ಕನ್ನಡ ರಾಜ್ಯೋತ್ಸವ: ‘ಕನ್ನಡ ನುಡಿಯನ್ನು ನನ್ನ ವಿದ್ಯಾರ್ಥಿಗಳಲ್ಲಿ ಗಟ್ಟಿಗೊಳಿಸುವುದೇ ಮೊದಲ ಆದ್ಯತೆ’

|

Updated on: Oct 31, 2023 | 4:44 PM

Kannada Rajyotsava: ಒಂದು ಭಾಷೆಯನ್ನು ಉಳಿಸುವಲ್ಲಿ ಸಮುದಾಯ, ಕುಟುಂಬದ ಜೊತೆ ಜೊತೆಗೆ ಬಹುದೊಡ್ಡ ಜವಾಬ್ದಾರಿ ಪ್ರಾಥಮಿಕ ಶಾಲಾ ಶಿಕ್ಷಕರದ್ದು. ಅದರಲ್ಲಿಯೂ ಕನ್ನಡ ಭಾಷಾ ಶಿಕ್ಷಕರು ಭಾಷೆಯನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟು ಸಮರ್ಥವಾಗಿ ಕನ್ನಡ ನುಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಯಶಸ್ವಿಯಾಗುತ್ತಾರೆ.

ಕನ್ನಡ ರಾಜ್ಯೋತ್ಸವ: ಕನ್ನಡ ನುಡಿಯನ್ನು ನನ್ನ ವಿದ್ಯಾರ್ಥಿಗಳಲ್ಲಿ ಗಟ್ಟಿಗೊಳಿಸುವುದೇ ಮೊದಲ ಆದ್ಯತೆ
ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಸಂಧ್ಯಾ ವಿ ನಾಯ್ಕ
Follow us on

ನಮಗೆ ಕನ್ನಡ (Kannada) ಚೆನ್ನಾಗಿ ಬರುತ್ತದೆ ಆದರೆ ಈಗಿನ ಜನರೇಷನ್  ಮಕ್ಕಳಿಗೆ ಕನ್ನಡ ಸರಿಯಾಗಿ ಬರುವುದೇ ಇಲ್ಲ ಎಂಬ ಗೊಣಗಾಟವನ್ನು ನಾವು -ನೀವು ಕೇಳಿರುತ್ತೇವೆ. ನಮ್ಮ  ಮಕ್ಕಳಿಗೆ ಅಥವಾ ಮುಂದಿನ ತಲೆಮಾರಿಗೆ ಕನ್ನಡ ಭಾಷೆಯ ಸೊಗಡು, ಜ್ಞಾನವನ್ನು ದಾಟಿಸಬೇಕಾದುದು ನಮ್ಮ ಕರ್ತವ್ಯವೂ ಹೌದು. ಭಾಷೆಯ ಮೇಲೆ ಒಲವು ಹುಟ್ಟಬೇಕಾದರೆ ಭಾಷಾ ಬಳಕೆ ಮುಖ್ಯ. ನಾವು ನಮ್ಮ ಮುಂದಿನ ತಲೆಮಾರಿಗೆ ಕನ್ನಡದ ಮೇಲೆ ಅಕ್ಕರೆ ಹುಟ್ಟುವಂತೆ ಮಾಡುವುದು , ನಮ್ಮ ಭಾಷೆಯನ್ನು ಎಳೆಯರಿಗೆ ದಾಟಿಸುವುದು ಹೇಗೆ? ಕನ್ನಡ ರಾಜ್ಯೋತ್ಸವದ (Kannada rajyotsava) ಈ ಸುಸಂದರ್ಭದಲ್ಲಿ  ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಕಿ ಆಗಿರುವ ಸಂಧ್ಯಾ.ವಿ.ನಾಯ್ಕ, ಅಘನಾಶಿನಿ ತಮ್ಮ ಅನುಭವವನ್ನು ಈ ರೀತಿ ಹಂಚಿಕೊಂಡಿದ್ದಾರೆ.

ಒಂದು ಭಾಷೆಯನ್ನು ಉಳಿಸುವಲ್ಲಿ ಸಮುದಾಯ, ಕುಟುಂಬದ ಜೊತೆ ಜೊತೆಗೆ ಬಹುದೊಡ್ಡ ಜವಾಬ್ದಾರಿ ಪ್ರಾಥಮಿಕ ಶಾಲಾ ಶಿಕ್ಷಕರದ್ದು.
ಅದರಲ್ಲಿಯೂ ಕನ್ನಡ (Kannada) ಭಾಷಾ ಶಿಕ್ಷಕರು ಭಾಷೆಯನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟು ಸಮರ್ಥವಾಗಿ ಕನ್ನಡ ನುಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಯಶಸ್ವಿಯಾಗುತ್ತಾರೆ. ನಾನೊಬ್ಬಳು ಕನ್ನಡ ಶಿಕ್ಷಕಿಯಾಗಿ ನನ್ನ ಕನ್ನಡ ನುಡಿಯನ್ನು ನನ್ನ ವಿದ್ಯಾರ್ಥಿಗಳಲ್ಲಿ ಗಟ್ಟಿಗೊಳಿಸುವುದಕ್ಕೆ ಪ್ರಥಮ ಆದ್ಯತೆ ನೀಡಿದ್ದೇನೆ. ವೈಯಕ್ತಿಕವಾಗಿ ನನಗಾಗಿ ಪುಸ್ತಕಗಳನ್ನು‌ ಕೊಳ್ಳುವಾಗ ಮತ್ತು ಮಕ್ಕಳಿಗೆ ಏನಾದರೂ ಕೊಡಬೇಕು ಅನ್ನಿಸಿದಾಗಲೆಲ್ಲ ಕಥೆ ಪುಸ್ತಕಗಳನ್ನೇ ಕೊಳ್ಳುವುದು ನನ್ನ ಅಭ್ಯಾಸ. ನನ್ನ ಟೇಬಲ್ ಮೇಲೆಯೇ ಇರುವ ಆ ಕಥೆ ಪುಸ್ತಕಗಳನ್ನು ಮಗು ಎಷ್ಟೊತ್ತಿಗೆ ಬಯಸಿದರೂ ನನ್ನನ್ನು ಕೇಳದೆಯೇ ಎತ್ತಿಕೊಂಡು ಹೋಗಲು ಮತ್ತು ಓದಲು ಅವಕಾಶವಿದೆ. ಮಗು ಅದನ್ನು ಅರ್ಥೈಸಿಕೊಂಡು ತನ್ನದೇ ಭಾಷೆಯಲ್ಲಿ ಇತರ ಮಕ್ಕಳಿಗೆ ಹೇಳುತ್ತದೆ

ಮಗುವಿಗೆ ಪ್ರಾಥಮಿಕ ಹಂತದಲ್ಲಿ ಓದಿನ ಬಗ್ಗೆ ಆಸಕ್ತಿ ಮತ್ತು ಭಾಷೆಯ ಮೇಲಿನ‌ ಹಿಡಿತ ಇವೆರಡೂ ಕಥೆಗಳ ಮೂಲಕವೇ ಸಾಧ್ಯವಾಗುತ್ತದೆ ಎನ್ನುವುದು ನನ್ನ ಅನುಭವ. ಹಾಗಾಗಿ ಎಲ್ಲಾದರೂ ಮಕ್ಕಳ ಹುಟ್ಟಿದ ಹಬ್ಬಕ್ಕೆ ಹೋಗುವಾಗಲೂ‌ ಯಾವುದೇ ಮಾಧ್ಯಮವಿರಲಿ ಮಕ್ಕಳಿಗೆ ಕಥೆ ಪುಸ್ತಕವೊಂದನ್ನು ಒಯ್ದುಕೊಡುವ ಅಭ್ಯಾಸ ಇಟ್ಟುಕೊಂಡಿದ್ದೇನೆ. ಮುಂದಿನ ಹಂತವಾಗಿ ಮಕ್ಕಳಿಗೆ ಸರಳ ವಿಷಯಗಳ ಕುರಿತು ಮಾತನಾಡಲು ಸಾಕಷ್ಟು ಅವಕಾಶ ನೀಡುತ್ತೇವೆ.

ಇದಕ್ಕೆ ಭಾಷಾ ತರಗತಿಗಳು ಮತ್ತು ಸಂಭ್ರಮ ಶನಿವಾರ ಪ್ರೇರಣಾ ಕ್ಲಬ್ ಇನ್ನಿತರ ಇಲಾಖಾ ಕಾರ್ಯಕ್ರಮಗಳು ಈ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಿಗುತ್ತವೆಜೊತೆಗೆ ನಮ್ಮ ಮಕ್ಕಳ ಹೋಮ್ ವರ್ಕ್ ಗಳೂ ಕೂಡ ಸಿದ್ಧ ಮಾದರಿಗಳಲ್ಲಿ ಇಲ್ಲದೇ ಅವರೂರಿನ ಹಬ್ಬ , ದೇವಸ್ಥಾನ , ಉದ್ಯೋಗ ಇನ್ನಿತರ ವಿಷಯಗಳ ಕುರಿತು ತಾವೇ ಬರೆದುಕೊಂಡು ಬರಲು ಇರುತ್ತದೆ. ಶಾಲೆಯಲ್ಲಿ ನರಿಯ ಜಂಬ, ಕಾಡಿನಲ್ಲಿ ಅಜ್ಜಿ , ಮಕ್ಕಳ ಬುದ್ಧಿವಂತಿಕೆ ಈ ಥರ ತಲೆಬರಹ ನೀಡಿ ಮತ್ತು ಕರಿಹಲಗೆಯ ಮೇಲೆ ಮಗುವಿಗೆ ಆಕರ್ಷಣೆಯಾಗುವಂತಹ ಚಿತ್ರ ಬರೆದು ಸ್ಥಳದಲ್ಲೇ ಅದರ ಮೇಲೆ ಕಥೆ ರಚಿಸುವ ಚಟುವಟಿಕೆಗಳನ್ನು ನೀಡಿರುತ್ತೇನೆ.ಇವುಗಳಿಗೆ ಮಕ್ಕಳಿಂದ ನಿರೀಕ್ಷೆಗೂ ಮೀರಿ ಅಭಿವ್ಯಕ್ತಿ ಬಂದದ್ದಷ್ಟೇ ಅಲ್ಲದೇ ಮಕ್ಕಳು ತಾವಾಗಿಯೇ ಟೀಚರ್ ಕಥೆ ಬರೀತೇವೆ ಚಿತ್ರ ಬಿಡಿಸಿಕೊಡಿ ಎನ್ನುತ್ತಾರೆ‌.

ಜೊತೆಗೆ ಮಕ್ಕಳ ತಂಡಗಳನ್ನು ಮಾಡಿ ಅಕ್ಷರ ಕೊಟ್ಟು ಶಬ್ಧ ಸಂಗ್ರಹಿಸುವ, ಊರಿನಲ್ಲಿ ಚಾಲ್ತಿಯಲ್ಲಿರುವ ಗಾದೆ ಮಾತುಗಳನ್ನು ಹುಡುಕುವ ಚಟುವಟಿಕೆಗಳು ಸದಾ ಚಾಲ್ತಿಯಲ್ಲಿರುತ್ತವೆ. ಕನ್ನಡ ಹಾಡುಗಳನ್ನು ರಾಗವಾಗಿ ಹಾಡುವುದು ಮಕ್ಕಳಿಗೆ ಬಹಳ ಇಷ್ಟ.. ಅಂತಹ ಅನೇಕ ಗೀತೆಗಳನ್ನು ಭಾಷಾ ವಿಕಾಸಕ್ಕೆ ಬಳಸಿಕೊಳ್ಳುವುದು. ಮಕ್ಕಳಿಗೂ ಹಾಡು ರಚಿಸಲು ಹೇಳಿ ಅದಕ್ಕೆ ಧಾಟಿ ಕೂಡಿಸಿ ಹಾಡಿಸುವುದು ಮಕ್ಕಳಿಗೆ ಖುಷಿ ನೀಡುವುದಷ್ಟೇ ಅಲ್ಲ ಭದ್ರ ತಳಪಾಯ ಹಾಕಿಕೊಡುತ್ತದೆ.

ಇದನ್ನೂ ಓದಿ: ಟೆಕ್ ಲೋಕದಲ್ಲಿ ಮೂಲೆಗುಂಪಾಗಿದೆ ಕನ್ನಡ?

ಮಕ್ಕಳಿಗೆ ಯಾವುದೇ ಹಿಂಜರಿಕೆ ಮತ್ತು ಅಳುಕಿಲ್ಲದೇ ಮನೆಯ ಆಡು ಭಾಷೆಯಲ್ಲಿ ಕೂಡ ಶಾಲಾ ವೇದಿಕೆಯಲ್ಲಿ ಮಾತನಾಡುವ ಅವಕಾಶವಿದೆ.
ಜೊತೆಗೆ ನನ್ನ ಮೊಬೈಲ್ ಗಳಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳ ಆಡುನುಡಿ, ಭಾಷಾ ವ್ಯತ್ಯಾಸಗಳಿಗೆ ಸಂಬಂದಿಸಿದಂತೇ ಮಗುವಿಗೆ ಆಸಕ್ತಿದಾಯಕ ವಿಡಿಯೋಗಳು ಹಾಡುಗಳು ಇರುತ್ತವೆ. ಆಟ ಮತ್ತು ಮನರಂಜನಾ ಚಟುವಟಿಕೆಗಳಿಗಾಗಿ ಅವುಗಳನ್ನೂ ಮಕ್ಕಳು ನೋಡುತ್ತಾರೆ..
ಹಾಡು, ಪ್ರಬಂಧ, ಭಾಷಣ ಯಾರ ಸಹಾಯವಿಲ್ಲದೇ ಅವರೇ ಬರೆಯುವಷ್ಟು ಕೌಶಲ್ಯ ಮಕ್ಕಳು ಬೆಳೆಸಿಕೊಂಡಿದ್ದಾರೆ.

ಮಗು ತನ್ನ ಜ್ಞಾನ ತಾನೇ ವಿಸ್ತರಿಸಿಕೊಳ್ಳಲು ಮತ್ತು ಹೊಸ ಜ್ಞಾನಮಾದರಿ ಸಂರಚಿಸಿಕೊಳ್ಳಲು ಮಾತೃಭಾಷೆ ದೊಡ್ಡ ಮಟ್ಟದ ಸಹಾಯ ಮಾಡುತ್ತದೆ. ಅದಕ್ಕಾಗಿ ನಾವು ಕನ್ನಡ ನುಡಿಯನ್ನು ಪ್ರೀತಿಸುವ , ಗಟ್ಟಿಗೊಳಿಸುವುದಕ್ಕೆ ಹೆಚ್ಚು ಗಮನ ನೀಡಬೇಕು. ಆಗ ನಮ್ಮ ಭಾಷೆ ತನ್ನಿಂದ ತಾನೇ ಉಳಿಯುತ್ತದೆ ಬೆಳೆಯುತ್ತದೆ.

ಮತ್ತಷ್ಟು ವಿಶೇಷ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:42 pm, Tue, 31 October 23