Azadi Ka Amrut Mahotsav: ಕಾರವಾರದಲ್ಲಿ ಸ್ವಾತಂತ್ರ್ಯ ಹೋರಾಟ; ಇತಿಹಾಸದ ರೋಚಕ ಕಥೆ

| Updated By: ಆಯೇಷಾ ಬಾನು

Updated on: Aug 15, 2021 | 8:17 AM

Independence Day 2021: ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಕಡಲ ತೀರ ಕಾರವಾರದ ಅನೇಕ ದೇಶಭಕ್ತರು ದೇಶಕ್ಕಾಗಿ ಹಗಲಿರುಳು ದುಡಿದು ಬ್ರಿಟೀಷರ ವಿರುದ್ಧ ಚಳುವಳಿ ಹೂಡಿ ಖ್ಯಾತರಾಗಿದ್ದರು. ಆ ರೋಮಾಂಚಕ ಹೋರಾಟದ ಕಥೆ ಇಲ್ಲಿದೆ.

Azadi Ka Amrut Mahotsav: ಕಾರವಾರದಲ್ಲಿ ಸ್ವಾತಂತ್ರ್ಯ ಹೋರಾಟ; ಇತಿಹಾಸದ ರೋಚಕ ಕಥೆ
ಸ್ವಾತಂತ್ರ್ಯ ಹೋರಾಟದ ಕ್ಷಣಗಳು
Follow us on

ಸ್ವಾತಂತ್ರ್ಯದ ವ್ಯಾಖ್ಯೆ ಇಷ್ಟು ವರ್ಷಗಳಲ್ಲಿ ಹಲವು ಬಗೆಗಳಲ್ಲಿ ಬೆಳೆದು ವಿಶಾಲವಾಗಿ ವಿಸ್ತರಿಸಿದೆ. ಅಂದು ತಾಯ್ನಾಡಿಗಾಗಿ ಹೋರಾಡಿದವರೆಷ್ಟು ಮಂದಿಯೋ? ಅಂದಿನ ದೇಶಪರ ಚಿಂತನೆಯ ಪ್ರತಿಯೊಬ್ಬರೂ ಸ್ವಾತಂತ್ರ್ಯ ಹೋರಾಟಗಾರರೇ. ಸ್ವತಂತ್ರ್ಯ ಭಾರತದ 75ನೇ ವರ್ಷದ ಅಮೃತ ಮಹೋತ್ಸವದಂದಜು ಟಿವಿ9 ಕನ್ನಡ ಡಿಜಿಟಲ್ ಅಪ್ರಸಿದ್ಧ ಹೋರಾಟಗಾರರನ್ನು ಪರಿಚಯಿಸುವ ಪ್ರಯತ್ನ ಮಾಡಿದೆ. ಕಾರವಾರದ ನಿವೃತ್ತ ಶಿಕ್ಷಕ ಜಿ.ಡಿ.ಪಾಲೇಕರ್ ಬಿಣಗಾ ಅವರು ಕಾರವಾರದ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಕಡಲ ತೀರ ಕಾರವಾರದ ಅನೇಕ ದೇಶಭಕ್ತರು ದೇಶಕ್ಕಾಗಿ ಹಗಲಿರುಳು ದುಡಿದು ಬ್ರಿಟೀಷರ ವಿರುದ್ಧ ಚಳುವಳಿ ಹೂಡಿ ಖ್ಯಾತರಾಗಿದ್ದರು. ಕಾರವಾರದಲ್ಲಿ ಕಾಂಗ್ರೆಸ್ ಕಮೀಟಿ 1920ರಲ್ಲಿ ಸ್ಥಾಪನೆಯಾದಾಗ ಮಂಗೇಶ ರಾಮಕೃಷ್ಣ ತೇಲಂಗ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಕಮೀಟಿಗೆ ಕೃಷ್ಣರಾವ ಹಳದಿಪುರ, ಎಂ.ಡಿ.ನಾಡಕರ್ಣಿ ಕಾರ್ಯದರ್ಶಿಗಳಾಗಿದ್ದರು. ಸುಬ್ಬರಾವ ಹಳದಿಪುರ ಉಪಾಧ್ಯಕ್ಷರಾಗಿದ್ದರು. ಚಳವಳಿಯ ದಿನಗಳಲ್ಲಿ ತಮ್ಮ ವ್ಯಾಪಾರವನ್ನು ತಮ್ಮ ಕಿರಿಯ ಸಹೋದರನಿಗೆ ಬಿಟ್ಟುಕೊಟ್ಟು 1930ರಿಂದ ಚಳುವಳಿಯಲ್ಲೇ ಇದ್ದರು. ಉಪ್ಪಿನ ಸತ್ಯಾಗ್ರಹ ನಡೆದಾಗ ಅವರನ್ನು ಬಂಧಿಸಲಾಯಿತು. ಗಣಪತಿ ಶಂಕರ ನಾಡಕರ್ಣಿಯವರನ್ನು ಕಾರವಾರದಲ್ಲಿ ಭಾಷಣ ಮಾಡಿದ್ದಕ್ಕಾಗಿ ಬಂಧಿಸಿಲಾಯಿತು. ಹನ್ನೊಂದು ತಿಂಗಳು ಜೈಲು ಶಿಕ್ಷೆ ವಿಧಿಸಿದರು. ಇವರ ಬಂಧನವಾದ ಕೂಡಲೇ ಕಾಳಿ ನದಿಯ ತೀರದಲ್ಲಿ ಮುಂದಿನ ಕಾರ್ಯಕ್ರಮ ರೂಪಿಸಲು ಸಭೆ ಸೇರಿತು. ಮುಂದೆ ಅಂಕೋಲೆಗೆ ಹೋಗಿ ಡಾ.ಹರ್ಡಿಕರರನ್ನು ಕಂಡು ಅಲ್ಲಿಂದ ಐವತ್ತು ಸ್ವಯಂ ಸೇವಕರನ್ನು ಕಾರವಾರಕ್ಕೆ ಕರೆತಂದು ಮುರಳೀಧರ ಮಠದಲ್ಲಿ ಶಿಬಿರ ಹೂಡಲಾಯಿತು. ಬೆಳಗಾವಿಯ ವಿ.ಬಿ.ಕುಂಬಿ, ಹುಬ್ಬಳ್ಳಿಯ ಕರಗುದಡಿ ಈ ಗುಂಪಿನ ಮುಖ್ಯಸ್ಥರಾದರು.

                                                                                             ಹಾರಲಿ ತ್ರಿವರ್ಣ ಧ್ವಜ

ಉಪ್ಪಿನ ಸತ್ಯಾಗ್ರಹವಾದ ಮೊದಲ ದಿನ ಉಪ್ಪನ್ನು ಲೀಲಾವು ಮಾಡಿದಾಗ ಗಂಗೊಳ್ಳಿಯ ಮಹಿಳೆಯೊಬ್ಬಳು ಉಪ್ಪನ್ನು 16 ರೂ.ಗೆ ಕೊಂಡರು. ಈ ಕಾರಣಕ್ಕಾಗಿ ಬಾಲಕೃಷ್ಣ ಶ್ರೀನಿವಾಸ ಭುಜಲೆ ಎಂಬುವವರು ಬಂಧಿತರಾದರು. ಈ ಸತ್ಯಾಗ್ರಹ ನಡೆದ ಕಾಲಕ್ಕೆ ಕಾಳಿ ನದಿ ಬಳಿ ಐದು ಸಾವಿರ ಜನರು ಸೇರಿದ್ದರು. ಅಲ್ಲಿಂದ ಕಾರವಾರ ಪೇಟೆಗೆ ಮೆರವಣಿಗೆ ಮಾಡಲಾಯಿತು. ಕೆಲವು ದಿನಗಳ ನಂತರ ಗೋವೆಯಿಂದ ಉಪ್ಪು ತರಲು ಯತ್ನಿಸಿದ ಕೃಷ್ಣ ನಾರಾಯಣ ನಾಯಕ ಹಾಗೂ ಹನುಮಂತ ಮಾಂಜ್ರೇಕರವರ ಬಂಧನವಾಯಿತು. ಶಿಬಿರದ ವೆಚ್ಚಕ್ಕಾಗಿ ಕೆ.ಆರ್.ಹಳದಿಪುರ ಜೊತೆ ಪಾಂಗಂ ಮುಂತಾದವರು ಕಾರವಾರ ಪೇಟೆಯಲ್ಲಿ ಡಬ್ಬಿ ಫಂಡ್ ಸಂಗ್ರಹಿಸಿದರು. ಚಳವಳಿಗೆ ಸಹಕರಿಸಿದ ಕಾರವಾರದ ಖ್ಯಾತ ವಕೀಲ ಪಿ.ಎಸ್.ಕಾಮತ, ವೈ.ಟಿ.ನಾಡಕರ್ಣಿ, ಆರ್.ವಿ.ಗಂಗೊಳ್ಳಿ, ಎಂ.ಎಂ.ಶಾನಭಾಗ ವಿಚಾರಣೆಗೆ ಒಳಪಟ್ಟು ತಮ್ಮ ಸನದನ್ನು ಕಳದೆಕೊಂಡರು. ಮುಂದೆ ಗಾಂಧಿ, ಆಯರ್ವಿನ್ ಒಪ್ಪಂದದಂತೆ ಅದು ಮರಳಿ ಅವರಿಗೆ ದೊರೆಯಿತು. 1932ರಲ್ಲಿ ಕಾಯಿದೆ ಭಂಗ ಚಳುವಳಿ ಮತ್ತೆ ಆರಂಭವಾದಾಗ ಕಾರವಾರದ ಸುಬ್ಬರಾವ ಹಳದಿಪುರ ಅವರನ್ನು ಬಂಧಿಸಿ ಸ್ಥಾನಬದ್ಧತೆಯಲ್ಲಿಟ್ಟರು. ಅವರಿಗೆ 1 ವರ್ಷ ಶಿಕ್ಷೆಯಾಯಿತು.

1930ರ ಮಾರ್ಚ್ ತಿಂಗಳಲ್ಲಿ ಕಾರವಾರದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ದೇಶಭಕ್ತಿಯ ಕಂಪು ಮೂಡಿತು. ಕಾರವಾರ ಸಮುದ್ರ ದಡದಿಂದ ನೀರನ್ನು ತಂದು ಕುದಿಸಿ ಉಪ್ಪನ್ನು ತಯಾರಿಸಿ ಲೀಲಾವಿನಿಂದ ಮಾರಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಅನೇಕ ಸ್ವಯಂ ಸೇವಕರು ಒಬ್ಬೊಬ್ಬರಂತೆ ಬಂಧಿತರಾದರು. ಕಾರವಾರದ ಸುಂದರ ಕಡಲ ತೀರದಲ್ಲಿ ತರುಣ ವಕೀಲ ಟಿ.ಎಸ್.ಕಾಮತರ ಮುಖಂಡತ್ವದಲ್ಲಿ ವಿದ್ಯಾರ್ಥಿ ತರುಣ ಸಂಘ ಪ್ರಾರಂಭೋತ್ಸವವಾಯಿತು. ಕಡಲ ತೀರದಲ್ಲಿ ವ್ಯಾಯಾಮ, ಆಟ- ಪಾಠಗಳು ನಿತ್ಯ ನಡೆಯತೊಡಗಿದವು. ಈ ಚಟುವಟಿಕೆಗಳು ಬ್ರಿಟೀಷ್ ಅಧಿಕಾರಿಗಳಿಗೆ ಸಹಿಸದಾಯಿತು. ಪಿ.ಎಸ್.ಕಾಮತ ವಕೀಲರು ಪುರಜನರ ಸಹಿ ಪಡೆದು ಪೊಲೀಸ್ ಸೂಪರಿಟೆಂಡೆಂಟ್‌ರವರ ಮುಂದೆ ಅರ್ಪಿಸಿದರು. ಈ ಹುಕ್ಕಂ ಸರಿಯಿಲ್ಲವೆಂದು ವಾದಿ ಮನ್ನಾ ಮಾಡಿತು.

1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದಾಗ ಮೊಟ್ಟ ಮೊದಲು ಕಾರವಾರದ ಆಜಾದ್ ಮೈದಾನದಲ್ಲಿ (ಈಗಿನ ಮಿನಿ ವಿಧಾನಸೌಧದ ಎದುರು) ರಾಷ್ಟ್ರಧ್ವಜ ಹಾರಿಸಲಾಯಿತು.  ಕಾರವಾರದ ಖ್ಯಾತ ಸ್ವಾತಂತ್ರ್ಯ ಯೋಧ, ದೇಶಭಕ್ತ ಪಿ.ಎಸ್.ಕಾಮತರು ರಾಷ್ಟ್ರಧ್ವಜವನ್ನು ಹಾರಿಸುವ ಭಾಗ್ಯ ಪಡೆದುಕೊಂಡರು.

ವಿಶೇಷ ಲೇಖನ: ಜಿ.ಡಿ.ಪಾಲೇಕರ ಬಿಣಗಾ
                                       ನಿವೃತ್ತ ಶಿಕ್ಷಕರು

(ಈ ಲೇಖನವನ್ನು ಸ್ವಾತಂತ್ರ್ಯ ಮಹೋತ್ಸವದ 75ನೇ ವರ್ಷದ ಆಚರಣೆಯ ಸಂಭ್ರಮದಲ್ಲಿ ಲೇಖಕರ ಸಂಪೂರ್ಣ ಅನುಮತಿಯ ಮೇರೆಗೆ ಮರು ಪ್ರಕಟಿಸಲಾಗಿದೆ)

ಇದನ್ನೂ ಓದಿ: 

Kannada Patriotic Movies: ದೇಶದ ಸ್ವಾತಂತ್ರ್ಯದ ಕುರಿತು ಮೈ ನವಿರೇಳಿಸುವ ಕನ್ನಡದ ದೇಶಭಕ್ತಿ ಸಿನಿಮಾಗಳು

75th Independence Day 2021: ಸ್ವಾತಂತ್ರ್ಯೋತ್ಸವಕ್ಕೆ ಹೊಸ ವೆಬ್​​ಸೈಟ್; 360 ಡಿಗ್ರಿ ವಿಆರ್ ವೈಶಿಷ್ಟ್ಯದೊಂದಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ

(Azadi Ka Amrut Mahotsav Independence Day 2021 Freedom Fight in Karwar the thrilling story of the citys history)