಹೂಮಾನ್, ಓಂಕಾರ್ ನಿನ್ನನ್ನು ಎಂದಾದರೂ ಸಂಧಿಸಿದ್ದಾನಾ?” ಎಂದು ಕೇಳಿದ್ದರು.

ಟಿಪ್ಪಣಿಯನ್ನು ಓದುತ್ತಿದ್ದ ಅಮರ್ತ್ಯ ಒಮ್ಮೆ ಬೆಚ್ಚಿದ. ಓಂಕಾರನ ಪ್ರಸ್ತಾಪ! ಅಪ್ಪ ಏನೆಂದು ಉತ್ತರಿಸಿದರು ಎಂದು ಮುಂದೋದಿದ.

“ಓಂಕಾರ ನನ್ನನ್ನು ಎಂದೂ ಸಂಪರ್ಕಿಸಲಿಲ್ಲ ಅಂತ ಅಪ್ಪನಿಗೆ ಹೇಳಿದರೂ ಅವರಿಗೆ ಸಮಾಧಾನವಾಗಿರಲಿಲ್ಲ. ಗಾಂಪರನ್ನು ಮತಾಂತರಿಸುತ್ತಿರುವ ಗುಂಪಿಗೆ ಓಂಕಾರನೇ ಮುಂಚೂಣಿಯಲ್ಲಿದ್ದಾನೆ, ಅವನನ್ನು ದೂರವೇ ಇಟ್ಟಿರು ಎಂದು ಅಪ್ಪ ಹೇಳಿ ಕೋಣೆಯಿಂದ ಹೊರನಡೆದಿದ್ದರು.

ಅಂದಿನಿಂದ ನನ್ನ ಜೀವನದಲ್ಲಿದ್ದ ನೆಮ್ಮದಿ ಹಾರಿಹೋಗಿತ್ತು. ದಿನಗಳು ಕಳೆದಂತೆ ಅಪ್ಪ ಊಹಿಸಿದ್ದು ನಿಜವಿರಬಹುದು ಎಂಬ ಶಂಕೆ ಹೆಚ್ಚುತ್ತಾ ಹೋಯಿತು. ಅದ್ಭುತ ಸಾಮರ್ಥ್ಯವುಳ್ಳ ಕೆಲವು ಗಾಂಪರ ಯುವಕರಿಗೆ ಆಗಿಂದಾಗ ಸೈಬಾರ್ಗಗಳಾಗಿ ಪರಿವರ್ತಿಸಿಕೊಳ್ಳಲು ಅಥವಾ ಕ್ಲೋನ್ ಮಾಡಿಸಿಕೊಳ್ಳಲು ಸರ್ಕಾರದಿಂದ ಕೋರಿಕೆ ಬರುತ್ತಲೇ ಇತ್ತು. ಆದರೆ ಮೊದಲ ಬಾರಿಯ ಕೋರಿಕೆಯ ನಂತರ ಮತ್ತೆಂದೂ ನನಗೆ ಆಹ್ವಾನ ಬಂದಿರಲೇ ಇಲ್ಲ. ಅದೇ ಮಹತ್ತರ ಸುಳಿವು.

ನನ್ನ ಪ್ರತಿರೂಪಿಯನ್ನು ಸರ್ಕಾರವೇ ಪೋಷಿಸುತ್ತಿರಬಹುದು. ವರಸೆಯಲ್ಲಿ ಅವನೇ ನನ್ನ ಹಿರಿಯ ಮಗ. ಊಹಿಸಲು-ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಿಹಿರಾ ಮತ್ತು ಅಮರ್ತ್ಯನಿಗೆ ಏನೋ ಮೋಸವೆಸಗಿರುವೆನೆಂಬ ಅಪರಾಧಿ ಪ್ರಜ್ಞೆ ಜೀವನಪರ್ಯಂತ ನನ್ನನ್ನು ಕಾಡುವುದು ಖಂಡಿತ. ಇನ್ನು ಗಾಂಪ ಸಮುದಾಯಕ್ಕೆ ಇದನ್ನು ತಿಳಿಸಿದರೆ, ಎಷ್ಟೇ ನಿಷ್ಠೆ-ಪ್ರಾಮಾಣಿಕತೆಯನ್ನು ಇರಿಸಿಕೊಂಡಿದ್ದರೂ ನನ್ನನ್ನು ಮತ್ತು ಅಪ್ಪನನ್ನು ಶಂಕೆಯಿಂದಲೇ ನೋಡುತ್ತಾರೆ. ಗಾಂಪರ ನಾಯಕರು ಒಳಗಿಂದೊಳಗೇ ತಮ್ಮ ಮಗನನ್ನು ಕ್ಲೋನ್ ಮಾಡಿಸಿದ್ದಾರೆ. ಪಂಗಡ ದ್ರೋಹಿಗಳೆಂದು ಬಹಿಷ್ಕರಿಸಲೂಬಹುದು! ಅದಕ್ಕೆ ಅಪ್ಪ ತಮ್ಮ ದುಗುಡವನ್ನು ಯಾರಿಗೂ ಹೇಳಿರಲಿಲ್ಲ.

ಪುಟ್ಟ ಅಮರ್ತ್ಯನನ್ನು, ತಮ್ಮ ಅಧಿಕೃತವಾದ ಮೊಮ್ಮಗನನ್ನು ಕಂಡ ದಿನದಂದು; ಅಷ್ಟು ವರ್ಷಗಳಿಂದ ತಮ್ಮಲ್ಲೇ ಇರಿಸಿಕೊಂಡು, ನೊಂದುಕೊಳ್ಳುತ್ತಿದ್ದ ವಿಷಯವನ್ನು ನನ್ನೊಂದಿಗೆ ಹಂಚಿಕೊಂಡರು. ಅಪ್ಪನೇ ನನ್ನ ತದ್ರೂಪಿಯನ್ನು ನಿರಾಕರಿಸಿದರು ಎಂದಮೇಲೆ ನಾನೇಕೆ ಇದನ್ನು ಎಲ್ಲರೊಂದಿಗೂ ಹೇಳಿಕೊಳ್ಳಬೇಕು? ನನಗೆ ಮೋಸವಾಗಿರಬಹುದು ಎಂಬ ಶಂಕೆಯನ್ನು ಮಾತ್ರ ಇಟ್ಟುಕೊಂಡು ನಮ್ಮ ಜನರನ್ನು ದಂಗೆ ಎಬ್ಬಿಸಲಾರೆ.

ನಿಜದ ಸಂಗತಿ ಏನೆಂದು ತಿಳಿಯುವ ಕುತೂಹಲ ನನ್ನಲ್ಲಿ ಇಲ್ಲ. ಅದು ತಿಳಿದರೆ ನಾನು ಬದುಕಿರುತ್ತೇನೆಂಬ ನಂಬಿಕೆಯೂ ಇಲ್ಲ. ನನ್ನ ಬರಹಗಳಲ್ಲಿಯೇ ಈ ಸಂಗತಿ ಸತ್ತುಹೋದರೂ ಸರಿ. ಇದು ನನ್ನ ವೈಯಕ್ತಿಕ ನೋವಾಗಿರಬೇಕು. ನಮ್ಮವರಿಗೆ ಇದರಿಂದ ನೋವು-ಅವಮಾನವಾಗದಿದ್ದರೆ ಸಾಕು. ನಾನು ಪಂಗಡ ದ್ರೋಹಿಯಾಗುವುದಿಲ್ಲ.” 

ಅಮರ್ತ್ಯನ ಎದೆಬಡಿತ ಹೆಚ್ಚಾಗಿ, ಮೈಬೆವರೊಡೆಯಿತು. ಕೊನೆಯಲ್ಲಿನ ಎರಡು ವಾಕ್ಯಗಳು ಮಂಜುಗಡ್ಡೆಗಳಂತೆ ಎದೆಯೊಳಗೆ ಇಳಿದವು. ನಿಜದ ಸಂಗತಿ ಏನೆಂದು ತಿಳಿಯುವ ಕುತೂಹಲ ನನ್ನಲ್ಲಿ ಇಲ್ಲ. ಅದು ತಿಳಿದರೆ ನಾನು ಬದುಕಿರುತ್ತೇನೆಂಬ ನಂಬಿಕೆಯೂ ಇಲ್ಲ. ಅಪ್ಪನ ಆತ್ಮಹತ್ಯೆಗೆ ಇದು ಕಾರಣವಿರಬಹುದೆ?

ಸೌಜನ್ಯ: ಅಂತರ್ಜಾಲ

ಭೂಮಿಯ ಮೇಲೆಲ್ಲೋ ಅಪ್ಪನ ಕ್ಲೋನ್ ಇದ್ದಾನೆಯೇ? ಬಹುಶಃ ಓಂಕಾರನಿಗೆ ತಿಳಿದಿರಬಹುದೇನೋ? ಸಂಪೂರ್ಣ ಅಪ್ಪನಂತೆಯೇ ಕಂಡರೂ ಅಪ್ಪನಿಗಿಂತ ಕನಿಷ್ಟ ಹದಿನಾರು ವರ್ಷಗಳಾದರೂ ಕಿರಿಯವನಿದ್ದು, ಅಪ್ಪನಷ್ಟೇ ಮೇಧಾವಿಯಾಗಿರುತ್ತಾನೆ. ಅವನು ನನಗೆ ಎರಡನೆಯ ಅಪ್ಪನೆ? ನಾನವನಿಗೆ ಮಗನೇ, ತಮ್ಮನೇ ಅಥವಾ ಅಣ್ಣನ ಮಗನೆ, ಅವನಿದ್ದರೆ ಏನಂತೆ? ನನಗೇನೂ ವ್ಯತ್ಯಾಸವಾಗುವುದಿಲ್ಲ ಎಂದೆನಿಸಿ ಸ್ವಲ್ಪ ನೆಮ್ಮದಿಯಾದರೂ… ಪಾಪ, ಆಗ ಅಪ್ಪನಿಗೆ ಅದೆಷ್ಟು ಆತಂಕವಾಗಿರಬೇಡ? ಗಾಂಪರಿಗೆ ಹೀಗೆಂದು ವಿಷಯ ತಿಳಿದರಂತೂ, ವಾಸ್ತವ ಏನೆಂದು ಪರಿಶೀಲಿಸದೆಯೇ, ಹೂಮಾನ್ ಆದಿಪಂತಿ ಪಂಗಡ ದ್ರೋಹಿ, ಗುಟ್ಟಾಗಿ ಸರ್ಕಾರದೊಂದಿಗೆ ಶಾಮೀಲಾಗಿ, ಒಳಒಪ್ಪಂದ ಮಾಡಿಕೊಂಡು, ಅಬೀಜ ಸಂತಾನವನ್ನು ವರ್ಷಗಳ ಹಿಂದೆಯೇ ಮಾಡಿಸಿಕೊಂಡಿದ್ದಾನೆ ಎಂಬ ಸುಳ್ಳು ವದಂತಿಗಳು ಯಾವಾಗ ಹಬ್ಬಿ ಅವಮಾನಕ್ಕೀಡಾಗಬಹುದೋ ಎಂದು ಜೀವನ ಕಳೆದಿರಬಹುದು. 

ಅಷ್ಟರಲ್ಲಿ ಕರೆ ಬಂತು. ಅರೆ ಇಳಾ, ಕರೆ ಮಾಡಲು ಅನುಮತಿಯಿಲ್ಲ ಎಂದಿದ್ದಳಲ್ಲ?

“ಏಮಿ?”

“ಇಳಾ? ಇದೇನು ಕರೆ ಮಾಡಲು ಬಿಟ್ಟಿದ್ದಾರೆ?”

“ಹೂಂ… ಅದೇನೆಂದರೆ ನಾನು ನಾಳೆ ವಾಪಸ್ಸಾಗಲು ಸಾಧ್ಯವಿಲ್ಲ. ಇಲ್ಲಿಂದ ಮತ್ತೆಲ್ಲಿಗೋ ಹೋಗಬೇಕಿದೆ. ಎಲ್ಲಿಗೆಂದು ಇನ್ನೂ ರಹಸ್ಯ. ನಮಗೂ ಗೊತ್ತಿಲ್ಲ. ಬಹುಶಃ ಹೋಗುವ ಜಾಗದಲ್ಲಿ ಯಾವ ವಿಧವಾದ ಸಂಪರ್ಕವೂ ಇರುವುದಿಲ್ಲ ಎನಿಸುತ್ತದೆ. ಅದಕ್ಕೆ ಒಂದೆರಡು ಕರೆ ಮಾಡಿಕೊಳ್ಳಬಹುದು ಎಂದು ಅರ್ಧ ಗಂಟೆ ವಿರಾಮ ಕೊಟ್ಟಿದ್ದಾರೆ.” ಇಳಾ ಬರುವುದು ಇನ್ನಷ್ಟು ತಡವಾಗುತ್ತದೆ ಎಂದು ಬೇಸರವಾದರೂ ತೋರಿಸಿಕೊಳ್ಳಲಿಲ್ಲ.

“ಬಾಹ್ಯಾಕಾಶಕ್ಕೆ ಹೋಗುತ್ತಿದ್ದೀರ?”

“ಗೊತ್ತಿಲ್ಲ ಏಮಿ… ಕೊನೆಯ ಘಳಿಗೆಯವರೆಗೂ ಏನೂ ಗೊತ್ತಿರುವುದಿಲ್ಲ ನಮಗೆ. ಅಂದಹಾಗೆ, ನಾನು ಕಳುಹಿಸಿದ ಇತ್ತೀಚಿನ ಮಿಂಚಂಚೆ ನೋಡಿದಿರಾ?” 

“ಹೂಂ… ಈಗಷ್ಟೇ ಓದಿ ಮುಗಿಸಿದೆ. ಇದೆಲ್ಲವೂ ಈ ದಿನಚರಿಯಲ್ಲಿಯ ಟಿಪ್ಪಣಿ. ಅಪ್ಪ ಸಂಸ್ಕೃತದಲ್ಲಿ ಬರೆದಿದ್ದಾ? ಇಷ್ಟು ವರ್ಷಗಳು ಈ ಮಾಹಿತಿ ನಮ್ಮ ಬಳಿ ಇದ್ದರೂ ನಮಗೆ ತಿಳಿಯಲಿಲ್ಲವಲ್ಲ?”

“ಹೌದು ಏಮಿ. ನಿಮ್ಮ ತಾತ, ನಿಮ್ಮ ಅಪ್ಪನ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ. ನಮ್ಮ ಸಿದ್ಧಾಂತಗಳನ್ನು ತಮ್ಮ ಜೀವನಪೂರ್ತಿ ಪಾಲಿಸಿಕೊಂಡು ಬಂದ ನಮ್ಮ ನಾಯಕರುಗಳು ಅವರು. ಅಕಸ್ಮಾತ್ ಹೂಮಾನ್ ಆದಿಪಂತಿಯವರನ್ನು ಸರ್ಕಾರ ಕ್ಲೋನ್ ಮಾಡಿತ್ತೆಂದರೂ ಅದರಲ್ಲಿ ಅವರ ಸಮ್ಮತವಿರಲಿಲ್ಲ ಎಂದು ಸ್ಪಷ್ಟಪಡಿಸುವ ದಾಖಲೆ ಇದಾಗಿದೆ. ಅವರು ಪಂಗಡದ್ರೋಹಿ ಅಲ್ಲ ಎಂದು ಸ್ಪಷ್ಟೀಕರಿಸಲು ಇದೊಂದೇ ಪುರಾವೆ ಸಾಕು.

ಆದರೂ ಸರ್ಕಾರ ಇಷ್ಟರಮಟ್ಟಕ್ಕೆ ಗಾಂಪ-ವಿರೋಧಿ ಧೋರಣೆಯನ್ನು ಹೊಂದಿದೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಮೇಲ್ನೋಟಕ್ಕಾದರೂ, ಗಾಂಪರ ಸಿದ್ಧಾಂತಗಳನ್ನು ಗೌರವಿಸುವ ಸಂಯಮ-ಸಹನೆಯನ್ನು ಸರ್ಕಾರ ತೋರಿದೆ. ಭೂಮಿಯಲ್ಲಿ ಪ್ರಕೃತಿಯನ್ನು ಹೊರತುಪಡಿಸಿ, ಸೃಷ್ಟಿ ನಿಯಮಗಳಿಗೆ ಅತಿ ಹತ್ತಿರವೆಂದರೆ ಅದು ನಮ್ಮ ಗಾಂಪರ ಪಂಗಡವೆಂದೂ, ಭೂಮಿ ತನ್ನ ಪುರಾತನ ಪರಂಪರೆಯನ್ನು ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ ಎಂದು ಭೂಮಂಡಲದಲ್ಲಿ ನಮ್ಮನ್ನು ಮಾದರಿಯಂತೆ ಯಾವಾಗಲೂ ಪ್ರದರ್ಶಿಸಿ, ಶಹಬಾಸ್ಗಿರಿ ಗಿಟ್ಟಿಸಿಕೊಂಡಿದೆ ಅಲ್ಲವೆ? ಆದರೆ ಕೆಲವರು ಒಳಗೊಳಗೇ ಹೀಗೆ ಮಾಡುತ್ತಿದ್ದಾರೆಂದರೆ ಯಾರೂ ನಂಬುವುದಿಲ್ಲ. ಈ ಟಿಪ್ಪಣಿ ಅಪ್ಪನದ್ದೇ ಆದ್ದರಿಂದ ನಾವು ನಂಬಲೇಬೇಕು. ಈ ಸುದ್ದಿ ಇನ್ನಿತರರಿಗೆ ತಿಳಿಯಿತೆಂದರೆ, ಈ ವಿಷಯವೇ ಸಾಕು, ನಮ್ಮ ಹಕ್ಕುಗಳ ಉಲ್ಲಂಘನೆ ಎಂದು ಅಂತರ್ಯುದ್ಧವೇ ಪ್ರಾರಂಭವಾಗುತ್ತದೆ. ಬಹಳ ಸ್ಫೋಟಕ!”

“ಹೂಂ. ಸದ್ಯಕ್ಕೆ ಅಪ್ಪನ ಅಬೀಜ ಸಂತಾನವಿರಬಹುದು ಎಂಬ ಶಂಕೆಯಷ್ಟೇ ಅಲ್ಲವೆ? ಈ ವಿಷಯ ನಮ್ಮಿಬ್ಬರಲ್ಲೇ ಉಳಿದುಬಿಡಲಿ. ಒಂದು ಪಕ್ಷ ಕ್ಲೋನ್ ಇದ್ದಾರೆ ಎಂದರೂ ಅದರಿಂದ ನಮಗೆ ಉಪಯೋಗವಾಗಲೀ ತೊಂದರೆಯಾಗಲೀ ಏನಾಗುತ್ತದೆ? ನನ್ನ ಮಟ್ಟಿಗೆ, ನನಗೆ ಹೂಮಾನ್ ಆದಿಪಂತಿಯೊಬ್ಬರೇ ಅಪ್ಪ. ಇನ್ಯಾರನ್ನೂ ಅಪ್ಪ-ಅಣ್ಣನೆಂದು ಸ್ವೀಕರಿಸಲಾರೆ.” 

“ಏಮಿ! ನಿಜ ಏನೆಂದು ಓಂಕಾರನಿಗೆ ಖಂಡಿತ ಗೊತ್ತಿರಬೇಕು!”

“ಇರಬಹುದು. ಅಂದು ನಾನು ಅವನಿಗೆ ಕರೆಮಾಡಿದಾಗ ಏನೋ ಸುಳ್ಳು ಹೇಳುತ್ತಿದ್ದಾನೆ ಎನಿಸಿತು!!” 

“ಹೂಂ. ಇದನ್ನು ಯಾರಿಗೂ ಈಗಲೇ ಹೇಳುವುದು ಬೇಡ. ಏಮಿ, ಮತ್ತೊಂದು ವಿಷಯ ಕೇಳಬೇಕಿತ್ತು. ಚೈತನ್ಯ ಪೋದ್ಧಾವನ ಜಾರಿಯಾಗುವ ಬಗ್ಗೆ ಇತ್ತೀಚಿನ ಒಳಸುದ್ದಿ, ವದಂತಿಗಳೇನಾದರೂ ಇದೆಯೆ? ಗಾಂಪರನ್ನು ಹೊರತಾಗಿ, ಇಲ್ಲೆಲ್ಲರೂ ಬಹಳ ಕುತೂಹಲ-ಉತ್ಸಾಹಗಳಿಂದ ಅದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟರಲ್ಲೇ ಜಾರಿಯಾಗುತ್ತದೆ ಎಂದು ಕೇಳಿಬರುತ್ತಿದೆ.” 

ಅಸೀಮಳೊಂದಿಗೆ ಆದ ಚರ್ಚೆಯನ್ನು ಇಳಾಗೆ ಈಗಲಾದರೂ ಹೇಳಲೇಬೇಕು. ಇಬ್ಬರು ಒಟ್ಟಿಗೆ ಇದ್ದಾಗ ವಿಷಯವನ್ನು ತಿಳಿಸಿ ಆಕೆಗೆ ಸಾಂತ್ವನ ಹೇಳಬೇಕೆಂದುಕೊಂಡಿದ್ದ. ಆದರೆ ಈಗ ಯಾಕೋ ಮುಖತಃ ಹೇಳಲು ಬಹಳ ಕಷ್ಟ, ದೂರವಾಣಿಯೇ ಸರಿ. ಇಳಾಳಿಗೆ ತನ್ನ ಮುಖ-ಭಾವನೆಗಳು ಗೊತ್ತಾಗುವುದಿಲ್ಲ. ಮನಸಿನಲ್ಲಿಲ್ಲದ ಧೈರ್ಯ-ನಿರ್ಲಿಪ್ತತೆಯನ್ನು ಧ್ವನಿಯಲ್ಲಿ ತಂದುಕೊಳ್ಳುತ್ತಾ, “ಅಪ್ಪನ ವಿಷಯದಲ್ಲಿಯೇ ಮುಳುಗಿ ಹೋಗಿ, ನಿನಗಂದು ಹೇಳುವುದು ಮರೆತಿದ್ದೆ. ಎರಡು ದಿನದ ಹಿಂದ ಅಸೀಮ ನನ್ನನ್ನು ಭೇಟಿಯಾಗಲು ಬಂದಿದ್ದರು.’

ಸೌಜನ್ಯ: ಅಂತರ್ಜಾಲ

“ಯಾರು? ವಿನ್ಯಾಸಿಗ ಪ್ರಯೋಗಾಲಯದವರ?”

“ಆ ಅಸೀಮ ಅಲ್ಲ. ಅಸೀಮ ಭೂಪತಿ. ನಮ್ಮ ಆಸ್ಪತ್ರೆಯ ಮಾನವ ಸಂತಾನೋತ್ಪತ್ತಿ ವಿಭಾಗದ (Human Reproduction Department) ಮುಖ್ಯ ಕಾರ್ಯಕಾರಿ ಅಧಿಕಾರಿ (Chief Operating Officer). ನೀನೂ ಎರಡು ಸಲ ಭೇಟಿ ಮಾಡಿರುವೆಯಲ್ಲ? ಅವರು. ಸರ್ಕಾರಿ ಪ್ರತಿನಿಧಿಯಾಗಿ ಬಂದಿದ್ದರು.” ಇಳಾಳಿಗೆ ಹೆಚ್ಚು ಘಾಸಿ ಮಾಡದೆ ಹೇಗೆ ಹೇಳುವುದೆಂದು ಒದ್ದಾಡಿದ.

“ಏನಂದ್ರು? ನೀವು ನಿಮ್ಮ ಹೆಂಡತಿ ಸರ್ಕಾರಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದರಿಂದ, ವಿನ್ಯಾಸಿಗ ಮಗುವನ್ನು ಮಾಡಿಸಿಕೊಳ್ಳುವಾಗ ನಿಮಗೆ ರಿಯಾಯಿತಿ ಕೊಡಿಸುತ್ತೇವೆ ಎಂದ್ರಾ?” ಎಂದು ಕಹಿಯಾಗಿ ಕೇಳಿದಳು. ಹೇಳಬೇಕಿದ್ದನ್ನ ಇನ್ನಷ್ಟು ಕಷ್ಟವಾಗುವಂತೆ ಮಾಡುತ್ತಿದ್ದಳು ಇಳಾ.

“ಇಳಾ, ಕುಹಕ ಸಾಕು. ನೀನು ಹೀಗೆ ಮಾತನಾಡಿದರೆ ನಾನೇನೂ ಹೇಳುವುದಿಲ್ಲ.”

“ಏಮಿ, ಇನ್ನೇನು ಮತ್ತೆ? ದಂಪತಿಗಳು ಮಗುವನ್ನು ಮಾಡಿಕೊಳ್ಳುವಂತಹ ಮೂಲ ಹಕ್ಕನ್ನೂ ನಾವೀಗ ಬಿಟ್ಟುಕೊಡಬೇಕೆಂದರೆ, ಬೇಜಾರಾಗಲ್ವ?”

“ಇಳಾ, ಗಾಂಪರ ಹೊರತಾಗಿ ಚೈತನ್ಯ ಪ್ರೋದ್ಧಾವನೆ-ಪುನರ್ಬಳಕೆ ಮಿಕ್ಕೆಲ್ಲ ಭೂನಿವಾಸಿಗರಿಗೆ ಬಹಳ ಇಷ್ಟವಾಗಿದೆ. ಮನುಕುಲವು ಸಹಸ್ರಾರು ವರ್ಷಗಳಿಂದ ಅಮರತ್ವಕ್ಕೆ ಹಾತೊರೆದಿದೆ. ಈಗ ಆ ಆಸೆ ಫಲಿಸುತ್ತಿದೆ ಎಂದಾಗ, ಹೀಗೆ ಸಾಮೂಹಿಕ ಸನ್ನಿಯಾಗುವುದು ನಿರೀಕ್ಷಿತವೇ. ಅಮರತ್ವವನ್ನು ಯಃಕಶ್ಚಿತ್ ಗಾಂಪರಂತಹ ಸಣ್ಣ ಪಂಗಡ ವಿರೋಧಿಸುತ್ತಿದೆ ಎಂದರೆ ಎಲ್ಲರ ದೃಷ್ಟಿಯಲ್ಲಿ ನಾವೇ ಖಳರು! ಶತಮೂರ್ಖರು! ವಿಕಸನಕ್ಕೆ ತೊಡಕಾಗಿರುವ ಅನಾಗರಿಕರು!”

“ಇದು ಹೊಸ ವಿಷಯವಲ್ಲ. ಮತ್ತೆ-ಮತ್ತೆ ಚರ್ಚಿಸಿ ಪ್ರಯೋಜನವಿಲ್ಲ. ಮಾತನ್ನು ಬದಲಿಸದೆ ಅಸೀಮ ಯಾಕೆ ನಿಮ್ಮನ್ನು ಭೇಟಿ ಮಾಡಿದರು ಎಂದು ಹೇಳಿ.”

“ಚೈತನ್ಯ ಪ್ರೋದ್ಧಾವನ ಮಸೂದೆ ನಾವಂದುಕೊಂಡದ್ದಕ್ಕಿಂತ ಶೀಘ್ರವಾಗಿಯೇ ಜಾರಿಯಾಗಲಿದೆ. ಇನ್ನೆರಡು ಮೂರು ವಾರಗಳಲ್ಲಿಯೇ! ಇನ್ನು ಮುಂದೆ ನಮಗೆ ಮಕ್ಕಳು ಬೇಕೆಂದರೆ ವಿನ್ಯಾಸಿಗ ಮಗುವನ್ನೇ ಮಾಡಿಕೊಳ್ಳಬೇಕೆಂದರು. ಸಿದ್ಧಾಂತಕ್ಕೆ ವಿರುದ್ಧವಾದದ್ದು ನಮಗೆ ಬೇಡವೆಂದರೆ… ಹೂಮಾನ್ ಮತ್ತು ಮಿಹಿರಾ; ಆದಿಪಂತಿ…ಅಮರ್ತ್ಯ ಮತ್ತು ಇಳಾ ಆದಿಪಂತಿ-ನಂತರ-ಪೂರ್ಣ ವಿರಾಮ.” 

“ಏಮಿ, ಕೊನೆಗೂ ಈ ಕಾಯಿದೆ ನಮ್ಮ ಪಂಗಡದ ಚರಮಗೀತೆ ಆಗಿಹೋಯಿತು” ಆಕೆಯ ಧ್ವನಿ ಕೇಳುತ್ತಲೇ, ಇಳಾಳ ಜೋಲು ಮೋರೆ ಕಣ್ಮುಂದೆ ಬಂತು. ಮದುವೆಯ ನಂತರ ನಾಲ್ಕು ವರ್ಷಗಳು ಮಕ್ಕಳು ಬೇಡವೆಂಬ ತಮ್ಮಗಳ ನಿರ್ಧಾರ ತಪ್ಪಾಯಿತೇ? ಇನ್ನು ಕೆಲವೇ ವಾರಗಳಲ್ಲಿ ಮಸೂದೆ ಜಾರಿಯಾಗಿ ಬಿಟ್ಟರೆ, ವಿನ್ಯಾಸಿಗ ಮಗುವನ್ನೇ ಮಾಡಿಕೊಳ್ಳಬೇಕು; ಮತ್ತು ತಮ್ಮ ಸಾವಿನ ಸಮಯವನ್ನು ತಾವೇ ನಿರ್ಧರಿಸಿಕೊಂಡು, ಜೀವಚೈತನ್ಯವನ್ನು ಸಂಸ್ಕರಿಸಿಕೊಂಡು ಬಯಸಿದ ರೂಪವೆತ್ತಿ ಮರು ಹುಟ್ಟಬೇಕು ಇಲ್ಲವೇ ಹಾಗೇ ಅಳಿದುಹೋಗಬೇಕು. ಯಾವುದಕ್ಕೂ ಸಮ್ಮತವಿಲ್ಲದ ಪಂಗಡದ ಕಟ್ಟಳೆಗಳು. ಇದೆಂತಹ ಸ್ವತಂತ್ರದ ಬದುಕು?

ಅತ್ತ ಕಡೆಯಿಂದ ದೀರ್ಘ ಮೌನ. ನಂತರ ಮೃದುವಾದ ಸಂತೈಸುವ ಧ್ವನಿಯಲ್ಲಿ “ಏಮಿ, ಇತಿಹಾಸ ನಮಗೆ ಸ್ಪಷ್ಟವಾಗಿ ತಿಳಿಸಿದೆ-ಯೋಗ್ಯತೆ ಹೊತ್ತಿರು ವುದು ಬದುಕಿ ಉಳಿಯುತ್ತದೆ ಎಂದು. ಯಾವ ಸರ್ಕಾರ-ನಿಯಮಗಳ ಹೊರತಾಗಿಯೂ…” ಆಕೆಗೂ ಘಾಸಿಯಾಗಿದೆ ಆದರೆ ತನ್ನ ಸಾಂತ್ವನಕ್ಕೆ ಹಾಗೆ ಹೇಳುತ್ತಿದ್ದಾಳೆ.

“ಇಳಾ, ನನಗೂ ಬೇಜಾರಾಗಿದೆ. ನಮ್ಮ ಪಂಗಡವು ಎಷ್ಟು-ಯಾವ ರೀತಿ ವಿರೋಧಿಸಬಲ್ಲೆವೋ, ಯಾರು ಯಾರನ್ನು ಕಂಡು ಮಾತನಾಡಬಲ್ಲೆವೋ, ಎಲ್ಲವನ್ನೂ ಮಾಡಿದ್ದಾಗಿದೆ. ನಾವು ಸೋತಿದ್ದೇವೆ. ಅಸಹಾಯಕತೆಯಷ್ಟು ಅಸಹಾಯಕತೆ ಇನ್ನೊಂದಿಲ್ಲ.” ಹೆಂಡತಿಗೆ ಸಾಂತ್ವನ ಹೇಳಬೇಕೆಂದುಕೊಂಡು ತಾನೇ ಗದ್ಗದಿತ ಕಂಠದವನಾದ.

“ಏಮಿ, ಇದೆಲ್ಲ ಗೊತ್ತಿರುವ ವಿಷಯವೇ. ನೈಜ್ಯತೆಗಿಂತ ನೈಜ್ಯವೆನಿಸುವ ಕೃತಕತೆಯನ್ನು ಮೂಡಿಸುವಲ್ಲಿ ಇಂದು ಮನುಕುಲ ಸಫಲವಾಗಿದೆ. ಸಾವನ್ನು ಗೆದ್ದಿರಬಹುದು, ಕಾಲವನ್ನಲ್ಲ. ಅಸಹಜವಾದುದ್ದನ್ನು ಸೃಷ್ಟಿಸಿರಬಹುದು, ಪ್ರಕೃತಿಯನ್ನಲ್ಲ… ಸಮಾಧಾನ ಮಾಡಿಕ್ಕೊಳ್ಳಿ. ನನ್ನನ್ನು ಕರೆಯುತ್ತಿದ್ದಾರೆ. ಮನೆಗೆ ವಾಪಸ್ಸಾದ ಮೇಲೆ ಒಬ್ಬರ ಭುಜದ ಮೇಲಿನ್ನೊಬ್ಬರು ತಲೆ ಇಕ್ಕಿ ಕಣ್ಣೀರಿಡುವ!” ಎಂದು ಶುಷ್ಕವಾಗಿ ನಕ್ಕಳು. “ಟಾ… ಟಾ…” ಎನ್ನುತ್ತಾ ಸಂಪರ್ಕವನ್ನು ಕಡೆದಿದ್ದಳು.

“ಹೂಂ” ಅಮರ್ತ್ಯನ ಮುಖ ಸಡಿಲವಾಯಿತು. ಇಳಾಳ ಧೈರ್ಯ-ಹಾಸ್ಯ ಪ್ರಜ್ಞೆಗಳಿಗೆ ಎಂದೋ ಮಾರುಹೋಗಿದ್ದ. ಮರುಕ್ಷಣವೇ ರೋದಾಸ್ ಸತ್ತ ವಿಷಯವನ್ನು ಆಕೆಗೆ ಹೇಳಲು ಮತ್ತೆ ಮರೆತೆನಲ್ಲ ಎಂದು ಬೇಸರಿಸಿಕೊಂಡ.

ಇದನ್ನೂ ಓದಿ: New Book; ಅಚ್ಚಿಗೂ ಮೊದಲು: ಬಸಪ್ಪನ ಪ್ರಪಂಚವೇ ಆ ಬೇರೆಯವರು

Published On - 3:09 pm, Thu, 4 March 21